ಯೋಗಿ ಆದಿತ್ಯನಾಥ ಕಾಲಿಗೆ ಬಿದ್ದರೆ ತಪ್ಪಾ?
ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಲು ಲಕ್ನೋಗೆ ತೆರಳಿದ ಖ್ಯಾತ ನಟ ರಜನೀಕಾಂತ್ ಅವರು ಆದಿತ್ಯನಾಥ್ ಅವರ ಕಾಲಿಗೆ ಅಡ್ಡಬಾಗಿ ನಮಸ್ಕರಿಸಿರುವುದನ್ನು ವಿಶ್ವವೇ ನೋಡಿದೆ. ಅದರ ಬಳಿಕ ಈಗ ಈ ವಿಷಯದ ಮೇಲೆ ಪರ, ವಿರೋಧಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಇದನ್ನು ಎಡಬಲ ಸಿದ್ಧಾಂತಿಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ನೋಡುತ್ತಿದ್ದಾರೆ. ಆದರೆ ಶುದ್ಧ ಹೃದಯದ, ಮಗುವಿನ ಮನಸ್ಸಿನ, ಸರಳತೆಯ ಪ್ರತೀಕವಾಗಿರುವ ರಜನೀಕಾಂತ್ ಅವರ ವಿಷಯದಲ್ಲಿ ಅವರು ಕಾಲಿಗೆ ಬಿದ್ದದ್ದನ್ನೇ ತಪ್ಪು ಎಂದು ಹೇಳಲು ಸಾಮಾನ್ಯವಾಗಿ ಯಾರಿಗೂ ಮನಸ್ಸು ಬಾರದು.
ಮೊದಲನೇಯದಾಗಿ ರಜನೀಕಾಂತ್ ಅವರು ಕಾಲಿಗೆ ಬಿದ್ದದ್ದು ಒಂದು ರಾಜ್ಯದ ಮುಖ್ಯಮಂತ್ರಿಯೊಬ್ಬರದ್ದು ಎಂದು ಅಂದುಕೊಳ್ಳುವುದೇ ಇಲ್ಲಿ ಸರಿಯಲ್ಲ. ಅವರು ಒಬ್ಬ ಸಂತ, ಒಂದು ಮರಾಧೀಪತಿಯ ಕಾಲಿಗೆ ನಮಸ್ಕರಿಸಿದ್ದಾರೆ. ಆಗ ತಾನೆ ಹಿಮಾಲಯದಿಂದ ಬಂದಿದ್ದ ಕಾರಣ ಆಧ್ಯಾತ್ಮಿಕ ವ್ಯಕ್ತಿಯನ್ನು ನೋಡಿದಾಗ ಅವರು ಒಂದು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ರಜನಿಕಾಂತ್ ಕಾಲಿಗೆ ನಮಸ್ಕರಿಸಿದ್ದಾರೆ. ಅದೊಂದು ರೀತಿಯಲ್ಲಿ ಎರಡು ಪುಣ್ಯಾತ್ಮರ ಸಮ್ಮಿಲನವಾಗಿತ್ತೆ ವಿನ: ಒಬ್ಬ ಸಿಎಂ ಮತ್ತು ಒಬ್ಬ ಸಿನೆಮಾ ನಟನ ಭೇಟಿ ಅಲ್ಲ. ಅದಕ್ಕಿಂತ ಹೆಚ್ಚಿನದ್ದನ್ನು ನಾವು ಅಲ್ಲಿ ನೋಡಬೇಕು. ಹಾಗಂತ ಎಲ್ಲರಿಗೂ ರಜನಿಕಾಂತ್ ಕಾಲಿಗೆ ಬಿದ್ದು ತಮ್ಮ ಸಿನೆಮಾ ಗೆಲ್ಲಿಸಿ ಎಂದು ಕೇಳಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಜೈಲರ್ ಸಿನೆಮಾ ಸೂಪರ್ ಹಿಟ್ ಆಗಿದೆ. ಇನ್ನು ಯುಪಿ ಸಿಎಂ ನೋಡಿಯೇ ಅದು ಯಶಸ್ವಿಯಾಗುವ ಅವಶ್ಯಕತೆ ಇಲ್ಲ.
ಒಂಭತ್ತು ವರ್ಷಗಳ ಹಿಂದೆನೂ ಯೋಗಿಯವರನ್ನು ರಜನಿ ಭೇಟಿಯಾಗಿ ಅವರ ತತ್ವ, ಜ್ಞಾನದಿಂದ ಪ್ರಭಾವಿತರಾಗಿದ್ದಾರೆ. ಇನ್ನು ರಜನಿಕಾಂತ್ ರಾಜಕೀಯ, ಸಿನೆಮಾ ಎಲ್ಲವನ್ನು ಮೀರಿದವರು. ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬೀಳುವುದರಲ್ಲಿ ರಜನಿ ಅವರಿಗೆ ರಾಜಕೀಯ ಅಥವಾ ಸಿನೆಮಾ ಯಾವ ಲಾಭವೂ ಇಲ್ಲ. ಅದೊಂದು ಪ್ರೀತಿಪೂರ್ವಕ ಸೌಜನ್ಯದ ನಡೆ. ಸನಾತನ ಧರ್ಮ ಸಂತರಿಗೆ ಕೊಡುವ ಮರ್ಯಾದೆ. ಅದನ್ನು ರಜನಿ ಪಾಲಿಸಿದ್ದಾರೆ. ಹಾಗೆ ನೋಡಿದರೆ ಶಾರೂಖ್ ಖಾನ್ ಹಿಂದೊಮ್ಮೆ ಬಹಿರಂಗ ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರು!
Leave A Reply