ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮತ್ತು ಶಿವಮೊಗ್ಗದ ತುಂಗಾ ತೀರದಲ್ಲಿ ಬಾಂಬ್ ಟ್ರಯಲ್ ನಡೆಸಿದ್ದ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಎನ್ನಲಾಗಿದ್ದ ಶಿವಮೊಗ್ಗ ಮೂಲದ ಅರಾಫತ್ ಆಲಿಯನ್ನು ಎನ್‌ಐಎ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ್ದಾರೆ.
ಕೀನ್ಯಾ ದೇಶದ ನೈರೋಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಿದ್ದಾಗಲೇ ಎನ್‌ಐಎ ಅಧಿಕಾರಿಗಳು ಬಲೆ ಬೀಸಿದ್ದು, ಅರೆಸ್ಟ್ ಮಾಡಿದ್ದಾರೆ. 2020ರ ಆಗಸ್ಟ್ ತಿಂಗಳಲ್ಲಿ ಲಷ್ಕರ್ ಪರವಾಗಿ ಗೋಡೆ ಬರಹ ಬರೆದಿದ್ದ ಪ್ರಕರಣದಲ್ಲಿ ಮೊದಲ ಬಾರಿಗೆ ಅರಾಫತ್ ಆಲಿ ಹೆಸರು ಕೇಳಿಬಂದಿತ್ತು. ಈತನ ಅಣತಿಯಂತೆ, ಇಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ಗೋಡೆ ಬರಹವನ್ನು ಬರೆದಿದ್ದರು. ಆನಂತರ, ಇವರಿಬ್ಬರು ಅರೆಸ್ಟ್ ಆಗಿದ್ದರೂ, ಇವರ ಜೊತೆಗೆ ಸಂಪರ್ಕದಲ್ಲಿದ್ದ ಅರಾಫತ್ ಆಲಿ ವಿದೇಶದಲ್ಲಿ ಇರುವುದು ಪತ್ತೆಯಾಗಿತ್ತು.
ಆನಂತರ, 2022ರ ಸೆಪ್ಟೆಂಬರ್ ತಿಂಗಳಲ್ಲಿ ಶಿವಮೊಗ್ಗದ ತುಂಗಾ ನದಿಯ ತೀರದಲ್ಲಿ ಮತ್ತು ಬಂಟ್ವಾಳದ ನೇತ್ರಾವತಿ ನದಿ ತೀರದಲ್ಲಿ ಬಾಂಬ್ ಬ್ಲಾಸ್ಟ್ ಟ್ರಯಲ್ ನಡೆಸಿರುವುದು ಪತ್ತೆಯಾಗಿತ್ತು. ಆನಂತರ, ನವೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಅನ್ನು ಆಟೋ ತರುತ್ತಿದ್ದಾಗಲೇ ಬ್ಲಾಸ್ಟ್ ಆಗಿತ್ತು, ಇವೆರಡು ಪ್ರಕರಣದಲ್ಲಿಯೂ ಆರೋಪಿಗಳು ಅರಾಫತ್ ಆಲಿಯ ಸಂಪರ್ಕದಲ್ಲಿರುವುದು ತನಿಖೆ ವೇಳೆ ಕಂಡುಬಂದಿತ್ತು. ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್, ಅರಾಫತ್ ಆಲಿಯ ನೇರ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಹೀಗಾಗಿ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ಅರಾಫತ್ ಆಲಿ ಬಂಧನಕ್ಕಾಗಿ ಬಲೆ ಬೀಸಿದ್ದರು. ಇಂಟರ್ ಪೋಲ್ ನೋಟೀಸನ್ನೂ ಹೊರಡಿಸಿದ್ದರು.
ಅರಾಫತ್ ಆಲಿ ವಿದೇಶದಲ್ಲಿದ್ದುಕೊಂಡೇ ಕರ್ನಾಟಕದಲ್ಲಿ ಐಸಿಸ್ ನೆಟ್ವರ್ಕ್ ಬೆಳೆಸುವುದು, ದೇಶ ವಿರೋಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕರನ್ನು ಪ್ರಚೋದಿಸಿ ಐಸಿಸ್ ನೆಟ್ವರ್ಕ್ ಸೇರ್ಪಡೆಗೊಳಿಸುವ ಕೆಲಸದಲ್ಲಿಯೂ ತೊಡಗಿಸಿದ್ದ. ಶಿವಮೊಗ್ಗದಲ್ಲಿ ಬಾಂಬ್ ಟ್ರಯಲ್ ನಡೆಸಿದ ಬಳಿಕ ನಿಗದಿತ ಸಂಚಿನಂತೆ, ಮೈಸೂರಿನಲ್ಲಿ ಐಇಡಿ ಬಾಂಬ್ ತಯಾರಿಸಿ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸ್ಫೋಟಿಸಲು ರೆಡಿ ಮಾಡಿಕೊಂಡಿದ್ದರು. 2022ರ ನವೆಂಬರ್ ತಿಂಗಳಲ್ಲಿ ಮೊಹಮ್ಮದ್ ಶಾರೀಕ್ ಕುಕ್ಕರ್ ನಲ್ಲಿ ಅಡಗಿಸಿದ್ದ ಬಾಂಬನ್ನು ಆಟೋದಲ್ಲಿ ತರುತ್ತಿದ್ದಾಗಲೇ ಮಂಗಳೂರಿನ ನಾಗುರಿಯಲ್ಲಿ ಬ್ಲಾಸ್ಟ್ ಆಗಿತ್ತು.
ಮಂಗಳೂರಿನ ಲಷ್ಕರ್ ಪರ ಗೋಡೆ ಬರಹವನ್ನು ಆರೆಸ್ಸೆಸ್ ಗುರಿಯಾಗಿಸಿ ಬರೆದಿದ್ದರು. ಸಂಘಿ ಮತ್ತು ಮನುವಾದಿಗಳೇ, ತಾಲಿಬಾನ್ ಮತ್ತು ಲಷ್ಕರ್ ಇ- ತೊಯ್ದಾ ಉಗ್ರರನ್ನು ಮಂಗಳೂರಿಗೆ ಕರೆಸುವಂತೆ ಮಾಡಬೇಡಿ, ಲಷ್ಕರ್ ಝಿಂದಾಬಾದ್ ಎಂದು ಬರೆಯಲಾಗಿತ್ತು. ಬಿಜೈನ ಅಪಾರ್ಟೆಂಟ್ ಒಂದರ ಕಂಪೌಂಡ್ ಗೋಡೆಯಲ್ಲಿ ಈ ಬರಹ ಬರೆಯಲಾಗಿತ್ತು. ಎರಡು ವಾರ ಕಾಲ ಯಾರು ಈ ಬರಹ ಬರೆದಿರುವುದು ಎಂದು ತಿಳಿಯದೆ ಕುತೂಹಲಕ್ಕೆ ಕಾರಣವಾಗಿತ್ತು. ಆನಂತರ, ವಿವಿಧ ಕಡೆಯ ಸಿಸಿಟಿವಿಗಳನ್ನು ಆಧರಿಸಿ ಪೊಲೀಸರು ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ಅವರನ್ನು ಬಂಧಿಸಿದ್ದರು. ಅರಾಫತ್ ಆಲಿ ಪ್ರೇರಣೆಯಂತೆ ಈ ಬರಹ ಬರೆದಿರುವುದೆಂದು ತನಿಖೆಯಲ್ಲಿ ಪತ್ತೆಯಾಗಿತ್ತು.
Leave A Reply