ನಾಯಿ ಕಚ್ಚಿದರೆ 10 ಸಾವಿರ ಪರಿಹಾರಕ್ಕೆ ಹೈಕೋರ್ಟ್ ಆದೇಶ!

ಇನ್ನು ಮುಂದೆ ಮನುಷ್ಯರಿಗೆ ನಾಯಿ ಕಚ್ಚಿದರೆ ಕನಿಷ್ಟ ಹತ್ತು ಸಾವಿರ ರೂಪಾಯಿಗಳನ್ನು ರಾಜ್ಯ ಸರಕಾರ ಪರಿಹಾರ ಮೊತ್ತವಾಗಿ ನೀಡಬೇಕು ಎನ್ನುವ ಆದೇಶವನ್ನು ಪಂಜಾಬ್ – ಹರ್ಯಾಯ ಹೈಕೋರ್ಟ್ ಆದೇಶ ನೀಡಿದೆ. ರಾಜ್ಯದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಆದೇಶ ನೀಡಬೇಕು ಎಂದು ಹೈಕೋರ್ಟ್ ನಲ್ಲಿ ಒಟ್ಟು 193 ದಾವೆಗಳು ಹೂಡಲ್ಪಟ್ಟಿದ್ದವು. ಈ ಬಗ್ಗೆ ತಮ್ಮ ತೀರ್ಪಿನಲ್ಲಿ ಅಂಶಗಳನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಅವರು ” ಬೀದಿ ನಾಯಿಗಳ ಕಾಟದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ನ್ಯಾಯಾಲಯದ ಮುಂದೆ ದಾಖಲಿಸ್ಪಡುತ್ತಿದ್ದರೂ ರಾಜ್ಯ ಸರಕಾರಗಳು ಕಣ್ಣು ಮುಚ್ಚಿ ಕುಳಿತುಕೊಂಡಿರುವುದು ಸರಿಯಲ್ಲ. ಪ್ರಕರಣದ ಬಗ್ಗೆ ಮುಖ ತಿರುಗಿಸಿ ಕುಳಿತುಕೊಂಡರೆ ಪ್ರಕರಣ ನಡೆದಿಲ್ಲ ಎಂದು ಅರ್ಥ ಅಲ್ಲ. ಜನರ ಆಕ್ರೋಶವನ್ನು ತಣಿಸಲು ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದು ತಿಳಿಸಿದೆ.
ನಾಯಿ ಕಚ್ಚಿದಾಗ ಅದರ ಹಲ್ಲಿನ ಗುರುತು ದೇಹದಲ್ಲಿ ಕಂಡುಬಂದರೆ ಕನಿಷ್ಟ 10000 ಸಾವಿರ ರೂಪಾಯಿ ಹಾಗೂ ಚರ್ಮದಿಂದ ಮಾಂಸ ಕಿತ್ತು ಬಂದರೆ 20000 ರೂಪಾಯಿ ಪರಿಹಾರ ನೀಡಬೇಕಾಗುತ್ತದೆ.
ಕನಿಷ್ಟ 2 ಸೆಂಟಿ ಮೀಟರ್ ಆಳದ ಗಾಯದಿಂದ ಆರಂಭವಾಗಿ ಗಾಯದ ಗಂಭೀರತೆಯ ಮೇಲೆ ಇದು ಅವಲಂಬಿತವಾಗಿ ಪರಿಹಾರ ಹೆಚ್ಚುತ್ತಾ ಹೋಗುತ್ತದೆ.
ಪರಿಹಾರವನ್ನು ನೀಡುವ ಜವಾಬ್ದಾರಿ ಸರಕಾರದಾಗಿದೆ. ಒಂದು ವೇಳೆ ತಪ್ಪು ಖಾಸಗಿ ಸಂಸ್ಥೆಗಳಿಂದ ನಡೆದರೆ ಸರಕಾರ ಸಂಬಂಧಪಟ್ಟವರಿಂದ ದಂಡದ ಮೊತ್ತ ವಸೂಲಿ ಮಾಡಬಹುದು ಎಂದು ನ್ಯಾಯಪೀಠ ತಿಳಿಸಿದೆ. ಒಟ್ಟಿನಲ್ಲಿ ಸಂತ್ರಸ್ತರಿಗೆ ಅನ್ಯಾಯವಾಗಬಾರದು ಎನ್ನುವುದು ಎಲ್ಲರ ನಿಲುವು.