ಹಾರ್ನ್ ಹಾಕಿದರೆ ದಂಡ ಕಟ್ಟಲು ತಯಾರಾಗಿ!
ಮಂಗಳೂರು ನಗರ ದಿನೇ ದಿನೇ ಬೆಳೆಯುತ್ತಿದ್ದಂತೆ ಇಲ್ಲಿ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಯಾವಾಗ ವಾಹನಗಳು ಹೆಚ್ಚಾಗುತ್ತಾ ಹೋಗುತ್ತದೆಯೋ ಟ್ರಾಫಿಕ್ ಜಾಮ್ ಕೂಡ ಅದರೊಂದಿಗೆ ಸೈಡ್ ಎಫೆಕ್ಟ್ ಆಗಿ ಬಂದುಬಿಡುತ್ತದೆ. ಟ್ರಾಫಿಕ್ ಜಾಮ್ ನೊಂದಿಗೆ ಉಚಿತವಾಗಿ ಬರುವುದು ಹಾರ್ನ್ ಗಳ ಕರ್ಕಶ ಶಬ್ದಗಳು. ಇದರಿಂದ ತಲೆ ಚಿಟ್ಟು ಹಿಡಿಯುವುದು ಮಾತ್ರ ಬಾಕಿ. ಸಾಮಾನ್ಯ ಜನರಿಗೆ ಇದನ್ನು ಸಹಿಸುವುದು ಕಷ್ಟವಾಗುವುದಾದರೆ ಆಸ್ಪತ್ರೆಗಳ ರೋಗಿಗಳು, ಶಾಲಾ ಕಾಲೇಜುಗಳಲ್ಲಿ ತರಗತಿಯಲ್ಲಿ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳು, ಸರಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಣೆಯ ಸಂದರ್ಭದಲ್ಲಿ ಶಬ್ದಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಂಗಳೂರು ನಗರದ ಪ್ರಮುಖ ಆರು ಪ್ರದೇಶಗಳನ್ನು ಹಾರ್ನ್ ನಿಷೇಧಿತ ಪ್ರದೇಶ ( ನೋ ಹಾರ್ನ್ ಝೋನ್) ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಘೋಷಿಸಿದ್ದಾರೆ.
ಘೋಷಿತ ಪ್ರದೇಶಗಳು ಯಾವುದೆಂದರೆ: 1. ಲೇಡಿಗೋಶನ್ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶ: ರಾವ್ ಆಂಡ್ ರಾವ್ ಸರ್ಕಲ್ ಸಮೀಪದ ಮೈದಾನದ ಮೂರನೇ ಅಡ್ಡರಸ್ತೆಯಿಂದ ಲೇಡಿಗೋಶನ್ ಆಸ್ಪತ್ರೆವರೆಗೆ. ಲೇಡಿಗೋಶನ್ ಆಸ್ಪತ್ರೆಯಿಂದ ಕ್ಲಾಕ್ ಟವರ್ ವರೆಗೆ: ಲೇಡಿಗೋಶನ್ ಆಸ್ಪತ್ರೆಯಿಂದ ಕಲ್ಪನಾ ಸ್ವೀಟ್ಸ್ ವರೆಗೆ.
2. ಹಂಪನಕಟ್ಟೆ ಜಂಕ್ಷನ್: ಹಂಪನಕಟ್ಟೆ ಜಂಕ್ಷನ್ ನಿಂದ ಮಿಲಾಗ್ರಿಸ್ ಚರ್ಚ್ ವರೆಗಿನ ಪ್ರದೇಶ. ಮಿಲಾಗ್ರಿಸ್ ಚರ್ಚ್ ಬಳಿಯ ವೆನಲಾಕ್ ಆಸ್ಪತ್ರೆ ಗೇಟಿನಿಂದ ಮುತ್ತಪ್ಪ ಗುಡಿಯವರೆಗೆ. ಹಂಪನಕಟ್ಟೆ ಜಂಕ್ಷನ್ ನಿಂದ ಮಿನಿ ವಿಧಾನಸೌಧ ಕಟ್ಟಡದವರೆಗೆ.
3. ಡಾ. ಅಂಬೇಡ್ಕರ್ ವೃತ್ತದ ಪ್ರದೇಶ: ಅಂಬೇಡ್ಕರ್ ವೃತ್ತದಿಂದ ಬಲ್ಮಠ ಜಂಕ್ಷನ್ ಕಡೆಗೆ 50ಮೀ ಪ್ರದೇಶ. ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದ ಕಡೆಗೆ 50 ಮೀ ಪ್ರದೇಶ. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ವೃತ್ತದ ಕಡೆಗೆ 50 ಮೀಟರ್ ಪ್ರದೇಶ. ಬಾವುಟಗುಡ್ಡೆ ( ಮಹಿಳಾ ಸಭಾ ಕಟ್ಟಡ) ದಿಂದ ಅಂಬೇಡ್ಕರ್ ವೃತ್ತದವರೆಗೆ.
4. ಅತ್ತಾವರ ಕೆಎಂಸಿ ಆಸ್ಪತ್ರೆಯ ಉತ್ತರ ಬದಿಯ ಕಂಪೌಂಡ್ ಸಮೀಪದಿಂದ ಬಿಷಪ್ ವಿಕ್ಟರ್ (ಅತ್ತಾವರ ನ್ಯೂ ರೋಡ್) ತಿರುವಿನವರೆಗೆ
5. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀ ಪ್ರದೇಶ.
6. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀ ಪ್ರದೇಶ. ವಾಹನ ಚಾಲಕರು ಈ ಆರು ಮೇಲ್ಕಂಡ ಸ್ಥಳಗಳಲ್ಲಿ ವಾಹನಗಳ ಹಾರ್ನ್ ಬಳಸುವುದನ್ನು ನಿಷೇಧಿಸಲಾಗಿದೆ.
ಭಾರತೀಯ ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019 ರ ಕಲಾಂ 194 (ಎಫ್) ರಂತೆ ಹಾರ್ನ್ ನಿಷೇಧಿಸಿದ ಸಂಚಾರ ಸೂಚನಾ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಚಾಲಕರ ಮೇಲೆ ಮೊದಲನೆಯ ಉಲ್ಲಂಘನೆಗೆ 1000 ರೂ ದಂಡವನ್ನು ಹಾಗೂ ಎರಡನೇಯ ಹಾಗೂ ತದನಂತರದ ಪ್ರತಿ ಉಲ್ಲಂಘನೆಗೆ 2000 ರೂ ದಂಡವನ್ನು ವಿಧಿಸಲಾಗುವುದು.
Leave A Reply