ಸಿಎಂ ಜೊತೆ ಇರುವುದರಿಂದ ಒಳಗಿನ ಸಮಸ್ಯೆ ನನಗೆ ಮಾತ್ರ ಗೊತ್ತಿದೆ – ರೆಡ್ಡಿ
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳನ್ನು ಸರಿಯಾಗಿ ಪೂರೈಸಲು ಏದುಸಿರು ಬಿಡುತ್ತಿರುವ ಮಧ್ಯದಲ್ಲಿಯೇ ಅದೇ ಪಕ್ಷದ ಹಿರಿಯ ಶಾಸಕರೂ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ್ ರಾಯರೆಡ್ಡಿಯವರು ನೀಡಿದ ಹೇಳಿಕೆ ರಾಜ್ಯದ ವಸ್ತುಸ್ಥಿತಿಯನ್ನು ಜನರ ಮುಂದೆ ಇಟ್ಟಿದೆ.
ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಅನುಷ್ಠಾನ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗೆ 60 ರಿಂದ 65 ಸಾವಿರ ಕೋಟಿ ರೂ ಬೇಕು. ಇದರಿಂದ ಬೇರೆ ಯೋಜನೆಗಳಿಗೆ ಅನುದಾನ ಇಲ್ಲ. ಯಾವಾಗಲೂ ಸಿಎಂ ಜೊತೆ ಇರುವ ನನಗೆ ಮಾತ್ರ ಒಳಗಿನ ಸಮಸ್ಯೆ ಗೊತ್ತಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಹಣಕಾಸಿನ ಕೊರತೆಯಿಂದ ರಾಜ್ಯದ ಯಾವುದೇ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ರಾಜ್ಯದ ಯಾವುದೇ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಎಲ್ಲಾ ಕ್ಷೇತ್ರಗಳ ಶಾಸಕರು ಅಭಿವೃದ್ಧಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ ಸಿಎಂ ಯಾರಿಗೂ ಅನುದಾನ ನೀಡಿಲ್ಲ ಎಂದು ಹೇಳಿದರು.
ನಮ್ಮ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ. ಸಿಎಂ ನನ್ನನ್ನು ತಮ್ಮ ಆರ್ಥಿಕ ಸಲಹೆಗಾರನಾಗಿ ಮಾಡಿಕೊಂಡಿದ್ದಾರೆ. ದಿನನಿತ್ಯ ಅವರ ಜೊತೆಯಲ್ಲಿ ಇರುವುದರಿಂದ ನನ್ನ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ. ರಾಜ್ಯದಲ್ಲಿ ಇದು ಒಂದೇ ಕೆಲಸ ಆಗುತ್ತಿದೆ. ಹಣಕಾಸಿನ ಆಂತರಿಕ ವಿಚಾರ, ನನಗೆ ಮಾತ್ರ ಗೊತ್ತಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
Leave A Reply