ಕನ್ನಡ ಚಿತ್ರರಂಗದ ಇವತ್ತಿನ ಪರಿಸ್ಥಿತಿಗೆ ಇದು ಒಂದು ಕಾರಣವೇ?
ಹಸಿವೆಯಿಂದ ಸತ್ತ ಕನ್ನಡದ ಹಿಟ್ ಸಿನೆಮಾಗಳ ಕಥೆಗಾರ ಯಾರು?
ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಥೆಗಾರರಿಗೆ ಸೂಕ್ತ ಸ್ಥಾನಮಾನ ಸಿಗುವ ತನಕ ಪರಿಸ್ಥಿತಿ ಸರಿಯಾಗುವುದಾದರೂ ಹೇಗೆ ಎಂದು ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅವರ ವಿಡಿಯೋವೊಂದು ಸಾಕಷ್ಟು ಜನರ ಗಮನವನ್ನು ಸೆಳೆಯುತ್ತಿದೆ. ಅದರಲ್ಲಿ ಅವರು ಎಂ. ಡಿ. ಸುಂದರ್ ಎನ್ನುವ ಕನ್ನಡ ಚಲನಚಿತ್ರ ರಂಗದ ಅಜ್ಞಾತ ಕಥೆಗಾರನ ಉದಾಹರಣೆಯನ್ನು ಬಹಳ ಅರ್ಥಗರ್ಭಿತವಾಗಿ ವಿವರಿಸುತ್ತಾ ಹೋಗುತ್ತಾರೆ. ಗಂಧದ ಗುಡಿ, ಶಂಕರ್ ಗುರು, ತಾಯಿಗೆ ತಕ್ಕ ಮಗ, ಚಕ್ರವ್ಯೂಹ, ಒಲವು – ಗೆಲುವು, ತ್ರಿಮೂರ್ತಿ, ಸಿಂಗಾಪುರದಲ್ಲಿ ರಾಜಾ ಕುಳ್ಳ, ಆಟೋ ರಾಜ, ಕಿಲಾಡಿ ಕಿಟ್ಟು, ನಾರದ ವಿಜಯ, ಸಹೋದರರ ಸವಾಲು, ಅವಳ ಹೆಜ್ಜೆ, ಕಳ್ಳ ಕುಳ್ಳ, ನೀ ನನ್ನ ಗೆಲ್ಲಲಾರೆ, ಪ್ರೀತಿ ಮಾಡು ತಮಾಷೆ ನೋಡು, ಕಾರ್ಮಿಕ ಕಳ್ಳನಲ್ಲ, ಮೂಗನ ಸೇಡು ಹೀಗೆ ಅನೇಕ ಕನ್ನಡ ಚಿತ್ರಗಳಿಗೆ ಕಥೆಯನ್ನು ನೀಡಿ ಅವುಗಳ ಯಶಸ್ಸಿಗೆ ಕಾರಣರಾಗಿದ್ದ ಕಥೆಗಾರ ಎಂ ಡಿ ಸುಂದರ್ ಬೆಂಗಳೂರಿನಲ್ಲಿ ಅಂತ್ಯಕಾಲದಲ್ಲಿ ಆಹಾರ ಸಿಗದೇ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಧರ್ಮೇಂದ್ರ ಹೇಳಿದ್ದಾರೆ.
ಅಷ್ಟು ಯಶಸ್ವಿ ಸಿನೆಮಾಗಳ ಹಿಂದಿನ ಕಥೆಗಾರ ಎಂ ಡಿ ಸುಂದರ್ ಅನಾಮಿಕರಾಗಿ ಬೆಂಗಳೂರಿನಲ್ಲಿ ತಮ್ಮ ಅಂತ್ಯದ ದಿನಗಳನ್ನು ಕಾಣಬೇಕಾಯಿತು. ನಾವು ಕನ್ನಡದಲ್ಲಿ ಕಥೆಗಾರರಿಗೆ ಕೊಡುವ ಗೌರವ, ಸ್ಥಾನಮಾನ ಇದೆನಾ? ಹೀಗಿದ್ದ ಮೇಲೆ ಕನ್ನಡ ಸಿನೆಮಾ ರಂಗ ಉದ್ಧಾರವಾಗಬೇಕು ಎಂದರೆ ಎಲ್ಲಿ ಆಗುತ್ತದೆ ಎಂದು ಧರ್ಮೇಂದ್ರ ಪ್ರಶ್ನಿಸಿದ್ದಾರೆ.
ಕನ್ನಡ ಸಿನೆಮಾಗಳಿಗೆ ಕಥೆ ಇಲ್ಲ ಎಂದು ಅವಲತ್ತುಕೊಳ್ಳುವ ಸಿನೆಮಾ ನಿರ್ಮಾಪಕರು ಉತ್ತಮ ಕಥೆಗಳನ್ನು ನೀಡಿದ ಎಂ ಡಿ ಸುಂದರ್ ಸಹಿತ ಕಥೆಗಾರರಿಗೆ ಕೊಡಬೇಕಾದ ಮನ್ನಣೆ ಕೊಡದೇ ಇದ್ದ ಕಾರಣಕ್ಕೆ ಪರಿಸ್ಥಿತಿ ಹೀಗೆ ಆಗಿದೆ. ಕನ್ನಡ ಚಿತ್ರರಂಗ 60 ವರ್ಷ ತುಂಬಿದ ಪ್ರಯುಕ್ತ ಕಾರ್ಯಕ್ರಮ ಮಾಡಿ ನೆನಪಿನ ಪುಸ್ತಕ ಹೊರ ತಂದಾಗ ಅದರಲ್ಲಿ ಒಂದು ಮಾತು ಈ ಕಥೆಗಾರನ ಬಗ್ಗೆ ಇಲ್ಲ ಎಂದು ಬೇಸರಿಸಿಕೊಂಡು ಹೇಳಿರುವ ಧರ್ಮೇಂದ್ರ ಅವರು ಇಂತಹ ಸಾವಿರಾರು ಕಥೆಗಾರರು ನಿಟ್ಟುಸಿರು ಬಿಟ್ಟ ಶಾಪ ಕನ್ನಡ ಚಿತ್ರರಂಗಕ್ಕೆ ತಗಲಿದೆ. ಈಗ ಡೋಲಾಯಮಾನವಾಗಿರುವ ಕನ್ನಡ ಚಿತ್ರರಂಗ ಸುಧಾರಿಸಬೇಕಾದರೆ ಇಂತಹ ಕಥೆಗಾರರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಉತ್ತಮ ಗೌರವ, ಸ್ಥಾನಮಾನ ನೀಡಬೇಕು ಎಂದು ಧರ್ಮೇಂದ್ರ ಆಗ್ರಹಿಸಿದ್ದಾರೆ
Leave A Reply