ಅದೇ ಕಾರಣಕ್ಕೆ ಕೇರಳ ಸಿನೆಮಾರಂಗ ತ್ಯಜಿಸಿದೆ ಎಂದ ನಟಿ ಮೀನು ಮುನಿರ್!
ನ್ಯಾಯಮೂರ್ತಿ ಹೇಮಾ ಅವರ ಆಯೋಗ ನೀಡಿದ ವರದಿಯ ಬಳಿಕ ಮಲಯಾಳಂ ಸಿನೆಮಾ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ನ್ಯಾ| ಹೇಮಾ ಅವರು ಕೇರಳ ಮುಖ್ಯಮಂತ್ರಿಯವರಿಗೆ ವರದಿ ನೀಡಿದ ಬೆನ್ನಲ್ಲೇ ಸಿಎಂ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ರಚಿಸಿದ್ದಾರೆ. ಎಸ್ ಐಟಿ ಈಗ ತನಿಖೆಗೆ ಇಳಿಯುತ್ತಿದ್ದಂತೆ ಕೇರಳ ರಾಜ್ಯದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ಹಾಗೂ ಕಲಾವಿದರ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು.
ಇದೀಗ ನಟಿ ಮೀನು ಮುನೀರ್ ಈ ಬಗ್ಗೆ ಮಾತನಾಡಿ ಮಲಯಾಲಂ ಚಿತ್ರರಂಗದ ಖ್ಯಾತನಾಮರಿಂದ ತಾವು ಲೈಂಗಿಕ ಕಿರುಕುಳ ಅನುಭವಿಸಿದ್ದು, ಅದರಲ್ಲಿ ಒಬ್ಬರು ಕೇರಳದ ಶಾಸಕರಾಗಿ ಎರಡು ಬಾರಿ ಚುನಾಯಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಮೀನು ಮುನೀರ್ ಕೆಲವರ ಹೆಸರನ್ನು ಉಲ್ಲೇಖಿಸಿದ್ದು ಅವರು ತಮಗೆ ಏನೇನೂ ಮಾಡಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. “ನಾನು ಕೇರಳ ಪೊಲೀಸರಿಗೆ ಈ ಬಗ್ಗೆ ದೂರು ಕೊಡಲಿದ್ದೇನೆ. ನ್ಯಾ. ಹೇಮಾ ಅವರ ವರದಿಯ ಅಂಶಗಳ ಬಗ್ಗೆ ಪೊಲೀಸ್
ಇಲಾಖೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು” ಎಂದು ತಿಳಿಸಿದ್ದಾರೆ.
ಒಬ್ಬರು ನಟರು ಕ್ಯಾಲೆಂಡರ್ (2009) ಹಾಗೂ ನಡಕಾಮೆ ಉಳಕಾಂ (2011) ಚಿತ್ರದ ಶೂಟಿಂಗ್ ಸಮಯದಲ್ಲಿ ಹೋಟೇಲ್ ರೂಂನಲ್ಲಿದ್ದಾಗ ಹಲ್ಲೆ ಮಾಡುವ ಪ್ರಯತ್ನವನ್ನು ಮಾಡಿದ್ದರು ಎಂದು ಮೀನು ಮುನೀರ್ ತಿಳಿಸಿದ್ದಾರೆ. ” ಅವರು ನನ್ನ ಹೋಟೇಲ್ ರೂಂ ಪ್ರವೇಶಿಸಿ ನನ್ನನ್ನು ಹಾಸಿಗೆ ಮೇಲೆ ಎಳೆದು ಹಾಕಿ, ನಾನು ಕೆಲವರನ್ನು ವಿಶೇಷವಾಗಿ ಪರಿಗಣಿಸಬೇಕು” ಎಂದು ತಿಳಿಸಿದರು. ನಂತರ ನಾನು ಆ ಕೋಣೆಯಿಂದ ಹೊರಗೆ ಬಂದೆ ಎಂದು ಹೇಳಿದ್ದಾರೆ. ಇನ್ನೊಂದು ಸಲ ಬೇರೊಬ್ಬ ನಟನೊಂದಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಆ ನಟ ನನ್ನ ಕೋಣೆಗೆ ಮರುದಿನ ರಾತ್ರಿ ಬರುತ್ತೇನೆ ಎಂದು ಹೇಳಿದ್ದು, ನಂತರ ರಾತ್ರಿ ಬಂದು ನನ್ನ ಕೋಣೆಯ ಬಾಗಿಲನ್ನು ಬಡಿಯುತ್ತಿದ್ದ ಎಂದು ಕೂಡ ತಿಳಿಸಿದ್ದಾರೆ.
ಅದೇ ಪ್ರಕಾರ 2008 ರಲ್ಲಿ ನಡೆದ ಘಟನೆಯೊಂದನ್ನು ಹೇಳಿರುವ ಮೀನು ಮುನೀರ್ ಅವರು ” ನಾನು ರಾಜ್ಯದ ರಾಜಧಾನಿಯಲ್ಲಿ ಚಿತ್ರೀಕರಣದಲ್ಲಿರುವಾಗ ಒಂದು ಸಲ ರೆಸ್ಟ್ ರೂಂನಿಂದ ಹೊರಗೆ ಬರುತ್ತಿದ್ದೆ. ಆಗ ನಟನೊಬ್ಬ ಹಿಂದಿನಿಂದ ಬಂದು ಅಪ್ಪಿಕೊಂಡು ಕಿಸ್ ಮಾಡಿದ್ದ. ನಾನು ಅವನನ್ನು ದೂಡಿ ಅಲ್ಲಿಂದ ತಪ್ಪಿಸಿಕೊಂಡಿದ್ದೆ. ಅವನು ನನ್ನನ್ನು ಅವನ ಫ್ಲಾಟಿಗೆ ಆಹ್ವಾನಿಸಿದ್ದ. ಆದರೆ ನಾನು ನಿರಾಕರಿಸಿದ್ದೆ. ನಂತರ ಆ ವಿಷಯ ಅಲ್ಲಿಗೆ ನಿಂತು ಹೋಯಿತು” ಎಂದು ಹೇಳಿದ್ದಾರೆ.
ಇನ್ನು 2013 ರಲ್ಲಿ ಇನ್ನೊಂದು ಘಟನೆ ನಡೆದಿದ್ದು, ಕೇರಳ ಕಲಾವಿದರ ಸಂಘದ ಸದಸ್ಯತ್ವ ಸ್ವೀಕರಿಸಲು ಒಬ್ಬರಿಗೆ ಕರೆ ಮಾಡಿದ್ದೆ. ಅವರು ಅರ್ಜಿ ತುಂಬಲು ಫ್ಲಾಟಿಗೆ ಕರೆದರು. ಅಲ್ಲಿ ಹೋಗಿ ಅರ್ಜಿ ಭರ್ತಿ ಮಾಡುವಾಗ ಹಿಂದಿನಿಂದ ಬಂದು ಕುತ್ತಿಗೆಗೆ ಕಿಸ್ ಮಾಡಿದರು. ನಾನು ಅಲ್ಲಿಂದ ತಕ್ಷಣ ಓಡಿಬಂದೆ. ಅಲ್ಲಿಗೆ ಕಲಾವಿದರ ಸದಸ್ಯತ್ವವೂ ಸಿಗದಂತಾಯಿತು. ಸಾಮಾನ್ಯವಾಗಿ ಮೂರು ಸಿನೆಮಾಗಳಲ್ಲಿ ನಟಿಸಿದ ನಂತರ ಸದಸ್ಯತ್ವ ಸಿಗುತ್ತದೆ. ಆದರೆ ನಾನು ಅವರಿಗೆ ಸಹಕರಿಸದ ಕಾರಣಕ್ಕೆ ಸಿಗಲಿಲ್ಲ. ಈ ಎಲ್ಲಾ ಕಾರಣಗಳಿಂದ ಮಲಯಾಲಂ ಚಿತ್ರರಂಗ ತ್ಯಜಿಸಿ ತಮಿಳುನಾಡಿನ ಚೆನೈನಲ್ಲಿ ನೆಲೆಸುವ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ಅವರು ಹೇಳಿದ್ದಾರೆ. ನನಗೆ ಈಗ ನ್ಯಾಯ ಸಿಗುವ ಭರವಸೆ ಸಿಕ್ಕಿದೆ ಎಂದು ಮೀನು ಮುನೀರ್ ಹೇಳಿದ್ದಾರೆ.
Leave A Reply