ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!

ಅಲ್ಲಿ ಗರ್ಭೀಣಿಯೊಬ್ಬಳಿಗೆ ತುರ್ತಾಗಿ ಹೆರಿಗೆ ಮಾಡಿಸಬೇಕಿತ್ತು. ಅಲ್ಲಿ ಇದ್ದದ್ದು ಆಕೆಯ ಹೇರ್ ಪಿನ್ ಹಾಗೂ ಪುಟ್ಟ ಚಾಕು ಮಾತ್ರ. ಅದು ರೈಲ್ವೆ ನಿಲ್ದಾಣವೊಂದರ ಫ್ಲಾಟ್ ಫಾರಂ. ಅಷ್ಟೇ ವಸ್ತುಗಳನ್ನು ಇಟ್ಟುಕೊಂಡು ಅದೇ ಜಾಗದಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ವೈದ್ಯರ ಹೆಸರು ಮೇಜರ್ ಡಾ. ರೋಹಿತ್ ಬಚವಾಲಾ. ಅವರ ವಯಸ್ಸು ಕೇವಲ 31 ವರ್ಷ.
ಉತ್ತರ ಕೇಂದ್ರಿಯ ಜಾನ್ಸಿ ಡಿವಿಜನ್ ಪಬ್ಲಿಕ್ ರಿಲೇಶನ್ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಅವರ ಪ್ರಕಾರ, ಗರ್ಭೀಣಿಯೊಬ್ಬರು ಪನವೆಲ್- ಗೋರಖಪುರ ಎಕ್ಸಪ್ರೆಸ್ ನಲ್ಲಿ ಪ್ರಯಾಣಿಸುವಾಗ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಜಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಯಿತು.
ಅಸಾಧ್ಯ ಹೊಟ್ಟೆನೋವಿನಿಂದ ನರಳುತ್ತಿದ್ದ ಆಕೆಯ ಬಳಿ ಮಹಿಳಾ ಟಿಸಿ ಹಾಗೂ ಯೋಧರೊಬ್ಬರು ಧಾವಿಸಿದ್ದಾರೆ. ಮೇಜರ್ ಡಾ. ರೋಹಿತ್ ಬಚವಾಲಾ, ಸೇನೆಯಲ್ಲಿ ವೈದ್ಯಾಧಿಕಾರಿಯಾಗಿದ್ದು, ತಮ್ಮ ರೈಲಿಗಾಗಿ ಕಾಯುತ್ತಾ ಕುಳಿತಿದ್ದರು. ರೈಲ್ವೆ ಉದ್ಯೋಗಿಯೊಬ್ಬರು ವೀಲ್ ಚೇರ್ ದೂಡುತ್ತಾ ಧಾವಂತದಿಂದ ಓಡುವುದನ್ನು ನೋಡಿದ ಅವರು ಆಕೆಯನ್ನು ಹಿಂಬಾಲಿಸಿದ್ದರು. ತಕ್ಷಣ ಸೂಕ್ಷ್ಮತೆಯ ಅರಿವಾಗುತ್ತಲೇ ಅವರು ರೈಲ್ವೆ ಸಿಬ್ಬಂದಿಗಳ ಸಹಕಾರದಿಂದ ಅಲ್ಲಿಯೇ ಹೆರಿಗೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರು. ಅಲ್ಲಿ ಆಪರೇಶನ್ ಥಿಯೇಟರ್ ನಲ್ಲಿ ಇರುವ ಯಾವುದೇ ಸಲಕರಣೆಗಳು ಇಲ್ಲದಿದ್ದರೂ ಇದ್ದದ್ದರಲ್ಲಿಯೇ ಏನಾದರೂ ಮಾಡುವ ನಿರ್ಧಾರ ಮಾಡಿದೆ ಎಂದು ಮೇಜರ್ ಬಚವಾಲಾ ಹೇಳಿದ್ದಾರೆ.
ಅಲ್ಲಿ ಹೇರ್ ಪಿನ್ ಹಾಗೂ ನನ್ನ ಬಳಿ ಪಾಕೆಟ್ ಚಾಕು ಇದ್ದ ಕಾರಣ ಮಗುವಿನ ಸುರಕ್ಷತೆಯನ್ನು ಮನಗಂಡು ಕೂಡಲೇ ಕಾರ್ಯಪ್ರವೃತ್ತರಾದೆವು. ಮಗು ಹಾಗೂ ತಾಯಿ ಇಬ್ಬರ ಆರೋಗ್ಯವೂ ಪ್ರಮುಖವಾಗಿತ್ತು. ಅಲ್ಲಿ ಪ್ರತಿ ಸೆಕೆಂಡ್ ಕೂಡ ಮುಖ್ಯವಾಗಿತ್ತು ಎಂದು ಮೇಜರ್ ಹೇಳಿದ್ದಾರೆ.
ಗರ್ಭೀಣಿ ವಿಪರೀತ ನೋವಿನಿಂದ ನಡೆಯಲಾಗದೇ ಲಿಫ್ಟ್ ಬಳಿ ಕುಸಿದು ಬಿದ್ದರು. ” ನಾನು ಒಂದು ಕ್ಷಣವೂ ಯೋಚಿಸಲು ಹೋಗಲಿಲ್ಲ. ಯಾಕೆಂದರೆ ಯೋಚಿಸಿ ಕೂರುವ ಸಮಯವೂ ಅದಾಗಿರಲಿಲ್ಲ. ಅದೇ ಪ್ರದೇಶವನ್ನು ಬಟ್ಟೆಯಿಂದ ಸುತ್ತುವರೆದು ಮೇಕ್ ಶಿಫ್ಟ್ ಆಪರೇಶನ್ ಥಿಯೇಟರ್ ಮಾಡಿಕೊಂಡೆವು, ಸ್ವಚ್ಚತೆ ಕೂಡ ಮುಖ್ಯವಾಗಿತ್ತು. ದೇವರ ದಯೆಯಿಂದ ನಾನು ಅಲ್ಲಿಯೇ ಇದ್ದ ಕಾರಣ ಇದೆಲ್ಲವೂ ಸಾಧ್ಯವಾಯಿತು” ಎಂದು ಅವರು ಹೇಳಿದರು.
ಹೆರಿಗೆ ನಂತರ ತಾಯಿ-ಮಗು ಇಬ್ಬರನ್ನು ಆಂಬ್ಯುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ. ಹೆರಿಗೆ ಮಾಡಿದ ಬಳಿಕ ಮೇಜರ್ ಬಚವಾಲಾ ತಾವು ತೆರಳಬೇಕಿದ್ದ ಹೈದ್ರಾಬಾದ್ ರೈಲನ್ನು ಏರಿದ್ದಾರೆ. ” ಒಬ್ಬ ವೈದ್ಯನಾಗಿ ನಾವು ಎಲ್ಲಾ ಸಂದರ್ಭಗಳಲ್ಲಿ ಸರ್ವಸನ್ನದ್ಧರಾಗಿ ಇರಬೇಕಾಗುತ್ತದೆ. ಪ್ರಯಾಣದ ಅವಧಿಯಲ್ಲಿಯೂ ಯಾವುದೇ ಸವಾಲು ನಮ್ಮ ಮುಂದೆ ಬರಬಹುದು. ಎರಡು ಜೀವಗಳನ್ನು ಉಳಿಸಲು ಸಾಧ್ಯವಾಗಿರುವುದಕ್ಕೆ ದೇವರ ಅನುಗ್ರಹವೇ ಕಾರಣ” ಎಂದು ಅವರು ಭಗವಂತನಿಗೆ ಕೃತಜ್ಞತೆ ಅರ್ಪಿಸಿದ್ದಾರೆ.