ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಅವರಿಗೆ ಈಗ 70 ವರ್ಷ ವಯಸ್ಸು. ಇತ್ತೀಚೆಗಷ್ಟೇ ಅವರು ಕೆಲವು ದಿನಗಳ ಕಾಲ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದರು. ನಡೆಯುವುದು ಬಿಡಿ, ಬೆರಳು ಅಲುಗಾಡಿಸಲು ಕೂಡ ಕಷ್ಟ ಎನ್ನುವಷ್ಟರ ಮಟ್ಟಿಗೆ ಅವರಿಗೆ ಅನಾರೋಗ್ಯ ಕಾಡಿತ್ತು. ಚಿಕುನ್ ಗುನ್ಯಾ ಕಾಯಿಲೆ ಅವರ ದೇಹವನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು. ಅದಾಗಿ ಚಿಕಿತ್ಸೆಯ ಬಳಿಕ ಸುರೇಶ್ ಕುಮಾರ್ ಅರೋಗ್ಯವಾಗಿದ್ದಾರೆ. ಯಾವ ಲೆವೆಲ್ಲಿಗೆ ಗುಣಮುಖರಾಗಿದ್ದಾರೆ ಎಂದರೆ ಇತ್ತೀಚೆಗೆ ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲಿಂಗ್ ಮಾಡಿಕೊಂಡು ಹೋಗಿದ್ದಾರೆ.
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸುಮಾರು 702 ಕಿಲೋ ಮೀಟರ್ ಇದೆ. ಇವರು 2024 ರಲ್ಲಿಯೇ ಹೀಗೊಂದು ಸೈಕಲ್ ಯಾತ್ರೆ ಮಾಡಬೇಕೆಂದು ಯೋಚನೆ ಹಾಕಿದ್ದರು. ಅವರು ಐದು ದಶಕಗಳ ಹಿಂದೆ ಒಮ್ಮೆ ಹೀಗೆ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ತುಳಿದ ನೆನಪಿಗಾಗಿ ಇನ್ನೊಮ್ಮೆ ಅದೇ ರೀತಿ ಹೋಗಿ ಬರೋಣ ಎಂದು ನಿರ್ಧರಿಸಿದ್ದರು. ಆದರೆ 2024 ಅಗಸ್ಟ್ ನಲ್ಲಿ ಅವರಿಗೆ ಕಾಯಿಲೆ ಬಂದು ಯೋಜನೆ ಕೈಬಿಟ್ಟಿದ್ದರು. 2025 ಮಾರ್ಚ್ ನಲ್ಲಿ ಅವರು ಮತ್ತೇ ಚೇತರಿಸಿಕೊಳ್ಳುತ್ತಿದ್ದಂತೆ ತಮ್ಮ ಸೈಕಲಿಂಗ್ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಮುಂದಾಗಿದ್ದರು. ಅದರಂತೆ ಕಾಲ ಕೂಡಿ ಬಂದು 12 ಗೆಳೆಯರೊಂದಿಗೆ ಯಾತ್ರೆ ಶುರು ಮಾಡಿಯೇ ಬಿಟ್ಟರು. ಡಿಸೆಂಬರ್ 23 ರಂದು ಆರಂಭವಾದ ಈ ಯಾತ್ರೆಯ ಮೊದಲ ದಿನ ಎಂಟೂವರೆ ಗಂಟೆಯಲ್ಲಿ 157 ಕಿಲೋ ಮೀಟರ್ ಸೈಕಲಿಂಗ್ ಮಾಡಿದ್ದಾರೆ. ಎರಡನೇಯ ದಿನ 159 ಕಿಲೋಮೀಟರ್ 8.3 ಗಂಟೆಯಲ್ಲಿ ಮೂರನೇ ದಿನ 155 ಕಿಲೋ ಮೀಟರ್ ಸಂಚರಿಸಿದ್ದಾರೆ. ನಾಲ್ಕನೇ ದಿನ 156 ಕಿಲೋ ಮೀಟರ್ ಹಾಗೂ ಕೊನೆಯ ದಿನ ನಾಲ್ಕು ಗಂಟೆಯಲ್ಲಿ 73 ಕಿಲೋ ಮೀಟರ್ ಪೆಡಲ್ ತುಳಿದು ಯಾತ್ರೆ ಸಂಪನ್ನಗೊಳಿಸಿದ್ದಾರೆ.
ಇದು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿರುವ ಮಾಜಿ ಸಚಿವ ಸುರೇಶ್ ಕುಮಾರ್ ಸೈಕಲಿಂಗ್ ತಮ್ಮ ನೆಚ್ಚಿನ ಹವ್ಯಾಸವಾಗಿದ್ದು, ರಾಜಕೀಯಕ್ಕೆ ಬಂದಾಗ ಇದಕ್ಕೆ ಬ್ರೇಕ್ ನೀಡಿದ್ದೆ. ಈಗ ಮತ್ತೇ ಇದನ್ನು ಆರಂಭಿಸಿ, ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮರಳಿಗಳಿಸಿದಂತಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಅವರ ಈ ನಡೆ ಹಲವರಿಗೆ ಸ್ಫೂರ್ತಿಯನ್ನು ಉಂಟು ಮಾಡಿದೆ. ಕಾಯಿಲೆಗೆ ಹೆದರಿ, ವಯಸ್ಸಿಗೆ ಹೆದರಿ ಕೂರುವುದಕ್ಕಿಂತ ಇಂತಹ ಧೈರ್ಯದ ನಡೆಯಿಂದ ಸುರೇಶ್ ಕುಮಾರ್ ಅವರು ಹಲವರಿಗೆ ಮಾದರಿಯಾಗಿದ್ದಾರೆ.









