ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರಿಗೆ ನೋಟ್ಯಂತರ ಪರಿಣಾಮವೇ ಗೊತ್ತಿಲ್ಲ ಎಂದರೆ…
ನೋಟುಗಳ ಅಮಾನ್ಯೀಕರಣ “ಅನವಶ್ಯಕ ಸಾಹಸ”…
ಕಲಬುರಗಿಯಲ್ಲಿ ಆಗಾಗ ಮಳೆಯಾದರೂ ಬರುತ್ತದೆ, ಆದರೆ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಮಾತುಗಳು ಕಲಬುರಗಿ ಮಳೆಗಿಂತ ವಿರಳ…
ಆದರೂ, ವರ್ಷದಲ್ಲೊಮ್ಮೆ ಬಾಯಿಬಿಟ್ಟರೆ, ಮೇಲಿನಂತ ಸಾಲುಗಳು ಹೊರಬೀಳುತ್ತವೆ…
ನಿಜವಾಗಿಯೂ ನೋಟು ನಿಷೇಧ ಅನವಶ್ಯಕ ಸಾಹಸವೇ? ಇದರಿಂದ ಯಾವುದೇ ಪ್ರಯೋಜನವಾಗಿಲ್ಲವೇ? ಭ್ರಷ್ಟರಿಗೆ ಬಿಸಿ ಮುಟ್ಟಿಲ್ಲವೇ? ಸಕಾರಾತ್ಮಕ ಪರಿಣಾಮ ಆಗಿಲ್ಲವೇ? ಮನಮೋಹನ್ ಸಿಂಗ್ ಅವರೇ, ಇಲ್ಲಿದೆ ನೋಡಿ ಅಂಕಿ-ಅಂಶ…
ವಿತ್ತೀಯ ಸಮೀಕ್ಷೆ ಪ್ರಕಾರ, 2016-17ನೇ ಸಾಲಿನಲ್ಲಿ 5.4 ಲಕ್ಷ ನೂತನ ತೆರಿಗೆದಾರರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೇಳಿ, ತೆರಿಗಾದರರ ಹಣದಿಂದ ಯಾರಿಗೆ ಲಾಭ? ಅದು ಯಾರ ಖಾತೆಗೆ ಜಮೆ ಆಗುತ್ತದೆ? ನೋಟು ನಿಷೇಧ ಮಾಡದಿದ್ದರೆ ಇಷ್ಟು ತೆರಿಗೆದಾರರು ನೋಂದಣಿ ಮಾಡಿಕೊಳ್ಳುತ್ತಿದ್ದರೆ?
ನೋಟ್ಯಂತರ ಬಳಿಕ ಶಂಕಿತ ಪಟ್ಟಿಗೆ ಸೇರಿಸಿದ 3 ಲಕ್ಷ ಕಂಪನಿಗಳಲ್ಲಿ 2.1 ಲಕ್ಷ ಕಂಪನಿಗಳು ನಕಲಿ ಎಂದು ತಿಳಿದುಬಂದಿದೆ. ಅವುಗಳ ನೋಂದಣಿಯನ್ನೂ ಸರಕಾರ ರದ್ದುಗೊಳಿಸಿದೆ. ಇದು ನೋಟು ನಿಷೇಧದ ಸಕಾರಾತ್ಮಕ ಪರಿಣಾಮವಲ್ಲವೇ? ಈ ಕಂಪನಿಗಳು ಬರೋಬ್ಬರಿ 13 ಸಾವಿರ ಕೋಟಿ ರೂಪಾಯಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು ನಿಮಗೆ ಗೊತ್ತೇ? ಇದರಿಂದ ಯಾರಿಗೆ ನಷ್ಟವಾಗುತ್ತಿತ್ತು ಎಂಬುದು ತಿಳಿದಿದೆಯಾ?
ನೋಟು ಅಮಾನ್ಯೀಕರಣದ ಬಳಿಕ ಬ್ಯಾಂಕಿಗೆ ಠೇವಣಿಯಾದ 15.28 ಲಕ್ಷ ಕೋಟಿ ರೂಪಾಯಿಯಲ್ಲಿ ಎಲ್ಲವೂ ಸಕಾರಾತ್ಮಕ ಹಾದಿಯಲ್ಲಿ ಗಳಿಸಿದ ಹಣವಲ್ಲ. ಅದರ ಮೇಲೂ ನಿಗಾ ಇಟ್ಟಿದ್ದೇವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿಯೇ ಹೇಳಿದ್ದಾರೆ. ಈ ಕಪ್ಪು ಹಣ ಬ್ಯಾಂಕಿಗೆ ಠೇವಣಿಯಾಗಿದ್ದು ನೋಟ್ಯಂತರದಿಂದಲೇ ಅಲ್ಲವೇ ಮನಮೋಹನ್ ಸಿಂಗ್ ಅವರೇ?
ಬಾಯಿಬಿಟ್ಟರೆ ನೋಟು ನಿಷೇಧದಿಂದ ಜಿಡಿಪಿ ಕುಸಿಯಿತು ಎಂದು ಹೇಳುತ್ತೀರಿ. ಆದರೆ, ಅದೇ ನರೆಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಜಿಡಿಪಿ ಔನ್ನತ್ಯಕ್ಕೇರಿದ್ದನ್ನು ಎಂದಾದರೂ ಹೇಳಿದ್ದೀರಾ? ನಿಮ್ಮ ಅವಧಿಯಲ್ಲಿ ಜಿಡಿಪಿ ಎಷ್ಟು ತಳ ಕಂಡಿತ್ತು ಎಂಬುದು ನಮಗೆ ಗೊತ್ತಿಲ್ಲ ಎಂದು ಭಾವಿಸಿದಿರಾ?
ಅಂಕಿ ಅಂಶಗಳ ಆಧಾರದ ಮೇಲೆ ನಿಮಗೆ ನೋಟು ನಿಷೇಧದ ಬಗ್ಗೆ ಗೊತ್ತಾಗಲಿಲ್ಲ ಎಂದರೆ, ಈ ನಿರ್ಧಾರ ಛಾತಿಯಿಂದ ಕೂಡಿದೆ ಎಂದು ವಿಶ್ವವೇ ಹಾಡಿಹೊಗಳಿದೆ. ಇಡೀ ದೇಶದ ಜನ ಸ್ವೀಕರಿಸಿದ್ದಾರೆ. ಆದರೂ ನೀವು ಅಪದ್ಧ ನುಡಿದಿದ್ದೀರಿ. ಇರಲಿ, ಮಾತೇ ಆಡದ ನೀವು ಬಾಯಿಬಿಟ್ಟಿದ್ದು ಯಾರ ಮನವೊಲಿಸಲು ಎಂದು ಗೊತ್ತು. ಆದರೆ, ನಿಮ್ಮಂಥ ಅರ್ಥಶಾಸ್ತ್ರಜ್ಞರಿಗೇ ಇದೆಲ್ಲ ಹೇಳಬೇಕಾಯಿತಲ್ಲ ಎಂಬ ಬೇಸರ ಕಾಡುತ್ತಿದೆ ಅಷ್ಟೆ.
-ರಾಕೇಶ್ ಹೆಗಡೆ, ಮಂಗಳೂರು
Leave A Reply