ಪ್ರಧಾನಿ ಮೋದಿಯಿಂದ ರಾಮಾಯಣ ಕುರಿತ ಅಂಚೆ ಚೀಟಿ ಬಿಡುಗಡೆ
ಲಖನೌ: ಭಾರತೀಯ ಅಂಚೆ ಇದೇ ಮೊದಲ ಬಾರಿಗೆ ರಾಮಯಣದ ಅಂಶ ಸಾರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.
ಇತ್ತೀಚೆಗೆ ವಾರಣಾಸಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತುಳಸಿ ಮಾನಸ ಮಂದಿರದಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದಾರೆ.
ಬಳಿಕ ಮಾತನಾಡಿ, “ಭಗವಾನ್ ರಾಮನ ಜೀವನ ಶೈಲಿ ಹಾಗೂ ಅವರ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿದಾಯಕ. ಮಹಾತ್ಮ ಗಾಂಧೀಜಿ ಅವರು ಸಹ ರಾಮನ ತತ್ತ್ವಗಳನ್ನು ಅಳವಡಿಸಿಕೊಂಡಿದ್ದರು’ ಎಂದು ತಿಳಿಸಿದರು.
ನಾನು ಪ್ರಧಾನಿಯ ನಿವಾಸ ಅಥವಾ ವಿಜ್ಞಾನ ಮಂದಿರದಲ್ಲಿ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಬಹುದಾಗಿತ್ತು. ಆದರೆ ನವರಾತ್ರಿಯಂಥ ಸಂದರ್ಭದಲ್ಲಿ ತುಳಸಿ ಮಾನಸ ಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕಿಂತ ಬೇರೆ ಪ್ರಾಶಸ್ತ್ಯವಾದ ಸ್ಥಳ ಇಲ್ಲ. ಹಾಗಾಗಿ ದೇವಾಲಯದಲ್ಲಿ ಬಿಡುಗಡೆಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನವರಾತ್ರಿ ಹಾಗೂ ವಿಜಯ ದಶಮಿ ರಾಮನ ಜೀವನದಲ್ಲಿ ಮಹತ್ತರ ಪಾತ್ರ ನಿರ್ವಹಿಸಿರುವುದರಿಂದ, ಈ ಸಂದರ್ಭದಲ್ಲಿ ರಾಮಾಯಣದ ಕುರಿತ ಅಂಚೆ ಚೀಟಿ ಬಿಡುಗಡೆಗೊಳಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.
ಅಂಚೆ ಚೀಟಿಗಳು ಬರೀ ಚೀಟಿಗಳಲ್ಲ ಅಥವಾ ಪತ್ರ ತಲುಪಲು ಇರುವ ಗುರುತುಗಳಲ್ಲ. ಅವು ದೇಶದ ಇತಿಹಾಸ, ಪರಂಪರೆ, ಸಂಪ್ರದಾಯ, ಮೌಲ್ಯಗಳನ್ನು ಸಾರುವ ಪ್ರತೀಕಗಳು ಎಂದು ಅಭಿಪ್ರಾಯಪಟ್ಟಿದ್ದಾರೆ.
Leave A Reply