ಕೆಪಿಸಿಸಿ ಐಟಿ ವಿಭಾಗದಿಂದ “ಮತ್ತೆ ಸಿದ್ಧರಾಮಯ್ಯ” ಘೋಷಣೆಗೆ ಬ್ರೇಕ್!
ಒಂದು ಕಡೆ ದಲಿತರ ಮತಬ್ಯಾಂಕ್ ಸೆಳೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ್ ಖರ್ಗೆಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದರೆ ಇತ್ತ ರಾಜ್ಯದಲ್ಲಿ ದಲಿತ ಮುಖಂಡಾಗಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಸೈಲೆಂಟ್ ಆಗಿ ಪಕ್ಕಕ್ಕೆ ಇಡಲು ರಾಜ್ಯ ಕಾಂಗ್ರೆಸ್ಸಿನೊಳಗೆ ಷಡ್ಯಂತ್ರ ನಡೆಯುತ್ತಿದೆ. ಈ ವಿಷಯದಲ್ಲಿ ಸ್ವತ: ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಕೋಪ, ಅಸಮಾಧಾನಕ್ಕೆ ಮುಖ್ಯ ಕಾರಣ ಕೆಪಿಸಿಸಿಯ ಸಾಮಾಜಿಕ ತಾಣಗಳನ್ನು ನೋಡುತ್ತಿರುವ ಐಟಿ ವಿಭಾಗ ಸಿದ್ಧರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವುದು.
ಮುಂದಿನ ವಿಧಾನಸಭಾ ಚುನಾವಣೆ ತನ್ನ ಮತ್ತು ಸಿದ್ಧರಾಮಯ್ಯನವರ ಜಂಟಿ ನೇತೃತ್ವದಲ್ಲಿ ನಡೆಯಲಿದೆ. ಬಹುಮತ ಬಂದ ಬಳಿಕ ಶಾಸಕಾಂಗ ಪಕ್ಷ ಸಭೆ ಸೇರಿ ತಮ್ಮ ನಾಯಕನನ್ನು ನಿರ್ಧರಿಸುತ್ತದೆ. ಅದನ್ನು ಹೈಕಮಾಂಡ್ ಗೆ ಕಳುಹಿಸಿ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ. ಆದರೆ ಕೂಸು ಹುಟ್ಟುವ ಮೊದಲೇ ಐಟಿ ವಿಭಾಗವು ಸಿದ್ಧರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿರುವುದರ ಬಗ್ಗೆ ಅವರಿಗೆ ಅಸಮಾಧಾನವಿದೆ. ಅಷ್ಟಕ್ಕೂ ಐಟಿ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಸಿದ್ಧರಾಮಯ್ಯ ಅವರ ಮಗ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಅವರ ಪತ್ನಿ. ಅವರಿಗೆ ಗೊತ್ತಿಲ್ಲದೆ “ಮತ್ತೆ ಸಿದ್ಧರಾಮಯ್ಯ” ಸ್ಲೋಗನ್ ಹೊರಗೆ ಬರಲು ಸಾಧ್ಯವಿಲ್ಲ. ಅವರು “ಎಸ್” ಎಂದ ಮೇಲೆ ಅದು ಸಾಮಾಜಿಕ ತಾಣದಲ್ಲಿ ಹೊರಹೊಮ್ಮಿರಬಹುದು. ಹಾಗೆಂದ ಮಾತ್ರಕ್ಕೆ ಒಂದು ಸ್ಲೋಗನ್ ನಿಂದ ಎಲ್ಲವೂ ಆಗುತ್ತದೆ ಎಂದಲ್ಲ. ಆದರೆ “ಮತ್ತೆ ಸಿದ್ಧರಾಮಯ್ಯ” ಎನ್ನುವ ಘೋಷಣೆ ಮೊಳಗಿದರೆ ಮಾತ್ರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು ಎನ್ನುವ ವಿಷಯವನ್ನು ಕೆಪಿಸಿಸಿ ಅರ್ಥ ಮಾಡಿಕೊಂಡಿದೆ. ಸಿದ್ಧರಾಮಯ್ಯನವರೇ ರಾಜ್ಯ ಕಾಂಗ್ರೆಸ್ ಅನ್ನು ದಡ ಮುಟ್ಟಿಸಲು ಶಕ್ತರು ಎಂದು ರಾಜ್ಯದ ಕಾಂಗ್ರೆಸ್ ನಾಯಕರು ಅಂದುಕೊಂಡಿರುವ ಹಾಗಿದೆ. ಇದೇ ಪರಮೇಶ್ವರ್ ಅವರನ್ನು ಚಿಂತನೆಗೆ ತಳ್ಳಿರುವುದು.
ಒಂದು ವೇಳೆ ಕೊರಟಗೆರೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸುವ ಷಡ್ಯಂತ್ರ ಕಳೆದ ಬಾರಿ ನಡೆಯದೇ ಇದ್ದಿದ್ದರೆ ಇಷ್ಟೋತ್ತಿಗೆ ಪರಮೇಶ್ವರ್ ಸಿಎಂ ಆಗಿ ನಾಲ್ಕುವರೆ ವರ್ಷಗಳು ಕಳೆಯುತ್ತಿದ್ದವು. ಆವತ್ತು ರಾಜ್ಯದ ಮೊದಲ ದಲಿತ ಸಿಎಂ ಆಗುವ ಪರಮೇಶ್ವರ್ ಅವರ ಆಸೆ ಈಡೇರಿರಲಿಲ್ಲ. ಹಾಗಂತ ಈ ಬಾರಿ ಪರಮೇಶ್ವರ್ ಹಿಂದಿಗಿಂತ ಹೆಚ್ಚು ಹುಶಾರಾಗಿದ್ದಾರೆ. ಸ್ವಲ್ಪ ಮೈಮರೆತರೂ ಈ ಬಾರಿಯೂ ತನಗೆ ಹಿಂದಿನ ಕಥೆಯೇ ಪುನರಾರ್ವತನೆ ಆಗಲಿದೆ ಎಂದು ಪರಮೇಶ್ವರ್ ಅವರಿಗೆ ಗೊತ್ತಿದೆ. ಅದಕ್ಕೆ ಅವರು ಕೇರ್ ಲೆಸ್ ಆಗುವ ಸಾಧ್ಯತೆ ಕಡಿಮೆ. ಹೇಗಾದರೂ ಮಾಡಿ ಗೆದ್ದು ದಲಿತ ಸಿಎಂ ಕಾರ್ಡ್ ಎದುರಿಗೆ ಹಾಕಿ ಸಿಎಂ ಕುರ್ಚಿಯ ಮೇಲೆ ಕುಳಿತುಕೊಳ್ಳೋಣ ಎಂದು ಪರಮೇಶ್ವರ್ ಯೋಚಿಸುತ್ತಾ ಇರುವಾಗಲೇ “ಮತ್ತೆ ಸಿದ್ಧರಾಮಯ್ಯ” ಘೋಷ ವಾಕ್ಯ ಅವರಿಗೆ ನಿದ್ದೆಗೆಡಿಸಿದೆ. ಇದು ಒಂದು ರೀತಿಯಲ್ಲಿ ಕಾಂಗ್ರೆಸ್ಸಿಗೂ ಬಿಸಿತುಪ್ಪ. ಘೋಷವಾಕ್ಯವನ್ನು ಮುಂದುವರೆಸಿಕೊಂಡು ಹೋದರೆ ಸಿದ್ಧರಾಮಯ್ಯ ಎದುರು ಪರಮೇಶ್ವರ್ ಕೋಪಗೊಳ್ಳುತ್ತಾರೆ. ಮುಂದುವರೆಸಿಕೊಂಡು ಹೋಗದಿದ್ದರೆ ಸಿದ್ಧರಾಮಯ್ಯನವರ ಇಮೇಜ್ ಎನ್ ಕ್ಯಾಶ್ ಮಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟೆನ್ಷನ್ ಆಗುತ್ತಿದೆ.
Leave A Reply