ಕೊನೆಗೂ ಬುದ್ಧಿ ಕಲಿತ ಪಾಕ್, ಹಫೀಜ್ ಬೆಂಬಲಿತ ಪಕ್ಷ ನಿಷೇಧಿಸಲು ಚುನಾವಣೆ ಆಯೋಗಕ್ಕೆ ಮನವಿ
ಇಸ್ಲಾಮಾಬಾದ್: ಲಷ್ಕರೆ ತಯ್ಯಬಾ, ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಹಲವು ಉಗ್ರ ಸಂಘಟನೆಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಸಾಕುತ್ತಿರುವ ಪಾಕಿಸ್ತಾನಕ್ಕೆ ಇತ್ತೀಚೆಗೆ ಜಾಗತಿಕವಾಗಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಬುದ್ಧಿ ಕಲಿತಿದೆ.
ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಬೆಂಬಲಿತ ಮಿಲ್ಲಿ ಮುಸ್ಲಿಂ ಲೀಗ್ ಎಂಬ ಪಕ್ಷವನ್ನು ನಿಷೇಧಿಸಬೇಕು ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವಾಲಯ ಚುನಾವಣೆ ಆಯೋಗಕ್ಕೆ ಶಿಫಾರಸು ಮಾಡಿದೆ.
ಸೆ.22ರಂದು ಚುನಾವಣೆ ಆಯೋಗ ಹೊರಡಿಸಿದ ಅಧಿಸೂಚನೆಯಂತೆ ಎಂಎಂಎಲ್ ರಾಜಕೀಯ ಪಕ್ಷ ಎಂದು ತಿಳಿದುಬಂದಿದೆ. ಆದರೆ ಇದು ಲಷ್ಕರೆ ತಯ್ಯಬಾ ಉಗ್ರ ಸಂಘಟನೆ ಬೆಂಬಲಿತ ಪಕ್ಷವಾಗಿರುವುದರಿಂದ ನಿಷೇಧಗೊಳಿಸಬೇಕು ಎಂದು ಪಾಕಿಸ್ತಾನ ಶಿಫಾರಸಿನಲ್ಲಿ ತಿಳಿಸಿದೆ.
ಅಷ್ಟೇ ಅಲ್ಲ, ಈ ಪಕ್ಷ ಲಾಹೋರಿನಲ್ಲಿ ಸೆಪ್ಟೆಂಬರ್ 17ರಂದು ನಡೆದ ಉಪ ಚುನಾವಣೆಯಲ್ಲಿ ಶೇ.5ರಷ್ಟು ಮತ ಗಳಿಸಿದ್ದು ಸಹ ಪಾಕಿಸ್ತಾನ ಸರಕಾರಕ್ಕೆ ನುಂಗಲಾರದ ತುತ್ತಾದ ಕಾರಣ ನಿಷೇಧಕ್ಕಾಗಿ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಹಫೀಜ್ ಸಯೀದ್ ಗೃಹ ಬಂಧನದಲ್ಲಿದ್ದಾನೆ. ಈತನನ್ನು ಅಮೆರಿಕ ಉಗ್ರ ಎಂದು ಘೋಷಿಸಿದ್ದು, 2008ರಂದು ಮುಂಬೈ ಮೇಲೆ ನಡೆದ ಬಾಂಬ್ ದಾಳಿಯ ರೂವಾರಿ ಎಂದು ಸಹ ಘೋಷಿಸಲಾಗಿದೆ.
Leave A Reply