ಜನಪ್ರತಿನಿಧಿಗಳಿಲ್ಲದ ಸಾರ್ವಜನಿಕರ ಸಮಿತಿ ರಚಿಸಿ ಸ್ಮಾರ್ಟ್ ಸಿಟಿ ಮೇಲ್ವಿಚಾರಣೆ ಕೊಡಿ!
ವಿಝನ್ 2025 ರ ಸಂಬಂಧ ನಡೆದ ಸಾರ್ವಜನಿಕ-ಜನಪ್ರತಿನಿಧಿಗಳ ನಡುವಿನ ಸಭೆಯಲ್ಲಿ ಊರಿನ ಹಿತದೃಷ್ಟಿಯಿಂದ ಆಗಲೇಬೇಕಾದ ಪ್ರಮುಖ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಮಂಡಿಸಿದೆ. ಮಂಗಳೂರು ಸ್ಮಾರ್ಟ್ ಸಿಟಿ ಆಗಲು ಅರ್ಹತೆ ಪಡೆದಿದೆ. ಇನ್ನೇನೂ ಅನುದಾನ ಕೋಟಿಗಟ್ಟಲೆ ಬರುತ್ತದೆ. ಹಣ ಬಂದ ತಕ್ಷಣ ಅಭಿವೃದ್ಧಿ ಆಗುವುದಿಲ್ಲ. ಫೋಟೋಗೆ, ವಿಡಿಯೋಗೆ ರಸ್ತೆ ಚೆಂದವಾಗಿ ಕಂಡ ತಕ್ಷಣ ಆ ರಸ್ತೆ ಗುಣಮಟ್ಟದ್ದಾಗಿರಬೇಕೆಂದಿಲ್ಲ. ಎಷ್ಟೋ ಸಲ ಛಾಯಾಗ್ರಾಹಕರ ಕೆಮೆರಾ ಚೆನ್ನಾಗಿದ್ದರೆ ಫೋಟೊ ಚೆನ್ನಾಗಿ ಬರುತ್ತದೆ, ಹಾಗಂತ ಆ ಪ್ರಾಡಕ್ಟ್ ಚೆನ್ನಾಗಿರಬೇಕೆಂದಿಲ್ಲ. ಆದ್ದರಿಂದ ನಾಳೆ ಮಂಗಳೂರಿಗೆ ಬರುವ ಸಾವಿರ ಕೋಟಿ ಸ್ಮಾರ್ಟ್ ಆಗಿ ಜನಪ್ರತಿನಿಧಿಗಳ, ಅಧಿಕಾರಿಗಳ, ಗುತ್ತಿಗೆದಾರರ ತಿಜೋರಿ ಸೇರಬಾರದು ಎನ್ನುವುದಾದರೆ ಮತ್ತು ಬಂದ ಅಷ್ಟೂ ಹಣದಲ್ಲಿ ಒಂದೊಂದು ಪೈಸೆ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಅಭಿವೃದ್ಧಿಗೆನೆ ಹೋಗಬೇಕು ಎನ್ನುವುದಾದರೆ ಒಂದು ಕಮಿಟಿ ನಿರ್ಮಾಣವಾಗಬೇಕು. ಕನಿಷ್ಟ ಎಂಟು ಜನ ಆ ಕಮಿಟಿಯಲ್ಲಿ ಇರಬೇಕು. ಆ ಕಮಿಟಿಯ ಅಧ್ಯಕ್ಷರನ್ನಾಗಿ ಜಿಲ್ಲಾಧಿಕಾರಿಗಳು ಇರಲಿ, ಅದು ಬಿಟ್ಟರೆ ಯಾವುದೇ ಜನಪ್ರತಿನಿಧಿಯೂ ಬೇಡಾ. ಸ್ಮಾರ್ಟ್ ಸಿಟಿಗೆ ಸಂಬಂಧಪಟ್ಟಂತೆ ಒಂದು ವೆಬ್ ಸೈಟ್ ಮಾಡಿ, ಪ್ರತಿನಿತ್ಯದ ಆಗುಹೋಗುಗಳನ್ನು ಅದರಲ್ಲಿ ಹಾಕುವ ಕೆಲಸವಾಗಬೇಕು. ಈ ಕಮಿಟಿಯಲ್ಲಿದ್ದ ಸಾರ್ವಜನಿಕರ ಮುಖ್ಯ ಕೆಲಸ ಯಾವುದೇ ಕಾಮಗಾರಿ ಕಳಪೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೇ ಸಾರ್ವಜನಿಕರಿಗೆ ಕಾಮಗಾರಿಗಳ ಬಗ್ಗೆ ದೂರು ಕೊಡಲು ಇದ್ದರೆ ಅವರು ಯಾರನ್ನು ಹುಡುಕಿಕೊಂಡು ಹೋಗುವ ಅಗತ್ಯ ಇಲ್ಲ. ಈಗ ಎಲ್ಲರ ಬಳಿಯೂ ಮೊಬೈಲ್ ಇದೆ. ಸೀದಾ ಆ ವೆಬ್ ಸೈಟ್ ನಲ್ಲಿರುವ ದೂರು ವಿಭಾಗ ಸೆಕ್ಷನ್ ನಲ್ಲಿ ಬರೆದು ಹಾಕಿ. ನಿಮಗೆ ಚೆನ್ನಾಗಿ ಬರೆಯಲು ಗೊತ್ತಿರಬೇಕಂತಿಲ್ಲ, ತಾಂತ್ರಿಕವಾಗಿ ನೀವು ಪರಿಣತರಲ್ಲದೆ ಇರಬಹುದು. ಕಾಮಗಾರಿಯ ಬಗ್ಗೆ ಸಂಶಯ ನಿಮ್ಮನ್ನು ಕಾಡುತ್ತಿದ್ದರೆ ಬರೆದು ಹಾಕಿ. ನೀವು ಸು… ಎಂದು ಬರೆದರೂ ಸುಲ್ತಾನ್ ಭತ್ತೇರಿ ಇರಬಹುದು ಎಂದು ಅಂದುಕೊಂಡು ಆ ಕಾಮಗಾರಿಯ ಜಾಡು ಹಿಡಿದು ಅಲ್ಲಿ ಪರಿಶೀಲಿಸಿ ಮತ್ತೆ ನಿಮ್ಮ ಗೊಂದಲಕ್ಕೆ ಉತ್ತರ ಕೊಡುವ ವ್ಯಕ್ತಿಗಳು ಆ ಕಮಿಟಿಗೆ ಸಿಕ್ಕಿದರೆ, ನೋಡ್ತಾ ಇರಿ, ಮಂಗಳೂರನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದೆ.
ಅಷ್ಟಕ್ಕೂ ಈಗ ಮಂಗಳೂರಿನಲ್ಲಿ ಅನೇಕ ರಸ್ತೆಗಳು ಅಗಲವಾಗಿದ್ದರೂ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಯಾಕೆಂದರೆ ರಸ್ತೆಗಳ ಜಂಕ್ಷನ್ ಗಳಲ್ಲಿ, ಸರ್ಕಲ್ ಗಳಲ್ಲಿ, ಸಿಗ್ನಲ್ ಸಮೀಪ ಹೀಗೆ ಬಸ್ ಸ್ಟಾಪ್ ಗಳಿವೆ. ಇದರಿಂದ ಬಸ್ಸುಗಳು ಮಾವನ ಮನೆಯಲ್ಲಿ ಅಳಿಯ ಮೈಚಾಚಿ ಮಲಗಿದಂತೆ ಬಸ್ ಸ್ಟಾಪ್ ಕಂಡ ತಕ್ಷಣ ಅಡ್ಡಾದಿಡ್ಡಿ ನಿಲ್ಲುತ್ತವೆ. ಅವು ನಿಂತಕೂಡಲೇ ಹಿಂದಿನಿಂದ ಬರುವ ವಾಹನಗಳಿಗೆ ಜಾಗ ಇರುವುದಿಲ್ಲ. ಹಾರಿ ಹೋಗಲು ವಾಹನಗಳಿಗೆ ರೆಕ್ಕೆಗಳಿಲ್ಲ. ಆದ್ದರಿಂದ ಎದುರಿನ ಗಾಡಿಯವ ತನ್ನ ಡಿಕ್ಕಿ ಸರಿಸದೇ ಹಿಂದಿನವನಿಗೆ ಏನೂ ಕಾಣುವುದಿಲ್ಲ. ಆದ್ದರಿಂದ ಸಿಗ್ನಲ್, ಜಂಕ್ಷನ್ ಗಳಿಂದ ಕನಿಷ್ಟ 200 ಮೀಟರ್ ದೂರ ಬಸ್ ಸ್ಟಾಪ್ ಮಾಡಿ, 50% ಟ್ರಾಫಿಕ್ ಸಮಸ್ಯೆ ಪರಿಹಾರವಾಗುತ್ತೆ ಎಂದೆ.
ಇನ್ನು ಪಾರ್ಕಿಂಗ್ ಎಂದು ಮೀಸಲಿಟ್ಟ ಜಾಗಗಳಲ್ಲಿ ಕಟ್ಟಡಗಳ ಮಾಲೀಕರು ಮಳಿಗೆ, ಮನೆಗಳನ್ನು ಕಟ್ಟಿ ಮಾರಾಟ, ಬಾಡಿಗೆ, ಲೀಸ್ ಗೆ ಕೊಟ್ಟಿರುವುದು ಒಂದು ರೀತಿಯಲ್ಲಿ ಊರಿಗೆನೆ ಮೂಲವ್ಯಾಧಿ ಬಂದಂತೆ. ಹೊರಗೆ ಬಂದ ಅಂಗವನ್ನು ಕಟ್ ಮಾಡದಿದ್ದರೆ ಇಡೀ ದೇಹಕ್ಕೆ ಅಪಾಯ. ಆದರೆ ಕಟ್ ಮಾಡಬೇಕಾದ ಪಾಲಿಕೆ ಆಪರೇಶನ್ ಮಾಡಲು ಮರೆತ 80 ವಯಸ್ಸಿನ ವೈದ್ಯರಂತೆ ಆಡಿದರೆ ಏನು ಮಾಡುವುದು, ಅದನ್ನು ಜೋರು ಮಾಡಿ ಸರಿ ಮಾಡಬೇಕಾದ ಮುಖ್ಯ ವೈದ್ಯರಂತಿರುವ ಶಾಸಕರು ಮೌನಕ್ಕೆ ಶರಣಾದರೆ ಏನು ಮಾಡುವುದು, ಆ ಕುರಿತು ಹೇಳಿದ್ದೇನೆ. ಇನ್ನೊಂದೆರಡು ಅಂಶಗಳು ಇವೆ. ನಾಳೆ ಹೇಳಿ ವಿಝನ್ 2025 ಮುಗಿಸುತ್ತಿದ್ದೇನೆ. ಅದರ ಬಳಿಕ ಗುಡ್ ಸಿಂಪಲ್ ಟ್ಯಾಕ್ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದೆ. ನಾನು ಹೇಳಿದ ಒಂದು ವಿಷಯಕ್ಕೆ ತುಂಬಿದ ಸಭೆ ಒಮ್ಮೆ ಅವಾಕ್ಕಾಗಿ ನನ್ನತ್ತ ನೋಡಿತು!
Leave A Reply