ಮೊನ್ನೆ ಅಭ್ಯಂಗ ಸ್ನಾನಕ್ಕೆ ನೀರು ಇರಲಿಲ್ಲ ಎಂದು ಮುಂದಿನ ವಾರ ಮತ್ತೆ ದೀಪಾವಳಿ ಮಾಡೋಕೆ ಆಗುತ್ತಾ!
ಸಾರಿ, ಈ ಸಲ ದೀಪಾವಳಿಯ ದಿವಸ ನೀವು ಅಭ್ಯಂಗ ಸ್ನಾನ ಮಾಡಲು ಬಚ್ಚಲು ಮನೆಗೆ ಹೋಗುವಾಗ ನಿಮಗೆ ಪೈಪಿನಲ್ಲಿ ನೀರು ಕೊಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಮುಂದಿನ ವಾರ ಮತ್ತೆ ದೀಪಾವಳಿ ಮಾಡೋಣ. ಆವತ್ತು ಅಭ್ಯಂಗ ಸ್ನಾನ ಮತ್ತೆ ಮಾಡಿ. ಆವತ್ತು ಫುಲ್ ನೀರು ಕೊಡ್ತೇವೆ. ಅದರೊಂದಿಗೆ ಪ್ರತಿ ಮನೆಯ ಸದಸ್ಯರಿಗೆ ಇಂತಿಂಷ್ಟು ಎನ್ನುವಂತೆ ಎಣ್ಣೆನೂ ಕೊಡ್ತೇವೆ. ಅದಕ್ಕಾಗಿ ಎಣ್ಣೆ ಭಾಗ್ಯ ಎನ್ನುವ ಹೆಸರಿನಲ್ಲಿ ಯೋಜನೆ ಪ್ರಾರಂಭಿಸುತ್ತೇವೆ. ಆ ಯೋಜನೆಯಲ್ಲಿ ನಮಗೂ ಕಮಿಷನ್ ಹೊಡೆಯಲು ಧಾರಾಳ ಅವಕಾಶ ಇರುತ್ತೆ. ಆ ಮೂಲಕ ನೀವು ಎಣ್ಣೆ ಹಚ್ಚಿ ಸ್ನಾನ ಮಾಡಿ. ಇನ್ನು ನಾವು ಸ್ಪೆಶಲ್ ದೀಪಾವಳಿ ಆಚರಿಸಿ, ಎಣ್ಣೆ ಭಾಗ್ಯ ಆರಂಭಿಸಿ ಹಿಂದೂಗಳ ಪ್ರೀತಿಗೂ ಪಾತ್ರರಾಗಿದ್ದೇವೆ ಎಂದು ನಮ್ಮ ಕೆಲವು ಗಾಜು ಒಡೆಯುವ ನಾಯಕರಿಗೆ ಹೇಳಿ ಟಿವಿಗಳಿಗೆ ಹೇಳಿಕೆ ಕೊಡಿಸುತ್ತೇವೆ. ಅದರ ನಂತರ ಎಣ್ಣೆ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿದ ಮೊದಲ ಮಹಾನಗರ ಪಾಲಿಕೆ ಎನ್ನುವ ಹೊಸ ಪ್ರಶಸ್ತಿಯನ್ನು ನಾವು ಶಿಫಾರಸ್ಸು ಮಾಡಿ ನಾವೇ ತೆಗೆದುಕೊಂಡು ಅದರ ಫೋಟೋ ಎಲ್ಲಾ ಪತ್ರಿಕೆಗಳಿಗೆ ಹಂಚಿ ಮೈಲೇಜ್ ಪಡೆದುಕೊಂಡು ಮುಂದಿನ ವಿಧಾನಸಭಾ ಚುನಾವಣೆಗೆ ಅದು ನಮಗೆ ಲಾಭ ಆಗುವಂತೆ ಮಾಡುತ್ತೇವೆ. ಇನ್ನು ಸ್ಪೆಶಲ್ ದೀಪಾವಳಿ ಮಾಡಿ ಎಣ್ಣೆ ಮನೆ ಬಾಗಿಲಿಗೆ ಹೋಗಿ ಹಂಚಿದ ಮೊದಲ ಜಾತ್ಯಾತೀತ ಪಕ್ಷ ಎಂದು ಸುದ್ದಿಗೋಷ್ಟಿ ಮಾಡುತ್ತೇವೆ. ಹೇಗೂ ನಮ್ಮವರು ಮನೆಮನೆಗೆ ಹೋಗುತ್ತಿದ್ದಾರೆ. ಅವರ ಕೈಯಲ್ಲಿ ಎಣ್ಣೆ ಕೊಟ್ಟು ಮೊನ್ನೆ ದೀಪಾವಳಿಗೆ ನೀರು ಇಲ್ಲದೆ ಸ್ನಾನ ಮಾಡದವರು ಮಾಡಿ ಎಂದು ನಮ್ಮ ನಾಯಿಕರು ಹೇಳಲಿದ್ದಾರೆ. ಒಂದು ದಿನ ಸಂಜೆ ನೀರು ಕೊಡದೆ ಇದ್ದದ್ದಕ್ಕೆ ನಮಗೆ ಇಷ್ಟು ಪ್ರಯೋಜನವಾಗುತ್ತೆ ಎಂದು ಮೊದಲೇ ಗೊತ್ತಿದ್ದರೆ ನಾವು ಬೇರೆ ಬೇರೆ ಧರ್ಮದವರ ಹಬ್ಬಗಳ ದಿವಸ ಕೂಡ ಸಂಜೆ ನೀರು ಕಟ್ ಮಾಡಿ ನಂತರ ಅದರ ಲಾಭ ಪಡೆಯೋಣ ಎಂದು ಪ್ಲಾನ್ ಮಾಡುತ್ತಿದ್ದೇವೆ ಎಂದು ಪಾಲಿಕೆಯ ಪಡಸಾಲೆಯಲ್ಲಿ ಕುಳಿತ ಯಾವನಾದರೂ ಆಡಳಿತ ಪಕ್ಷದ ಕಾರ್ಪೋರೇಟರ್ ಯೋಚಿಸುತ್ತಿದ್ದಂತೆ ಕೊನೆಯ ವಾಕ್ಯಕ್ಕೆ ಬೆಚ್ಚಿ ಬಿದ್ದ. ಬೇರೆಯವರ ಹಬ್ಬಗಳಂದು ಹೀಗೆ ಮಾಡಿದರೆ ತಾನು ಮುಂದಿನ ಬಾರಿ ಕಾರ್ಪೋರೇಟರ್ ಅಲ್ಲ, ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರ ಲಾರಿಯಲ್ಲಿ ಡ್ರೈವರ್ ಆಗಬೇಕಾದಿತು ಎಂದು ಅನಿಸಿದ ತಕ್ಷಣ ಅಲ್ಲಿಂದ ಕೆಳಗೆ ಇಳಿದು ಸೀದಾ ತನ್ನ ಕಾರಿನತ್ತ ಹೋದ.
ಮೊದಲಿಗೆ ನಿಜಕ್ಕೂ ಪಾಲಿಕೆಯ ನಿರ್ಲಕ್ಷ್ಯ ಎಷ್ಟು ದೊಡ್ಡದು ಎನ್ನುವುದನ್ನು ತಾಂತ್ರಿಕವಾಗಿ ವಿವರಿಸುತ್ತೇನೆ. ತುಂಬೆ ವೆಂಟೆಂಡ್ ಡ್ಯಾಂನಿಂದ ಎರಡು ಪೈಪ್ ಗಳು ಮಂಗಳೂರಿಗೆ ಹೊರಡುತ್ತವೆ. ಒಂದು ಪಡೀಲಿನಲ್ಲಿರುವ ಪಂಪ್ ಹೌಸ್ ಗೆ ಬರುತ್ತದೆ. ಇನ್ನೊಂದು ಪಂಪ್ ವೆಲ್ ನಲ್ಲಿರುವ ಪಂಪ್ ಹೌಸ್ ಗೆ ಬರುತ್ತದೆ. ಇವೆರಡು ಮೇನ್ ಪಂಪ್ ಹೌಸ್ ಗಳು. ಮೊನ್ನೆ ಸಂಜೆ ನಾಲ್ಕು ಗಂಟೆಗೆ ಬೆಂದೂರ್ ವೆಲ್ ಕಡೆ ಬರುವ ನೀರಿನ ಪೈಪ್ ಲೈನ್ ಆಫ್ ಆಗಿತ್ತು. ನಾಲ್ಕು ಗಂಟೆಗೆ ಆಫ್ ಆದ ಕಾರಣ ಸುಮಾರು ಆರು ಗಂಟೆಗೆ ಮಣ್ಣಗುಡ್ಡೆ, ಕಾರ್ ಸ್ಟ್ರೀಟ್ ಮತ್ತು ಸುತ್ತಮುತ್ತಲಿನ ಭಾಗದ ಜನರಿಗೆ ನೀರು ಬರುವುದು ನಿಂತಿತು. ನಂತರ ಏನಾಯಿತು ಎನ್ನುವುದನ್ನು ನಿನ್ನೆ ಫ್ಲಾಶ್ ಬ್ಯಾಕಿನಲ್ಲಿ ವಿವರಿಸಿದ್ದೇನೆ. ಈಗ ಮುಂದಿನದು ನೋಡೋಣ.
ಬೆಂದೂರ್ ವೆಲ್ ಮತ್ತು ತುಂಬೆಯಲ್ಲಿ ಎರಡೂ ಕಡೆ ನೀರಿನ ಮೀಟರ್ ಇರುತ್ತದೆ. ಬೆಂದೂರ್ ವೆಲ್ ನಲ್ಲಿ ಟ್ಯಾಂಕ್ ಫುಲ್ ಆಗಿಲ್ಲ ಎಂದರೆ ತುಂಬೆಯಿಂದ ಬರುವ ನೀರಿನಲ್ಲಿ ಏನಾದರೂ ಪ್ರಾಬ್ಲಂ ಆಗುತ್ತಿದೆಯಾ ಎಂದು ನೋಡಬೇಕು. ಪಾಲಿಕೆಯ ನೀರಿನ ವಿಭಾಗ ನೋಡುವವರಿಗೆ ನೀರು ಅನೇಕ ವಾರ್ಡುಗಳಿಗೆ ಪೂರೈಕೆಯಾಗುತ್ತಿಲ್ಲ ಎಂದು ಗೊತ್ತಾದದ್ದು ಜನರೇ ಫೋನ್ ಮಾಡಿ ಕಾರ್ಪೋರೇಟರ್ ಗಳ ಮೂಲಕ ಒತ್ತಡ ಹಾಕಿದ ನಂತರ.
ಇನ್ನೂ ನೀರು ಬರುತ್ತಿಲ್ಲ ಎಂದು ಗೊತ್ತಾದ ನಂತರ ಜನರಿಗೆ ತಕ್ಷಣ ನೀರು ಪೂರೈಸಲು ನೀರಿನ ವಿಭಾಗದ ಇಂಜಿನಿಯರ್ ಗಳ ಕೈಯಲ್ಲಿ ಮಂತ್ರದಂಡ ಇಲ್ಲ. ಕನಿಷ್ಟ ಮೂರುವರೆ ಗಂಟೆ ಆದ ನಂತರ ನೀರು ಬಿಟ್ಟು ಅದು ಮನೆಗಳಿಗೆ ಹೋಗಿ ನಂತರ ಅವರು ಹಂಡೆ ತುಂಬಿ ಸ್ನಾನ ಮಾಡಲು ಐದಾರು ಗಂಟೆ ಬೇಕು. ಅಷ್ಟರಲ್ಲಿ ಅಭ್ಯಂಗ ಸ್ನಾನಕ್ಕೆಂದು ಮೈಗೆ ಎಣ್ಣೆ ಹಚ್ಚಿ ಕುಳಿತುಕೊಂಡವರಿಗೆ ನಿದ್ರೆ ಬಂದಿರುತ್ತದೆ. ನಂತರ ಅವರನ್ನು ಎಬ್ಬಿಸಲು ನೀರಿನ ವಿಭಾಗದ ಎಇ ಲಿಂಗೇಗೌಡ, ಎಇಇ ನರೇಶ್ ಶೆಣೈ, ರವಿಶಂಕರ್ ಹೋಗ್ತಾರಾ? ಇನ್ನು ಆವತ್ತು ಸರಕಾರಿ ರಜೆ ಏನೂ ಆಗಿರಲಿಲ್ಲ. ಹಾಗಾದರೆ ಈ ಇಂಜಿನಿಯರ್ ಗಳು ಏನು ತಮಗೆ ಬರಬೇಕಾದ ಕಮೀಷನ್ ಲೆಕ್ಕ ಮಾಡುವುದರಲ್ಲಿ ಬಿಝಿ ಇದ್ರಾ? ಇಷ್ಟು ದೊಡ್ಡ ನಿರ್ಲಕ್ಷ್ಯ ನಡೆದರೂ ಮೇಯರ್ ಆಗಲಿ, ಕಮೀಷನರ್ ಆಗಲಿ ಈ ಇಂಜಿನಿಯರ್ ಗಳ ಮೇಲೆ ಏನು ಕ್ರಮ ತೆಗೆದುಕೊಂಡಿದ್ದಾರೆ? ಏನೂ ಇಲ್ಲ. ಬಹುಶ: ದೀಪಾವಳಿಯ ದಿನ ನೀರು ಕೊಡದೆ ಜನರನ್ನು ಸತಾಯಿಸಿದ್ದಕ್ಕೆ ಇವರುಗಳಿಗೆ ಯಾವತ್ತಾದರೂ ಕಾರ್ಯಕ್ರಮ ಇಟ್ಟು ಬೆಸ್ಟ್ ಇಂಜಿನಿಯರ್ಸ್ ಎಂದು ಸನ್ಮಾನಿಸಬಹುದು. ಯಾಕೋ ಪಾಲಿಕೆಯಲ್ಲಿ ಸ್ಟಿಕ್ಟ್ ಆಫೀಸರ್ ಗಳ ಕೊರತೆಯಿಂದ ಕೆಲಸ ಮಾಡುವವರಿಗಿಂತ ಮಲಗುವವರೇ ಜಾಸ್ತಿ ಆಗಿದ್ದಾರೆ ಎಂದು ಅನಿಸುತ್ತದೆ. ಇವರಿಂದ ಹೀಗೆ ಇನ್ನೆಷ್ಟು ಹಬ್ಬಗಳಲ್ಲಿ ನಮ್ಮ ಸಂಭ್ರಮ ಮಂಕಾಗಲಿದೆಯೋ ಏನೋ!
Leave A Reply