ಇಂಟರ್ ಲಾಕ್ ಕಾಂಕ್ರೀಟ್ ಬ್ಯಾಂಡ್ ಗಳು ಪಪ್ಪಡ ಒಡೆದಂತೆ ಒಡೆದು ಹೋಗಿವೆ!
ಮಂಗಳೂರು ಮಹಾನಗರ ಪಾಲಿಕೆಯ ಅಂಗಣದಲ್ಲಿಯೇ ಪಾಲಿಕೆಯ ಅಧಿಕಾರಿಗಳ ಮೂಗಿನ ಕೆಳಗೆನೆ ಸಿಂಬಳ ಸುರಿಯುತ್ತಿದ್ದರೂ ಅದನ್ನು ಸರಿ ಮಾಡುವವರಿಲ್ಲ ಎನ್ನುವುದು ನನ್ನ ನಿನ್ನೆಯ ಜಾಗೃತ ಅಂಕಣದಲ್ಲಿ ಬರೆದಿದ್ದೆ. ಅವೈಜ್ಞಾನಿಕವಾಗಿ ಮ್ಯಾನ್ ಹೋಲ್ ನಿರ್ಮಿಸಿದ್ದ ಗುತ್ತಿಗೆದಾರರ ಕೆಲಸದಿಂದ ಪಾಲಿಕೆಯ ಮಾನ ಅವರ ಎದುರೇ ನಿತ್ಯ ಹರಾಜಾಗುವಂತಿತು. ನಾನು ಪಾಲಿಕೆಯ ಇಂಜಿನಿಯರ್ ಗಳ ಗಮನಕ್ಕೆ ತಂದ ಬಳಿಕ ಅದನ್ನು ಮತ್ತಿಷ್ಟು ಖರ್ಚು ವೆಚ್ಚ ಈಗ ಸರಿ ಮಾಡಿರುವುದು ಕೂಡ ನಿಮಗೆ ಹೇಳಿದ್ದೇನೆ. ಆ ಜಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ಮಾತ್ರವಲ್ಲ ಕಳಪೆ ಕಾಮಗಾರಿಯೂ ನಡೆದು ನಮ್ಮ ಪಾಲಿಕೆ ತಮ್ಮ ಮನೆಯಂತಿರುವ ಅಂಗಣವನ್ನೂ ಸರಿಯಾಗಿ ನೋಡುವುದಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.
ನಾನು ನಿನ್ನೆ ಹೇಳಿದ ಜಾಗಕ್ಕೆ ಮತ್ತೆ ಬನ್ನಿ. ಅದೇ ಪಾಲಿಕೆಯ ಹಿಂದಿನ ದ್ವಾರ. ಅಲ್ಲಿ ನೆಲಕ್ಕೆ ಇಂಟರ್ ಲಾಕ್ ಹಾಕಿರುವುದನ್ನು ನೀವು ನೋಡಿರಬಹುದು. ಆ ಇಂಟರ್ ಲಾಕ್ ಗಳ ಮಧ್ಯದಲ್ಲಿ ಪಾತ್ರೆಗಳಿಗೆ ಬೆಸುಗೆ ಹಾಕಿದಂತೆ ಸಿಮೆಂಟಿನ ಬೆಸುಗೆ ಹಾಕಲಾಗುತ್ತದೆ. ಇದನ್ನು ಕಾಂಕ್ರೀಟ್ ಬ್ಯಾಂಡ್ ಎಂದು ಕರೆಯುತ್ತಾರೆ. ಈ ಕಾಂಕ್ರೀಟ್ ಬ್ಯಾಂಡ್ ಗಳು ಹಾಕಿರುವ ಕೆಲವೇ ದಿನಗಳ ಒಳಗೆನೆ ಪಪ್ಪಡ ಒಡೆದಂತೆ ಒಡೆದಿವೆ. ಅಲ್ಲಿಗೆ ಕಾಂಕ್ರೀಟ್ ಬ್ಯಾಂಡ್ ನ ಉದ್ದೇಶವೇ ಹಾಳಾಗಿ ಹೋಗಿದೆ. ಕಾಂಕ್ರೀಟ್ ಬ್ಯಾಂಡ್ ಹಾಕುವುದು ಇಂಟರ್ ಲಾಕ್ ಗಳು ಗಟ್ಟಿಯಾಗಿ ನಿಲ್ಲಬೇಕು ಎನ್ನುವ ಕಾರಣಕ್ಕೆ. ಆದರೆ ಇವರ ಕಳಪೆ ಕಾಮಗಾರಿಯಿಂದಾಗಿ ಕಾಂಕ್ರೀಟ್ ಬ್ಯಾಂಡ್ ಗಳ ಸ್ಥಿತಿ ಹಪ್ಪಳದ ಮೇಲೆ ಲಾರಿ ಹೋದಂತೆ ಆಗಿದೆ. ಇಂತಹ ಕಳಪೆ ಕಾಮಗಾರಿ ನಡೆದದ್ದು ಪಾಲಿಕೆಯ ಕಟ್ಟಡಕ್ಕೆ ತಾಗಿಯೇ ಇರುವ ಅಂಗಣದಲ್ಲಿ. ಇಲ್ಲಿಯೇ ಪರಿಸ್ಥಿತಿ ಹೀಗಿದೆ ಎಂದರೆ ಬೇರೆ ಕಡೆ ಹೇಗಿರಬೇಡಾ? ಆ ಕಾಂಕ್ರೀಟ್ ಬ್ಯಾಂಡ್ ಒಡೆದಿರುವ ಫೋಟೋ ನೋಡಿದರೆ ನಿಮಗೆ ಇದರ ಅವಸ್ಥೆ ಗೊತ್ತಾಗುತ್ತದೆ.
ಇನ್ನು ಇಲ್ಲಿ ಇಂಟರ್ ಲಾಕ್ ಹಾಕಿ ತುಂಬಾ ಸಮಯವೇನೂ ಕಳೆದು ಹೋಗಿಲ್ಲ. ಈಗಾಗಲೇ ಇಲ್ಲಿ ಹಾಕಿರುವ ಇಂಟರ್ ಲಾಕ್ ಗಳ ನಡುವೆ ಬಿರುಕು ಬಿದ್ದಿವೆ. ಇಷ್ಟು ಕಳಪೆ ಕಾಮಗಾರಿ ಅದರೂ ಇದನ್ನು ಯಾರು ಕೂಡ ಕೇಳುವವರಿಲ್ಲ ಎನ್ನುವುದು ಬೇಸರದ ವಿಷಯ. ಇದನ್ನು ನೋಡಿ ಸರಿ ಮಾಡಬೇಕಿದ್ದ ಇಂಜಿನಿಯರ್ಸ್ ತಮ್ಮ ಕಮೀಷನ್ ತಿಂದು ನೀರು ಕುಡಿದಾಗಿದೆ. ಗುತ್ತಿಗೆದಾರರಿಗೆ ಅವರ ಕೆಲಸ ಮುಗಿದು ಹೋದ ನಂತರ ಅದು ಬಿರುಕು ಬಿಡಲಿ ಅಥವಾ ಒಡೆದು ಹೋಗಲಿ ಬಿದ್ದು ಹೋಗಿಲ್ಲ. ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿ ಹೀಗೆ ಮುಂದುವರೆದರೆ ನಾಡಿದ್ದು ಪಾಲಿಕೆಯ ಒಳಗೆ ತಮ್ಮ ಕೋಣೆಯಲ್ಲಿಯೇ ಆಗುವ ಕಾಮಗಾರಿಯನ್ನು ಕೂಡ ಇವರು ಕಮೀಷನ್ ತಿಂದು ಕಳಪೆ ಮಾಡಿಬಿಡುತ್ತಾರೆ. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಹೊಸ ಶಾಸಕರ ಹತ್ತಿರ ನನ್ನ ವಿನಂತಿ ಇಷ್ಟೇ. ವೈಜ್ಞಾನಿಕವಾಗಿ ಮತ್ತು ಕಳಪೆಯಾಗದಂತೆ ಕಾಮಗಾರಿ ಮಾಡಿಸುವ ಹೊಣೆ ನಿಮ್ಮ ಮೇಲೆನೂ ಇದೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ಮತ್ತು ಇಂಜಿನಿಯರ್ಸ್ ಮೇಲೆ ನೀವು ಕ್ರಮ ತೆಗೆದುಕೊಳ್ಳದೇ ಹೋದರೆ ನಮ್ಮ ತೆರಿಗೆ ಹಣ ಮುಂದಿನ ದಿನಗಳಲ್ಲಿಯೂ ಕೂಡ ಹೀಗೆ ಸೋರಿಕೆ ಆಗುತ್ತಾ ಹೋಗುತ್ತದೆ!!
Leave A Reply