ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರವನ್ನು ಬಳಸಲು ಮತ್ತೆ ಅವಕಾಶ ಸಿಕ್ಕಿದೆ. ಇದೇ ನವೆಂಬರ್ 12 ರಂದು ನಾವು ಮತದಾನ ಮಾಡುವ ಮೂಲಕ ನಮ್ಮ ವಾರ್ಡುಗಳ ಅಭಿವೃದ್ಧಿ ಮಾಡಲು ನಮಗೆ ಯಾರು ಬೇಕು ಎಂದು ನಿರ್ಧರಿಸುವ ಸಮಯ ಬಂದಿದೆ. ನಾನು ಹೇಳುವುದಾದರೆ ಇಲ್ಲಿ ನೀವು ಮುಖ್ಯವಾಗಿ ನೋಡಬೇಕಾಗಿರುವುದು ಯಾರಿಗೆ ನಿಜಕ್ಕೂ ಅಭಿವೃದ್ಧಿಯ ಕಾಳಜಿ ಇದೆ ಮತ್ತು ಯಾರು ಹಣ ಮಾಡಲು ಕಾರ್ಪೋರೇಟರ್ ಆಗಲು ಬಯಸುತ್ತಿದ್ದಾರೆ ಎನ್ನುವುದನ್ನು. ಇವತ್ತಿಗೂ ಅನೇಕ ವಾರ್ಡುಗಳಲ್ಲಿ ನಿರಂತರ ಎರಡು ಗಂಟೆ ಜೋರು ಮಳೆ ಬಂದರೆ ರಸ್ತೆ ಹೋಗಿ ಕೃತಕ ಕೆರೆ ನಿರ್ಮಾಣವಾಗುವ ಸಂಭವ ಇದೆ. ಹಾಗಂತ ನಮ್ಮ ಪಾಲಿಕೆಯಲ್ಲಿ ಅಭಿವೃದ್ಧಿಗೆ ಹಣ ಬಂದಿಲ್ಲ ಎಂದಲ್ಲ. ಎಡಿಬಿ ಸಾಲದಿಂದ ಹಿಡಿದು 14 ನೇ ಫೈನಾನ್ಸ್ ನಿಂದ ಮೊದಲ್ಗೊಂಡು ಅಮೃತ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆಗಳ ತನಕ ವಿವಿಧ ರೀತಿಗಳಲ್ಲಿ ಇಲ್ಲಿ ವಿಶೇಷ ಅನುದಾನಗಳು ಬಂದಿವೆ. ಆದರೆ ಎಷ್ಟು ಅಭಿವೃದ್ಧಿ ಆಗಿದೆ.
ಎಡಿಬಿಯಿಂದ ಮೊದಲ ಹಂತದ 108 ಕೋಟಿ ಬಂದಾಗ ಮಂಗಳೂರಿನ ಎಲ್ಲಾ ವಾರ್ಡುಗಳಿಗೆ ದಿನದ ಇಪ್ಪತ್ತನಾಲ್ಕು ಘಂಟೆ ನೀರು ವಾರದ ಏಳು ದಿನವೂ ಪೂರೈಸುವ ಭರವಸೆ ಸಿಕ್ಕಿತ್ತು. ಆದರೆ ಇಲ್ಲಿಯ ತನಕ ಅದು ಈಡೇರಿದೆಯಾ? ಇವತ್ತಿಗೂ ವಾರದಲ್ಲಿ ಒಟ್ಟು 24 ಗಂಟೆ ನೀರು ಬರಲು ಸಂಶಯ ಇರುವ ಅನೇಕ ವಾರ್ಡುಗಳಿವೆ. ಆದ್ದರಿಂದ ಯೋಗ್ಯವಾಗಿರುವ ಆಡಳಿತವನ್ನು ನೀಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆ. ಹಾಗಾದರೆ ಒನ್ ಬೈ ಒನ್ ಆಗಬೇಕಾದ ಕಾರ್ಯಗಳ ಬಗ್ಗೆ ನೋಡೋಣ.
ಮೊತ್ತ ಮೊದಲಿಗೆ ಮಂಗಳೂರು ಸ್ಮಾರ್ಟ್ ಸಿಟಿ ಆಗುವ ನಿಟ್ಟಿನಲ್ಲಿ ಸಾಗುತ್ತಿದೆ. ಒಳಗೆ ಬನಿಯನ್ ತೂತಾಗಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವೇ ಬೇಕು ಎನ್ನುವಂತಹ ಮನಸ್ಥಿತಿಯನ್ನು ನಮ್ಮ ಪಾಲಿಕೆ ಕೈ ಬಿಡಬೇಕು. ನೀವು ಮನೆಯ ಅಡುಗೆಕೋಣೆಯಲ್ಲಿ ಜಾಗ ಕಡಿಮೆ ಇದೆ ಎಂದು ನಿಮಗೆ ಅನಿಸಿದರೆ ಕೆಲವು ವಸ್ತುಗಳನ್ನು ತೆಗೆದು ಹೊರಗೆ ಬಿಸಾಡಿರುತ್ತಿರಿ ಅಥವಾ ಗುಜರಿಯವರಿಗೆ ಕೊಟ್ಟಿರುತ್ತೀರಿ. ಆದರೆ ಕೆಲವು ದಿನಗಳ ನಂತರ ಪುನ: ಅಂಗಡಿಯಿಂದ ಹೆಚ್ಚಿನ ಬೆಲೆ ಕೊಟ್ಟು ಕೆಲಸಕ್ಕೆ ಬಾರದ ವಸ್ತುಗಳನ್ನು ತಂದು ಅಡುಗೆಕೋಣೆಯ ಮಧ್ಯದಲ್ಲಿ ಇಟ್ಟರೆ ನಿಮ್ಮನ್ನು ಬುದ್ಧಿವಂತರು ಎಂದು ಕರೆಯುವುದಾ ಅಥವಾ ಸ್ವೇಚ್ಚಾಚಾರಿಗಳು ಎಂದು ಕರೆಯುವುದಾ? ಅದೇ ರೀತಿಯಲ್ಲಿ ಆಗಿದೆ.
ಮಂಗಳೂರಿನ ಟೌನ್ ಹಾಲ್ ಎದುರಿಗೆ ಮುಂಚೆ ಕ್ಲಾಕ್ ಟವರ್ ಇತ್ತು. ನಂತರ ಜಿಲ್ಲಧಿಕಾರಿಗಳು ಅದನ್ನು ತೆಗೆದರು. ಅದಕ್ಕೆ ಮುಖ್ಯ ಕಾರಣ ಅಲ್ಲಿ ಅದು ಸುಮ್ಮನೆ ಜಾಗ ತಿನ್ನುತ್ತದೆ ಎನ್ನುವ ಉದ್ದೇಶವಿತ್ತು. ಏಕೆಂದರೆ ಮಂಗಳೂರಿನಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಾ ಹೋಗಿತ್ತು. ಈಗ ಇನ್ನೂ ಹೆಚ್ಚಾಗಿದೆ. ಅದರ ನಂತರ ಏನಾಯಿತು ಎಂದರೆ ಸ್ಮಾರ್ಟ್ ಸಿಟಿ ಯೋಜನೆ ಬಂತು. 99 ಲಕ್ಷ ರೂಪಾಯಿಯಲ್ಲಿ ( ಯಡಿಯೂರಪ್ಪನವರ ಲೆಕ್ಕದ ಪ್ರಕಾರ 5 ಲಕ್ಷದಂತೆ ಇಪ್ಪತ್ತು ಮನೆ ಪಾಪದವರಿಗೆ ಕಟ್ಟಿಕೊಡಬಹುದು) ಒಂದು ಕ್ಲಾಕ್ ಟವರ್ ನಿರ್ಮಾಣವಾಗಿದೆ. ಹಾಗಿದ್ದರೆ ಆವತ್ತು ಕ್ಲಾಕ್ ಟವರ್ ತೆಗೆದು ಅಲ್ಲಿ ವಾಹನಗಳ ಸುಲಲಿತ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದ ಜಿಲ್ಲಾಧಿಕಾರಿಗಳು ಏನೂ ದಡ್ಡರೇ, ದೂರದೃಷ್ಟಿಯುಳ್ಳವರಾಗಿಲ್ಲದಿದ್ದವರೇ
Leave A Reply