ನಾಲ್ಕೂವರೆ ವರ್ಷ ಸಿದ್ದರಾಮಯ್ಯ ಕತ್ತೆ ಕಾಯ್ತಿದ್ದರಾ: ಯಡಿಯೂರಪ್ಪ ಪ್ರಶ್ನೆ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದೋಷ, ಹಗರಣ ಮರೆಮಾಚಲು ವಿದ್ಯುತ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದು, ನಾಲ್ಕೂವರೆ ವರ್ಷ ಇವರೇನು ಕತ್ತೆ ಕಾಯುತ್ತಿದ್ದರಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ತಮ್ಮ ಹಗರಣ ಮುಚ್ಚಿ ಹಾಕಲು ಬೇರೆಯವರ ವಿರುದ್ಧ ಆರೋಪಿಸಿ ತಾವು ಸಾಚಾ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವಧಿಯಲ್ಲಿ ನಡೆದ ವಿದ್ಯುತ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಾಗೊಂದು ವೇಳೆ ನಾವು ಅಕ್ರಮ ಎಸಗಿದ್ದರೆ ಇಷ್ಟು ದಿನ ಏಕೆ ಇದು ಸಿಎಂ ಬಾಯಿಗೆ ಬರಲಿಲ್ಲ. ಚುನಾವಣೆ ವೇಳೆ ಹೀಗೆ ಮಾಡುತ್ತಿರುವುದು ಸರಿಯಲ್ಲ. ಹಾಗೊಂದು ಅಕ್ರಮ ನಡೆಸಿದ್ದರೆ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಹಾಗೂ ಸಿಎಂ ಗಾದಿಯಿಂದ ಸಿದ್ದರಾಮಯ್ಯ ಇಳಿಯುವುದು ಖಚಿತವಾಗಿದೆ. ಹಾಗಾಗಿಯೇ ಸಿಎಂ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಎಂ ವಿರುದ್ಧದ ಹಗರಣಗಳ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಮಹದಾಯಿ ಯೋಜನೆ ಕುರಿತು ಪ್ರತಿಜ್ಞೆ ಮಾಡಿದ ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೋವಾ ಮುಖ್ಯಮಂತ್ರಿ ಮನವೊಲಿಸಿ ಯೋಜನೆ ಜಾರಿ ಮಾಡಿದ ಬಳಿಕವೇ ಉತ್ತರ ಕರ್ನಾಟಕ ಪ್ರವೇಶಿಸುವೆ ಎಂದರು.
Leave A Reply