ರಾಷ್ಟ್ರಗೀತೆ ಹೇರಿಕೆ ಎನ್ನುವವರು, ಚೀನಾದಲ್ಲಿ ರಾಷ್ಟ್ರಗೀತೆಗೆ ಅವಮಾನಿಸಿದರೆ ಏನಾಗುತ್ತದೆ? ಈ ಸುದ್ದಿ ಓದಿ…

ನಮ್ಮ ದೇಶದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ವಿರುದ್ಧ ಎಲುಬಿಲ್ಲದ ನಾಲಗೆ ಹರಿಬಿಡಬಹುದು, ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದರೆ, ನಾನು ಎದ್ದು ನಿಲ್ಲಲ್ಲ ಎಂದು ಉದ್ಧಟತನ ಮೆರೆಯಬಹುದು, ಮೇಲಾಗಿ ಇದು ರಾಷ್ಟ್ರಭಕ್ತಿ ಹೆಸರಲ್ಲಿ ಹೇರಿಕೆ ಎಂದು ಜರಿಯಬಹುದು. ಹೀಗೆ ಮಿದುಳಿನ ಕಸವನ್ನೆಲ್ಲ ಹೊರಹಾಕಬಹುದು…
ಆದರೆ, ಚೀನಾದಲ್ಲಿ ಮಾತ್ರ ಇವೆಲ್ಲವೂ ನಿಷಿದ್ಧ. ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ರಾಷ್ಟ್ರಗೀತೆಗೆ ಅವಮಾನ ಮಾಡುವವರಿಗೆ ಭಾರಿ ದಂಡ, ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಗೆ ಮುಂದಾಗಿದೆ.
ಇದಕ್ಕಾಗಿ ದೇಶದ ಅಪರಾಧ ಕಾನೂನು ಹಾಗೂ ದಂಡಸಂಹಿತೆಗೆ ತಿದ್ದುಪಡಿ ತರುವ ಮಹತ್ತರ ನಿರ್ಧಾರ ಕೈಗೊಂಡಿದ್ದು, ಸಂಸತ್ತಿನ ಒಪ್ಪಿಗೆ ಸಹ ಪಡೆಯಲಾಗಿದೆ.
ರಾಷ್ಟ್ರಗೀತೆ ಎಂಬುದು ಎಲ್ಲ ಗೀತೆಗಳಿಗಿಂತ ವಿಭಿನ್ನ. ಇದು ದೇಶದ ಹೆಮ್ಮೆಯ ಹಾಗೂ ಗೌರವದ ಪ್ರತೀಕ. ಹಾಗಾಗಿ ಯಾರೂ ಅವಮಾನ ಮಾಡುವಂತಿಲ್ಲ ಎಂಬ ದಿಸೆಯಲ್ಲಿ ಕರಡು ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ ನಮ್ಮ ದೇಶದಲ್ಲಿ ಮಾತ್ರ ಸಿನಿಮಾ ಟಿಕೆಟ್ ಪಡೆಯಲು ನೂಕುನುಗ್ಗಲಿನಲ್ಲಿ ತಾಸುಗಟ್ಟಲೇ ಗುದ್ದಾಡುವ ನಮ್ಮವರು ಸಿನಿಮಾ ಆರಂಭವಾಗುತ್ತಲೇ 52 ಸೆಕೆಂಡು ಎದ್ದುನಿಲ್ಲಲು ಸಾಮರ್ಥ್ಯವಿಲ್ಲದಂತೆ ಆಡುತ್ತಾರೆ. ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ?