ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪರಿವರ್ತನಾ ರ್ಯಾಲಿಗೆ ಇಂದು ಚಾಲನೆ
ಬೆಂಗಳೂರು: ಶತಾಯ-ಗತಾಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬಗ್ಗುಬಡಿದು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಹಾಗೂ ರಾಜ್ಯ ಸರ್ಕಾರ ನಾಲ್ಕೂವರೆ ವರ್ಷದಲ್ಲಿ ನೀಡಿದ ಕೆಟ್ಟ ಆಡಳಿತ ನೀಡಿರುವ ಜನರಲ್ಲಿ ಜಾಗೃತಿ ಮೂಡಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಪರಿವರ್ತನಾ ಬೃಹತ್ ರ್ಯಾಲಿಗೆ ಗುರುವಾರ ಚಾಲನೆ ದೊರೆಯಲಿದೆ.
ನಗರದ ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಸಿ) ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಬೃಹತ್ ರ್ಯಾಲಿಗೆ ಚಾಲನೆ ದೊರೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಮಿಷನ್ 150 ಅನ್ವಯ ರಾಜ್ಯದಲ್ಲಿ ಮರಳಿ ಬಿಜೆಪಿ ಸರ್ಕಾರ ರಚಿಸಲು ಪಣ ತೊಟ್ಟಿರುವ ಯಡಿಯೂರಪ್ಪ ಅವರು ರಥಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆಗೆ ತೆರಳಿ ಜಾಗೃತಿ ಮೂಡಿಸಲಿದ್ದು, ಯಡಿಯೂರಪ್ಪ ಸೇರಿ ಹಲವು ಮುಖಂಡರು ಗುರುವಾರ ರಾಜ್ಯಾದ್ಯಂತ ಚಲಿಸುವ ವಿಶೇಷ ರಥ ಹತ್ತಲಿದ್ದಾರೆ.
ಗುರುವಾರ ಆರಂಬವಾಗಲಿರುವ ಯಾತ್ರೆ 75 ದಿನ ನಡೆಯಲಿದ್ದು ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಿ ಜ.28ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.
ಇನ್ನು ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ 1 ಲಕ್ಷ ಬೈಕ್ ಮೂಲಕ ಕಾರ್ಯಕರ್ತರು ಆಗಮಿಸಲಿದ್ದು, ಬೃಹತ್ ಬೈಕ್ ರ್ಯಾಲಿ ಸಹ ನಡೆಯಲಿದೆ. ಮೊದಲ ದಿನದ ಯಾತ್ರೆಯ ಅಂಗವಾಗಿ ತುಮಕೂರಿನ ಕುಣಿಗಲ್ ನಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್ ಕುಮಾರ್ ಸೇರಿ ನಾಯಕರು ಭಾಗವಹಿಸಲಿದ್ದಾರೆ.
-
ಅತ್ಯಾಧುನಿಕರ ರಥ
75 ದಿನಗಳ ಸುದೀರ್ಘ ಅವಧಿಯ ರಥಯಾತ್ರೆಗೆ ಅತ್ಯಾಧುನಿಕ ಹಾಗೂ ವಿಶೇಷ ಸೌಲಭ್ಯವುಳ್ಳ ರಥ (ಬಸ್) ತಯಾರಿಸಲಾಗಿದೆ. 10 ಜನ ಕುಳಿತು ಸಭೆ ನಡೆಸುವ ಸೌಲಭ್ಯವಿರುವ ಹಾಲ್, ಬೆಡ್ ರೂಮ್, ಕಂಪ್ಯೂಟರ್ ಬಳಕೆ, ಶೌಚಾಲಯ, ಆಹಾರ ಬಿಸಿ ಮಾಡಿಕೊಳ್ಳಲು ಮೈಕ್ರೋಒವನ್ ಸೇರಿ ಹಲವು ಸೌಲಭ್ಯ ಒದಗಿಸಲಾಗಿದೆ. ಗುರುವಾರ ಬೆಳಗ್ಗೆ 11ರಿಂದಲೇ ರಥ ಯಾತ್ರೆ ಕೈಗೊಳ್ಳಲಿದೆ.
-
ಪರಿವರ್ತನಾ ರ್ಯಾಲಿ ವೈಶಿಷ್ಟ್ಯ
- 75 ದಿನದ ರ್ಯಾಲಿ
- 7,800 ಕಿ.ಮೀ. ರಾಜ್ಯಾದ್ಯಂತ ಸಂಚಾರ
- 224 ಕ್ಷೇತ್ರಗಳಲ್ಲಿ ಸಂಚಾರ
- ಜ.28ರಂದು ಬೆಂಗಳೂರಿನಲ್ಲಿ ಸಮಾರೋಪ
- ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ
-
ಪರಿವರ್ತನಾ ರ್ಯಾಲಿ ಉದ್ದೇಶಗಳೇನು?
- ರಾಜ್ಯ ಸರ್ಕಾರದ ವೈಫಲ್ಯ ಜನರಿಗೆ ಮನವರಿಕೆ ಮಾಡುವುದು.
- ರಾಜ್ಯದಲ್ಲಿ ಬಿಜೆಪಿ ಕೈಗೊಂಡ ಅಭಿವೃದ್ಧಿ ಕಾರ್ಯ ಪ್ರಚಾರ.
- ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವೊಲಿಕೆ.
- ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಪ್ರಚಾರ.
- ಕಾಂಗ್ರೆಸ್ ಭ್ರಷ್ಟಾಚಾರದ ಕುರಿತು ಜನರಲ್ಲಿ ಅರಿವು ಮೂಡಿಸುವುದು.
Leave A Reply