ಉಗ್ರರ ದಾಳಿಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುತಾತ್ಮ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನ ಕೃಪಾಪೋಷಿತ ಉಗ್ರರ ಉಪಟಳ ಜಾಸ್ತಿಯಾಗಿದ್ದು, ಝಕುರಾ ಪ್ರದೇಶದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಹುತಾತ್ಮರಾಗಿದ್ದಾರೆ.
ಇಮ್ರಾನ್ ಟಕ್ ಹುತಾತ್ಮ ಸಬ್ ಇನ್ಸ್ ಪೆಕ್ಟರ್ ಆಗಿದ್ದು, ಝಕುರಾದಲ್ಲಿ ಕ್ರಾಸಿಂಗ್ ವೇಳೆ ಕಾರಿನಲ್ಲಿ ಬಂದ ಮೂವರು ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಉಗ್ರರಿದ್ದ ಕಾರನ್ನು ಪೊಲೀಸರು ಬೆನ್ನತ್ತಿದ್ದು, ಕಾರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಒಬ್ಬ ಉಗ್ರನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಮೇ ನಿಂದ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡ ಬಳಿಕ ಪೊಲೀಸರು ಹಾಗೂ ಸೇನಾ ನೆಲೆಗಳ ಮೇಲೆ ಉಗ್ರರ ದಾಳಿ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ದಾಳಿ ಮಾಡಿದ್ದು, ಕಾರ್ಯಾಚಾರಣೆ ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಪಡೆ ಚಿಂತನೆ ನಡೆಸಿವೆ ಎಂದು ತಿಳಿದುಬಂದಿದೆ.
Leave A Reply