ಗುಜರಾತಿನಲ್ಲೂ ಪದ್ಮಾವತಿ ಚಿತ್ರಕ್ಕೆ ನಿಷೇಧ, ಚಿತ್ರದ ಗತಿ ಅಧೋಗತಿ!
ಗಾಂಧಿನಗರ: ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬಿನಲ್ಲಿ ಪದ್ಮಾವತಿ ಚಿತ್ರಕ್ಕೆ ಗುಜರಾತಿನಲ್ಲೂ ನಿಷೇಧ ಹೇರಿದ್ದು, ಆ ಮೂಲಕ ಚಿತ್ರ ನಿಷೇಧಿಸಿದ ಐದನೇ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿದೆ.
ಇದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಿದ್ದು, ಈಗಾಗಲೇ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಈಗ ದೇಶದ ಐದು ರಾಜ್ಯಗಳು ಚಿತ್ರ ನಿಷೇಧಿಸಿದ್ದು, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ತಲೆನೋವಾಗಿ ಪರಿಣಮಿಸಿದೆ.
ನಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡುತ್ತೇವೆ. ಹಾಗಂತ ಇದರ ಹೆಸರಲ್ಲಿ ಸಂಸ್ಕೃತಿ, ಇತಿಹಾಸ ತಿರುಚಲು ಬಿಡುವುದಿಲ್ಲ. ರಜಪೂತರ ಭಾವನೆಗಳಿಗೆ ಧಕ್ಕೆ ತರುವ ಪದ್ಮಾವತಿ ಚಿತ್ರ ಬಿಡುಗಡೆಗೆ ಗುಜರಾತ್ ಸರ್ಕಾರ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ರೂಪಾನಿ ಸ್ಪಷ್ಟಪಡಿಸಿದ್ದಾರೆ.
ಅತ್ತ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಸೆನ್ಸಾರ್ ಮಂಡಳಿ ನಿರ್ಧಾರದ ಬಳಿಕ ಚಿತ್ರ ನಿಷೇಧಿಸುವ ಕುರಿತು ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಪದ್ಮಾವತಿ ಚಿತ್ರ ಬಿಡುಗಡೆಗೆ ದಿನೇದಿನೇ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂಲಗಳ ಪ್ರಕಾರ ಪ್ರಸಕ್ತ ವರ್ಷದಲ್ಲಿ ಚಿತ್ರ ಬಿಡುಗಡೆಯಾಗುವುದು ಅನುಮಾನ ಎಂದು ತಿಳಿದುಬಂದಿದೆ.
Leave A Reply