ಸಂವಿಧಾನ ಬದಲಾಯಿಸಿದರೆ ರಕ್ತಪಾತವಾಗುತ್ತದೆ ಎನ್ನುವವರು 42ನೇ ತಿದ್ದುಪಡಿ ಬಗ್ಗೆ ಏನೆನುತ್ತಾರೆ?
ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ “ನಾವು ಸಂವಿಧಾನ ಬದಲಾಯಿಸುತ್ತೇವೆ” ಎಂದು ಹೇಳುತ್ತಲೇ, ಭಾರಿ ವಿರೋಧ ವ್ಯಕ್ತವಾಗಿದೆ. ಅನಂತಕುಮಾರ್ ಒಬ್ಬ ಸಂವಿಧಾನ ವಿರೋಧಿ, ಸಂವಿಧಾನ ಬದಲಾಯಿಸಿದರೆ ರಕ್ತಪಾತವಾಗುತ್ತದೆ ಎಂದು ಕಾಂಗ್ರೆಸ್ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗಿದೆ. ಕೊನೆಗೆ ಅನಂತಕುಮಾರ್ ಸಂಸತ್ತಿನಲ್ಲಿ ಕ್ಷಮೆ ಕೇಳುವಂತಾಗಿದೆ.
ಹಾಗಾದರೆ ಇದುವರೆಗೆ ಸಂವಿಧಾನ ಬದಲಾವಣೆಯೇ ಆಗಿಲ್ಲವೇ? ಬದಲಾಯಿಸಿಲ್ಲ ಎಂದರೆ 100ಕ್ಕೂ ಅಧಿಕ ಬಾರಿ ತಿದ್ದುಪಡಿ ಹೇಗೆ ತರಲಾಯಿತು? ತಿದ್ದುಪಡಿ ತಂದಮೇಲೆ ಬದಲಾವಣೆಯಾಯಿತು ಎಂದರ್ಥವಲ್ಲವೇ? ಈ ಕನಿಷ್ಠ ಜ್ಞಾನವೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಇಲ್ಲವೇ? ಕಾಂಗ್ರೆಸ್ ಸರ್ಕಾರದಲ್ಲೇ ಬಹುತೇಕ ತಿದ್ದುಪಡಿ ತರಲಾಗಿದೆ ಎಂಬುದು ಖರ್ಗೆಯವರಿಗೆ ಮರೆತು ಹೋಯಿತೇ? ಅವರಿಗೆ ಸಂವಿಧಾನದ 42ನೇ ತಿದ್ದುಪಡಿಯ ಬಗ್ಗೆ ಗೊತ್ತಿದೆಯೇ?
ಹೌದು, ಇದುವರೆಗೂ ಸಂವಿಧಾನಕ್ಕೆ ತಂದ 100ಕ್ಕೂ ಅಧಿಕ ತಿದ್ದುಪಡಿ ಮಾಡಿದ ತೂಕವೂ ಒಂದೇ, ಸಂವಿಧಾನದ 42ನೇ ತಿದ್ದುಪಡಿಯೂ ಒಂದೇ. ಹೀಗೆ ಎನ್ನುವಷ್ಟರಮಟ್ಟಿಗೆ 42ನೇ ತಿದ್ದುಪಡಿ ಮೂಲಕ ಸಂವಿಧಾನದಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ.
ಹಾಗಿದ್ದರೂ ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರೇಕೆ ಹೇಳುವುದಿಲ್ಲ. 1976ರಲ್ಲಿ ಇಂದೇ ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿ ಅವರ ನೇತೃತ್ವದಲ್ಲೇ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಹೀಗೆ ಸಂವಿಧಾನ ಮಾರ್ಪಾಡು ಮಾಡಿದವರು ಕಾಂಗ್ರೆಸ್ಸಿನವರೇ ಅಲ್ಲವೇ ಖರ್ಗೆಯವರೇ?
42ನೇ ತಿದ್ದುಪಡಿ ಮೂಲಕ ಸಂವಿಧಾನದ ಪ್ರಸ್ತಾವನೆ (ಪ್ರಿಯಾಂಬಲ್)ಗೆ ಸಮಾಜವಾದ, ಸಮಗ್ರತೆ ಹಾಗೂ ಜಾತ್ಯತೀತ ವಾದ ಎಂಬ ಪದ ಸೇರಿಸಲಾಯಿತು. ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. ನಾಲ್ಕು ನಿರ್ದೇಶನಾತ್ಮಕ ತತ್ವ, ರಾಜ್ಯಗಳ ಮೇಲೆ ರಾಷ್ಟ್ರಪತಿಯವರು ಹೇರುವ ತುರ್ತುಪರಿಸ್ಥಿತಿಗೆ ಇದ್ದ ಆರು ತಿಂಗಳ ಸಮಯವನ್ನು ವರ್ಷಕ್ಕೆ ಹೆಚ್ಚಿಸಲಾಯಿತು. ಅಲ್ಲದೆ ನ್ಯಾಯಾಂಗ ಸೇರಿ ಹಲವು ಕ್ಷೇತ್ರಗಳಲ್ಲಿ ಒಂದೇ ತಿದ್ದುಪಡಿ ಮೂಲಕ ವಿವಿಧ ಬದಲಾವಣೆ ಮಾಡಲಾಯಿತು.
ಈ ಎಲ್ಲ ಕಾರಣಗಳಿಂದಲೇ ಸಂವಿಧಾನದ 42ನೇ ತಿದ್ದುಪಡಿಯನ್ನೇ ಮಿನಿ ಸಂವಿಧಾನ ಎಂದು ಕರೆಯುತ್ತಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ತಿದ್ದುಪಡಿ ಮಾಡಲಾಗಿದೆ. ಹೀಗಿದ್ದರೂ ಅನಂತಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವುದೇಕೆ? ರಕ್ತಪಾತವಾಗುತ್ತದೆ ಎಂದು ಬೆದರಿಸುವುದೇಕೆ ಖರ್ಗೆಯವರೇ? ಅನಂತಕುಮಾರ್ ಅವರ ಹೇಳಿಕೆ ಟೀಕಿಸುವ ಮೊದಲು ಸಂವಿಧಾನದ 42ನೇ ತಿದ್ದುಪಡಿ ನೆನಪಿಸಿಕೊಳ್ಳಿ. ಅಷ್ಟಕ್ಕೂ ಸಂವಿಧಾನದ ತಿದ್ದುಪಡಿಗೆ ಅವಕಾಶವಿದೆ ಎಂದು ಅದೇ ಸಂವಿಧಾನವೇ ಹೇಳಿದೆ ಎಂಬುದು ಸಹ ನಿಮಗೆ ಗೊತ್ತಿಲ್ಲ ಎಂದರೆ ಎಂಥ ಬೌದ್ಧಿಕ ದಿವಾಳಿತನ ನಿಮಗೆ ಆವರಿಸಿರಬೇಕು ಎಂಬ ಅನುಮಾನ ಕಾಡುತ್ತಿದೆ. ಛೇ!
Leave A Reply