ಪೂಜಾರಿಯವರನ್ನು ಇನ್ನೆಷ್ಟು ಅಳಿಸ್ತಿರಿ ಕಾಂಗ್ರೆಸಿಗರೇ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಕಾಂಗ್ರೆಸ್ ಪಕ್ಷ ಎಂಟರಲ್ಲಿ ಏಳು ಸ್ಥಾನಗಳನ್ನು ಗೆದ್ದಿದ್ದರೆ ಅದಕ್ಕೆ ಕಾರಣ ಬಿ ಜನಾರ್ಧನ ಪೂಜಾರಿ. ಹಾಗೇ ಕಾಂಗ್ರೆಸ್ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ ಅಧಿಕಾರವನ್ನು ಚಲಾಯಿಸುತ್ತಿದ್ದರೆ ಅದಕ್ಕೆ ಕಾರಣವೂ ಜನಾರ್ಧನ ಪೂಜಾರಿ. ಹಾಗೆ ಇವತ್ತು ಕಾಂಗ್ರೆಸ್ ನಲ್ಲಿ ವಿವಿಧ ಹುದ್ದೆ, ಜವಾಬ್ದಾರಿ, ನಾಯಕ ಎಂದು ಹೇಳಿಕೊಳ್ಳುವ ಅನೇಕ ಮುಖಂಡರು ಒಂದು ಕಾಲದಲ್ಲಿ ಪೂಜಾರಿಯವರ ಕಿರುಬೆರಳು ಹಿಡಿದುಕೊಂಡು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟವರೇ. ಆದರೆ ಈಗ ಬೆಳೆದು ದೊಡ್ಡವರಾಗಿರುವವರು ತಂದೆಗೆ ಎದುರು ಮಾತನಾಡಿ ಅವರು ಕಣ್ಣೀರು ಹಾಕುತ್ತಿದ್ದರೆ ದೊಡ್ಡಪ್ಪನನ್ನು ಎದುರು ಹಾಕಿಕೊಳ್ಳುವ ಧೈರ್ಯ ಇಲ್ಲದೆ ವೇದಿಕೆಗಳಲ್ಲಿ ತಲೆತಗ್ಗಿಸಿ ಕುಳಿತುಕೊಂಡಿದ್ದಾರೆಂದರೆ ಕಾಂಗ್ರೆಸ್ ಜಿಲ್ಲೆಯಲ್ಲಿ ನೈತಿಕ ಅದ:ಪತನದತ್ತ ಆರಾಮವಾಗಿ ಸಾಗುತ್ತಿದೆ ಎಂದು ಹೇಳಬಹುದು.
ತನ್ನ ತಾಯಿಗೆ ಬೈದರು ಎಂದು ಜನಾರ್ಧನ ಪೂಜಾರಿ ಕಂಕನಾಡಿ ಗರೋಡಿ ವೇದಿಕೆಯಲ್ಲಿ ಹೇಳುತ್ತಾ ಕಣ್ಣೀರು ಹಾಕುತ್ತಿದ್ದರೆ ಪಾಲಿಕೆಯಲ್ಲಿರುವ ಕೆಚ್ಚೆದೆಯ ವನಿತೆ ಕವಿತಾ ಸನಿಲ್ ಕೂಡ ಕಣ್ಣೀರು ಹಾಕಿದ್ರು ಎಂದರೆ ನೀವು ಅರ್ಥ ಮಾಡಿಕೊಳ್ಳಿ. ಬೇಕಾದರೆ ದಕ್ಷಿಣ ಕನ್ನಡದ ರಾಜಕೀಯವನ್ನು ನಾಲ್ಕೂವರೆ ವರ್ಷಕ್ಕೆ ರಿವೈಂಡ್ ಮಾಡಿಕೊಂಡು ನೋಡೋಣ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಗೆಲ್ಲುತ್ತೇವೆ ಎನ್ನುವ ಅಂದಾಜು ಕಾಂಗ್ರೆಸ್ ಗೆ ಇರಲೇ ಇಲ್ಲ. ಅಂತಹ ಸಮಯದಲ್ಲಿ ಜಿಲ್ಲೆಗೆ ಒಬ್ಬ ಸಮರ್ಥ ನಾಯಕನ ಅಗತ್ಯ ಇತ್ತು. ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅತ್ಯಧಿಕ ಸೀಟು ಗೆಲ್ಲಬೇಕಿತ್ತು. ಅಂತಹ ಸಮಯದಲ್ಲಿ ಪೂಜಾರಿ ತಮ್ಮ ಇಳಿವಯಸ್ಸಿನಲ್ಲಿಯೂ ಕಾಲಿಗೆ ಶೂ ಕಟ್ಟಿಕೊಂಡರು. ರಸ್ತೆ ರಸ್ತೆ ಸುತ್ತಿದರು. ಮನೆಮನೆ ಅಲೆದರು. ಕಾಂಗ್ರೆಸ್ ಗೆ ಮತ ನೀಡಿ ಎಂದು ಭಿಕ್ಷೆ ಕೇಳಿದಂತೆ ಕೇಳಿದರು. ಇದು ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕತೃರಿಗೆ ಗೊತ್ತಿದೆ. ಚುನಾವಣೆಯ ಫಲಿತಾಂಶ ಬಂದ ದಿನ ಸ್ಥಳೀಯ ಟಿವಿ ವಾಹಿನಿಯ ನಿರೂಪಕರೊಬ್ಬರು ” ಈ ಅದ್ಭುತ ಗೆಲುವಿಗೆ ರಮಾನಾಥ್ ರೈ ಅವರೇ ಕಾರಣ” ಎಂದು ಪದೇ ಪದೇ ಹೇಳುತ್ತಿದ್ದಾಗ ಆ ನಿರೂಪಕರ ಮೊಬೈಲಿಗೆ ಕರೆ ಮಾಡಿ ಈಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೊಬ್ಬರು ” ನೀವು ತಪ್ಪಾಗಿ ಹೇಳುತ್ತಿದ್ದಿರಿ, ರಮಾನಾಥ್ ರೈ ಅವರು ಚುನಾವಣೆಯ ಸಂದರ್ಭದಲ್ಲಿ ಅವರ ಕ್ಷೇತ್ರ ಬಿಟ್ಟು ಎಲ್ಲಿ ಹೊರಗೆ ಹೋಗಿದ್ದಾರೆ, ಎಲ್ಲಾ ಕಡೆ ಓಡಾಡಿ ಪಕ್ಷಕ್ಕೆ ತಂದುಕೊಟ್ಟವರು ಜನಾರ್ಧನ ಪೂಜಾರಿಯವರು. ಹಾಗಿರುವಾಗ ನೀವು ಎಲ್ಲಾ ಕ್ರೆಡಿಟ್ ರಮಾನಾಥ್ ರೈ ಅವರಿಗೆ ಕೊಡುವುದು ಸರಿಯಾ” ಎಂದು ಕೇಳಿದ್ದರಂತೆ, ನಂತರ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಬಂತು. ಬಿಜೆಪಿ ಸೋಲುವ ಚಾನ್ಸ್ ಇರಲಿಲ್ಲ. ಕಾಂಗ್ರೆಸ್ ಗೆಲ್ಲುವುದು ಸುಲಭವೇ ಇರಲಿಲ್ಲ. ಏನೂ ಮಾಡಿದರೂ ಕಾಂಗ್ರೆಸ್ ಅನ್ನು ಜನ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಯಾವ ಕಾರಣಕ್ಕೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಿಸಲ್ಲ ಎಂದು ಕಾಂಗ್ರೆಸ್ ಸಿಕ್ಕಸಿಕ್ಕ ವೇದಿಕೆಯಲ್ಲಿ ಭರವಸೆ ಕೊಡುತ್ತಾ ಬಂತು. ನಾವು ನಿಮ್ಮನ್ನು ನಂಬುವುದಿಲ್ಲ. ನಮಗೆ ಧೈರ್ಯ ಬರಬೇಕಾದರೆ ಯಾವುದಾದರೂ ಅಂತಹ ನಾಯಕರಿಂದ ಹೇಳಿಸಿ ಎಂದು ಜನ ಕೇಳತೊಡಗಿದರು.
ಯಾರನ್ನು ಕೇಳಿ ಪ್ರಮಾಣ ಮಾಡಿಸುವುದು ಎಂದು ಕಾಂಗ್ರೆಸ್ ಮುಖಂಡರು ಹುಡುಕುತ್ತಿದ್ದಾಗ ಅವರಿಗೆ ಸಿಕ್ಕಿದ್ದೇ ಜನಾರ್ಧನ ಪೂಜಾರಿ. ಪೂಜಾರಿಯವರ ಮನೆಗೆ ಹೋಗಿ ಅವರ ಕಾಲು ಹಿಡಿದು ಅವರನ್ನು ಒಪ್ಪಿಸಿ ಅವರನ್ನು ಮಂಗಳೂರಿಗೆ ಕರೆ ತಂದು ಅವರ ಸಮ್ಮುಖದಲ್ಲಿ ಸುದ್ದಿಗೋಷ್ಟಿ ಮಾಡಿ ನಾವು ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಪೂಜಾರಿಯವರನ್ನು ಎದುರಿಗೆ ಇಟ್ಟೇ ಕಾಂಗ್ರೆಸ್ ಮುಖಂಡರು ಪ್ರಮಾಣ ಮಾಡಿದರು. ಅದರ ನಂತರ ಕಾಂಗ್ರೆಸ್ ಗೆದ್ದು ಅಧಿಕಾರ ನಡೆಸುತ್ತಿರುವುದು ನಮ್ಮ ಕಣ್ಣ ಮುಂದೆ ಇದೆ. ಅಂದರೆ ಪೂಜಾರಿ ಗೆಲ್ಲಿಸಲು ಬೇಕು. ಗೆದ್ದ ನಂತರ ಕಾಂಗ್ರೆಸ್ಸಿಗರು ತಪ್ಪು ಮಾಡಿದಾಗ ಕಿವಿ ಹಿಂಡಿದರೆ ಅವರು ಬೋ….ಮ.., ಸೂ…..ಮ…. ಇದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್ ಮರಿನಾಯಕರದ್ದು.
ಇನ್ನು ಧಾರ್ಮಿಕ ವಿಷಯಕ್ಕೆ ಬರೋಣ. ಇವತ್ತು ಕುದ್ರೋಳಿಯ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನ ಜಿಲ್ಲೆ, ರಾಜ್ಯ, ರಾಷ್ಟ್ರದ ಮಟ್ಟದಲ್ಲಿ ತನ್ನದೇ ರೀತಿಯಲ್ಲಿ ಪ್ರಸಿದ್ಧಿಯಾಗಲು ಯಾರು ಕಾರಣ? ಜನಾರ್ಧನ ಪೂಜಾರಿಯವರಲ್ವಾ? ಇವತ್ತು ಗೋಕರ್ಣನಾಥ ದೇವಸ್ಥಾನ ಇಷ್ಟು ವರ್ಣರಂಜಿತವಾಗಿ ಶೋಭಿಸುತ್ತಿದೆ ಎಂದರೆ ಅದಕ್ಕೆ ಕಾಯಾ, ವಾಚಾ, ಮನಸ ದುಡಿದವರು ಜನಾರ್ಧನ ಪೂಜಾರಿ. ಅವರು ತನು, ಮನ, ಧನ ಒಟ್ಟು ಮಾಡಿ ದುಡಿಯದೇ ಹೋಗಿದ್ದರೆ ಈ ಪರಿ ಭವ್ಯತೆ ಬರುತ್ತಿತ್ತಾ ಎಂದು ಅದರ ಆಡಳಿತ ಮಂಡಳಿಯವರು ಹೇಳಬೇಕು. ಅವರು ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿದ ಹಿಂದೆ ಅವರ ಉದ್ದೇಶ ಏನೇ ಇರಬಹುದು. ಆದರೆ ಪೂಜಾರಿಯವರು ಮಾಡಿದ ಸೇವೆ ಮಾತ್ರ ನಿಸ್ವಾರ್ಥವಾದದ್ದು. ಅವರ ಬೆಂಬಲವಾಗಿ ಆಡಳಿತ ಮಂಡಳಿಯವರು ಸಾಮೂಹಿಕ ಸುದ್ದಿಗೋಷ್ಟಿ ಯಾಕೆ ಮಾಡುತ್ತಿಲ್ಲ. ಯಾಕೆ ಮೌನವಾಗಿದ್ದಾರೆ.
ಇನ್ನು ಜಾತಿ ಲೆಕ್ಕದಲ್ಲಿ ಬೇಕಾದರೆ ನೋಡೋಣ. ಬಿಲ್ಲವರಿಗೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕವಾಗಿ ಸಬಲಗೊಳಿಸಿದವರು ಜನಾರ್ಧನ ಪೂಜಾರಿ. ಅವರು ಎದೆ ಮುಟ್ಟಿ ತಾನು ಬಿಲ್ಲವ ಜಾತಿಯಲ್ಲಿ ಜನ್ಮಿಸಿದ್ದು ಎಂದು ಹೇಳಿ ಸಮಾಜದಲ್ಲಿ ಬಿಲ್ಲವರಿಗೂ ಸಮಾನತೆಗಾಗಿ ಹೋರಾಡಿದವರು.
ಇವತ್ತಿಗೂ ಅನೇಕ ಮನೆಗಳಲ್ಲಿ ಪೂಜಾರಿಯವರನ್ನು ನೆನೆಯುವುದು ಅವರು ಆವತ್ತು ಬಡವರಿಗಾಗಿ ಮಾಡಿದ ಸಾಲಮೇಳ. ಸರಿಯಾಗಿ ನೋಡಿದರೆ ಪೂಜಾರಿಯವರು ಲೋಕಸಭಾ ಸ್ಥಾನದಿಂದ ಇಳಿದು ಎರಡು ದಶಕಗಳಾಗಿವೆ. ಅವರನ್ನು ರಾಜ್ಯಸಭೆಗೆ ಪಕ್ಷ ಕಳುಹಿಸಿತಾದರೂ ಅದು ನಾಮಕಾವಸ್ಥೆಯಾಗಿಯೇ ಉಳಿಯಿತು. ಆದರೆ ಇವತ್ತಿಗೂ ಪೂಜಾರಿ ರಾಜಕೀಯದಲ್ಲಿ ಔಟ್ ಡೇಟ್ ಆಗಿಲ್ಲ. ಅದಕ್ಕೆ ಕಾರಣ ಅವರ ಆವತ್ತಿನ ಸಾಧನೆ. ಕೊನೆಯದಾಗಿ ಪೂಜಾರಿಯವರನ್ನು ಅವರ ಪಕ್ಷದವರು ಯಾವ ಕಾರಣಕ್ಕೆ ಬೇಕಾದರೆ ದೂಷಿಸಲಿ. ಆದರೆ ಪೂಜಾರಿ ಆವತ್ತಿಗೂ ನಾನ್ ಕರೆಪ್ಟೆಡ್ ಅಂದರೆ ಇವತ್ತಿಗೂ ಭ್ರಷ್ಟಾಚಾರರಹಿತ ರಾಜಕಾರಣಿ. ಅವರಷ್ಟು ಶುದ್ಧ ರಾಜಕಾರಣಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೊಬ್ಬರು ಇದ್ದಾರಾ ಎನ್ನುವುದನ್ನು ಕಾಂಗ್ರೆಸ್ಸಿಗರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
Leave A Reply