ಯೋಗದತ್ತ ಮುಸ್ಲಿಂ ಮಹಿಳೆಯರ ಚಿತ್ತ
ಲಖನೌ: ಮುಸ್ಲಿಂ ಮಹಿಳೆಯರು ಯೋಗ ಮಾಡಬಾರದು, ಯೋಗ ತರಬೇತಿ ಕೇಂದ್ರಗಳಿಗೆ ಹೋಗಬಾರದು ಎಂಬ ಮುಸ್ಲಿಂ ಮೌಲ್ವಿಗಳ ಫತ್ವಾದ ಮಧ್ಯೆ ಹಲವು ಮಹಿಳೆಯರು ಯೋಗದತ್ತ ಮನಸ್ಸು ವಾಲಿಸುತ್ತಿದ್ದಾರೆ. ವಿಶೇಷವಾಗಿ ಇತ್ತೀಚೆಗೆ ಯೋಗ ಶಿಕ್ಷಕಿಗೆ ಫತ್ವಾ ಹೊರಡಿಸಿದ್ದರಿಂದ, ಯೋಗಾಭ್ಯಾಸಕ್ಕೆ ಮುಂದಾಗಿರುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಫತ್ವಾ ವಿರೋಧಿಸಿ ಯೋಗ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಯುವತಿಯೊಬ್ಬಳು ಮಾತನಾಡಿ ‘ಯೋಗ ಮಾನಸಿಕ, ದೈಹಿಕ ರೋಗಗಳಿಗೆ ಪರಿಹಾರ ನೀಡುತ್ತದೆ. ದೇಹಸ್ಥಿತಿಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾಳೆ.
ಫತ್ವಾ ಹೊರಡಿಸಿದ್ದರಿಂದ ಸ್ಫೂರ್ತಿ ಪಡೆದಿರುವ ಮುಸ್ಲಿಂ ಯುವತಿಯರು ಉತ್ತರ ಪ್ರದೇಶದ ರಾಂಪುರದ ಗುಲ್ಶನ್ ವೆಲಫೇರ್ ಸೊಸೈಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೇವಲ ಮಹಿಳೆಯರಿಗೆ ಮೀಸಲಾಗಿ ತರಗತಿಯನ್ನು ನಡೆಸಲಾಗುತ್ತಿದ್ದು, ಯಾವುದೇ ಧರ್ಮದ ನಿಬಂಧನೆಗಳು ಈ ಕೇಂದ್ರದಲ್ಲಿ ಇಲ್ಲ. ಈ ಕೇಂದ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಯುವತಿಯರೇ ಬರುತ್ತಿರುವುದು ವಿಶೇಷ. ಎಲ್ಲರಿಗೂ ಯೋಗದಿಂದ ಸದೃಡ ಆರೋಗ್ಯ ಕಾಪಾಡಿಕೊಳ್ಳುತ್ತೇವೆ ಎಂಬ ಭರವಸೆ ಮೂಡಿದೆ.
ಕೆಲವು ದಿನಗಳಿಂದ ಯೋಗ ತರಬೇತಿ ಪಡೆಯುತ್ತಿರುವ ಹಲವು ಮಹಿಳೆಯರಲ್ಲಿ ಕಾಣಿಸಿಕೊಂಡಿದ್ದ ಕಾಲಿನ ಕೀಲು ನೋವು ಸೇರಿ ನಾನಾ ಸಮಸ್ಯೆಗಳು ಕಡಿಮೆಯಾಗಿವೆ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷದ ಜಾರ್ಖಂಡ್ ನ ರಾಂಚಿಯ ಮುಸ್ಲಿಂ ಯೋಗ ಶಿಕ್ಷಕಿ ವಿರುದ್ಧ ಫತ್ವಾ ಹೊರಡಿಸಲಾಗಿತ್ತು, ಅಲ್ಲದೇ ತರಬೇತಿ ನೀಡುವುದನ್ನು ನಿಲ್ಲಿಸುವಂತೆ ಮನೆ ಮೇಲೆ ದಾಳಿ ನಡೆಸಲಾಗಿತ್ತು.
Leave A Reply