ಕುಲಭೂಷಣ್ ವಿರುದ್ಧ ಹುರುಳಿಲ್ಲದ ಆರೋಪ ಮುಂದುವರಿಸಿದ ಪಾಕ್

ವಿಶ್ವ ಸಂಸ್ಥೆ: ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಿರುವ ಭಾರತದ ಕುಲಭೂಷಣ್ ಜಾಧವ್ ಅವರ ಬಗ್ಗೆ ಸುಳ್ಳು ಆರೋಪ ಮಾಡುವ ಕುತಂತ್ರವನ್ನು ಪಾಕಿಸ್ತಾನ ಮುಂದುವರಿಸಿದೆ. ಕುಲಭೂಷಣ್ ಜಾಧವ್ ವಿವಾದದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಮಾತನಾಡಿದ ಪಾಕ್ ಪ್ರತಿನಿಧಿ ಮಲಿಹಾ ಲೋಧಿ ‘ಕುಲಭೂಷಣ್ ಅವರ ಹೆಸರು ಉಲ್ಲೇಖಿಸುತ್ತಾ, ಭಾರತ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಮೊಂಡು ವಾದವನ್ನು ಮುಂದುವರಿಸಿದ್ದಾರೆ.
ಭಾರತ ಭಯೋತ್ಪಾದನೆ ಬಗೆಗಿನ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಾರತ ಸಂಚೂ ರೂಪಿಸಿದೆ. ಅದಕ್ಕೆ ಗೂಢಚರ ವರದಿಗಳು ಬಹಿರಂಗಪಡಿಸಿವೆ ಎಂಬ ಹುರುಳಿಲ್ಲದ ವಾದವನ್ನು ಲೋಧಿ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಿತ್ಯ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ. ಆ ನೀತಿ ಭಾರತದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಜಾಧವ್‌ರನ್ನು ಗೂಢಚರರಲ್ಲ. ಅವರೊಬ್ಬ ನಿವೃತ್ತ ನೌಕಾ ಸೇನಾ ಅಧಿಕಾರಿ, ಅವರನ್ನು ಬಂಧಿಸಿ ಪಾಕ್ ನಾಟಕವಾಡುತ್ತಿದೆ ಎಂದು ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಆರೋಪಿಸಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಲಾಹೋರ್ ಗೆ ಭೇಟಿ ನೀಡಿ, ಪಾಕ್ ನೊಂದಿಗೆ ಶಾಂತಿ ಸ್ಥಾಪಿಸಲು ಬಯಸಿದ್ದರು. ಆದರೆ ಪಾಕ್ ಪಠಾಣ್ ಕೋಟ್ ಮೇಲೆ ದಾಳಿ ಮಾಡಿ ತನ್ನ ಉದ್ಧಟತನ ಮುಂದುವರಿಸಿತು. ಅಪ್ಘಾನಿಸ್ತಾನದಲ್ಲೂ ಪಾಕ್ ಪ್ರೇರಿತ ಶಕ್ತಿಗಳೇ ಅಶಾಂತಿ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.
ಭಾರತ ಆರೋಪಕ್ಕೆ ಪ್ರತಿಕ್ರಿಯಿಸಿದ ಲೋಧಿ ಅವರಿಗೆ ಸಭೆಯಲ್ಲಿ ಭಾರತಕ್ಕೂ ಮುನ್ನ ಮಾತನಾಡುವ ಅವಕಾಶವಿದ್ದರೂ ಭಾರತದ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಮಾತನಾಡಿದ ಬಳಿಕ, ಸಿದ್ಧಪಡಿಸಿದ ಭಾಷಣವನ್ನು ತಿದ್ದು ಮಾತನಾಡಿ, ಪಾಕ್ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಅಫ್ಘಾನಿಸ್ತಾನದ ಶೇ 40ರಷ್ಟು ಭೂಭಾಗ ಸರ್ಕಾರದ ಹಿಡಿತದಲಿಲ್ಲ. ಇಲ್ಲಿ ಭಯೋತ್ಪಾದಕರು ವರ್ಷಕ್ಕೆ ಮಾದಕ ದ್ರವ್ಯಗಳ ವ್ಯಾಪಾರದಿಂದ 400 ದಶಲಕ್ಷ ಡಾಲರ್‌ಗಿಂತ ಹೆಚ್ಚಿನ ಆದಾಯ ಪಡೆದು ವಿಕೃತಿ ಮೆರೆಯುತ್ತಿದ್ದಾರೆ. ಅದಕ್ಕೆ ಪಾಕ್ ಬೆಂಬಲವಿಲ್ಲ ಎಂದು ಲೋಧಿ ಸಮಜಾಯಿಸಿ ನೀಡಿದರು.
ಬಯಲಾಗಿತ್ತು ಪಾಕ್ ಸುಳ್ಳಿನ ಮುಖ
ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಪಾಕಿಸ್ತಾನ ಪ್ರತಿನಿಧಿ ಗಲಭೆ ಪೀಡಿತ ಪ್ಯಾಲಿಸ್ತೀನ್‌ನಲ್ಲಿ ಗಾಯಗೊಂಡಿದ್ದ ಬಾಳಕಿಯೊಬ್ಬಳ ಚಿತ್ರ ತೋರಿಸಿ ಕಾಶ್ಮೀರದಲ್ಲಿ ಭಾರತೀಯ ಸೇನೆ ಮಾನವ ಹಕ್ಕುಗಳ ಉಲ್ಲಂಘಿಸುತ್ತಿದೆ ಎಂದಿದ್ದರು. ನಂತರ ಆ ಚಿತ್ರದ ವಾಸ್ತವ ಹೊರ ಬಂದ ಮೇಲೆ ಪಾಕಿಸ್ತಾನದ ಸುಳ್ಳಿನ ಮುಖ ಜಾಗತಿಕ ಮಟ್ಟದಲ್ಲಿ ಅನಾವರಣವಾಗಿತ್ತು.