ಮುಖ್ಯಮಂತ್ರಿಯವರೇ ಈ ಸರ್ಕಾರಿ, ಅನುದಾನಿತ ಶಾಲೆಯ ಮಕ್ಕಳ ಪರಿಸ್ಥಿತಿ ಬಗ್ಗೆ ಏನು ಹೇಳುತ್ತೀರಿ?
ಬೆಂಗಳೂರು: ಕಳೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದು ರಾಜ್ಯ ಸರ್ಕಾರದ ವೈಫಲ್ಯದ ಕುರಿತು ಮಾತನಾಡಿದ್ದಕ್ಕೇ ಕೆಂಡಾಮಂಡಲರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಇದು ಕನ್ನಡರಿಗೆ ಮಾಡುವ ಅನ್ಯಾಯ” ಎಂದುಬಿಟ್ಟರು.
ಆದರೆ ಇಂಥ ಕನ್ನಡ ಪ್ರೇಮಿ ಸಿದ್ದರಾಮಯ್ಯನವರು ರಾಜ್ಯದ ಕನ್ನಡ ಶಾಲೆಗಳು ಅರ್ಥಾತ್ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪರಿಸ್ಥಿತಿ ಹದಗೆಟ್ಟಿದ್ದರೂ, ಸಿಎಂ ಏಕೆ ಈ ಶಾಲೆಗಳತ್ತ ಗಮನಹರಿಸುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ.
ಹೌದು, ಸ್ಟೇಟ್ ಅಚೀವ್ ಮೆಂಟ್ ಸರ್ವೇ (ಎಸ್ ವಿಎಸ್) ಸಂಸ್ಥೆ ಕಳೆದ ವರ್ಷದ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ನಾಲ್ಕರಿಂದ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿಯ ಅವಶ್ಯವಿದೆ ಎಂದು ತಿಳಿಸಿದ್ದು, ಕನ್ನಡ ಶಾಲೆಗಳ ವೈಫಲ್ಯ ಎತ್ತಿ ತೋರಿಸುವಂತಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಎಸ್ ವಿಎಸ್ ಸಂಸ್ಥೆಯಿಂದ ಸಮೀಕ್ಷೆ ನಡೆಸಿದ್ದು, ರಾಜ್ಯದ ಸುಮಾರು 36 ಲಕ್ಷ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಸಂದರ್ಶಿಸಿದ್ದು, ಬಹುತೇಕ ವಿದ್ಯಾರ್ಥಿಗಳು ತಮಗೆ ವಿಶೇಷ ತರಗತಿಗಳ ಅಗತ್ಯವಿದ್ದಾರೆ ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ವಿಶೇಷ ತರಗತಿಗಳ ಕೊರತೆ, ಶಾಲಾ ಕೊಠಡಿ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯದ ಕಠಿಣತೆ ಬಿಡಿಸಲು ಸಂಪನ್ಮೂಲ ಶಿಕ್ಷಕರ ಅಭಾವವಿದೆ ಎಂದು ತಿಳಿಸಿರುವುದು ರಾಜ್ಯ ಸರ್ಕಾರ ಎಷ್ಟರಮಟ್ಟಿಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ನಿರ್ವಹಣೆ ಮಾಡುತ್ತಿದೆ ಎಂಬುದು ಬಹಿರಂಗವಾಗಿದೆ.
36 ಲಕ್ಷ ವಿದ್ಯಾರ್ಥಿಗಳಲ್ಲಿ 4.22 ಲಕ್ಷ ವಿದ್ಯಾರ್ಥಿಗಳು ತಮಗೆ ವಿಜ್ಞಾನ ಬೋಧಿಸುವ ಸಮರ್ಥ ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದ್ದರೆ, 4.61 ಲಕ್ಷ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯ ಕಷ್ಟವಾಗುತ್ತಿದೆ ಎಂದಿದ್ದಾರೆ. ಇನ್ನು ಗಣಿತ, ತೃತೀಯ ಭಾಷೆ, ಸಮಾಜ ವಿಜ್ಞಾನ ವಿಷಯಗಳು ಸಹ ಕಠಿಣವಾಗುತ್ತಿವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕೂವರೆ ವರ್ಷವಾದರೂ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ವಾತಾವರಣ ನಿರ್ಮಿಸದೇ ಇರುವುದು ದುರಂತ. ಚುನಾವಣೆ ಹಿನ್ನೆಲೆ ಬ್ಯುಸಿಯಾಗಿರುವ ಸಿದ್ದರಾಮಯ್ಯನವರಿಗೆ ಇದು ತಿಳಿಯುತ್ತಾ? ಇನ್ನಾದರೂ ಕ್ರಮ ಕೈಗೊಳ್ಳಲಿದ್ದಾರಾ?
Leave A Reply