ಭಾರತೀಯ ಸೈನಿಕರೆಂದರೆ ಪಾಕಿಸ್ತಾನಕ್ಕೆ ಅಷ್ಟೊಂದ್ಯಾಕೆ ಸಿಟ್ಟು ಗೊತ್ತಾ? ರಕ್ಷಣಾ ನೈಪುಣ್ಯರು ಹೇಳ್ತಾರೆ ಕೇಳಿ!
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಜಮ್ಮು-ಕಾಶ್ಮೀರದಲ್ಲೇ ಎರಡೇ ಅಂಶಗಳು ಪ್ರಮುಖ ಎನಿಸುತ್ತಿವೆ. ಒಂದೋ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೈನಿಕರು ಉಗ್ರರನ್ನು ಮೂಲೆ ಮೂಲೆ ಹುಡುಕಿ ಹತ್ಯೆ ಮಾಡುತ್ತಿರುವುದು ಹಾಗೂ ಇನ್ನೊಂದು ಪಾಕಿಸ್ತಾನ ಭಾರತೀಯ ಸೈನಿಕರು ಹಾಗೂ ಸೇನಾ ನೆಲೆಯನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು.
ಈ ಎರಡೂ ಪ್ರಮುಖ ಅಂಶಗಳಲ್ಲಿ ಒಂದಕ್ಕೊಂದು ನಿಕಟ ಸಂಬಂಧವಿದೆ. ಹೇಗೆ ಗೊತ್ತಾ? ಪಾಕಿಸ್ತಾನದ ಒಂದೊಂದೇ ಉಗ್ರರನ್ನು ಭಾರತೀಯ ಸೈನಿಕರು ಹತ್ಯೆ ಮಾಡುತ್ತಿರುವ ಕಾರಣಕ್ಕಾಗಿಯೇ ಪಾಕಿಸ್ತಾನ ಭಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಅಷ್ಟರಮಟ್ಟಿಗೆ ಪಾಕಿಸ್ತಾನ ಭಾರತೀಯ ಸೈನಿಕರು ಎಂದರೆ ಕೊತಕೊತನೆ ಕುದಿಯುತ್ತಿದೆ.
ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಕಳೆದ ಮೂರು, ಮೂರುವರೆ ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಾರತೀಯರ ಸೈನಿಕರ ಮನಸ್ಥಿತಿಯೇ ಬದಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅವಿತ, ಪಾಕಿಸ್ತಾನದಿಂದ ಬಂದು ಅಡಗಿರುವ, ಕದನ ವಿರಾಮ ಉಲ್ಲಂಘಿಸಿ ಬರುವ ಪಾಕಿಸ್ತಾನಿ ಉಗ್ರರನ್ನು ನಮ್ಮ ಸೈನಿಕರು ಹೊಡೆದುರುಳಿಸುತ್ತಿದ್ದಾರೆ.
ಅದಕ್ಕೆ ನಿದರ್ಶನವಾಗಿ ಭಾರತ “ಆಪರೇಷನ್ ಆಲ್ ಔಟ್” ಎಂಬ ಹೆಸರಿನ ಕಾರ್ಯಾಚರಣೆ ಕೈಗೊಂಡು ಪಾಕಿಸ್ತಾನದ ಹಣ ತಿಂದು ಕಾಶ್ಮೀರದಲ್ಲಿ ಅವಿತಿದ್ದ, ಒಳನುಸುಳಲು ಯತ್ನಿಸುತ್ತಿದ್ದ ಲಷ್ಕರೆ ತಯ್ಯಬಾ, ಜೈಷೆ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಹಲವು ಉಗ್ರ ಸಂಘಟನೆಗಳ ಕಾರ್ಯಕರ್ತರು, ವಕ್ತಾರರನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಿದೆ.
ಇನ್ನೂ ಬಿಡಿಸಿ ಹೇಳುವುದಾದರೆ ಕಳೆದ ವರ್ಷ, ಅಂದರೆ 2017ರ ಒಂದೇ ವರ್ಷದಲ್ಲಿ ಭಾರತೀಯ ಸೈನಿಕರು ಬರೋಬ್ಬರಿ 213 ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದೆ. ಇದು ಭಾರತದ ದಶಕದ ಸಾಧನೆ. ಜತೆಗೆ ಸರ್ಜಿಕಲ್ ಸ್ಟ್ರೈಕ್ ಸಹ ಪಾಕಿಸ್ತಾನವನ್ನು ಹಣ್ಣುಗಾಯಿ-ನೀರುಗಾಯಿ ಮಾಡಿ ಬಿಸಾಕಿದೆ. ಕಲ್ಲು ತೂರಾಟ, ಒಳನುಸುಳುವಿಕೆ, ಉಗ್ರ ಚಟುವಟಿಕೆಗೆ ಹಣ ಸಂದಾಯ, ನೋಟು ನಿಷೇಧ ಸೇರಿ ಹಲವು ಅಂಶಗಳಿಂದಲೂ ಪಾಕಿಸ್ತಾನ ಬಾಲ ಸುಟ್ಟ ಬೆಕ್ಕಿನಂತಾಗಿದೆ.
ಪಾಕಿಸ್ತಾನಕ್ಕೆ ಗಡಿಯಲ್ಲಿ ತನ್ನ ಸೈನ್ಯಕ್ಕಿಂತ ಉಗ್ರರನ್ನೇ ಜಾಸ್ತಿ ಬಳಸುವುದು ಅದರ ತಂತ್ರಗಾರಿಕೆ. ಪಾಕಿಸ್ತಾನಿ ಸೈನಿಕರು ಭಾರತದೊಳಕ್ಕೆ ನುಸುಳಲು ಗಡಿನಿಯಮ ಅಡ್ಡಬರುತ್ತದೆ, ಅದು ಅತಿಯಾದರೆ ಪ್ರಕರಣ ವಿಶ್ವಸಂಸ್ಥೆವರೆಗೂ ಹೋಗುತ್ತದೆ. ಆದರೆ ಉಗ್ರರಿಗಾದರೆ ಯಾವ ಭಯ, ನಿಯಮವೂ ಇರುವುದಿಲ್ಲ. ಹಾಗಾಗಿಯೇ ಪಾಕಿಸ್ತಾನ ಅಪಾರ ಹಣ, ಶಸ್ತ್ರಾಸ್ತ್ರ ನೀಡಿಯಾದರೂ ಉಗ್ರರನ್ನು ಛೂ ಬಿಡುತ್ತದೆ.
ಆದರೆ ಪಾಕಿಸ್ತಾನ ಚಾಪೆ ಕೆಳಗೆ ನುಗ್ಗಿದರೆ, ಭಾರತೀಯ ಸೈನಿಕರು ರಂಗೋಲಿ ಕೆಳಗೇ ನುಗ್ಗಿದರು. ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡು ಹೊಡೆದುರುಳಿಸಿದರು. ಪಾಕಿಸ್ತಾನ ಬೆಚ್ಚಿ ಬಿದ್ದಿದ್ದೇ ಆಗ.
ಇದೇ ಕಾರಣಕ್ಕಾಗಿಯೇ ಪಾಕಿಸ್ತಾನಿ ಸೈನಿಕರು ಹಾಗೂ ಉಗ್ರರು ಇತ್ತೀಚೆಗೆ ಸೈನಿಕರು ಹಾಗೂ ಸೇನಾ ನೆಲೆಗಳ ಮೇಲೆಯೇ ದಾಳಿಮಾಡುತ್ತಿದ್ದಾರೆ. ಅದರಲ್ಲೂ ಪ್ರಸಕ್ತ ವರ್ಷದ 44 ದಿನಗಳಲ್ಲಿ ಪಾಕಿಸ್ತಾನ 22 ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ. ಅದರಲ್ಲಿ ಬಹುತೇಕ ದಾಳಿಗಳು ಸೈನಿಕರು, ಸೇನಾನೆಲೆ ಹಾಗೂ ಪೊಲೀಸರ ಮೇಲೆಯೇ ಆಗಿವೆ ಎಂಬುದು ಗಮನಾರ್ಹ.
ಪಾಕಿಸ್ತಾನ ಹೀಗೆ ಮಾಡಲು ಸಹ ಕಾರಣಗಳಿವೆ. ಮೊದಲನೆಯದಾಗಿ ಇಡೀ ಕಾಶ್ಮೀರದ ಭದ್ರತೆ, ಶಾಂತಿ, ನೆಮ್ಮದಿ ನಿಂತಿರುವುದೇ ಸೈನಿಕರ ಮೇಲೆಯೇ. ಅದೇ ಕಾರಣಕ್ಕೆ ಸೈನಿಕರ ಮೇಲೆ ದಾಳಿ ಮಾಡಿದರೆ, ಆಗ ಜನ ತಾನೇ ತಾನಾಗಿ ಹೆದರುತ್ತಾರೆ. ಶಾಂತಿಗೆ ಭಂಗ ಬರುತ್ತದೆ.
ಬರೀ ಜನರಷ್ಟೇ ಅಲ್ಲ, ಸರ್ಕಾರ ಸಹ ಸೈನಿಕರನ್ನೇ ಆಧರಿಸಿದೆ. ಸೈನಿಕರನ್ನು ಕೊಂದರೆ ಸರ್ಕಾರಕ್ಕೂ ಭೀತಿ ಎದುರಾಗುತ್ತದೆ. ಮೇಲಾಗಿ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರೆ, ಶಸ್ತ್ರಾಸ್ತ್ರ ನಾಶವಾಗಿ ಉಗ್ರರು ಸೇಫ್ ಆಗುತ್ತಾರೆ. ಜತೆಗೆ ಮುಂದೆ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವಾಗ ಯೋಚನೆ ಮಾಡುತ್ತಾರೆ, ಹಿಂಜರಿಯುತ್ತಾರೆ ಎಂಬ ಲೆಕ್ಕಾಚಾರ ಪಾಕಿಸ್ತಾನದ್ದು.
ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಜಮ್ಮು-ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವುದು, ಭಯೋತ್ಪಾದಕರನ್ನು ಬೆಳೆಸುವುದು ಬೇಕು. ಆದರೆ ಅದಕ್ಕೆ ಭಾರತೀಯ ಸೈನಿಕರು ಚೀನಾ ಗೋಡೆಯಂತೆ ಅಡ್ಡವಾಗಿರುವುದರಿಂದ ಸೈನಿಕರನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿದೆ. ಆದರೆ ಇದಾವುದಕ್ಕೂ ಜಗ್ಗದ ನಮ್ಮ ಸೈನಿಕರು ಮಾತ್ರ ಪಾಕಿಸ್ತಾನಿ ಉಗ್ರರ ರುಂಡ ಚೆಂಡಾಡುತ್ತಲೇ ಇರುತ್ತಾರೆ. ಅದು ನಮ್ಮ ಸೈನಿಕರ ತಾಕತ್ತು.
ಲೇಖಕರು – ರಕ್ಷಣಾ ನೈಪುಣ್ಯರು, ಕವಿ, ಲೇಖಕ, ಅಂತಾರಾಷ್ಟ್ರೀಯ ಹಾಗೂ ಆಂತರಿಕ ಭದ್ರತಾ ವಿಶ್ಲೇಷಕ
ಲೇಖನ ಕೃಪೆ – ವಿಯಾನ್ ನ್ಯೂಸ್.ಕಾಮ್
Leave A Reply