ಆ ದೇಶಪ್ರೇಮಿ ವಿಕ್ರಮ್ ಭಾತ್ರಾ ಲವ್ ಸ್ಟೋರಿಯೂ ಕಣ್ಣೀರು ತರಿಸುತ್ತದೆ, ಪ್ರೇಮಿಗಳಿಗೆ ಮಾದರಿ ಎನಿಸುತ್ತದೆ!
1999ರ ಕಾರ್ಗಿಲ್ ಯುದ್ಧ ಎನ್ನುತ್ತಲೇ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೆನಪಾಗುತ್ತಾರೆ, ಭಾರತದ ದಿಗ್ವಿಜಯ ನೆನಪಾಗುತ್ತದೆ, ವಿಶ್ವದ ಎದುರು ಭಾರತದ ಘನತೆ ಬಾನೆತ್ತರಕ್ಕೆ ಹೋಯಿತಲ್ಲ ಎಂಬುದು ಖುಷಿ ಕೊಡುತ್ತದೆ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆವಲ್ಲ ಎಂದು ಎದೆ ಉಬ್ಬುತ್ತದೆ.
ಇದೆಲ್ಲದಕ್ಕಿಂತ ಆತ್ಮೀಯವಾಗಿ ದೇಶಕ್ಕಾಗಿ ಮಡಿದ ಸೈನಿಕರು ನೆನಪಾಗುತ್ತಾರೆ, ಅದರಲ್ಲೂ ದೇಶಕ್ಕಾಗಿಯೇ ಮಡಿದ, ಹುತಾತ್ಮನಾಗಿ 19 ವರ್ಷ ಕಳೆದರೂ ವೀರತನಕ್ಕೆ ಹೆಸರಾದ ಕ್ಯಾಪ್ಟನ್ ವಿಕ್ರಮ್ ಭಾತ್ರಾ ನೆನಪಾಗುತ್ತಾನೆ ಹಾಗೂ ಕಣ್ಣಾಲಿಯಲ್ಲಿ ನೀರಿನ ಹನಿಗಳು ಇಣುಕುವಂತೆ ಮಾಡುತ್ತಾನೆ.
ಅಂತಹ ವಿಕ್ರಮ್ ಭಾತ್ರಾ ಕಾಲೇಜು ದಿನಗಳಲ್ಲಿ ಹೇಗಿದ್ದ? ಆತ ಇಷ್ಟಪಟ್ಟಿದ್ದ ಕೆಂದುಟಿಯ ಚೆಲುವೆ ಯಾರು? ಅವಳನ್ನು ಹೇಗೆ ಮದುವೆಯಾದ? ಚಿಗುರು ಮೀಸೆಯ ಆತ ತನ್ನ ಪ್ರೀತಿಯನ್ನು ಎರಡೂ ಕುಟುಂಬಗಳ ಜತೆ ಮಾತುಕತೆ ನಡೆಸಿ ಹೇಗೆ ಒಪ್ಪಿಸಿದ? ಈ ಎಲ್ಲ ಅಂಶಗಳೂ ರೋಚಕವೇ. ದೇಶಪ್ರೇಮ ಮಾತ್ರವಲ್ಲ, ಪ್ರಿಯತಮೆಯನ್ನೂ ಹೇಗೆ ಪ್ರೀತಿಸಬೇಕು, ಹೇಗೆ ಒಲಿಸಿಕೊಳ್ಳಬೇಕು ಎಂಬುದು ವಿಕ್ರಮ್ ಭಾತ್ರಾ ಲವ್ ಸ್ಟೋರಿಯಿಂದ ಗೊತ್ತಾಗುತ್ತದೆ.
ಹೌದು , ಅವು 1995ನೇ ಇಸವಿಯ ದಿನಗಳು. ಚಿಗುರು ಮೀಸೆಯ ವಿಕ್ರಂ ಭಾತ್ರಾ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಂಎ ಇಂಗ್ಲೀಷ್ ಓದುತ್ತಿದ್ದ. ಆತ ಶಿಸ್ತಿನಿಂದ ನಡೆದುಹೋದರೆ ಹುಡುಗಿಯರ ಎದೆಯಲ್ಲಿ ಪ್ರೀತಿಯ ಬಡಿತ ತುಸು ಜೋರಾಗಿಯೇ ಆಗುತ್ತಿತ್ತು. ಆದರೆ ವಿಕ್ರಂ ಭಾತ್ರಾ ಮಾತ್ರ ಮನಸೋತಿದ್ದು, ಡಿಂಪಲ್ ಚೀಮಾ ಎಂಬ ಚೆಲುವಿಗೆ.
ಎಲ್ಲರಂತೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಉನ್ನತ ಶಿಕ್ಷಣ ಪಡೆದ ಬಳಿಕ ನೌಕರಿ ಹಿಡಿದು ಜೀವನ ಸಾಗಿಸುವ ಕನಸು ಕಂಡಿದ್ದರು ಡಿಂಪಲ್ ಚೀಮಾ. ಆದರೆ, ಭಾತ್ರಾ ಕನಸೇ ಬೇರೆಯಾಗಿತ್ತು. ಆದ ದೇಶ ಸೇವೆ ಮಾಡುವ ಕನಸು ಕಂಡಿದ್ದ. ಆ ಕನಸಿಗೆ ಇಂಬು ನೀಡುವಂತೆ 1996ರಲ್ಲಿ ಡೆಹ್ರಾಡೂನ್ ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾದ. ಖಂಡಿತವಾಗಿಯೂ ಭಾರದ ಮನಸ್ಸಿನಿಂದ ಪ್ರಿಯತಮೆಯನ್ನು ಬಿಟ್ಟು ಅಕಾಡೆಮಿ ಸೇರಿದ್ದ.
ಹಾಗಂತ ವಿಕ್ರಂ ಭಾತ್ರಾ ಕಾಲೇಜಿನಲ್ಲಿ ಪ್ರೀತಿ ಪ್ರೀತಿ ಎಂದು ಡಿಂಪಲ್ ಜತೆ ತಿರುಗಾಡಿ ಸೈನ್ಯ ಸೇರಿದ ಬಳಿಕ ಯಾವುದನ್ನೂ ಮರೆತಿರಲಿಲ್ಲ. ಪತ್ರಗಳ ಮೂಲಕ ಡಿಂಪಲ್ ಚೀಮಾರ ಹೃದಯ ತಟ್ಟುತ್ತಿದ್ದ.
ಅದೊಂದು ದಿನ, ಕಾಕತಾಳೀಯ ಎಂಬಂತೆ ಗುರುದ್ವಾರದ ಮಾನಸಾ ದೇವಿ ದರ್ಶನಕ್ಕೆ ವಿಕ್ರಂ ಭಾತ್ರಾ ಮತ್ತು ಡಿಂಪಲ್ ಚೀಮಾ ತೆರಳಿದ್ದರಂತೆ. ಅಲ್ಲಿ, ಅದೇ ಸನ್ನಿಧಿಯಲ್ಲಿ “ಅಭಿನಂದನೆಗಳು ಮಿಸೆಸ್ ಭಾತ್ರಾ” ಎಂದಿದ್ದರಂತೆ ವಿಕ್ರಂ ಭಾತ್ರಾ. ಈ ಕುರಿತು ಡಿಂಪಲ್ ಚೀಮಾರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಇದಾದ ಬಳಿಕ ರಜೆಯಲ್ಲೆಲ್ಲ ವಿಕ್ರಂ ಭಾತ್ರಾ ಡಿಂಪಲ್ ರನ್ನು ಭೇಟಿಯಾಗುವುದು, ಸುತ್ತಾಡುವುದು ಮಾಡುತ್ತಿದ್ದ. ತನ್ನ ನಲ್ಲೆಗೆ ಉಡುಗೊರೆಯೊಂದು ತಂದು ಖುಷಿಪಡಿಸುತ್ತಿದ್ದ. ಆದರೆ ಒಂದು ದಿನ ಮಾತ್ರ ಡಿಂಪಲ್ ಬೇಗ ಮದುವೆಯಾಗು ಎಂದಿದ್ದರಂತೆ. ಆಗ ಥಟ್ಟನೇ ಬ್ಲೇಡಿನಿಂದ ಕೈ ಕುಯ್ದುಕೊಂಡ ಭಾತ್ರಾ ಸಿನಿಮಾ ಶೈಲಿಯಲ್ಲೇ ರಕ್ತದ ತಿಲಕವಿಟ್ಟು ಮದುವೆಯಾಗುತ್ತೇನೆ ಎಂದಿದ್ದನಂತೆ. ಎಂಥ ಪ್ರೇಮಿ ಅಲ್ಲವಾ?
ಮುಂದೆ, ವಿಕ್ರಂ ಭಾತ್ರಾ ಎರಡೂ ಕುಟುಂಬದವರನ್ನು ಒಪ್ಪಿಸಿ ಮದುವೆಯಾದ. ಆದರೆ ಕಾರ್ಗಿಲ್ ನ ಮೈಕೊರೆವ ಚಳಿ ಆತನನ್ನು ಕೈ ಬೀಸಿ ಕರೆಯುತ್ತಿತ್ತು. ಹೆಂಡತಿಯನ್ನು ಬಿಟ್ಟು ಆತ ಸೈನ್ಯ ಸೇರಲೇಬೇಕಿತ್ತು. ಅತ್ತ ಯುದ್ಧ ಘೋಷಣೆಯಾಗಿ, ಪಾಕಿಸ್ತಾನದ ಯುದ್ಧದಲ್ಲಿ ವಿಕ್ರಂ ಭಾತ್ರಾ ದೇಶಕ್ಕಾಗಿ ಸರ್ವೋತ್ತಮ ತ್ಯಾಗವಾದ ಪ್ರಾಣವನ್ನೇ ತ್ಯಾಗ ಮಾಡಿದ್ದರೆ, ಇಲ್ಲಿ ಡಿಂಪಲ್ ಚೀಮಾ ಭಾತ್ರಾ ಸಾವಿನ ಕೇಳಿ ಸ್ತಬ್ಧರಾಗಿ ಹೋಗಿದ್ದರು.
ಅಲ್ಲಿಗೆ ಒಂದು ಪ್ರೀತಿಯ ಕಥಾನಕ ಅರಳುವ ಮುನ್ನವೇ ಬಾಡಿ ಹೋಯಿತು. ಭಾತ್ರಾ ದೇಶಕ್ಕಾಗಿ ಪ್ರಾಣಕೊಟ್ಟು ಹುತಾತ್ಮನಾದರೆ, ಆತನ ಪ್ರೀತಿಯನ್ನೇ ಆತ್ಮವನ್ನಾಗಿಸಿಕೊಂಡ ಡಿಂಪಲ್ ಚೀಮಾ ಇಂದಿಗೂ ಕಾಲಕಳೆಯುತ್ತಿದ್ದಾರೆ. ಭಾತ್ರಾ ನೆನಪಿನಲ್ಲಿ. ಮೊನ್ನೆ ಫೆಬ್ರವರಿ 14 ಬಂದು ಹೋಯಿತಲ್ಲ, ಅದೇ ನೆಪದಲ್ಲಿ ವಿಕ್ರಂ ಭಾತ್ರಾರ ಸಾರ್ಥಕ ಪ್ರೇಮಕತೆಯೊಂದು ನೆನಪಾಯಿತು.
Leave A Reply