ಪಾಕಿಸ್ತಾನಕ್ಕಿದೋ ಮುಖಭಂಗ, ಕೊನೆಗೂ ಭಯೋತ್ಪಾದನೆಗೆ ಹಣ ಪೂರೈಕೆ ಮಾಡುವ ದೇಶಗಳ ಪಟ್ಟಿಗೆ ಸೇರ್ಪಡೆ
ಇಸ್ಲಾಮಾಬಾದ್: ಪಾಕಿಸ್ತಾನದ ಭಯೋತ್ಪಾದನೆ ಪೋಷಣೆಯನ್ನು ಶತಾಯ-ಗತಾಯ ಮಟ್ಟಹಾಕಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆ ಪೋಷಿತ ರಾಷ್ಟ್ರವೆಂದು ಬಿಂಬಿಸಲು ಪಣ ತೊಟ್ಟಿರುವ ಅಮೆರಿಕ, ತನ್ನ ಪ್ರಾಬಲ್ಯದ ಜಾಗತಿಕ ಹಣಕಾಸು ನಿಗಾಸಂಸ್ಥೆ ಮೂಲಕ ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡುವ ಪಟ್ಟಿಗೆ ಸೇರಿಸಿದೆ.
ಹೌದು, ಇತ್ತೀಚೆಗೆ ಪಾಕಿಸ್ತಾನ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಹಣ ಪೂರೈಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಜಾಗತಿಕ ಹಣಕಾಸು ಸಂಸ್ಥೆಯಾದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಜತೆ ಲಾಬಿ ನಡೆಸಿದ ಅಮೆರಿಕ ಈಗ ಪಾಕಿಸ್ತಾನವನ್ನು ಭಯೋತ್ಪಾದನೆಗೆ ಹಣ ಪೂರೈಸುವ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ.
ಇದರಿಂದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧದ ಮೇಲೆ ಇದು ಪರಿಣಾಮ ಬೀರಲಿದೆ ಎಂದೇ ಹೇಳಲಾಗುತ್ತಿದೆ. ಆದರೆ ಇದನ್ನು ಗಮನಿಸಿಕೊಂಡೇ ಅಮೆರಿಕ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆದಾಗ್ಯೂ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೂ ಮುನ್ನವೇ ನಾವು ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಅಧ್ಯಕ್ಷರಾದ ಬಳಿಕ ಅಂದು ನೀಡಿದ ಮಾತಿನಂತೆಯೇ ಭಯೋತ್ಪಾದಕ ಸಂಘಟನೆಗಳಿಗೆ ಹಣ ನೀಡುವ ಪಾಕಿಸ್ತಾನದ ವಿರುದ್ಧ ಸರಿಯಾಗಿಯೇ ಕ್ರಮ ಕೈಗೊಂಡಿದೆ.
ಇತ್ತೀಚೆಗೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿದ್ದ ಪಾಕಿಸ್ತಾನ ತಾನು ಉಗ್ರರ ಪರ ಎಂದು ಪರೋಕ್ಷವಾಗಿ ಘೋಷಿಸಿಕೊಂಡಿತ್ತು. ಆದರೆ ಇದಕ್ಕೆ ಅಮೆರಿಕ ಸರಿಯಾಗಿಯೇ ಛಾಟಿ ಬೀಸಿದ್ದು, ಪಾಕಿಸ್ತಾನದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡಿದೆ.
Leave A Reply