ಮೋದಿಯವರ ಸ್ವಚ್ಛ ಭಾರತ ಕಲ್ಪನೆಗೆ ಮಾರು ಹೋದ ಪೋರಿ, ರಾಯಚೂರು ಸ್ವಚ್ಛ ಭಾರತ ಮಿಷನ್ ಗೆ ಈಕೆಯೇ ರೂವಾರಿ!
ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುತ್ತಲೇ, ಸ್ವಚ್ಛ ಭಾರತ ಯೋಜನೆ ಜಾರಿಗೊಳಿಸುವ ಮೂಲಕ ದೇಶವನ್ನು ಸ್ವಚ್ಛಗೊಳಿಸುವ, ಕಸದಿಂದ ಮುಕ್ತಗೊಳಿಸುವ ಕಲ್ಪನೆಗೆ ನಾಂದಿ ಹಾಡಿದರು.
ಆಗ ಕೆಲವು ಮೋದಿ ವಿರೋಧಿಗಳು , ಕಾಂಗ್ರೆಸ್ಸಿಗರೂ ಯೋಜನೆ ಬಗ್ಗೆಯೇ ತಕರಾರು ತೆಗೆದಿದ್ದರು. ಈ ಯೋಜನೆ ಯಶಸ್ವಿಯಾಗಲ್ಲ ಎಂದು ಕೊಂಕು ನುಡಿದರು. ಆದರೆ ಪ್ರಧಾನಿ ಅಂದುಕೊಂಡಿದ್ದನ್ನು ಬಿಡಲಿಲ್ಲ. ಮೋದಿ ಪ್ರೇರಣೆಯಿಂದ ಅಮಿತಾಬ್ ಬಚ್ಚನ್ ಸೇರಿ ಹಲವು ಗಣ್ಯರು ಪೊರಕೆ ಹಿಡಿದು ಬೀದಿಗೆ ಬಂದರು. ರಸ್ತೆಯ ಕಸ ಗುಡಿಸಿದರು.
ಅಷ್ಟೇ ಏಕೆ, ದೇಶದ ಪ್ರಧಾನಿಯೇ ರೋಡಿಗೆ ಬಂದು ಪೊರಕೆ ಹಿಡಿದು ನಿಂತರೆ, ಜನ ಸುಮ್ಮನಿರುತ್ತಾರೆಯೇ? ಜನರೂ ತಮ್ಮ ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸಿದರು. ಆ ಮೂಲಕ ಪ್ರಧಾನಿ ಮೋದಿ ನೀಡಿದ ಕರೆಗೆ ಬೆಂಬಲವಾಗಿ ನಿಂತರು.
ಇಂತಹ ಸ್ವಚ್ಛ ಭಾರತ ಮಿಷನ್ ಅಥವಾ ಯೋಜನೆ ಈಗ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದಿದೆ. ಹೌದು, ರಾಯಚೂರು ಜಿಲ್ಲೆಯ ಏಳನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಜಿಲ್ಲಾಡಳಿತ ಸ್ವಚ್ಛ ಭಾರತ ಮಿಷನ್ ರಾಯಚೂರು ಜಿಲ್ಲೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಮಹತ್ತರ ನಿರ್ಧಾರ ಕೈಗೊಂಡಿದೆ.
ರಾಯಚೂರು ಜಿಲ್ಲೆಯ ಸಿರಗುಪ್ಪ ತಾಲೂಕಿನ ತಾಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಎಚ್.ಮಹಾಕಾಳಿಯೇ ಜಿಲ್ಲೆಯಲ್ಲಿ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾಳೆ.
ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತಳಾಗಿದ್ದ ಮಹಾಕಾಳಿ, ಮನೆ ಎದುರು ಶೌಚಾಲಯ ನಿರ್ಮಿಸಬೇಕು ಎಂದು ಪೋಷಕರಲ್ಲಿ ಒತ್ತಾಯಿಸಿದ್ದಳು. ಪೋಷಕರು ಒಪ್ಪದ ಕಾರಣ, ಎರಡು ದಿನ ಅನ್ನ, ನೀರು ಬಿಟ್ಟು ಕೊನೆಗೂ ಶೌಚಾಲಯ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಳು.
ಈ ಪುಟ್ಟ ಬಾಲಕಿಯ ಮಹೋನ್ನತ ಆಶಯ, ಸ್ವಚ್ಛ ಭಾರತ ಯೋಜನೆ, ಸ್ವಚ್ಛತೆ, ಮಹಿಳೆಯರಿಗೆ ಶೌಚಾಲಯದ ಕುರಿತು ಆಕೆಗಿರುವ ಅರಿವನ್ನು ಗುರುತಿಸಿ ಪ್ರಚಾರ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಾಲಕಿಗೊಂದು ಸಲಾಂ.
Leave A Reply