ಗಂಗಾಪೂಜೆ ಮುಗಿಸಿ ಚಿಕನ್ ಸುಕ್ಕ, ಅಂಜಲ್ ಪ್ರೈ ತಿಂದ ಶಾಸಕ, ಮೇಯರ್!!
ಪೂಜೆ ಮಾಡುವುದು, ಕೋಳಿ, ಮೀನು ಸವಿಯುವುದು, ನಾನ್ ವೆಜ್ ತಿಂದು ಗಡದ್ದಾಗಿ ತೇಗಿ ಕೈ ತೊಳೆದು ಧರ್ಮಸ್ಥಳಕ್ಕೆ ಬರೋದು ನಂತರ ಮಾಧ್ಯಮದವರು ಮೀನು ತಿಂದು ದೇವಸ್ಥಾನಕ್ಕೆ ಹೋದ್ರಾ ಎಂದು ಕೇಳಿದರೆ ಬರಿ ಮೀನು ಅಲ್ಲ ಕಣ್ರೀ, ಚಿಕನ್ ಕೂಡ ತಿಂದೇ ದೇವಸ್ಥಾನಕ್ಕೆ ಹೋಗಿದ್ದು ಎಂದು ಹೇಳುವ ಮುಖ್ಯಮಂತ್ರಿಯೊಬ್ಬರನ್ನು ಎದುರಿಗೆ ಇಟ್ಟು ಅವರ ಕೆಳಗೆ ಆಡಳಿತ ಮಾಡುವ ಉಳಿದವರು ಹೇಗಿರ್ತಾರೆ, ಅವರ ಹಾಗೆ ಇರ್ತಾರೆ. ಯಥಾ ಸಿಎಂ, ತಥಾ ಶಾಸಕ, ಮೇಯರ್. ಇವರ ಕೈಯಲ್ಲಿ ಗಂಗಾ ಪೂಜೆ ಮಾಡಿಸಿಕೊಳ್ಳುವ ಕರ್ಮ ನಮ್ಮ ನೇತ್ರಾವತಿದು.
ತುಂಬೆಯಲ್ಲಿ ಡ್ಯಾಂ ಹಿಂದೆ ನಿಂತು ನಮಗೆ ನೀರುಣಿಸಲು ತಯಾರಾಗಿ ತಾಯಿ ಪ್ರೀತಿ ತೋರುವ ನೇತ್ರಾವತಿಯ ಬಗ್ಗೆ ನಮಗೆ ಯಾವಾಗಲೂ ಭಕ್ತಿಬಾವ ಇದ್ದೇ ಇರುತ್ತದೆ. ಅರ್ಜೆಂಟ್ ಬಾಯಾರಿಕೆ ಆಗಿ ಜೀವ ಹೋಗುತ್ತೆ ಎನ್ನುವ ಸ್ಥಿತಿಯಲ್ಲಿದ್ದವನಿಗೆ ಆ ಒಂದು ಗ್ಲಾಸ್ ನೀರಿನ ಮಹತ್ವ ಗೊತ್ತಿದೆ. ಅಡುಗೆಗೆ ನೀರು ಇಲ್ಲದಿದ್ದರೆ ಪಕ್ಕದ ರಸ್ತೆಯಲ್ಲಿರುವ ಬಾವಿಯಿಂದ ನೀರು ಸೇದಿ ಮನೆಗೆ ತರುವುದು ಅದೆಷ್ಟು ಕಷ್ಟ ಎಂದು ಗೃಹಿಣಿಗೆ ಮಾತ್ರ ಗೊತ್ತಿದೆ. ಇದ್ಯಾವುದೋ ಗೊತ್ತಿಲ್ಲದ ಕೆಎಎಸ್ ಮತ್ತು ಮಾನವೀಯತೆ ಮರೆತು ಸೆಕ್ಯೂರಿಟಿಯವನ ಮಗುವಿಗೆ ಹೊಡೆದವರಿಗೆ ತುಂಬೆಯಲ್ಲಿರುವ ನೇತ್ರಾವತಿ ಎಂದರೆ ಅದೊಂದು ನೀರಿನ ಸಂಗ್ರಹ ಅಷ್ಟೇ. ಯಾರೋ ಹಿಂದಿನವರು ತುಂಬೆ ಡ್ಯಾಂ ಆಗುವಾಗ ಮಂಗಳೂರಿಗೆ ನೀರು ಕರುಣಿಸುವ ತಾಯಿ ನೇತ್ರಾವತಿಗೆ ವರ್ಷಕ್ಕೆ ಎರಡು ಸಲ ತಪ್ಪದೆ ನೆನಪಿಸಿಕೊಳ್ಳಬೇಕು ಎಂದು ಪ್ರಾರಂಭಿಸಿದ ಸಂಪ್ರದಾಯವೊಂದು ಈಗ ಕಾಟಾಚಾರಕ್ಕೆ ಮಾಡಿದ್ದೇವೆ ಎಂದು ದಾಖಲೆಗಳಲ್ಲಿ ತೋರಿಸುವುದಕ್ಕೆ ಸೀಮಿತವಾಗಿದೆ. ಇವತ್ತು ಕೂಡ ಹಾಗೆ ಆಗಿದೆ. ಗಂಗಾಪೂಜೆಯ ಹೆಸರಿನಲ್ಲಿ ತುಂಬೆಯ ವೆಂಟೆಂಡ್ ಡ್ಯಾಂ ಮೇಲೆ ದೊಂಬರಾಟ ಮಾಡಲು ಶಾಸಕ ಜೆ ಆರ್ ಲೋಬೋ, ಮೇಯರ್ ಕವಿತಾ ಸನಿಲ್ ಹಾಗೂ ಅವರ ಪಟಾಲಾಂ ಹೊರಟಿದೆ. ಪೂಜೆಯನ್ನು ಪುರೋಹಿತರು ಧಾರ್ಮಿಕ ವಿಧಿವಿಧಾನಗಳ ಮೂಲಕ ಮುಗಿಸಿ ಈಚೆ ತಿರುಗಿದ್ದೇ ತಡ, ಅಂಜಲ್ ಪ್ರೈ ಎಣ್ಣೆಗೆ ಬಿಡುವ ಶಬ್ದ ಎಲ್ಲರ ಕಿವಿಗೆ ಬಡಿದಿದೆ. ಅದರೊಂದಿಗೆ ಮೊದಲೇ ತಯಾರಿಸಿದ್ದ ಚಿಕನ್ ಸುಕ್ಕ ನೋಡಿದ ಕೂಡಲೇ ಅಲ್ಲಿದ್ದವರು ತಾವು ಬಂದದ್ದು ಗಂಗಾ ಪೂಜೆಗಾ ಅಥವಾ ರಿಸೆಪ್ಷನ್ ಊಟಕ್ಕಾ ಎಂದು ಮರೆತಿದ್ದಾರೆ. ಎಷ್ಟೋ ಜನ ಪೂಜೆಯ ಆರತಿ ತೆಗೆದುಕೊಂಡರೋ ಇಲ್ಲವೊ ತಟ್ಟೆ ಹಿಡಿದು ಅಂಜಲ್ ಪ್ರೈ ಹಾಕಿಸಿಕೊಂಡು ಮಜಾ ಉಡಾಯಿಸಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ಈ ಮಾಂಸಹಾರಿ ಊಟದ ಅಷ್ಟೂ ಖರ್ಚು ಕೊಡುವುದು ನಮ್ಮ ತೆರಿಗೆಯ ಹಣದಿಂದ. ಅದು ಹೋಗಲಿ, ಆದರೆ ಕನಿಷ್ಟ ತಾವು ಬಂದದ್ದು ಯಾವ ಕಾರ್ಯಕ್ಕೆ ಎನ್ನುವುದಾದರೂ ನೆನಪಿಗೆ ಬರುವುದು ಬೇಡವಾ?
ಮೇಯರ್ ಮನೆಯಲ್ಲಿ ಆದ್ರೆ ಹೀಗೆ ಮಾಡುತ್ತಿದ್ದರಾ….
ಬಹುಶ: ಇವರು ಎಲ್ಲರನ್ನು ಆಮಂತ್ರಿಸುವಾಗಲೇ “ಎಲ್ಲೆ ತುಂಬೆಗ್ ಬಲೆ, ಎಡ್ಡೆ ಒಣಸುಂಡು” ಎಂದು ಕರೆಯುವುದರಿಂದ ಅಲ್ಲಿ ಗಂಗಾ ಪೂಜೆ ಎನ್ನುವುದು ಕೇವಲ ತೋರಿಕೆಗೆ ಬಿಲ್ ನಲ್ಲಿ ಮಾತ್ರ ಸೀಮಿತವಾಗಿದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗೆ ವಿಶೇಷ ಸ್ಥಾನಮಾನವಿದೆ. ಕವಿತಾ ಸನಿಲ್ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟು ಬಂದವರಿಗೆ ಚಿಕನ್ ಸುಕ್ಕ, ಫಿಶ್ ಪ್ರೈ ಊಟ ಇಡುತ್ತಾರಾ? ಇಟ್ಟರೆ ಬಂದ ಹಿರಿಯ ಅತಿಥಿಗಳು ಅವರಿಗೆ ಏನೂ ಹೇಳದೆ ಉಂಡು ಹೋಗುತ್ತಾರಾ? ಹೇಗೆ ನಾವು ಮನೆ, ಮನೆಯ ಎದುರಿನ ದೇವಸ್ಥಾನ, ಪಕ್ಕದ ಬೀದಿಯ ಸತ್ಯನಾರಾಯಣ ಪೂಜೆಗೆ ಹೋದವರು ಇವತ್ತು ಊಟಕ್ಕೆ ನಾನ್ ವೆಜ್ ಇದೆಯಾ ಎಂದು ಕೇಳುವುದಿಲ್ಲವೋ ಹಾಗೆ ನಮ್ಮ ಊರಿಗೆ ಕಾಮಧೇನು ಆಗಿರುವ ನೇತ್ರಾವತಿಗೆ ಪೂಜೆ ಮಾಡುವ ವಿಷಯ ಬಂದಾಗ ನಿಮಗೆ ಏನು ಆಗುತ್ತಾ? ನಾನು ಕಟೀಲಿಗೆ ನಡೆದುಕೊಂಡು ಹೋಗುತ್ತೇನೆ ಎಂದು ಫೋಟೋ ಸಹಿತ ಪತ್ರಿಕೆಗಳಲ್ಲಿ ಹಾಕುವ ಮೇಯರ್ ಕವಿತಾ ಸನಿಲ್ ಅವರೇ ಗಂಗಾಪೂಜೆ ಎನ್ನುವುದು ನಿಮಗೆ ಅಷ್ಟು ಕೇವಲ ಆಯಿತಾ? ಶಾಸಕ ಲೋಬೋ ಅವರೇ, ನೀವು ಬೇಕಾದರೆ ವಾರಕ್ಕೆ ಏಳು ದಿನವೂ ಮಾಂಸ ಸೇವಿಸಿ ಆದರೆ ಇಂತಹ ಪೂಜೆಗೆ ಬರುವಾಗ ಕನಿಷ್ಟ ಬೇರೆಯವರ ಫಿಲಿಂಗ್ ಗಾದರೂ ಬೆಲೆ ಕೊಡಿ. ಒಂದು ಸಮಾಧಾನ ಎಂದರೆ ಈ ಮೋಜು ಮಸ್ತಿಯ ಕಾಂಗ್ರೆಸ್ ನಾಟಕಕ್ಕೆ ಈ ಬಾರಿ ಒಬ್ಬನೇ/ಳೇ ಒಬ್ಬ ಭಾರತೀಯ ಜನತಾ ಪಾರ್ಟಿಯ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಭಾಗಿಯಾಗಿರಲಿಲ್ಲ. ಅರವತ್ತು ಸದಸ್ಯರಲ್ಲಿ ಬಂದದ್ದು ಕಾಂಗ್ರೆಸ್ಸಿನ ಕಾರ್ಫೋರೇಟರ್ ಗಳಲ್ಲಿ ಇಪ್ಪತ್ತು ಜನ ಮಾತ್ರ.
ಬಾಗಿನ ಅರ್ಪಿಸಲು ಬರುವಾಗ ಮುಂದೆ ಯಾರಿರುತ್ತಾರೋ…
ಇವರ ಈ ರೀತಿಯ ಮಾಂಸದ ಊಟದ ತೆವಲಿಗೆ ನೇತ್ರಾವತಿಯ ಗಂಗಾಪೂಜೆ ಬಲಿಯಾದದ್ದು ಮಾತ್ರ ವಿಪರ್ಯಾಸ. ಇದೇ ನೇತ್ರಾವತಿಗೆ ಎರಡು-ಮೂರು ತಿಂಗಳ ಬಳಿಕ ಒಂದು ದಿನ ಬಾಗಿನ ಅರ್ಪಿಸುವ ಕ್ರಮ ಇದೆ. ಆ ದಿನ ಉಸ್ತುವಾರಿ ಸಚಿವರು, ಶಾಸಕರು, ಮೇಯರ್ ಮತ್ತೆ ಅಲ್ಲಿಗೆ ಹೋಗಲಿದ್ದಾರೆ. ಇವತ್ತಿನ ಮೀನಿನ, ಚಿಕನ್ ಸುಕ್ಕದ ಘಾಟು ವಾಸನೆ ಆವತ್ತು ಕೂಡ ಮರುಕಳಿಸುತ್ತಾ ಎನ್ನುವುದು ಪ್ರಶ್ನೆ. ನೇತ್ರಾವತಿಗೆ ಇವರ ಅಸಹ್ಯ ಕಂಡು ಕೋಪ ಬಂದು ನಾಡಿದ್ದು ಬಾಗಿನ ಅರ್ಪಿಸಲು ಬರುವಾಗ ನಮ್ಮ ಸಂಸ್ಕೃತಿ, ಆಚಾರ ಗೊತ್ತಿದ್ದವರೆ ಆಯ್ಕೆ ಆಗಿ ಬರಲಿ ಎಂದು ಹಾರೈಸಿದರೆ ಅಲ್ಲಿನ ವಸ್ತುಸ್ಥಿತಿ ಬದಲಾಗಿರುತ್ತದೆ. ನೇತ್ರಾವತಿಯ ಮನದಲ್ಲಿ ಏನಿದೆಯೋ!
Leave A Reply