ಬಿಜೆಪಿ ಹಾಕಿದ ಬಂಟಿಂಗ್ಸ್, ಫ್ಲೆಕ್ಸ್ ತೆರವುಗೊಳಿಸಲು ಮುಂದಾದ ಪಾಲಿಕೆ ಕಮೀಷನರ್ ನಝೀರ್!!
ಮಂಗಳೂರಿನಲ್ಲಿ ಇನ್ನು ಮುಂದೆ ಹೊಸ ನಿಯಮವನ್ನು ತರಲು ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಮೊಹಮ್ಮದ್ ನಝೀರ್ ಅವರು ಯೋಚಿಸಬಹುದು. ಅದೇನೆಂದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನವರ ಫ್ಲೆಕ್ಸ್, ಹೋರ್ಡಿಂಗ್ಸ್, ಬಂಟಿಂಗ್, ಬ್ಯಾನರ್, ಕಟೌಟ್ ಇದಕ್ಕೆ ಮಾತ್ರ ಅವಕಾಶ. ಭಾರತೀಯ ಜನತಾ ಪಾರ್ಟಿಯವರ ಯಾವುದೇ ಇಂತಹ ಪ್ರಚಾರಕ್ಕೆ ಅವಕಾಶ ಇಲ್ಲ ಎಂದು ಹೊಸ ನಿಯಮವನ್ನು ಅವರು ತರಲಿದ್ದಾರೆ. ಅದಕ್ಕಾಗಿ ಅವರು ಸ್ವತ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. ಸರ್, ದಯವಿಟ್ಟು ಬಿಜೆಪಿಯವರು ಏನೇ ಬಂಟಿಂಗ್, ಫ್ಲೆಕ್ಸ್, ಪಕ್ಷದ ಧ್ವಜ ಹಾಕಿದರೂ ಅದನ್ನು ಕಿತ್ತೊಗೆಯಲು ಅವಕಾಶ ಕೊಡಿ. ಕಾಂಗ್ರೆಸ್ ನವರು ಹಾಕಿದ್ರೆ ನಾವೇ ಬೇಕಾದರೆ ಪಾಲಿಕೆ ಕಡೆಯಿಂದ ಒಂದೊಂದು ಫ್ಲೆಕ್ಸ್, ಬಂಟಿಂಗ್ ಗೆ ಸುರಕ್ಷತೆ ಕೊಡುತ್ತೇವೆ ಎಂದು ಪಾಲಿಕೆ ಕಮೀಷನರ್ ಅವರು ಹೇಳುವ ಸಾಧ್ಯತೆ ಇದೆ.
ಇವತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳೂರಿಗೆ ಬರುವ ಬಿಜೆಪಿಯವರ ಪಾಲಿಗೆ ಬಹಳ ದೊಡ್ಡ ಕಾರ್ಯಕ್ರಮ. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರು ಸಹಜವಾಗಿ ಸಂಭ್ರಮದಲ್ಲಿದ್ದಾರೆ. ಹೇಳಿ, ಕೇಳಿ ಭಾರತದ ಅತೀ ದೊಡ್ಡ ರಾಜ್ಯದ ಚುನಾಯಿತ ಸರಕಾರದ ಮುಖ್ಯಸ್ಥ ಎಂದ ಮೇಲೆ ಅವರಿಗೆ ಕೊಡುವ ಗೌರವ ದುಪ್ಪಟ್ಟಿರುತ್ತದೆ. ಯಾವುದೋ ಮನೆತನದ ಹೆಸರಿನಲ್ಲಿ ವಂಶಪಾರಂಪರೆಯಾಗಿ ಏನೂ ಸಾಧಿಸದೆ ಒಬ್ಬ ವ್ಯಕ್ತಿಗೆ ರಾಷ್ಟ್ರೀಯ ಅಧ್ಯಕ್ಷ ಮಾಡುವ ಪಕ್ಷಗಳಿರುವಾಗ ಯೋಗಿ ಆದಿತ್ಯನಾಥ ಅವರದ್ದು ಸಾಧನೆ ಬೇರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗಿಂತ ದೊಡ್ಡದು. ಹಾಗಾಗಿ ಒಂದಿಷ್ಟು ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಹೆಚ್ಚೆ ಬಿದ್ದಿರಬಹುದು. ಆದರೆ ಇವತ್ತು ಸಂಜೆ ಮಂಗಲೂರಿನ ಕೇಂದ್ರ ಮೈದಾನದಲ್ಲಿ ಇರುವ ಸಮಾರೋಪ ಸಮಾರಂಭ ಕಾರ್ಯಕ್ರಮ ಮುಗಿದು ನಾಳೆ ಬೆಳಿಗ್ಗೆ ಅದನ್ನು ಹಾಕಿದವರೇ ತೆರವುಗೊಳಿಸಲಿದ್ದರು. ಯಾಕೆಂದರೆ ಅದು ಸಂಘಪರಿವಾರ ಕಲಿಸಿಕೊಟ್ಟ ಶಿಸ್ತು. ಆದರೆ ಕಾರ್ಯಕ್ರಮ ಪ್ರಾರಂಭವಾಗಲು ಕೆಲವೇ ಗಂಟೆಗಳಿರುವಾಗ ನಮ್ಮ ಪಾಲಿಕೆ ಕಮೀಷನರ್ ನಝೀರ್ ಅವರು ರಂಗಕ್ಕೆ ಇಳಿದಿದ್ದಾರೆ. ಬಿಜೆಪಿಯವರು ಹಾಕಿರುವ ಎಲ್ಲ ಬ್ಯಾನರ್, ಬಂಟಿಂಗ್ಸ್ ಗಳನ್ನು ತೆಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಗುರಿಯಾಗಿದೆ. ಕೇಳಿದ್ರೆ ನಝೀರ್ ಅವರು ತಮಗೆ ಜಿಲ್ಲಾಧಿಕಾರಿಗಳ ಸೂಚನೆ ಇದೆ ಎನ್ನುತ್ತಿದ್ದಾರೆ. ಬನ್ನಿ, ನಿಮಗೆ ನಿಜವಾಗಿ ಇರುವ ಕಾನೂನಿಗೆ ಬಗ್ಗೆ ಹೇಳುತ್ತೇನೆ.
ಲೋಬೋ ಕಾನೂನು ಉಲ್ಲಂಘಿಸಿದರೆ ಪರವಾಗಿಲ್ವ….
ಕರ್ನಾಟಕ ರಾಜ್ಯ ಸರಕಾರವು ಪ್ಲೆಕ್ಸ್, ಬಂಟಿಂಗ್, ಹೋರ್ಡಿಂಗ್ಸ್, ಕಟೌಟ್ ಗೆ ಬಳಸುವ ಪ್ಲಾಸ್ಟಿಕ್ ಮತ್ತು ಅದಕ್ಕೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ನಿಷೇಧಿಸಿದೆ. ಅದನ್ನು ಬಳಸಿ ಫ್ಲೆಕ್ಸ್ ಹಾಕಿದರೆ ಅದು ಶುದ್ಧ ತಪ್ಪು. ಆದರೆ ಪಾಲಿಕೆಯ ಕಮೀಷನರ್ ಆಗಿದ್ದ ನಮ್ಮ ಈಗಿನ ಶಾಸಕ ಜೆ ಆರ್ ಲೋಬೋ ಅವರು ಸರಕಾರ ನಿಷೇಧಿಸಿದ ವಸ್ತುಗಳನ್ನೇ ಬಳಸಿ ಮಾಡಿರುವ ಫ್ಲೆಕ್ಸ್, ಹೋರ್ಡಿಂಗ್ಸ್ ಗಳನ್ನು ಮಂಗಳೂರಿನ ಇದ್ದಬದ್ದ ಕಡೆಗಳಲ್ಲಿ ನಿಲ್ಲಿಸಿ ತಮ್ಮ ಪ್ರಚಾರ ಮಾಡುತ್ತಿದ್ದಾರೆ. ಅದನ್ನು ತೆಗೆಯಲು ಬಿಡಿ, ಮುಟ್ಟಲು ಕೂಡ ಈಗಿನ ಕಮೀಷನರ್ ನಝೀರ್ ಅವರಿಗೆ ಧೈರ್ಯವಿಲ್ಲ. ಅದೇ ಬಿಜೆಪಿಯವರು ಹಾಕಿರುವ ಫ್ಲೆಕ್ಸ್, ಬಂಟಿಂಗ್ಸ್, ಕಟೌಟ್ ಗಳು ಬಟ್ಟೆಯಿಂದ ಮಾಡಿರುವುದು. ಅಂದರೆ ಯಾವುದೇ ನಿಷೇಧಕ್ಕೆ ಒಳಗಾಗಿರುವ ವಸ್ತುಗಳಿಂದ ಮಾಡಿದ್ದು ಅಲ್ಲ. ಅವುಗಳಿಂದ ಪರಿಸರಕ್ಕೆ ಹಾನಿ ಇಲ್ಲ. ಅವು ನಾಲ್ಕು ದಿನಗಳ ಹಿಂದೆ ಹಾಕಿ ನಾಳೆ ತೆಗೆಯುವಂತದ್ದು. ಅದನ್ನು ತೆಗೆಯಲು ನಝೀರ್ ಅವರು ತೋರಿಸುವ ಆಸಕ್ತಿ ಲೋಬೋ ಅವರ ಫ್ಲೆಕ್ಸ್ ಗಳ ಬಗ್ಗೆ ಯಾಕೆ ಇಲ್ಲ. ಲೋಬೋ ಅವರು ತಾವು ಮಾಡಿದ, ಮಾಡಿಲ್ಲದ ಸಾಧನೆಗಳಿಗೆ ನಿಷೇಧಿತ ವಸ್ತುಗಳನ್ನು ಬಳಸಿ ಫ್ಲೆಕ್ಸ್ ಮಾಡಿ ಹಾಕಿದರೆ ಅದು ಸರಿಯಾ? ಬಿಜೆಪಿಯವರು ಬಟ್ಟೆಯಿಂದ ಮಾಡಿರುವ ಫ್ಲೆಕ್ಸ್, ಬಂಟಿಂಗ್ಸ್ ತಪ್ಪಾ?
ಕೊನೆಯ ಕ್ಷಣ ತೆಗೆಯುವ ಅವಶ್ಯಕತೆ ಏನಿತ್ತು…
ಇನ್ನು ಧಾರ್ಮಿಕ, ರಾಜಕೀಯ ಫ್ಲೆಕ್ಸ್, ಬಂಟಿಂಗ್, ಧ್ವಜ ಗಳನ್ನು ಹಾಕಲು ಯಾವುದೇ ಶುಲ್ಕ ಕಟ್ಟಬೇಕಾಗಿಲ್ಲ. ಅವು ಫ್ರೀ. ಒಂದು ವೇಳೆ ಪಾಲಿಕೆಯ ಕಮೀಷನರ್ ಅವರಿಗೆ ಬಿಜೆಪಿಯವರ ಫ್ಲೆಕ್ಸ್, ಬಂಟಿಂಗ್ಸ್, ಪಕ್ಷದ ಕೇಸರಿ,ಹಸಿರು ಧ್ವಜಗಳು ಕಣ್ಣಿಗೆ ಕುಕ್ಕುತ್ತವೆ ಎಂದರೆ ಅವರು ಅದು ಬಂದು ಅಲ್ಲಿ ಹಾಕುವಾಗಲೇ ಸಂಬಂಧಪಟ್ಟವರಿಗೆ ನೋಟಿಸ್ ಕೊಡಬೇಕಿತ್ತು. ತೆಗೆಯಲು ಹೇಳಬೇಕಿತ್ತು. ಆದರೆ ಅದು ಮಾಡದೇ ಪಾದಯಾತ್ರೆಯ ರ್ಯಾಲಿ ಇನ್ನೇನೂ ಕೇಂದ್ರ ಸ್ಥಳಕ್ಕೆ ಬರಬೇಕು ಎನ್ನುವಾಗಲೇ ಎಲ್ಲಾ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ತೆಗೆಯಲು ಮುಂದಾಗಿದ್ದಾರೆ ಎಂದರೆ ಅದರ ಹಿಂದಿರುವ ಉದ್ದೇಶ ಏನಿರಬಹುದು?
ನಝೀರ್ ಅವರೇ ನೀವು ಪಾಲಿಕೆಯ ಕಮೀಷನರ್ ಹುದ್ದೆಯಲ್ಲಿ ಕುಳಿತುಕೊಳ್ಳಲು ಅರ್ಹರು ಹೌದೋ, ಅಲ್ವೋ ಎನ್ನುವುದರ ಕುರಿತು ಹಿಂದೆನೆ ಸಾಕಷ್ಟು ಬರೆದಿದ್ದೆ. ಯಾವುದೋ ವಿಬಾಗದಲ್ಲಿರಬೇಕಾದ ನಿಮ್ಮನ್ನು ಕಾಂಗ್ರೆಸ್ಸಿನವರು ತಮ್ಮ ಪಕ್ಷದ ಮಾಜಿ ಸಚಿವರ ಅಳಿಯ ಎನ್ನುವ ಕಾರಣಕ್ಕೆ ಕಮೀಷನರ್ ಹುದ್ದೆ ಕೊಟ್ಟಿರಬಹುದು. ಹಾಗಂತ ನೀವು ಈ ರೀತಿ ದ್ವೇಷದ ರಾಜಕಾರಣ ಮಾಡುವಂತೆ ವರ್ತಿಸಬಾರದು. ಈ ಹಿಂದೆ ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಮಂಗಳೂರಿಗೆ ಬರುವಾಗ ಅನೇಕ ಫ್ಲೆಕ್ಸ್ ಗಳು ಎದ್ದು ನಿಂತಿವೆ. ಆಗ ನಿಮಗೆ ಜಿಲ್ಲಾಧಿಕಾರಿಗಳ ಸೂಚನೆ ಇರಲಿಲ್ಲವೇ. ಎಲ್ಲಿಯ ತನಕ ಎಂದರೆ ಹಂಪನಕಟ್ಟೆ, ಹಳೆ ಕ್ಲಾರ್ಕ್ ಟವರ್, ಸ್ಟೇಟ್ ಬ್ಯಾಂಕ್, ಲೇಡಿಹಿಲ್ ಸರ್ಕಲ್, ಆರ್ ಟಿಒ, ಲಾಲ್ ಭಾಗ್ ಇಲ್ಲಿ ಯಾವುದೇ ಫ್ಲೆಕ್ಸ್, ಬಂಟಿಂಗ್ಸ್ ಕಟ್ಟುವಂತಿಲ್ಲ. ಆದರೆ ಕಾಂಗ್ರೆಸ್ ನವರು ಈ ಹಿಂದೆ ಇದೇ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ತಮ್ಮ ಪಕ್ಷದ ಪ್ರಚಾರ ಮಾಡಿದ್ದಾರೆ. ಒಂದು ವೇಳೆ ಜಿಲ್ಲಾಧಿಕಾರಿಗಳು ನಿಮಗೆ ಈಗ ಸೂಚನೆ ಕೊಟ್ಟು ತೆಗೆಸುತ್ತಿದ್ದಾರೆಂದರೆ ಇದು ನಾಲ್ಕು ದಿನ ಮೊದಲು ಹಾಕುವಾಗಲೇ ತಪ್ಪು ಎಂದು ನಿಮಗೆ ಗೊತ್ತಿಲ್ಲವೇ? ಅವರು ಹೇಳಿದ ಮೇಲೆ ತಪ್ಪು ಎಂದು ನಿಮಗೆ ಗೊತ್ತಾಗುವುದಾದರೆ ನೀವು ಅದೆಂತಹ ಕಮೀಷನರ್?
Leave A Reply