ಕೊನೆಗೂ ಮೊಯಿಲಿ ಸಂಬಂಧಿಗೆ ಒಲಿದ ತಂತಿ ಮೇಲೆ ನಡೆಯುವ ಅಂತಿಮ ಕಸರತ್ತು!!
ಚುನಾವಣಾ ವರ್ಷದ ಮೇಯರ್ ಅಂದರೆ ಕಾಂಗ್ರೆಸ್ ಆಡಳಿತದ ಕೊನೆಯ ಅವಧಿಯ ಮಹಾಪೌರರಾಗಿ ಭಾಸ್ಕರ್ ಮೊಯಿಲಿ ಆಯ್ಕೆಯಾಗಿದ್ದಾರೆ. ಇದು ಯಾವುದೇ ಮೇಯರ್ ಅವರಿಗೂ ನಿಜಕ್ಕೂ ಹೆಚ್ಚು ಚಾಲೆಂಜ್ ಆಗಿರುವ ಅವಧಿ. ಯಾಕೆಂದರೆ ಹೆಚ್ಚಿನ ಸಂದರ್ಭದಲ್ಲಿ ಹೀಗೆ ಮೇಯರ್ ಆದವರು ತಾವು ಜನರ ಮೇಯರ್ ಎನ್ನುವುದನ್ನು ಮರೆತು ತಮ್ಮ ಪಕ್ಷದ ಮೇಯರ್ ತರಹ ವರ್ತಿಸುತ್ತಾರೆ. ಕಳೆದ ಹತ್ತು ವರುಷಗಳಲ್ಲಿ ಈ ಸವಾಲು ಅಥವಾ ಅವಕಾಶ ಭಾರತೀಯ ಜನತಾ ಪಾರ್ಟಿಯವರಿಗೆ ಸಿಕ್ಕಿರಲಿಲ್ಲ. ಯಾಕೆಂದರೆ ಕಳೆದ ಬಾರಿ ಕೊನೆಯ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ಸಿನ ಗುಲ್ಜಾರ್ ಬಾನು ಮೇಯರ್ ಆಗಿದ್ದರು. ಹಾಗೆ ಈ ಬಾರಿ ಕಾಂಗ್ರೆಸ್ ಆಡಳಿತದಲ್ಲಿ ಹಿರಿಯ ಮನಪಾ ಸದಸ್ಯ, ದೇವಾಡಿಗ ಸಮುದಾಯದ ಭಾಸ್ಕರ್ ಮೊಯಿಲಿ ಆಂತರಿಕ ಚುನಾವಣೆಯಲ್ಲಿ ಆಯ್ಕೆ ಆಗಿದ್ದಾರೆ. ಈ ಮೂಲಕ ರಮಾನಾಥ್ ರೈ ಅವರ ಆಪ್ತ ರವೂಫ್ ಹಾಗೂ ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ನವೀನ್ ಡಿಸೋಜಾ ಅವರನ್ನು ಸೈಡ್ ಗೆ ತಳ್ಳಿದ್ದಾರೆ. ಬಹುಶ: ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ ತಮ್ಮ ಆಪ್ತನಿಗೆ ಮೊದಲು ವಿಶ್ ಮಾಡಿರಲೂಬಹುದು.
ರಾಹುಲ್ ಗಾಂಧಿಯವರ ಸಾಫ್ಟ್ ಹಿಂದೂತ್ವ ಅಥವಾ ಅವಕಾಶವಾದಿ ಹಿಂದೂತ್ವದ ಕಡೆ ವಾಲುತ್ತಿರುವ ಕಾಂಗ್ರೆಸ್ ಈ ಬಾರಿ ಮುಸ್ಲಿಮರಿಗೆ ಮೇಯರ್ ಕೊಡಬೇಕು ಎಂದು ಮೂಗಿನ ತನಕ ಮನಸ್ಸಿದ್ದರೂ ಕೊಡಲು ಹಿಂದೇಟು ಹಾಕಿದ್ದು ಭಾಸ್ಕರ್ ಮೊಯಿಲಿ ಅವರಿಗೆ ವರದಾನವಾಗಿದೆ. ಇದೇ ಪರಿಸ್ಥಿತಿ ಒಂದೆರಡು ಅವಧಿಯ ಮೊದಲು ಬಂದಿದ್ದರೆ ಗ್ಯಾರಂಟಿಯಾಗಿ ಒಬ್ಬರು ಮುಸ್ಲಿಂ ಸದಸ್ಯನೇ ಪಾಲಿಕೆಯಲ್ಲಿ ಮೇಯರ್ ಆಗಿರುತ್ತಿದ್ದರು. ಒಟ್ಟಿನಲ್ಲಿ ಮುಸ್ಲಿಮರ 12 ವರ್ಷಗಳ ವನವಾಸ ಈ ಬಾರಿಯೂ ಈಡೇರಿಲ್ಲ ಎನ್ನುವುದು ಅವರಿಗೆ ತುಂಬಾ ಬೇಸರದ ವಿಷಯ. ರವೂಫ್ ಮೇಯರ್ ಆಗದಿದ್ದರೂ ಮುಸ್ಲಿಮರು ಕೋಪಿಸಿಕೊಳ್ಳಬಾರದೆಂಬ ಕಾರಣಕ್ಕೆ ಮೊಹಮ್ಮದ್ ಕುಂಜತ್ತಬೈಲ್ ಅವರನ್ನು ಉಪಮೇಯರ್ ಮಾಡುವ ಮೂಲಕ ಬಾಯಿಗೆ ಬೆಣ್ಣೆ ಹಾಕದಿದ್ದರೂ ಮೊಣಕೈಗೆ ಬೆಣ್ಣೆ ತಾಗಿಸಿ ಕಾಂಗ್ರೆಸ್ ಜಿಲ್ಲಾ ವರಿಷ್ಟರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ರವೂಫ್ ಅವರ ಪಾಲಿನ ನಷ್ಟ ಮೊಹಮ್ಮದ್ ಪಾಲಿಗೆ ಸರಕಾರಿ ಕಾರು ಸಿಗುವಲ್ಲಿಗೆ ಮುಸ್ಲಿಮರ ಸಮಾಧಾನಕ್ಕೆ ತೇಪೆ ಹಚ್ಚುವ ಕೆಲಸ ನಡೆದಿದೆ.
ಇನ್ನು ರಫ್ ಆಂಡ್ ಟಫ್ ಮೇಯರ್ ಎನ್ನುವ ತಮ್ಮ ಆಪ್ತ ಮಾಧ್ಯಮ ವಲಯದಿಂದ ಬಹುಪರಾಕ್ ಹೇಳಿಸಿಕೊಳ್ಳುತ್ತಿದ್ದ ಕವಿತಾ ಸನಿಲ್ ಕೊನೆಕೊನೆಗೆ ತಮ್ಮ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಅನೇಕ ಕೆಲಸಗಳನ್ನು ಮಾಡಲಾಗುತ್ತಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿ ಬಿಲ್ಲು ಬಾಣ ಕೆಳಗಿಟ್ಟಿದ್ದರು. ಬಹುಶ: ಅದು ಒಬ್ಬ ಮೇಯರ್ ಅವರ ವೈಫಲ್ಯವೋ ಅಥವಾ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದ ಕಾಂಗ್ರೆಸ್ಸಿನ ನೈತಿಕತೆಯ ಪತನವೋ ಎನ್ನುವುದು ಮುಂದಿನ ಎಪ್ರಿಲ್ ಒಳಗೆ ನಿರ್ಧಾರವಾಗುತ್ತದೆ. ಆದರೆ ಕವಿತಾ ಸನಿಲ್ ಹೇಳಿದ್ದು ನಿಜ ಎಂದು ಪ್ರಾರಂಭದಲ್ಲಿಯೇ ಒಪ್ಪಿಕೊಳ್ಳುವ ಪರಿಸ್ಥಿತಿ ಭಾಸ್ಕರ್ ಮೊಯಿಲಿ ಅವರಿಗೆ ಬರದಿರಲಿ ಎನ್ನುವುದು ನಿರೀಕ್ಷೆ. ಅನಧಿಕೃತ ಪಾರ್ಕಿಂಗ್, ಅತಿಕ್ರಮಣ ಮುಂತಾದ ಅವ್ಯವಸ್ಥೆಯನ್ನು ಸರಿಪಡಿಸಲಾಗದೇ ಕೆಲವು ರೇಡ್ ಗಳನ್ನು ಮಾತ್ರ ಮಾಡಿ ಕವಿತಾ ಹೊರಟು ಹೋಗಿದ್ದಾರೆ. ಈಗ ಭಾಸ್ಕರ್ ಮೊಯಿಲಿ ಅವರ ಮುಂದೆ ನಿಜವಾದ ಸವಾಲಿದೆ. ಕಳೆದ ನಾಲ್ಕು ಬಾರಿ ಆಡಳಿತ ಮಾಡಿದ ಮೇಯರ್ ಗಳಿಗೆ ಏನು ಮಾಡಿದ್ರೂ ನಡೆಯುತ್ತಿತ್ತು. ಆದರೆ ಕೊನೆಯ ಅವಧಿಯ ಮೇಯರ್ ಪರಿಸ್ಥಿತಿ ಹಾಗಲ್ಲ. ಹತ್ತು ಒವರ್ ಗಳಲ್ಲಿ ನೂರು ತೆಗೆಯಲೇಬೇಕು, ಇಲ್ಲದಿದ್ದರೆ ಸೋಲುವ ಪರಿಸ್ಥಿತಿ. ಅದರೊಂದಿಗೆ ಸಮರ್ಥ ಮೇಯರ್ ಎಂದು ಜನರಿಂದಲೂ ಕರೆಸಬೇಕು ಮತ್ತು ಪಕ್ಷಕ್ಕೂ ಲಾಭವಾಗಬೇಕು. ಇದೊಂದು ರೀತಿಯಲ್ಲಿ ತಂತಿಯ ಮೇಲಿನ ನಡಿಗೆ. ಅದರಲ್ಲಿಯೂ ಆಂತರಿಕ ಚುನಾವಣೆ ನಡೆದು ವಿರೋಧ ಕಟ್ಟಿಕೊಂಡು ಹಾಟ್ ಸೀಟಿನಲ್ಲಿ ಕುಳಿತುಕೊಳ್ಳುವುದಿದೆಯಲ್ಲ, ಅದು ಈ ಉರಿಬಿಸಿಲಿನಲ್ಲಿಯೂ ಎಸಿಯ ಮಧ್ಯೆದಲ್ಲಿಯೂ ಬೆವರು ತರುತ್ತದೆ.
ಇನ್ನು ತುಂಬೆಯ ಹೊಸ ಡ್ಯಾಂನಲ್ಲಿ ಈಗಾಗಲೇ ಆರು ಮೀಟರ್ ನೀರು ನಿಲ್ಲಿಸಲಾಗುತ್ತಿದೆ. ಆದರೆ ಅದರಿಂದ ಮುಳುಗಡೆಯಾಗುತ್ತಿರುವ ರೈತರ ಭೂಮಿಗೆ ಬಾಕಿ ಇರುವ ಹತ್ತು ಕೋಟಿ ಇನ್ನು ಕೊಡದೆ ಸತಾಯಿಸಲಾಗುತ್ತಿದೆ. ಅದನ್ನು ಕೊಡಲು ಭಾಸ್ಕರ್ ಮೊಯಿಲಿ ಪ್ರಯತ್ನಿಸಲೇಬೇಕು. ಒಂದು ವೇಳೆ ಏಳು ಮೀಟರ್ ನೀರು ನಿಲ್ಲಿಸಿದರೆ ಪರಿಹಾರ ಹತ್ತು ಪಟ್ಟು ಹೆಚ್ಚಾಗಬಹುದು. ಇನ್ನು ಪಾಲಿಕೆಯ ಸದಸ್ಯರು ಎಂದರೆ ಬಿಲ್ಡರ್ ಗಳ ಮಾನಸ ಪುತ್ರರು ಎಂದು ಹೇಳಲಾಗುತ್ತದೆ. ಬಿಲ್ಡರ್ ಗಳಿಗಾಗಿ ಯಾವ ನಿಯಮವನ್ನು ಕೂಡ ಉಲ್ಲಂಘಿಸಲು ಅವರು ತಯಾರಿರುತ್ತಾರೆ ಎನ್ನುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ. ಇನ್ನು ಒಂದು ಏರಿಯಾದಲ್ಲಿ ಹೊಸ ವಸತಿ ಸಮುಚ್ಚಯ ಅಥವಾ ವಾಣಿಜ್ಯ ಸಮುಚ್ಚಯ ಆಗುವುದಾದರೆ ಆ ಪ್ರದೇಶದ ಕಾರ್ಫೋರೇಟರ್ ಬೇಗನೆ ಅಲ್ಲಿ ರಸ್ತೆ ಅದು ಇದು ಮಾಡಿ ಬಿಲ್ಡರ್ ಗಳಿಗೆ ಅನುಕೂಲ ಮಾಡಿಕೊಡುತ್ತಾರೆ. ಅದರ ಬದಲು ಒಂದು ರಸ್ತೆ ಆಗುವ ಮೊದಲು ಅದಕ್ಕೆ ಮೂಲಭೂತ ಅಗತ್ಯ ಏನು ಬೇಕು ಎನ್ನುವುದನ್ನು ನೋಡಿ ಅದನ್ನು ಮೊದಲು ಪರಿಹರಿಸಬೇಕು. ಒಳಚರಂಡಿ. ಫುಟ್ ಪಾತ್, ರಸ್ತೆಯ ಎರಡು ಕಡೆ ಹೊಸ ಪೈಪು ಎಲ್ಲ ಅಳವಡಿಸಿ ಕಾಂಕ್ರೀಟ್ ಸುರಿಯಬೇಕು. ಅದು ಬಿಟ್ಟು ಏನೂ ಮಾಡದೇ ಕಮೀಷನ್ ಒಳ್ಳೆಯದು ಸಿಗುತ್ತದೆ ಎನ್ನುವ ಕಾರಣಕ್ಕೆ ಮೊದಲು ಕಾಂಕ್ರೀಟ್ ಹಾಕಲು ಮುಂದಾಗಬಾರದು.
ಇನ್ನು ನಿರ್ಗಮಿತ ಮೇಯರ್ ಕವಿತಾ ಸನಿಲ್ ಕಳೆದ ಬಾರಿ ಸುದ್ದಿಗೋಷ್ಟಿ ಮಾಡಿ ಮಂಗಳೂರಿನ ಜನರಿಂದ ಸುಮಾರು 40 ಕೋಟಿ ನೀರಿನ ಬಿಲ್ ಬಾಕಿ ಇದೆ ಎಂದಿದ್ದರು. ಈ ಬಾರಿ ಭಾಸ್ಕರ್ ಮೊಯಿಲಿ ಸುದ್ದಿಗೋಷ್ಟಿ ಮಾಡಿ 50 ಕೋಟಿ ಬಾಕಿ ಇದೆ ಎಂದರೆ ಪ್ರಯೋಜನವಿಲ್ಲ. ಎಷ್ಟು ವಸೂಲಿ ಮಾಡಿದ್ದಾರೆ ಎಂದು ಹೇಳಬೇಕು. ಬಹಳ ಪ್ರಮುಖವಾಗಿರುವುದು ಕೆಲಸ ಮಾಡಲು ಎಷ್ಟು ದಿನ ಕರೆಕ್ಟಾಗಿ ಸಿಗುತ್ತೆ ಎಂದು ಗೊತ್ತಿಲ್ಲ. ಸಿಕ್ಕಿದಷ್ಟು ದಿನ ಜನಸಾಮಾನ್ಯರ ಕೈಗೆ ಅವರು ಸಿಗುವಂತಿರಲಿ ಎನ್ನುವುದೇ ನಿರೀಕ್ಷೆ!
Leave A Reply