ರಾಮಲಿಂಗಾರೆಡ್ಡಿಯವರೇ, ನಿಮಗೆ ಬೇಕಾದ ಹಾಗೆ ಹೆಸರು ಸೇರಿಸಲು ಇದು ನಿಮ್ಮ ಮನೆಯ ಸಾಮಾನು ಪಟ್ಟಿಯಲ್ಲ!
ನಮ್ಮ ರಾಜ್ಯಕ್ಕೆ ಸರಿಯಾದ ಒಬ್ಬರು ಗೃಹ ಸಚಿವರು ಸಿಗುವುದಿಲ್ಲವಲ್ಲ ಎನ್ನುವುದೇ ಬೇಸರ ಮತ್ತು ಅಸಹ್ಯಕರ ವಿಷಯ. ಮಾತನಾಡಿದರೆ ಸಿದ್ಧರಾಮಯ್ಯ ತಾವು ಐದು ವರ್ಷಗಳನ್ನು ಸಂಪೂರ್ಣಗೊಳಿಸಿದ ದೇವರಾಜ್ ಅರಸರ ನಂತರದ ಮೊದಲ ಮುಖ್ಯಮಂತ್ರಿ ಎನ್ನುತ್ತಾರೆ. ಸಿದ್ಧರಾಮಯ್ಯನವರೇ ಅಲ್ಲಿ ಸರಿಯಾದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಇಲ್ಲದಿರುವುದರಿಂದ ನಿಮಗೆ ಐದು ವರ್ಷ ಹಾಗೆ ಬಿಟ್ಟಿರಬಹುದು. ಆದರೆ ನಿಮ್ಮಲ್ಲಿ ಸರಿಯಾದ ಒಬ್ಬರು ಗೃಹ ಮಂತ್ರಿ ಕೂಡ ಇಲ್ಲ ಎನ್ನುವುದನ್ನು ನೀವೆ ಸಾಬೀತುಪಡಿಸಿದ್ದೀರಿ. ಇಲ್ಲಿಯ ತನಕ ಐದು ವರ್ಷಗಳಲ್ಲಿ ಮೂರನೇ ಗೃಹಮಂತ್ರಿಯನ್ನು ನಾವು ಕಾಣುತ್ತೀದ್ದೆವೆ. ಅದು ಕೂಡ ಮೂರನೇಯವರಾದರೂ ಸಮರ್ಥರಾ, ಬೆಂಗಳೂರಿನ ಹೊಂಡ ಗುಂಡಿಗಳನ್ನು ಮುಚ್ಚಲಾಗದೆ ಗಾರ್ಡನ್ ಸಿಟಿಯಿಂದ ಹೊಂಡಸಿಟಿ ಎನ್ನುವ ಬಿರುದು ತಂದಿರುವ ರಾಮಲಿಂಗಾ ರೆಡ್ಡಿಯವರನ್ನು ಗೃಹ ಸಚಿವರನ್ನಾಗಿ ಮಾಡಿದ್ದಿರಿ. ಮೊದಲು ಇದ್ದ ಗೃಹಸಚಿವ ಜಿ ಪರಮೇಶ್ವರ್ ಅವರು ಕೇವಲ ನಾಮಕಾವಸ್ತೆ ಇರುವಂತೆ ನೋಡಿಕೊಂಡಿರಿ. ಪರಮೇಶ್ವರ್ ಅವರಿಗಿಂತ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರೇ ಗೃಹ ಇಲಾಖೆಯನ್ನು ನಿರ್ವಹಿಸುತ್ತಾ ಇದ್ದದ್ದು ಎಲ್ಲರಿಗೂ ಗೊತ್ತಿದೆ. ಪರಮೇಶ್ವರ್ ಅವರನ್ನು ಬದಲಾಯಿಸಿ ಅದರ ನಂತರ ನಿಮ್ಮ ನೆಚ್ಚಿನ ಕೆಜೆ ಜಾರ್ಜ್ ಅವರಿಗೆ ಅಧಿಕಾರ ಕೊಟ್ಟಿರಿ. ಅವರಂತೂ ನಿಮ್ಮ ಪಕ್ಷದ ಎಂಟಿಎಂ ಆಗಿದ್ದರು. ಎಟಿಎಂ ಅಂದರೆ ಆಲ್ ಟೈಮ್ ಮಿನಿಸ್ಟರ್ ಎಂದು ಯಾಕೆ ಹೇಳುತ್ತಿದ್ದೇನೆ ಎಂದರೆ ಡಿವೈಎಸ್ ಪಿ ಗಣಪತಿಯವರು ಕ್ಯಾಮೆರಾದ ಮುಂದೆ ಬಂದು ತಮ್ಮ ಸಾವಿಗೆ ಸಚಿವ ಕೆಜೆ ಜಾರ್ಜ್ ಕಾರಣ ಎಂದು ಹೇಳಿ ನಂತರ ಸೂಸೈಡ್ ಮಾಡಿದ ಬಳಿಕವೂ ನೀವು ಮೀನಾಮೇಷ ಎಣಿಸಿ ಜಾರ್ಜ್ ಅವರಿಂದ ಸಚಿವ ಸ್ಥಾನವನ್ನು ನಿಧಾನವಾಗಿ ತೆಗೆದುಕೊಂಡು ಕೆಲವೇ ದಿನಗಳ ಬಳಿಕ ಮತ್ತೆ ಕೊಟ್ಟು ಪ್ರೀತಿ ತೋರಿಸಿದ್ದೀರಿ. ಒಬ್ಬ ಅಧಿಕಾರಿ ಇಷ್ಟು ಬಹಿರಂಗವಾಗಿ ಹೇಳಿ ಸತ್ತರೂ ನೀವು ಸಚಿವರ ವಿರುದ್ಧ ಒಂದು ಚೂರು ಕ್ರಮ ತೆಗೆದುಕೊಳ್ಳದೆ ಸಾಂತ್ವನ ಮಾಡಿದ್ದೀರಿ. ಅವರನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನಾಗಿ ಮಾಡಿದಿರಿ.
ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಸ್ಕ್ರೂ ಡ್ರೈವರ್ ಸಚಿವರು ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಏನಿದೆ?
ನಂತರ ನಿಮಗೆ ಗೃಹಸಚಿವರಾಗಿ ಸಿಕ್ಕಿದ್ದು ರಾಮಲಿಂಗಾರೆಡ್ಡಿ. ಇವರು ಹೇಗೆಂದರೆ ಕೊಲೆಯಾದ ಕೆಲವೇ ಕ್ಷಣಗಳಲ್ಲಿ ಸೋನಿ ಟಿವಿಯಲ್ಲಿ ಬರುವ ಸಿಐಡಿ ಸೀರಿಯಲ್ ನ ಆಫೀಸರ್ ನಂತೆ ಅಲ್ಲಿ ತಲುಪಿ ಒಂದು ಗಂಟೆಯ ಒಳಗೆ ತನಿಖೆ ಮಾಡಿ ಹಂತಕ ಕೇಸರಿ ಸಂಘಟನೆಯವನು ಎಂದು ಹೇಳಿ ಕೇಸ್ ಮುಗಿಸಿ ಮುಂದಿನ ಎಪಿಸೋಡಿಗೆ ಹೋಗುತ್ತಾರೆ. ಇವರು ಬಹುಶ: ಹಿಂದೆ ಸೋನಿ ಟಿವಿಯ ಸಿಐಡಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದರೋ ಏನೋ. ಇವರದ್ದು ಒಟ್ಟು ಒಂದು ಗಂಟೆಯ ವಿಷಯ. ಅಲ್ಲೇ ಡ್ರಾ, ಅಲ್ಲೇ ಬಹುಮಾನ. ಗೌರಿ ಲಂಕೇಶ್ ಹತ್ಯೆ ಆದ ಕೂಡಲೇ ಅದನ್ನು ಹಿಂದೂ ಸಂಘಟನೆಯವರು ಮಾಡಿದ್ದು ಎಂದು ಹೇಳಿ ತಾವು ಸಿಕ್ಕಾಪಟ್ಟೆ ಸ್ಪೀಡ್ ಎಂದು ನಿರೂಪಿಸಿದ್ದರು. ಗೌರಿ ಲಂಕೇಶ್ ಹತ್ಯೆಯಾಗಿ ಇಷ್ಟು ಕಾಲವಾದರೂ ಸರಿಯಾಗಿ ಯಾರು ಆರೋಪಿ ಎಂದು ಹೇಳಲು ರಾಜ್ಯ ಸರಕಾರ ಇನ್ನೂ ಒದ್ದಾಡುತ್ತಿದೆ. ಆ ನಡುವೆ ಆಗಾಗ ಹಿಂದೂ ಸಂಘಟನೆಯ ಯುವಕರ ಹತ್ಯೆಗಳು ಆಗುತ್ತಿರುವುದರಿಂದ ಗೃಹ ಸಚಿವರು ಫುಲ್ ಬ್ಯುಸಿ ಮತ್ತು ಹೈಸ್ಪೀಡ್. ಹತ್ಯೆ ಆದ ಕಡೆ ಹೋಗುವುದು ತಕ್ಷಣ ಹತ್ಯೆಗೆ ಕಾರಣ ಆಂತರಿಕ ವಿಷಯ ಎನ್ನುವುದು, ಹತ್ಯೆ ಮಾಡಿದ್ದಲ್ಲ, ಸ್ಕ್ರೂ ಡ್ರೈವರ್ ನಿಂದ ಚುಚ್ಚಿದ್ದು ಎನ್ನುವುದು, ಇನ್ನೊಂದು ಕಡೆ ಹೋಗುವುದು ಅಲ್ಲಿ ಶಾಸಕರ ಪುತ್ರ ಹೊಡೆದದ್ದಲ್ಲ, ಅದು ಹೋಗುವಾಗ ತಾಗಿದ್ದು ಎನ್ನುವುದು ಹೀಗೆ ಮಾಡುತ್ತಲೇ ದಿನ ದೂಡುವಂತಹ ಕೆಲಸವನ್ನು ಗೃಹ ಸಚಿವರು ಮಾಡುತ್ತಿದ್ದಾರೆ. ಈಗ ಅವರಿಗೆ ಅರ್ಜೆಂಟಾಗಿ ತಮ್ಮ ಸರಕಾರದ ಅವಧಿಯಲ್ಲಿ ಹತರಾದ ಹಿಂದೂ ಯುವಕರ ಪಟ್ಟಿಗೆ ಉತ್ತರ ಕೊಡುವಂತೆ ಮೇಲಿನಿಂದ ಆದೇಶ ಬಂದಿದೆ. ಅದಕ್ಕಾಗಿ ಮುಸ್ಲಿಮ್ ಜಿಹಾದಿಗಳಿಂದ ಅಲ್ಲದೆ ಬೇರೆಯವರಿಂದ ಹತರಾದ ಹಿಂದೂ ಯುವಕರ ಪಟ್ಟಿ ತೆಗೆದಿದ್ದಾರೆ. ಅದನ್ನು ಆಧಾರ್ ಕಾರ್ಡಿನಂತೆ ಹೋದಲ್ಲೆಲ್ಲ ತೋರಿಸುತ್ತಾ ಇದ್ದಾರೆ. ಒಂದು ಪ್ರತಿಯನ್ನು ಕಿಸೆಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿರುವುದರಿಂದ ಯಾರಾದರೂ ಬಿಜೆಪಿಯವರ ಜನಸುರಕ್ಷಾ ಯಾತ್ರೆಯ ಬಗ್ಗೆ ಪ್ರಶ್ನೆ ಕೇಳಿದರೆ ತಕ್ಷಣ ತಮ್ಮಲ್ಲಿರುವ ಲಿಸ್ಟ್ ತೆಗೆದು ನಾವು ಕೂಡ ರೆಡಿ ಮಾಡಿದ್ದೇವೆ ಎನ್ನುತ್ತಿದ್ದಾರೆ.
ಆದರೆ ಇವರು ಲಿಸ್ಟ್ ಉದ್ದ ಕಾಣಬೇಕು ಎನ್ನುವ ತೆವಲಿಗೆ ಬಿದ್ದಿರುವುದರಿಂದ ಆರೋಪಿಗಳ ಲಿಸ್ಟ್ ನಲ್ಲಿ ಯಾರ್ಯಾರದ್ದೋ ಹೆಸರು ಹಾಕಿ ವಿಕೃತ ಖುಷಿ ಪಡೆಯುತ್ತಿದ್ದಾರೆ. ಬೇಕಾದರೆ ಒಂದು ಉದಾಹರಣೆ ಕೊಡುತ್ತೇನೆ.
ಪೊಲೀಸರು ಹೇಳದ್ದನ್ನು ನೀವು ಹೇಗೆ ಸೇರಿಸಿದ್ದಿರಿ…
ವಿದ್ಯುತ್ ಗುತ್ತಿಗೆದಾರ ವಿನಾಯಕ ಬಾಳಿಗಾ ಕೊಲೆಯಾಗಿ ನಾಡಿದ್ದು 21 ಕ್ಕೆ ಎರಡು ವರ್ಷ ಕಂಪ್ಲೀಟ್ ಆಗುತ್ತದೆ. ಪೊಲೀಸರು ಕಾಂಗ್ರೆಸ್ ಸರಕಾರದ ಕಟ್ಟುನಿಟ್ಟಿನ ಸೂಚನೆ ಮೇರೆಗೆ ತನಿಖೆ ಮಾಡಿ ಮುಗಿಸಿದ್ದಾರೆ. ಯಾರು ಆರೋಪಿಗಳು ಎಂದು ಫಿಕ್ಸ್ ಮಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಚಾರ್ಜ್ ಶೀಟ್ ಕೂಡ ಸಲ್ಲಿಸಿಯಾಗಿದೆ. ಈಗ ಮೊನ್ನೆ ಮಂಗಳೂರಿಗೆ ಬಂದ ಗೃಹ ಸಚಿವ ರಾಮಲಿಂಗರೆಡ್ಡಿಯವರು ತಮ್ಮ ಕಿಸೆಯಲ್ಲಿದ್ದ ಲಿಸ್ಟ್ ಒಂದನ್ನು ತೆಗೆದು ಮಾಧ್ಯಮಗಳ ಮುಂದೆ ಹಿಡಿದಿದ್ದಾರೆ. ಅದರಲ್ಲಿ ವಿನಾಯಕ ಬಾಳಿಗಾ ಪ್ರಕರಣದಲ್ಲಿ ಪೊಲೀಸರ ತನಿಖೆಯಲ್ಲಿ ಇಲ್ಲದ ಹೊಸ ಹೆಸರೊಂದು ಬಂದಿದೆ. ಹಾಗಾದರೆ ರಾಮಲಿಂಗಾ ರೆಡ್ಡಿಯವರು ತಮಗೆ ಬೇಕಾದ ಹಾಗೆ ಯಾರ್ಯಾರದ್ದೋ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಹಾಕುವುದಕ್ಕೆ ಅವಕಾಶ ಪಡೆದಿದ್ದಾರಾ? ಅವರಿಗೆ ಹಾಗೆ ಪೊಲೀಸರ ತನಿಖೆಯಲ್ಲಿ ಇಲ್ಲದ ಹೆಸರನ್ನು ಹಾಕಲು ಅನುಮತಿ ಕೊಟ್ಟವರ್ಯಾರು? ಒಂದು ವೇಳೆ ಯಾರೋ ಬರೆದು ಕೊಟ್ಟಿರುವುದನ್ನೇ ಓದುವುದಾದರೆ ಆ ಇಡೀ ಪ್ರಕರಣದಲ್ಲಿ ಆವತ್ತು ಕೂಡ ಯಾರ್ಯಾರೋ ತಮಗೆ ಆಗದವರನ್ನು ಆರೋಪಿಗಳನ್ನಾಗಿ ಮಾಡಿರುವ ಸಾಧ್ಯತೆ ಕೂಡ ಇದೆಯಲ್ಲ? ಇನ್ನು ಬೀದರ್ ನಲ್ಲಿ ಒಂದು ಕೊಲೆ ಆಗಿದ್ದನ್ನು ಇಲ್ಲಿ ಹೇಳಿ ಇವರೆಲ್ಲಾ ಆರೋಪಿಗಳು ಎಂದು ಹೇಳಿದ್ದರೆ ಇಲ್ಲಿನ ಜನರಿಗೂ ಪತ್ರಕರ್ತರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ಇವರು ಮಂಗಳೂರಿನಲ್ಲಿ ಆದ ಕೊಲೆಯ ವಿಷಯವನ್ನು ಇಲ್ಲಿಯೇ ಹೇಳುವಾಗ ತಾವು ಹೇಳುವ ಆರೋಪಿಗಳು ಆರೋಪಿ ಪಟ್ಟಿಯಲ್ಲಿ ಇದ್ದಾರಾ ಎಂದು ರೀ ಪರಿಶೀಲನೆ ಮಾಡಬೇಕಾ, ಬೇಡವಾ? ಒಟ್ಟಿನಲ್ಲಿ ಅರ್ಜೆಂಟಲ್ಲಿ ಆರೋಪಿಗಳನ್ನು ಕೊಲೆ ಕೇಸಿನಲ್ಲಿ ಫಿಕ್ಸ್ ಮಾಡುವಂತೆ ಇಲ್ಲಿ ಅರ್ಜೆಂಟಲ್ಲಿ ಆರೋಪಿಗಳ ಪಟ್ಟಿ ಸಿದ್ದಪಡಿಸಿ ಮಾಧ್ಯಮಗಳ ಮುಂದೆ ಹೇಳಿದರೆ ಮೊದಲೇ ನೀವು ಸತ್ಯ ಹರಿಶ್ಚಂದ್ರರು ಎನ್ನುವುದು ಎಲ್ಲರಿಗೂ ಗೊತ್ತಿದೆ, ಅದು ಇನ್ನೂ ಗ್ಯಾರಂಟಿಯಾಗಲ್ವಾ ರಾಮಲಿಂಗಾರೆಡ್ಡಿಯವರೇ!
Leave A Reply