ರಾಜ್ಯ ಸರ್ಕಾರ ಹಿಂದೂಗಳಿಗೆ ಅನ್ಯಾಯ ಮಾಡಿದೆ, ಸಿದ್ದರಾಮಯ್ಯ ನಾಟಕಕಾರ: ವಿಜಯ ಸಂಕೇಶ್ವರ
ಹುಬ್ಬಳ್ಳಿ: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜಾತಿಗಳನ್ನು ಒಡೆದು ಆಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ, ಬಿಜೆಪಿ ಮುಖಂಡ ವಿಜಯ ಸಂಕೇಶ್ವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ 30 ವರ್ಷದಿಂದ ಬಿಜೆಪಿಯನ್ನು ಕಟ್ಟಲು ಶ್ರಮಿಸಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡುವುದಿಲ್ಲ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಹಠಾವೋ ಅಭಿಯಾನಕ್ಕೆ ಕೈ ಜೋಡಿಸುತ್ತೇನೆ. ನಾನು ಬಿಜೆಪಿಯ ಶಿಸ್ತಿನ ಕಾರ್ಯಕರ್ತ. ನಾನು ಬಿಜೆಪಿಯನ್ನು ಮದುವೆಯಾಗಿದ್ದೇನೆ. ನಾನು ಬಿಜೆಪಿಯ ಸೇವಕನಾಗಿದ್ದೇನೆ ಎಂದು ಹೇಳಿದರು.
ನನಗೆ ರಾಜ್ಯಸಭೆಯ ಸ್ಥಾನ ನೀಡದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ. ರಾಜೀವ್ ಚಂದ್ರಶೇಖರ್ ಅವರಿಗೆ ಕೊಟ್ಟಿರುವುದರಿಂದ ಸಂತೋಷವಾಗಿದೆ. ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರೆ ಎಂಬ ಭರವಸೆ ಇದೆ. ರಾಜೀವ್ ಚಂದ್ರಶೇಖರ್ ತಂದೆ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರು. ಅವರು ಅನ್ಯರಾಜ್ಯದವರು ಎಂಬ ಮಾತು ರಾಜ್ಯ ಸಭೆಗೆ ಅನ್ವಯವಾಗುವುದಿಲ್ಲ. ಕಾಂಗ್ರೆಸ್ ನವರು ನಾಟಕ ಮಾಡುತ್ತಿದ್ದಾರೆ. ಸೋನಿಯಾ, ಇಂದಿರಾಗಾಂಧಿಯನ್ನು ರಾಜ್ಯದಿಂದ ಆರಿಸಿ ಕಳಿಸಲಾಗಿತ್ತು. ಅದನ್ನು ಕಾಂಗ್ರೆಸ್ ನೆನಪು ಇಟ್ಟುಕೊಳ್ಳಬೇಕು.
ಸಿದ್ದರಾಮಯ್ಯ ನಾಟಕಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾನ್ ನಾಟಕಕಾರ. ಜಾತಿ ಆಧಾರಿತವಾಗಿ ಮಾತನಾಡುತ್ತಾರೆ. ಧರ್ಮ ಒಡೆಯುವ ಹುನ್ನಾರ ನಡೆಸಿದ್ದಾರೆ. ಜಾತಿಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕತೆ ವರದಿಯನ್ನು ಸಿದ್ದರಾಮಯ್ಯ ಕೊಡಿಸಿದ್ದಾರೆ. ಈ ದೇಶಕ್ಕೆ ಅದ್ಭುತವಾದ ಪ್ರಧಾನಿ ದೊರಕಿದ್ದಾರೆ. ದೇಶ ಮೋದಿ ಅವರ ನೇತೃತ್ವದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ದೇಶ ಅವರನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಿದೆ ಎಂದು ಹೇಳಿದರು.
Leave A Reply