ಹುರ್ರಿಯತ್ ಸಂಘಟನೆ ಮುಖ್ಯಸ್ಥ ಸ್ಥಾನದಿಂದ ಗೀಲಾನಿ ಕೆಳಗಿಳಿಯಲು ಮೋದಿ ಕೊಟ್ಟ ಪೆಟ್ಟು ಕಾರಣವೇ?

ಶ್ರೀನಗರ: ಸೈಯ್ಯದ್ ಶಾ ಗೀಲಾನಿ. ದೇಹವನ್ನಷ್ಟೇ ಭಾರತದಲ್ಲಿಟ್ಟುಕೊಂಡು, ಮನಸ್ಸನ್ನು ಸಂಪೂರ್ಣ ಪಾಕಿಸ್ತಾನದಲ್ಲಿಟ್ಟಿರುವ ಈ ಪ್ರತ್ಯೇಕತವಾದಿ ನಾಯಕ ಈಗ ಬಸವಳಿದುಹೋಗಿದ್ದಾನೆ. ಕೇಂದ್ರ ಸರ್ಕಾರದ ಹಲವು ಕ್ರಮಗಳಿಂದ ಬೇಸತ್ತು ಈಗ ಪ್ರತ್ಯೇಕತವಾದಿ ಸಂಘಟನೆಯಾದ ತೆಹ್ರೀಕ್-ಏ-ಹುರ್ರಿಯತ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾನೆ.
ಈಗ ಗೀಲಾನಿ ಜಾಗಕ್ಕೆ ಗೆಳೆಯ ಮೊಹ್ಮದ್ ಆಶ್ರಫ್ ಸೆಹ್ರೈ ಎಂಬಾತ ಒಕ್ಕರಿಸಿಕೊಂಡಿದ್ದಾನೆ. ಆದರೆ ಇದ್ದಕ್ಕಿದ್ದ ಹಾಗೆ ಗೀಲಾನಿ ತನ್ನ ಸ್ಥಾನ ಬಿಟ್ಟುಕೊಡಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ? ಅಷ್ಟೆಲ್ಲ ಮೆರೆದಾಡುತ್ತಿದ್ದ ಗೀಲಾನಿ ಈಗ ಏಕೆ ಕರೆಂಟು ಹೊಡೆದ ಕಾಗೆಯಂತಾಗಿದ್ದಾನೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆಯೇ?
ಪರೋಕ್ಷವಾಗಿ ನಾವು ಇದಕ್ಕೆಲ್ಲ ಹೂಂ ಎನ್ನಲೇಬೇಕು. ಗೀಲಾನಿ ತನ್ನ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದಾನಾದರೂ, ಅದರ ಹಿಂದೆ ಮೋದಿ ನೀಡಿದ ಪೆಟ್ಟುಗಳಿವೆ.
ಮೊದಲಿಗೆ ಜಮ್ಮು-ಕಾಶ್ಮೀರದಲ್ಲಿ ನರೇಂದ್ರ ಮೋದಿ ಅವರು ಪ್ರತ್ಯೇಕತಾವಾದಿಗಳ ಹೆಡೆಮುರಿಕಟ್ಟಿದ್ದು, ನೋಟು ನಿಷೇಧದ ಮೂಲಕ. 2016ರಲ್ಲಿ ನೋಟು ನಿಷೇಧವಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ನಕಲಿ ನೋಟು, ಕಪ್ಪು ಹಣ ಹರಿದಾಡುವುದು ನಿಂತುಹೋಯಿತು. ಇದರಿಂದ ಉಗ್ರ ಚಟುವಟಿಕೆ ನಿಂತುಹೋದವು. ಗೀಲಾನಿಗೆ ಪಾಕಿಸ್ತಾನದ ಹಣ ಹರಿದುಬರುವುದು ನಿಂತಿತು.
ಮೋದಿ ಅವರು ಇಷ್ಟಕ್ಕೇ ಸುಮ್ಮನಾಗಲಿಲ್ಲ, ಎನ್ ಐಎ ಅಧಿಕಾರಿಗಳ ದಾಳಿ ಮೂಲಕ ಇವರ ವಿರುದ್ಧ ಭಯೋತ್ಪಾದನೆಗಾಗಿ ಪಾಕಿಸ್ತಾನದಿಂದ ಹಣ ಪಡೆದ ಪ್ರಕರಣ ದಾಖಲಿಸಲಾಯಿತು. ಗೀಲಾನಿಯ ಬಂಧನವೂ ಆಯಿತು. ವಿಚಾರಣೆಯೂ ನಡೆಯಿತು. ಅತ್ತ ಗೀಲಾನಿ ನಿಷ್ಕ್ರಿಯನಾದಂತಾದ. ಇದರಿಂದ ಪಾಕಿಸ್ತಾನವೂ ಮರ್ಯಾದೆ ನೀಡುತ್ತಿರಲಿಲ್ಲ.
ಈ ಎಲ್ಲ ಕಾರಣಗಳಿಂದ ಬೇಸತ್ತ ಗೀಲಾನಿ, ಈಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ರಾಜೀನಾಮೆ ಹಿಂದೆ ಸಂಘಟನೆಯ ಸದಸ್ಯರ ಒತ್ತಡವೂ ಇತ್ತು ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಕೂತ ನರೇಂದ್ರ ಮೋದಿ ಕಾಶ್ಮೀರದಲ್ಲಿ ಇದ್ದ ವಿಷಕಾರಿ ಹಾವುಗಳ ಹಲ್ಲು ಕಿತ್ತಿದ್ದು ಹೀಗೆ ಎಂದರೆ ನಂಬದೇ ಇರಲಾದೀತೇ?
Leave A Reply