ಮೊಯಿಲಿ ಪುತ್ರವಾತ್ಸಲ್ಯ ಕಾಂಗ್ರೆಸ್ ಜಾತಕ ಬಯಲಿಗೆ ತಂದು ಸಿದ್ದು ಕ್ಯಾಪೆಸಿಟಿ ತೋರಿಸಿತು!
ನಿನ್ನೆ ಮಂಗಳೂರಿಗೆ ಕಾಂಗ್ರೆಸ್ಸಿನ ಹಾಲಿ ಪರವೋಚ್ಚ ನಾಯಕ ರಾಹುಲ್ ಗಾಂಧಿಯವರು ಬಂದಿದ್ದಾಗ ಅವರ ಎಲ್ಲಾ ಕಾರ್ಯಕ್ರಮಗಳ ವೇದಿಕೆಯಲ್ಲಿ ಇದ್ದವರು ವೀರಪ್ಪ ಮೊಯಿಲಿ. ಪ್ರೋಟೋಕಾಲ್ ಪ್ರಕಾರ ರಾಹುಲ್ ಗಾಂಧಿಯವರಿಂದ ಕೆಲವು ಕುರ್ಚಿಗಳ ಅಂತರದಲ್ಲಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ಹಾಕಿರಬಹುದು. ಆದರೆ ವೀರಪ್ಪ ಮೊಯಿಲಿ ಅದೇ ವೇದಿಕೆಯಲ್ಲಿದ್ದ ಉಳಿದ ನಾಯಕರುಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ತೂಕದ ನಾಯಕರಲ್ಲ. ದೆಹಲಿಯಲ್ಲಿ ಇದ್ದರೆ ನೇರಾ ರಾಹುಲ್ ಗಾಂಧಿಯವರ ಮನೆಗೆ ಹೋಗಿ ಅವರ ಕಿವಿಯಲ್ಲಿಯೇ ಕರ್ನಾಟಕದಲ್ಲಿ ಏನೇನಾಗುತ್ತದೆ ಎಂದು ಹೇಳುವಷ್ಟು ಸಮರ್ಥತೆ ಮತ್ತು ಸ್ವಾತಂತ್ರ್ಯ ಎರಡೂ ಅವರಿಗೆ ಇದೆ. ಆದರೆ ಅವರೇ ಒಂದು ಚಿಕ್ಕ ವಾಕ್ಯವನ್ನು ಸಾಮಾಜಿಕ ತಾಣದಲ್ಲಿ ಬರೆಯುವ ಮೂಲಕ ಇಡೀ ಕಾಂಗ್ರೆಸ್ ಒಂದು ಸಲ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡುವಂತೆ ಮಾಡಿದರಲ್ಲ ಅದೇ ಆಶ್ಚರ್ಯ.
ಇದು ಏನು ಸೂಚಿಸುತ್ತದೆ?
ವೀರಪ್ಪ ಮೊಯಿಲಿ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ. ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಮೊಯಿಲಿಯವರು ರಾಜೀವ್ ಆಪ್ತರಾಗಿದ್ದರು. ವಕೀಲಿಕೆ ಕಲಿತ್ತಿದ್ದಾರೆ ಮತ್ತು ಒಂದಿಷ್ಟು ರಾಜತಾಂತ್ರಿಕ ನೈಪುಣ್ಯತೆ ಇದೆ ಎಂದು ಇವರ ಮಾತನ್ನು ರಾಜೀವ್ ಆಲಿಸುತ್ತಿದ್ದರು. ಆ ಬಳಿಕ ಸೋನಿಯಾ ಯುಗ ಪ್ರಾರಂಭವಾಗುವಾಗಲೂ ಶಿಕ್ಷಣ ಕ್ಷೇತ್ರದ ಸುಧಾರಣೆಯ ಬಗ್ಗೆ ಏನಾದರೂ ಆಯೋಗ ಮಾಡುವಾಗ ಸೋನಿಯಾ, ಮೊಯಿಲಿಯವರ ಸಲಹೆಯನ್ನು ಕೇಳಿ ಮುಂದುವರೆಯಿರಿ ಎಂದು ಸೂಚನೆ ಕೊಟ್ಟಿದ್ದು ಇದೆ. ಸಿಇಟಿ ಸುಧಾರಣೆಯಲ್ಲಿ ವೀರಪ್ಪ ಮೊಯಿಲಿ ಯಶಸ್ವಿಯಾದದ್ದೇ ಹಾಗೆ. ಆದರೆ ಯಾವಾಗ ಸೋನಿಯಾ ಗಾಂಧಿ ತಮ್ಮ ಹೆಗಲ ಮೇಲಿನ ಭಾರವನ್ನು ಇಳಿಸಿ ಮಗನ ಕೈಯಲ್ಲಿ ಚಾಟಿ ಕೊಟ್ಟು ಗದ್ದುಗೆಯನ್ನು ಕೂರಿಸಿದರಲ್ಲ, ಅದರ ಬಳಿಕ ವೀರಪ್ಪ ಮೊಯಿಲಿ ಬಹುತೇಕ ಏಕಾಂಗಿಯಾದರು. ಸಿದ್ಧರಾಮಯ್ಯನವರ ಬಗ್ಗೆ ಚಾಡಿ ಹೇಳುವುದು ಬಿಡಿ, ಅವರ ಹೆಸರೆತ್ತಿದರೆ ಸಾಕು “ಮೊಯಿಲಿಜಿ ಆಪ್ ವಹಾ ಕಾ ಬಾತ್ ಚೋಡಿಯೇ” ಎಂದು ರಾಹುಲ್ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜನಾರ್ಧನ ಪೂಜಾರಿ, ಜಾಫರ್ ಷರೀಪ್ ನಂತರ ಮೊಯಿಲಿ ಅದೇ ಸಾಲಿನಲ್ಲಿ ಸೇರುವ ವಾತಾವರಣ ಜನಪಥ್ 10 ರಲ್ಲಿ ಸೃಷ್ಟಿಯಾಗಿತ್ತು.
ಅದು ಸಿದ್ಧರಾಮಯ್ಯ ಪವರ್
ನೀವು ಆ ಕಡೆಯ ಬಗ್ಗೆ ಹೆಚ್ಚು ಯೋಚಿಸಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದರೂ ಹಾಗೆ ಸುಮ್ಮನೆ ಕುಳಿತುಕೊಳ್ಳಲು ಒಂದು ತಂದೆ ಜೀವಕ್ಕೆ ಹೇಗೆ ಸಾಧ್ಯ? ಮಗನನ್ನು ರಾಜಕೀಯವಾಗಿ ಲಾಂಚ್ ಮಾಡಲು ಕಾತರಿಸುತ್ತಿದ್ದರು ಮೊಯಿಲಿ ಎನ್ನುವ ಜವಾಬ್ದಾರಿ ತಂದೆ. ಆದರೆ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಕಾಂಗ್ರೆಸ್ಸನ್ನು ಒಂದೇ ಸಮನೆ ಸ್ವಾಹ ಮಾಡಿಕೊಂಡಿರುವ ಸಿದ್ಧರಾಮಯ್ಯ ತಮ್ಮ ವಿರುದ್ಧ ಹೈಕಮಾಂಡ್ ಗೆ ದೂರು ಕೊಡಲು ಹೋಗುವ ನಾಯಕರ ಮಾತು ಅಲ್ಲಿ ನಡೆಯದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದಕ್ಕೆ ಕಾರಣ ಅವರು ರಾಹುಲ್ ಮನಸ್ಸಿನಲ್ಲಿ ಹುಟ್ಟಿಸಿದ ಗುಮ್ಮ. ಸರ್, ಇಡೀ ರಾಷ್ಟ್ರದಲ್ಲಿ ನಿಮಗೆ ಮುಂದಿನ ಬಾರಿ ಲೋಕಸಭೆಗೆ ಚುನಾವಣೆಗೆ ಹೋಗಬೇಕಾದರೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಕ್ಯಾಪೆಸಿಟಿ ಇರುವುದು ಕರ್ನಾಟಕಕ್ಕೆ ಮಾತ್ರ. ಅದಕ್ಕಾಗಿ ನಾವು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ. ನೀವು ನಮಗೆ ಸ್ವಾತಂತ್ರ್ಯ ಕೊಡಬೇಕು ಎಂದು ಬಿಟ್ಟಿದ್ದರು ಸಿದ್ದು.
ಈ ಮೂಲಕ ಸಿದ್ಧರಾಮಯ್ಯ ಏಕಕಾಲದಲ್ಲಿ ಡಿಕೆಶಿ, ದೇಶಪಾಂಡೆ, ಖರ್ಗೆಯವರನ್ನು ಬದಿಗೆ ಸರಿಸಿ ಜನಪಥ್ ನಲ್ಲಿ ತಾವು ಕಾಲಿಟ್ಟರೆ ನಡೆದಾಡುವ ಒಂದು ಎಟಿಎಂ ಬರುತ್ತಿದೆಯೇನೋ ಎಂದು ರಾಹುಲ್ ಗಾಂಧಿಯವರಿಗೆ ಅನಿಸಬೇಕು ಹಾಗೆ ಫೋಸ್ ಕೊಟ್ಟಿದ್ದರು. ಬೇರೆ ಯಾರಾದರೂ ಸಿದ್ದು ವಿರುದ್ಧ ಕಟಿಪಿಟಿ ಮಾಡಿದರೆ “ನೀವು ಇಷ್ಟು ಸಾವಿರ ಕೋಟಿ ಹೊಂದಿಸಿ ಕೊಡಲು ತಯಾರಿದ್ದರೆ ಹೇಳಿ, ಸಿದ್ದು ಅವರನ್ನು ಸೈಡಿಗೆ ಸರಿಸಿ ನಿಮಗೆ ಪಟ್ಟಾಭಿಷೇಕ ಮಾಡುತ್ತೇನೆ” ಎಂದು ರಾಹುಲ್ ಹೇಳಿದ್ದು ಹಲವು ಕಾಂಗ್ರೆಸ್ ನಾಯಕರಿಗೆ ಅರಗಿಸಲಾರದ ತುತ್ತಾಯಿತು. ಆದ್ದರಿಂದ ಯಾರೂ ಕೂಡ ಈಗ ಸೊಲೆತ್ತುವ ಸ್ಥಿತಿಯಲ್ಲಿಲ್ಲ. ಈ ಮೂಲಕ ಕಾಂಗ್ರೆಸ್ಸಿನೊಳಗೆ ಸಿದ್ದು ಅಂಡ್ ಟೀಮ್ ಹುಟ್ಟಿಸಿರುವ ಕ್ರೇಜ್ ನೋಡಿ ಸ್ವತ: ವಿರೋಧ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಬಿಜೆಪಿ ತಣ್ಣಗಾಗಿವೆ. ದೇವೆಗೌಡರು ತಮ್ಮ ದೆಹಲಿ ಸಂಪರ್ಕಗಳನ್ನು ಬಳಸಿ ಸಿದ್ಧರಾಮಯ್ಯ ವಿರುದ್ಧ ಚಾಡಿ ಹೇಳಿ ಸಿಎಂ ವರ್ಚಸ್ಸು ಕಡಿಮೆ ಮಾಡುವ ಪ್ರಯತ್ನ ಮಾಡಿದರಾದರೂ ಅದ್ಯಾವುದೂ ವರ್ಕೌಟ್ ಆಗಲಿಲ್ಲ. ಕಾರಣ ದೂರು ಹೇಳಲು ಬಂದ ಎಲ್ಲರ ಬಳಿ ರಾಹುಲ್ ಹೇಳಿದ್ದು ಒಂದೇ ಮಾತು ” ಅವರು ಇಷ್ಟು ಪ್ರಾಮಿಸ್ ಮಾಡಿದ್ದಾರೆ, ನೀವು ಅದನ್ನು ಕೊಡಲು ಸಾಧ್ಯವಾದರೆ ಹೇಳಿ, ನಾಳೆನೆ…” ಈ ಮೂಲಕ ದೇವೆಗೌಡರಿಂದ ಹಿಡಿದು ಅಶೋಕ್ ವರೆಗೆ ಯಾರೆಂದರೆ ಯಾರು ಕೂಡ ಎಂತಂಹ ಪ್ರಯತ್ನ ಮಾಡಿದರೂ ಸಿದ್ಧರಾಮಯ್ಯ ಅವರನ್ನು ತೆಗೆದು ಹಾಕುವುದು ಬಿಡಿ, ಅಲುಗಾಡಿಸಲು ಕೂಡ ಆಗಲಿಲ್ಲ.
ಪರಿಸ್ಥಿತಿ ಹೀಗಿರುವಾಗ ತಮ್ಮ ಮಗನನ್ನು ಕಾರ್ಕಳದಿಂದ ಚುನಾವಣೆಗೆ ನಿಲ್ಲಿಸಬೇಕು ಎಂದು ಗುರಿ ಇಟ್ಟುಕೊಂಡಿದ್ದ ವೀರಪ್ಪ ಮೊಯಿಲಿ ಅವರಿಗೆ ದಿಕ್ಕೆ ಕಾಣದಾಯಿತು. ತಮ್ಮ ಮಗಳು ರಾಹುಲ್ ಟೀಮ್ ನಲ್ಲಿ ಸಕ್ರಿಯ ಸದಸ್ಯೆ ನಿಜ, ಆದರೆ ರಾಹುಲ್ ಕರ್ನಾಟಕದ ವಿಷಯಕ್ಕೆ ಬಂದಾಗ ನೇರವಾಗಿ ಸಿದ್ದುಗೆ ಕರೆ ಮಾಡಿ ಮಾತನಾಡುತ್ತಿರುವುದು ಸ್ವತ: ಖರ್ಗೆಯಂತವರಿಗೆ ಬಿಸಿತುಪ್ಪವಾಗಿರುವುದು ಮೊಯಿಲಿಗೆ ಗೊತ್ತಿದೆ. ಕೊನೆಗೆ ಏನೂ ಮಾಡಲು ತೋಚದೆ ಮೊಯಿಲಿ ಆ ಕೋಪವನ್ನು ಟ್ವೀಟರ್ ನಲ್ಲಿ ಹೊರಗೆ ಹಾಕಿದ್ದಾರೆ. ಇದು ಬಹುತೇಕ ಮೊಯಿಲಿ ಕೈಯಿಂದ ಕಾರ್ಕಳ ಕಳೆದು ಹೋಗುತ್ತಿರುವ ಅಪ್ಪಟ ಸಂಕೇತ. ಅಷ್ಟಕ್ಕೂ ಕಾರ್ಕಳ ಬಿಟ್ಟರೆ ತಮ್ಮ ಮಗನನ್ನು ಬೇರೆಡೆಯಿಂದ ಇಳಿಸಲು ಮೊಯಿಲಿಯವರಿಗೆ ಧೈರ್ಯ ಇಲ್ಲ. ತಾವು ಏಳು ಸಲ ಗೆದ್ದ ಕ್ಷೇತ್ರದಲ್ಲಿ ಈಗಾಗಲೇ ಉದಯ ಕುಮಾರ್ ಶೆಟ್ಟಿ ಮುನಿಯಾಲು ಟವೆಲ್ ಹಾಕಿ ಆಗಿದೆ. ಅವರು ಸಿದ್ದು ಟೀಮಿನ ಸಕ್ರಿಯ ಸದಸ್ಯರಾದ ಮಹದೇವಪ್ಪ ಅವರ ಆಪ್ತರು. ಒಂದೊಂದು ಸೀಟ್ ನಿಂದಲೂ ಇಷ್ಟಿಷ್ಟು ಎಂದು ಲೆಕ್ಕ ಮಾಡಿದರೂ ರಾಹುಲ್ ಗೆ ಕೊಡಬೇಕಾಗಿರುವ ಕಪ್ಪ ಸಂಗ್ರಹವಾಗುವುದು ಕಷ್ಟವಾಗಿರುವಾಗ ಒಂದು ಅವರ ಮಗನಿಗೆ, ಒಂದು ಇವರ ಮಗಳಿಗೆ ಎಂದು ಕೊಟ್ಟರೆ ಮತ್ತೆ ತಾನು ಆಕಾಶ ನೋಡಬೇಕಾಗುವುದು ಎಂದು ಸಿದ್ಧರಾಮಯ್ಯನವರಿಗೆ ಅನಿಸಿದೆ. ಆದ್ದರಿಂದ ಅವರು ನೇರವಾಗಿ ಉದಯಕುಮಾರ್ ಶೆಟ್ಟಿಯವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾರ್ಕಳದಲ್ಲಿ ಮೊಯಿಲಿ ಯುಗ ಅಂತ್ಯವಾಗುವ ಸಮಯ ಬಂದಿದೆ. ಮೊಯಿಲಿ ತಮ್ಮ ಮಗನ ರಾಜಕೀಯ ಭವಿಷ್ಯ ಮುಗಿಯುವ ಆತಂಕದಲ್ಲಿದ್ದಾರೆ.
ಕೊನೆಗೆ ಕಾಂಗ್ರೆಸ್ ಉಸ್ತುವಾರಿ ಜೋರು ಮಾಡಿದ್ದಕ್ಕೆ ನಾನಲ್ಲ, ಮಗ ಬರೆದದ್ದು ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಹರ್ಷ ಮೊಯಿಲಿಗೆ ನೋಟಿಸ್ ಹೋಗಿದೆ. ಕಾರ್ಕಳದ ಬಿಜೆಪಿಗರು ಸುಲಭದಲ್ಲಿ ಗೆಲ್ಲಬಹುದು ಎಂದು ಅಂದುಕೊಂಡಿದ್ದ ಕ್ಷೇತ್ರ ಮೊಯಿಲಿ ಮಿಸ್ ಮಾಡಿಕೊಂಡ ಕಾರಣಕ್ಕೆ ಹೊಸ ಸವಾಲಿಗೆ ತಯಾರಾಗಬೇಕಿದೆ. ಪುತ್ರವಾತ್ಸಲ್ಯ ಕೆಲವೊಮ್ಮೆ ಏನೆಲ್ಲ ಮಾಡಿಸುತ್ತದೆ ಎನ್ನುವುದಕ್ಕೆ ಮೊಯಿಲಿ ತಾಜಾ ಉದಾಹರಣೆ ಎನ್ನುತ್ತಿದೆ ವಿಧಾನಸಭೆಯ ಪಡಸಾಲೆ!
Leave A Reply