ರಾಜ್ಯಕ್ಕೆ ಯಾವಾಗ ಬೆಂಕಿ ಬೀಳುತ್ತೊ, ಪಾಪದವನ ಹೊಟ್ಟೆಗೆ ಈಗಲೇ ಬೆಂಕಿ ಬಿದ್ದಿದೆ!
ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿದರೆ ಕರ್ನಾಟಕ ಹೊತ್ತಿ ಉರಿಯುತ್ತದೆ- ಮಾನ್ಯ ಸಂಸದ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಹೇಳಿಕೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವುದು ಬಿಡಿ ಅವರನ್ನು ಧಮ್ ಇದ್ದರೆ ಮುಟ್ಟಿ ನೋಡಿ- ಮಾನ್ಯ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆ.
ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸುವ ಗಂಡಸು ಪೊಲೀಸ್ ಇಲಾಖೆಯಲ್ಲಿ ಯಾರೂ ಇಲ್ವಾ? -ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ.
ಹೀಗೆ ಹೇಳುವ ಮೂಲಕ ಯಾರು ಯಾರನ್ನು ಕೆಣಕಲು ಹೊರಟಿದ್ದಾರೆ ಎನ್ನುವುದು ಸದ್ಯಕ್ಕೆ ಗೊತ್ತಾಗಬೇಕಾದ ಪ್ರಶ್ನೆ. ಹೀಗೆ ಇವರುಗಳು ಹೇಳಿದ ಕೂಡಲೇ ಏನಾಗುತ್ತದೆ? ಪೊಲೀಸ್ ಉನ್ನತ ಅಧಿಕಾರಿಗಳು ಗೊಂದಲಕ್ಕೆ ಬೀಳುತ್ತಾರೆ. ಬಂಧಿಸದಿದ್ದರೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಭೆಯಲ್ಲಿ ನಿಲ್ಲಿಸಿ ಜೋರು ಮಾಡುತ್ತಾರೆ. ಬಂಧಿಸಿದರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಬೆದರಿಕೆ ಹಾಕುತ್ತಾರೆ. ಬಂಧಿಸದೇ ಹೋದರೆ ನಮಗೆ ಧಮ್ ಇಲ್ಲ ಎಂದು ನಾವೇ ಒಪ್ಪಿಕೊಂಡಂತೆ ಆಗುತ್ತದೆ. ಅದೇ ಬಂಧಿಸಿದರೆ ಅಮಾಯಕ ನಾಲ್ಕು ಅಂಗಡಿಗಳು ಹೊತ್ತಿ ಉರಿದರೆ ಆಗ ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳಾಗುತ್ತದೆ. ಆಗಲೂ ಜವಾಬ್ದಾರಿ ಮಾಡುವುದು ಪೊಲೀಸ್ ಇಲಾಖೆಯನ್ನು. ಅದಕ್ಕೂ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹೀಗೆ ಒಟ್ಟಿನಲ್ಲಿ ಬಂಧಿಸಿದರೂ ಕಷ್ಟ. ಬಂಧಿಸದಿದ್ದರೂ ಕಷ್ಟ ಎನ್ನುವ ಸಂಕಷ್ಟಕ್ಕೆ ಇಲಾಖೆ ಬೀಳುತ್ತದೆ.
ಇನ್ನೊಂದೆಡೆ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವು, ಎಚ್ಚರವಿರಲಿ ಎಂದು ಬಿಜೆಪಿ ಮುಖಂಡರು ಭಾಷಣದಲ್ಲಿ ಬೀಗಿಯುತ್ತಾರೆ. ಅದು ಕೂಡ ಒಂದು ರೀತಿಯಲ್ಲಿ ಪರೋಕ್ಷ ಬ್ಲ್ಯಾಕ್ ಮೇಲ್. ಅದೇ ಹೊತ್ತಿನಲ್ಲಿ ಮುಂದಿನ ಬಾರಿ ಅಧಿಕಾರಕ್ಕೆ ಮತ್ತೆ ನಾವೇ ಬರುವುದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಅದು ಕೂಡ ಚುನಾವಣಾ ಭರವಸೆ. ನೀವು ಹೆದರಬೇಡಿ, ತಪ್ಪಿತಸ್ಥ ಹಿಂದೂಗಳ ಮೇಲೆ ಮತ್ತು ಇತರ ಧರ್ಮದವರ ಮೇಲೆ ಕೂಡ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳುತ್ತಾರೆ. ಇದರಿಂದ ಮತ್ತೆ ಉನ್ನತ ಪೊಲೀಸ್ ಅಧಿಕಾರಿಗಳು ಒತ್ತಡ ಅನುಭವಿಸುತ್ತಾರೆ.
ನಾನು ಹೇಳುವುದಿಷ್ಟೇ. ಕಲ್ಲಡ್ಕ ಪ್ರಭಾಕರ ಭಟ್ ಅವರು ತಪ್ಪು ಮಾಡಿದರೆ ಪೊಲೀಸರು ಸೂಕ್ತ ಸಾಕ್ಷಾಧಾರ ಇದ್ದರೆ ಬಂಧಿಸುತ್ತಾರೆ. ಅದೇ ಸಾಕ್ಷಾಧಾರಗಳು ಇಲ್ಲದೆ ಹೋದರೆ ಅವರು ಯಾರು ಬಂಧಿಸಲು ಹೇಳಿದರೂ ಬಂಧಿಸಲು ಆಗುವುದಿಲ್ಲ. ಅದಕ್ಕೆ ನಮ್ಮ ರಾಜಕಾರಣಿಗಳು ಯಾಕೆ ಮಧ್ಯ ಪ್ರವೇಶಿಸಬೇಕು. ನಮ್ಮ ರಾಜಕಾರಣಿಗಳು ಹೀಗೆ ಹೇಳುವುದರಿಂದಲೇ ತಾನೆ ಶಾಂತಿಗೆ ಭಂಗ ಬರುವುದು. ಯಡಿಯೂರಪ್ಪನವರು ಹೇಳಿದ ಪ್ರಕಾರ ಕರ್ನಾಟಕಕ್ಕೆ ಬೆಂಕಿ ಬಿದ್ದರೆ ಅದರಲ್ಲಿ ಅಲ್ಪಸಂಖ್ಯಾತರು ಮಾತ್ರ ಉರಿದು ಬೀಳುತ್ತಾರಾ ಅಥವಾ ಬೆಂಕಿ ಬಿದ್ದಾಗ ಅದರಲ್ಲಿ ಹಿಂದೂಗಳು ಕೂಡ ನೋವು ಅನುಭವಿಸುತ್ತಾರಾ, ಅದನ್ನು ಅವರು ಸ್ಪಷ್ಟಪಡಿಸಬೇಕು. ಅಷ್ಟಕ್ಕೂ ಕರ್ನಾಟಕ್ಕೆ ಬೆಂಕಿ ಬಿದ್ದರೆ ಇವರು ಏನೂ ಗೋವಾಕ್ಕೆ ಓಡಿ ಹೋಗಿ ಆಶ್ರಯ ಪಡೆದುಕೊಳ್ಳುತ್ತಾರಾ, ಅಥವಾ ಬೆಂಕಿ ಹಚ್ಚುವ ಗುತ್ತಿಗೆಯನ್ನು ಪಡೆದುಕೊಂಡವರು ಬಿಜೆಪಿಯವರನ್ನು ಬಿಟ್ಟು ಬೇರೆಯವರಿಗೆ ಮಾತ್ರ ಬೆಂಕಿ ಹಚ್ಚುತ್ತಾರಾ? ಅದು ಕೂಡ ಗೊತ್ತಾಗಬೇಕು. ಈಗ ಇವರು ಬೆಂಕಿ ಕೊಟ್ಟಾಗ ಅದರಲ್ಲಿ ಅಮಾಯಕ ಅಲ್ಪಸಂಖ್ಯಾತರು ಕೂಡ ಸಾಯುತ್ತಾರಾ ಅಥವಾ ಇವರ ಪ್ರಕಾರ ಆರೋಪಿಗಳು ಮಾತ್ರ ಸಾಯುತ್ತಾರಾ? ಇದೆಲ್ಲ ಲೆಕ್ಕ ಹಾಕಿ ಇವರು ಬೆಂಕಿ ಕೊಡಲಿ, ಅದು ಬಿಟ್ಟು ಇಡೀ ಕರ್ನಾಟಕಕ್ಕೆ ಬೆಂಕಿ ಕೊಟ್ಟರೆ ಸುಟ್ಟು ಹೋಗುವುದು ನಮ್ಮ ದೇಶದ ಆಸ್ತಿಪಾಸ್ತಿ ವಿನ: ಯಾವುದೇ ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ ಮಾಡಿಟ್ಟ ಕೋಟಿಗಟ್ಟಲೆ ಬೇನಾಮಿ ಆಸ್ತಿಯಲ್ಲ!
ಇದನ್ನೇ ಜನಸಾಮಾನ್ಯ ಕೇಳ್ತಾ ಇರುವುದು, ನೀವು ಒಬ್ಬ ವ್ಯಕ್ತಿಯನ್ನು ಬಂಧಿಸಿದರೆ ಬೆಂಕಿ ಬೀಳುತ್ತೆ ಎಂದು ಹೇಳುವುದಾದರೆ ಆ ಬಂಧನದ ದಿನ ಮತ್ತು ಬೆಂಕಿ ಬೀಳುವ ದಿನವನ್ನು ಎಡ್ವಾನ್ ಆಗಿ ಪತ್ರಿಕೆಯಲ್ಲಿ ತಿಳಿಸಿ. ಇಲ್ಲದಿದ್ದರೆ ಉದ್ಯೋಗಕ್ಕೆ ಹೋಗುವ, ಬೆಳ್ಳಂ ಬೆಳಿಗ್ಗೆ ಅಥವಾ ರಾತ್ರಿ ವ್ಯವಹಾರ, ಉದ್ಯೋಗ ಮುಗಿಸಿ ಬರುವ ನನ್ನಂತಹ ಪಾಪದವರು ಯಾರದ್ದೋ ಚೂರಿಗೆ ಎದೆಕೊಡುವ ಪರಿಸ್ಥಿತಿ ಬರುತ್ತದೆ. ಇನ್ನು ನೀವು ಹೇಳಿಕೆ ಕೊಟ್ಟು ಯಾರದ್ದೋ ಹಣದಲ್ಲಿ ಊಟ, ತಿಂಡಿ ಮಾಡಿ ವಿಮಾನದಲ್ಲಿ ಹತ್ತಿ ಹೋಗುತ್ತೀರಿ. ಆದರೆ ನಾವು ನಮ್ಮ ಊಟ, ತಿಂಡಿಗಾಗಿ ಇಲ್ಲಿ ದುಡಿಯಬೇಕು. ರಾಜ್ಯಕ್ಕೆ ಯಾವಾಗ ಇವರು ಬೆಂಕಿ ಹಾಕುತ್ತಾರೋ ಆದರೆ ಜನಸಾಮಾನ್ಯರ ಹೊಟ್ಟೆಗೆ ಈಗಲೇ ಬೆಂಕಿ ಬೀಳುತ್ತಿದೆ
Leave A Reply