ಐವನ್ ಅವರನ್ನು ಮೀರಿಸಿ ಕ್ರೈಸ್ತರ ನಾಯಕರಾಗಲು ಹೊರಟ ಲೋಬೋ ಎಡವಿ ಬಿದ್ದರು!!
ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿವಾದ ಕಳೆದ ವರ್ಷದ ಜುಲೈ ಅಂತ್ಯಕ್ಕೆ ಆರಂಭವಾಗಿದೆ. ಅದರ ನಂತರ ವಿಜಯಾ ಬ್ಯಾಂಕ್ ನೌಕರರ ಸಂಘದವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಆದರೆ ಸಂತ ಎಲೋಶಿಯಸ್ ಕಾಲೇಜಿನವರು ಇದನ್ನು ತಪ್ಪೆನ್ನುವಂತೆ ಪತ್ರಿಕೆಯಲ್ಲಿ ಪ್ರಕಟನೆ ಕೊಟ್ಟಿದ್ದಾರೆ. ಈಗ ನಾನು ಹೇಳುವುದೇನೆಂದರೆ ವಿಜಯಾ ಬ್ಯಾಂಕ್ ನೌಕರರ ಸಂಘದವರು ತಮಗೆ ನ್ಯಾಯ ಬೇಕು ಎನ್ನುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಹೋದರೆ ತಪ್ಪು ಹೇಗೆ ಆಗುತ್ತದೆ? ನಮ್ಮ ಪ್ರಜಾಪ್ರಭುತ್ವದ ಮೂರು ಅಂಗಗಳ ಬಗ್ಗೆ ಸಂತ ಎಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯವರಿಗೆ ಸರಿಯಾಗಿ ಗೊತ್ತಿದ್ದರೆ ಅವರು ನ್ಯಾಯಾಲಯಕ್ಕೆ ಹೋದದ್ದು ತಪ್ಪು ಎನ್ನುತ್ತಿರಲಿಲ್ಲ. ಯಾಕೆಂದರೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರು ಆ ರಸ್ತೆಗೆ ಇಡಲು ಶಾಸಕಾಂಗ ಒಪ್ಪಿತ್ತು, ಕಾರ್ಯಾಂಗದ ಮೂಲಕ ಪ್ರಕ್ರಿಯೆ ನಡೆದಿದೆ. ಇಷ್ಟಾದ ನಂತರ ಕೊನೆಗೆ ಶಾಸಕಾಂಗದ ಪ್ರತಿನಿಧಿಯೊಬ್ಬರು ಅದಕ್ಕೆ ತಡೆಯಾಜ್ಞೆ ತಂದರೆ ಆಗ ಅನ್ಯಾಯಕ್ಕೊಳಗಾದವರು ನೇರವಾಗಿ ಹೋಗಬೇಕಾಗಿರುವುದು ನ್ಯಾಯಾಂಗದ ಬಳಿಯೇ ತಾನೆ. ಅದರಲ್ಲಿ ತಪ್ಪು ಹೇಗೆ ಕಂಡು ಹಿಡಿಯುತ್ತೀರಿ?
ಮಳೆಗೆ ನಿಜ ಹೆಸರು ಬಹಿರಂಗವಾಗಿತ್ತು…
ಒಂದು ವೇಳೆ ತಪ್ಪು ಕಂಡು ಹಿಡಿಯುವುದೇ ಆದರೆ ಅದು ಸಂತ ಎಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯ ನಡವಳಿಕೆಯಲ್ಲಿ ಕಂಡು ಹಿಡಿಯಬೇಕು. ಅವರ ಎಲ್ಲಾ ದಾಖಲೆಗಳಲ್ಲಿ ವಿಳಾಸದ ಉಲ್ಲೇಖ ಇದ್ದದ್ದು ಲೈಟ್ ಹೌಸ್ ಹಿಲ್ ರಸ್ತೆ ಎಂದೇ ಇತ್ತು. ಎಲ್ಲಿಯ ತನಕ ಎಂದರೆ ಅವರು ತಮ್ಮ ಕಾಲೇಜಿನ ಪ್ರವೇಶ ದ್ವಾರದ ಹೊರಗಿನ ಬೋರ್ಡ್ ನಲ್ಲಿ ಲೈಟ್ ಹೌಸ್ ಹಿಲ್ ರಸ್ತೆ ಎಂದೇ ಬರೆದಿದ್ದರು. ಅದೇ ಬೋರ್ಡ್ ಅನಾದಿಕಾಲದಿಂದ ಅಲ್ಲಿತ್ತು. ಯಾವಾಗ ಈ ವಿಷಯ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಯಿತೋ ಕೆಲವರು ಆ ಬೋರ್ಡಿನ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಾಕಿಕೊಂಡು ಕಾಲೇಜಿನ ವಿಳಾಸ ಯಾವ ಹೆಸರಿನಲ್ಲಿ ಇದೆ ಎಂದು ನೋಡಿ ಎಂದು ಸಾಕ್ಷ್ಯ ಸಹಿತ ಬಹಿರಂಗಪಡಿಸಿದ್ದರು.
ಯಾಕೆಂದರೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿವಾದ ಆದಾಗ ಕಾಲೇಜಿನವರು ಆ ರಸ್ತೆಗೆ ಸಂತ ಎಲೋಶಿಯಸ್ ಕಾಲೇಜು ರಸ್ತೆ ಎಂದೇ ಕರೆಯಲಾಗುತ್ತದೆ ಎಂದು ವಾದಿಸಿದ್ದರು. ಆದರೆ ತಮ್ಮ ಕಾಲೇಜಿನ ಪ್ರವೇಶ ದ್ವಾರದ ಬೋರ್ಡಿನಲ್ಲಿ ಲೈಟ್ ಹೌಸ್ ಹಿಲ್ ರಸ್ತೆ ಎಂದು ಬರೆದಿದ್ದರು. ಅದರ ಫೋಟೋ ಜನರಿಗೆ ಸಾಮಾಜಿಕ ತಾಣಗಳ ಮೂಲಕ ನೋಡಲು ಸಿಕ್ಕಿದ ನಂತರ ಬುದ್ಧಿವಂತರಾದ ಕಾಲೇಜಿನವರು ಲೈಟ್ ಹೌಸ್ ಹಿಲ್ ರೋಡ್ ಎಂದು ಬರೆದಿದ್ದದ್ದು ಕಾಣದ ಹಾಗೆ ಮಾಡಲು ಪ್ರಯತ್ನ ಪಟ್ಟರು. ಆದರೆ ಮನುಷ್ಯರ ಕಣ್ಣಿಗೆ ಕಾಣದ ಹಾಗೆ ಮಾಡಬಹುದು, ಆದರೆ ದೇವರ ಕಣ್ಣಿಗೆ ಕಾಣದ ಹಾಗೆ ಮಾಡಲು ಆಗುವುದಿಲ್ಲವಲ್ಲ, ಇವರು ಅದೇನೋ ಪೇಪರ್ ತರಹದ್ದನ್ನು ಹಾಕಿ ಮುಚ್ಚಲು ಯತ್ನಿಸಿದ್ದರು. ಅದೇ ರಾತ್ರಿ ಅಕಾಲಿಕವಾಗಿ ಜೋರು ಧರೆಗಿಳಿದ ವರುಣದೇವ ಇವರ ಸುಳ್ಳಿನ ಬ್ರಹ್ಮಾಂಡವನ್ನು ಕಿತ್ತೆಸಗಿದ್ದ. ಇದಕ್ಕೆ ಏನು ಹೇಳುತ್ತಿರಿ, ಸಂತ ಎಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯವರೇ?
ಕ್ರೈಸ್ತರ ಶಾಸಕರಾ ಲೋಬೋ...
ಒಂದು ವಿಷಯ ಹೇಳ್ಲಾ, ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಹೋಗುವಾಗ ನಿಮಗೆ ಎಲೋಶಿಯಸ್ ಕಾಲೇಜಿನ ಬೃಹತ್ ಕಟ್ಟಡಗಳು ಸಿಗುತ್ತವೆ. ಆ ರಸ್ತೆಯಲ್ಲಿ ಹೆಚ್ಚು ಸಂಚರಿಸುವವರು ವಿದ್ಯಾರ್ಥಿಗಳು. ಅವರಿಗೆ ಆ ರಸ್ತೆಗೆ ಯಾವ ಹೆಸರು ಇಡಬೇಕು ಎನ್ನುವುದು ಮುಖ್ಯವಲ್ಲ. ಅವರು ಅಲ್ಲಿ ಬರುತ್ತಾರೆ, ಕಲಿಯುತ್ತಾರೆ, ಹೋಗುತ್ತಾರೆ. ಅಲ್ಲಿ ಹಿಂದೆನೂ ಲಕ್ಷಾಂತರ ಮಕ್ಕಳು ಕಲಿತು ಹೋಗಿದ್ದಾರೆ, ಈಗಲೂ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಸಂತ ಎಲೋಶಿಯಸ್ ಕಾಲೇಜಿಗೆ ಒಂದು ರಸ್ತೆಯ ಹೆಸರಿನಿಂದ ಘನಸ್ತಿಕೆ ಹೆಚ್ಚಾಗುವುದಿಲ್ಲ, ಕಡಿಮೆ ಕೂಡ ಆಗುವುದಿಲ್ಲ. ಅಷ್ಟಕ್ಕೂ ಈ ಕಾಲೇಜು ಇರುವ ತನಕ ಸಂತ ಎಲೋಶಿಯಸ್ ಎನ್ನುವ ಹೆಸರು ಹೇಗೆ ಅಜರಾಮರವಾಗಿರುತ್ತೋ, ಹಾಗೆ ಈ ರಸ್ತೆ ಇರುವ ತನಕ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಉಳಿಯುತ್ತಿತ್ತು.
ಇಲ್ಲಿ ಶಾಸಕರಾಗಿದ್ದ ಜೆ ಆರ್ ಲೋಬೋ ಅವರಿಗೆ ತಮ್ಮಲ್ಲಿ ಕ್ಯಾಪೆಸಿಟಿ ಇತ್ತು ಎಂದಾದರೆ ಸತ್ಯದೊಂದಿಗೆ ನಿಲ್ಲಬೇಕಿತ್ತು. ಎಲ್ಲವೂ ಕಾನೂನು ಪ್ರಕಾರ ನಡೆದಿರುವುದರಿಂದ ತಾನು ಸತ್ಯದೊಂದಿಗೆ ಇರುತ್ತೇನೆ ಎಂದು ಕಾಲೇಜಿನವರಿಗೆ ಖಡಾಖಂಡಿತವಾಗಿ ಹೇಳಬೇಕಿತ್ತು. ಯಾಕೆಂದರೆ ಅವರು ಕೇವಲ ಕ್ರೈಸ್ತರ ಶಾಸಕರಲ್ಲ, ಅವರು ಕಳೆದ ಬಾರಿ 12 ಸಾವಿರ ಮತಗಳ ಅಂತರದಲ್ಲಿ ಯೋಗೀಶ್ ಭಟ್ಟರ ವಿರುದ್ಧ ಗೆದ್ದವರು. ಕೇವಲ ಕ್ರೈಸ್ತರೇ ಮತ ಹಾಕಿದ್ದರೆ ಗೆಲುವು ಆಗುತ್ತಿತ್ತಾ?
ಬಹುಶ: ರಾಜಕಾರಣದಲ್ಲಿ ಲೋಬೋ ಅವರು ಇಷ್ಟು ಬೇಗ ಸ್ವಜನ ಪಕ್ಷಪಾತಕ್ಕೆ ಅಣಿಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಯಾಕೆಂದರೆ ಕಳೆದ ಬಾರಿ ಅಜಾತಶತ್ರು ಯೋಗೀಶ್ ಭಟ್ ಅವರ ವಿರುದ್ಧ ಅವರು ಗೆಲ್ಲುತ್ತಾರೆ ಎನ್ನುವುದು ಕೂಡ ಯಾರಿಗೂ ನಿರೀಕ್ಷೆ ಇರಲಿಲ್ಲ. ಅಂತರ ಕಡಿಮೆಯಾಗಬಹುದು ಆದರೆ ಲೋಬೋ ಗೆಲ್ಲಲ್ಲ ಎಂದೇ ಎಲ್ಲರೂ ತಿಳಿದುಕೊಂಡಿದ್ದರು. ಆದರೆ ಬಿಜೆಪಿಯ ವಿರುದ್ಧದ ಅಲೆ ಎಷ್ಟಿತ್ತು ಎಂದರೆ ಬಹುಶ: ಒಂದು ಲೈಟ್ ಕಂಬ ಕಾಂಗ್ರೆಸ್ಸಿನಿಂದ ನಿಲ್ಲಿಸಿದ್ದರೂ ಅದು ಗೆಲ್ಲುತ್ತಿತ್ತಾ ಏನೋ?. ಅಂತಹ ಅಲೆಯಲ್ಲಿ ಗೆದ್ದವರು ಲೋಬೋ. ಅಧಿಕಾರಿಯಾಗಿದ್ದ ಕಾರಣ ಮನಸ್ಸು ಮಾಡಿದ್ದರೆ ಅವರಿಗೆ ಸಂಧಾನ ಮಾಡುವುದು ಗೊತ್ತಿತ್ತು. ಒಟ್ಟಿಗೆ ಐವನ್ ಡಿಸೋಜಾ ಅವರು ಕೂಡ ಇದ್ದರು. ಐವನ್ ಅವರಿಗೆ ಇಂತಹ ವಿಷಯದಲ್ಲಿ ಯಾವಾಗಲೂ ಬ್ಯಾಲೆನ್ಸ್ ಮಾಡುವುದು ಗೊತ್ತು. ಅವರ ಸಲಹೆ ಪಡೆಯಬಹುದಿತ್ತು. ಆದರೆ ಲೋಬೋ ಕ್ರೈಸ್ತ ಬಾಂಧವರ ಏಕೈಕ ನಾಯಕನಾಗಲು ಹೊರಟರು. ಬಂಟರು ಇವತ್ತು ಪ್ರತಿಭಟಿಸುತ್ತಾರೆ, ನಾಳೆ ಮರೆಯುತ್ತಾರೆ ಎಂದು ಅಂದುಕೊಂಡರು. ಅದು ಅವರಿಗೆ ದುಬಾರಿಯಾಗಿದೆ. ಸ್ವತ: ಅನೇಕ ಕ್ರೈಸ್ತರಿಗೆ ಈ ಜಾತಿ ರಾಜಕಾರಣ ಮಾಡಿದ ಲೋಬೋ ಅವರ ಬಗ್ಗೆ ಬೇಸರವಿದೆ. ಆದರೆ ಲೋಬೋ ತಪ್ಪು ಮಾಡಿ ಆಗಿದೆ!
Leave A Reply