ಕೆಪಿಸಿಸಿ ಅಧ್ಯಕ್ಷರ ಜಿಲ್ಲೆಯಲ್ಲೇ ಫ್ಲೋರೈಡ್ ಯುಕ್ತ ನೀರು, ಗಮನ ಹರಿಸೋರು ಯಾರು?
ತುಮಕೂರು: ಈ ಬಾರಿಯ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭಾರಿ ಚಟುವಟಿಕೆಯಿಂದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ, ಕಳೆದ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ಜನ ಸೋಲಿಸಿದರು ಎಂಬ ಹಳೆಯ ಭೀತಿಯೋ ಇಲ್ಲವೇ ಈ ಬಾರಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಭ್ರಾಂತಿಯೋ, ಪರಮೇಶ್ವರ್ ಅವರನ್ನು ಚಟುವಟಿಕೆಯಿಂದಿರಿಸಿದೆ.
ಆದರೆ, ಹೋದ ಕಡೆಯಲ್ಲೆಲ್ಲ, ನಾವು ಬಡವರ ಪರ, ಅಭಿವೃದ್ಧಿ ಪರ ಎನ್ನುವ ಡಾ.ಜಿ.ಪರಮೇಶ್ವರ್ ಅವರ ಜಿಲ್ಲೆಯಲ್ಲೇ ಜನ ಫ್ಲೋರೈಡ್ ನೀರು ಕುಡಿದು ಆಸ್ಪತ್ರೆ ಪಾಲಾಗುತ್ತಿದ್ದು, ಈ ಕುರಿತು ಪರಮೇಶ್ವರ್ ಯೋಚಿಸಿಯೇ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಹೌದು, ಕೇಂದ್ರ ಅಂತರ್ಜಲ ಮಂಡಳಿ ತುಮಕೂರು ಜಿಲ್ಲೆಯ ಶಿರಾ, ಗುಬ್ಬಿ, ಪಾವಗಡ, ಮಧುಗಿರಿ ಹಾಗೂ ಸ್ವತಃ ಡಾ.ಜಿ.ಪರಮೇಶ್ವರ್ ಅವರ ಕ್ಷೇತ್ರವಾದ ಕೊರಟಗೆರೆ ತಾಲೂಕಿನಲ್ಲಿ ನೀರಿನ ಪರೀಕ್ಷೆ ಮಾಡಿದ್ದು, ಸಾಮಾನ್ಯ ನೀರಿನಲ್ಲಿ ಇರುವ ಫ್ಲೋರೈಡ್ ಗಿಂತ, ಈ ತಾಲೂಕಿನ ನೀರಿನಲ್ಲಿ ಜಾಸ್ತಿಯಿದೆ ಎಂದು ತಿಳಿದುಬಂದಿದೆ.
ಅದರಲ್ಲೂ ಪಾವಗಡ ತಾಲೂಕಿನ ತಿರುಮಣಿಯಲ್ಲಿ ಈ ಫ್ಲೋರೈಡ್ ಪ್ರಮಾಣದ ಅಪಾಯದ ಅಂಚು ತಲುಪಿದ್ದು, ಜನ ಕುಡಿಯುವ ನೀರು ಸ್ಲೋ ಪಾಯ್ಸನ್ ಹಾಗೆ ಆಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಆಳುವ ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಹ ಮೂಡುತ್ತಿದೆ.
ಅಷ್ಟೇ ಅಲ್ಲ, ಈಗಾಗಲೇ ಈ ಫ್ಲೋರೈಡ್ ಯುಕ್ತ ನೀರು ತನ್ನ ಕೆಲಸ ಆರಂಭಿಸಿದ್ದು, ಜಿಲ್ಲೆಯ ಹಲವು ತಾಲೂಕಿನ ಜನ ಪದೇಪದೆ ಆವರಿಸುವ ತಲೆನೋವು, ಕೀಲು ನೋವು ಹಾಗೂ ಹಲ್ಲುಗಳ ನೋವಿನಿಂದ ಬಳಲುತ್ತಿದ್ದಾರೆ. ಸರ್ಕಾರ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ತುಮಕೂರು ಜಿಲ್ಲೆ ಕೆಪಿಸಿಸಿ ಅಧ್ಯಕ್ಷರ ತವರು ಜಿಲ್ಲೆಯಾದರೂ ಇಲ್ಲೂ ನೂರಾರು ಅಡಿ ಕೊರೆದರೂ ನೀರು ಬೀಳದ ಪರಿಸ್ಥಿತಿ ಇದೆ. ಇದು ನೈಸರ್ಗಿಕ ಪರಿಣಾಮ ಎಂದರೂ, ಶುದ್ಧ ನೀರಿನ ಘಟಕ, ಕುಡಿಯುವ ನೀರಿನ ಪೂರೈಕೆಯಲ್ಲಿ ಪರಮೇಶ್ವರ್ ವಿಫಲರಾಗಿದ್ದಾರೆ ಎಂಬುದು ಜನರ ಪರಿಸ್ಥಿತಿ ನೋಡಿದರೆ ದಟ್ಟವಾಗುತ್ತದೆ.
ಚುನಾವಣೆಯಲ್ಲಿ ಬ್ಯುಸಿಯಾಗಿರುವ, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಪರಮೇಶ್ವರ್ ಅವರಿಗೆ ಬಡಜನರ ಆರ್ತನಾದ ಹೇಗೆ ಕೇಳಬೇಕು? ಗ್ರಾಮವಾಸ್ತವ್ಯಕ್ಕೆ ಹೋದಾಗಲಾದರೂ ಅರ್ಥ ಮಾಡಿಕೊಳ್ಳಬಹುದಿತ್ತಲ್ಲವೇ ಪರಮೇಶ್ವರ್ ಅವರೇ?
Leave A Reply