ಭಾರತದ ವಿರುದ್ಧದ ಪಾಕ್ ಕುತಂತ್ರ ಬಯಲು: ಎನ್ ಐಎ ಪಟ್ಟಿಯಲ್ಲಿ ಪಾಕ್ ರಾಜತಾಂತ್ರಿಕ
ದೆಹಲಿ: ಭಾರತದ ವಿರುದ್ಧ ಪಾಕಿಸ್ತಾನದ ಸರ್ಕಾರವೇ ನೇರವಾಗಿ ಕುಕೃತ್ಯಗಳಿಗೆ ಪ್ರೇರಣೆ ನೀಡುತ್ತದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೀಗ ಮತ್ತೊಮ್ಮೆ ಭಾರತ ರಾಷ್ಟ್ರೀಯ ತನಿಖಾದಳ ಈ ಭಯಾನಕ ಸತ್ಯವನ್ನು ಹೊರಹಾಕಿದ್ದು, ಭಾರತದ ವಿರುದ್ಧದ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನದ ರಾಜತಾಂತ್ರಿಕರೊಬ್ಬರು ಭಾಗವಹಿಸಿದ್ದು, ಅವರನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದ್ದಾರೆ. ಈ ಮೂಲಕ ಪಾಕ್ ಸರ್ಕಾರ ನೇರವಾಗಿ ಕುಕೃತ್ಯಗಳಲ್ಲಿ ತನ್ನ ಅಧಿಕಾರಿಗಳನ್ನು ತೊಡಗಿಸಿದೆ ಎಂಬ ಅಂಶಕ್ಕೆ ಮತ್ತಷ್ಟು ಪುಷ್ಠಿ ದೊರಕಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಥಮ ಬಾರಿಗೆ ವಾಂಟೆಡ್ ಪಟ್ಟಿಯಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಯನ್ನು ಸೇರ್ಪಡೆ ಮಾಡಿದೆ. ಕೊಲಂಬೋದ ಪಾಕ್ ಹೈಕಮಿಷನ್‌ನ ವೀಸಾ ಸಲಹೆಗಾರರಾಗಿರುವ ರಾಜತಾಂತ್ರಿಕ ಅಧಿಕಾರಿ ಅಮೀರ್ ಝುಬೇರ್ ಸಿದ್ಧಿಕಿ ಎನ್ ಐಎ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆಯಾದವರು.
2014 ರಲ್ಲಿ ದಕ್ಷಿಣ ಭಾರತದ ಸೇನೆ ಮತ್ತು ನೌಕಾಪಡೆ ಕಮಾಂಡೋಗಳ ಪಕ್ಕದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ದೂತಾವಾಸಗಳ ಮೇಲೆ 26/11 ಮಾದರಿಯ ಭಯೋತ್ಪಾದಕ ದಾಳಿಗೆ ಸಂಚು ಹೂಡಿದ ಇಬ್ಬರು ಪಾಕ್ ಅಧಿಕಾರಿಗಳ ಜತೆಗೆ ಸಿದ್ದಿಕಿ ಹೆಸರನ್ನೂ ಎನ್‌ಐಎ ಪಟ್ಟಿಗೆ ಸೇರಿಸಲಾಗಿದೆ.
ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಎಲ್ಲ ಅಧಿಕಾರಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಇಂಟರ್‌ಪೋಲ್‌ಗೆ ಎನ್‌ಐಎ ಮನವಿ ಮಾಡಿದೆ. ಸಿದ್ದಿಕಿ ವಿರುದ್ಧ ಫೆಬ್ರವರಿಯಲ್ಲಿ ಆರೋಪಪಟ್ಟಿ ಸಿದ್ಧಪಡಿಸಲಾಗಿತ್ತು. ಪಾಕ್ ಗುಪ್ತಚರ ಅಧಿಕಾರಿಗಳನ್ನು ‘ವಿನೀತ್’ ಮತ್ತು ‘ಬಾಸ್ ಅಲಿಯಾಸ್ ಶಾ’ ಎಂಬ ಗುಪ್ತನಾಮಗಳಿಂದ ಗುರುತಿಸಲಾಗಿದೆ. ಇತರ ಮೂವರನ್ನು ಅಧಿಕೃತ ಹೆಸರುಗಳಿಂದ ಗುರುತಿಸಿಲ್ಲ.
ಶ್ರೀಲಂಕಾ ಪ್ರಜೆ ಮುಹಮ್ಮದ್ ಸಕೀರ್ ಹುಸೇನ್ ಮತ್ತು ಅರುಣ್ ಸೆಲ್ವರಾಜ್, ಶಿವಬಾಲನ್ ಹಾಗೂ ತಮೀಮ್ ಅನ್ಸಾರಿ ಎಂಬುವರನ್ನು ತನ್ನ ಏಜೆಂಟ್ ಗಳಾಗಿ ಸಿದ್ಧಿಕಿ ನೇಮಿಸಿಕೊಂಡು, 2009 ರಿಂದ 2016ರ ಮಧ್ಯೆ ಈ ಅಧಿಕಾರಿಗಳು ಕೊಲಂಬೋದಲ್ಲಿ ಕರ್ತವ್ಯದಲ್ಲಿದ್ದಾಗ ಚೆನ್ನೈ ಹಾಗೂ ದಕ್ಷಿಣ ಭಾರತದ ಮಹತ್ವದ ಸ್ಥಳಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಏಜೆಂಟ್ ಗಳಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಸಿದ್ದಿಕಿ, ರಕ್ಷಣಾ ಸ್ಥಾವರಗಳು, ಪರಮಾಣು ಸ್ಥಾವರಗಳು ಮತ್ತು ಸೇನೆಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದ. ಭಾರತದ ಹಿರಿಯ ಸೇನಾಧಿಕಾರಿಗಳ ಲ್ಯಾಪ್ ಟಾಪ್ ಕದಿಯಲು ಸೂಚಿಸಿದ್ದ ಎಂದು ಎನ್ಐಎ ತಿಳಿಸಿದೆ. ಅಮೆರಿಕ ಭಾರತೀಯ ಅಧಿಕಾರಿಗಳ ತನಿಖೆಗೆ ಸಾಥ್ ನೀಡಿದ್ದು, ಮಹತ್ವದ ದಾಖಲೆಗಳನ್ನು ಈ ಅಧಿಕಾರಿಗಳ ಕುರಿತು ನೀಡಿದೆ. ಇದರಿಂದ ಅಧಿಕಾರಿಗಳ ಸಂಚು ಬಟಾ ಬಯಲಾಗಿದೆ.
Leave A Reply