ಮೂಡಬಿದ್ರೆಯಲ್ಲಿ ಜಗದೀಶ್ ಅಧಿಕಾರಿಯ ಬೆನ್ನ ಹಿಂದೆ ಯಾರಿದ್ದಾರೆ!!
ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಯಾರಾಗಬೇಕು ಎನ್ನುವ ಘೋಷಣೆ ಹೊರಬೀಳುವ ಎರಡು ದಿನಗಳ ಮೊದಲು ಕಿನ್ನಿಗೋಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ಎಲ್ಲಾ ಬಿಜೆಪಿ ಆಕಾಂಕ್ಷಿಗಳು ಕುಳಿತು ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಸಾರಿದ್ದರು. ಅದಾಗಿ ಟಿಕೆಟ್ ಉಮಾನಾಥ್ ಕೋಟ್ಯಾನ್ ಅವರಿಗೆ ಎಂದು ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಮೂಡಬಿದ್ರೆಯ ಬಿಜೆಪಿ ಕಚೇರಿಗೆ ಬೀಗ ಬಿದ್ದಿದೆ. ಬೀಗ ಹಾಕಿದವರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ. ಅದಕ್ಕೆ ಅವರು ಕೊಟ್ಟ ಸಮಜಾಯಿಷಿ ಎಂದರೆ ಕಚೇರಿ ತನ್ನ ಸ್ವಂತದ್ದು. ಮೂಡಬಿದ್ರೆಯಲ್ಲಿ ಬಿಜೆಪಿಗೆ ಕಚೇರಿ ಇಲ್ಲದೇ ಇರುವುದರಿಂದ ತನ್ನ ಕಚೇರಿಯನ್ನೇ ಬಿಜೆಪಿಯ ಕಚೇರಿಯನ್ನಾಗಿ ಮಾಡಲಾಗಿತ್ತು. ಈಗ ಬೇಕಾದರೆ ಬಿಜೆಪಿಯವರು ಅವರದ್ದೇ ಕಚೇರಿ ತೆರೆಯಲಿ ಎಂದಿದ್ದಾರೆ. ಅಷ್ಟೇ ಅಲ್ಲ ಮೂಲ್ಕಿ-ಮೂಡಬಿದ್ರೆಯಲ್ಲಿ ಬಿಜೆಪಿ ಹೈಕಮಾಂಡ್ ಸತ್ತ ಕತ್ತೆಗೆ ಟಿಕೆಟ್ ನೀಡಿದ್ದಾರೆ ಎಂದು ಹೀಯಾಳಿಸಿದ್ದಾರೆ. ನೀವು ಹಾಗೆ ಹೇಳುವುದು ಸರಿಯಾ, ಬಿಜೆಪಿಯಲ್ಲಿ ಅಂತಹ ಸಂಸ್ಕೃತಿ ಇದೆಯಾ, ಜನ ಅಸಹ್ಯ ಪಡಲ್ವಾ ಎಂದು ಟಿವಿ ಮಾಧ್ಯಮದವರು ಕೇಳಿದಾಗ ” ಕೆಲವೊಮ್ಮೆ ರಾಜಕೀಯದಲ್ಲಿ ಕತ್ತೆಗೆ ಟಿಕೆಟ್ ಕೊಟ್ಟರೂ ಅದು ಗೆಲ್ಲುತ್ತೆ ಎಂದು ಹೇಳುತ್ತಾರಲ್ಲ, ಹಾಗೆ ನಾನು ಸತ್ತ ಕತ್ತೆಗೆ ಟಿಕೆಟ್ ಕೊಟ್ಟಿದ್ದಾರೆ ಎಂದಿದ್ದೆ” ಎಂದು ತಿಪ್ಪೆ ಸಾರಿಸಲು ನೋಡಿದ್ದಾರೆ. ಹಾಗಾದರೆ ಯಾರಿಗೂ ಟಿಕೆಟ್ ಕೊಟ್ಟರೂ ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಎಂದು ಮೊನ್ನೆ ಸುದ್ದಿಗೋಷ್ಟಿಯಲ್ಲಿ ನೀವೆಲ್ಲ ಸೇರಿ ಹೇಳಿದ್ದಿರಲ್ಲ ಎಂದು ಕೇಳಿದ್ದಕ್ಕೆ ಅದನ್ನು ನಾನು ಹೇಳಿಲ್ಲ, ಕ್ಷೇತ್ರಾಧ್ಯಕ್ಷ ಈಶ್ವರ್ ಕಟೀಲ್ ಅವರು ಹೇಳಿದ್ದರು. ಅವರನ್ನೇ ಕೇಳಿ ಎಂದಿದ್ದಾರೆ. ಅವರ ಈ ಎಲ್ಲ ನಡೆ, ನುಡಿಗಳು ಏನನ್ನು ಸೂಚಿಸುತ್ತವೆ.
ಈ ಬಾರಿ ಇಲ್ಲಿ ಖಾತೆ ತೆರೆಯದಿದ್ದರೆ ಇನ್ನೆಂದೂ ಕಷ್ಟ…
ಒಂದಿಷ್ಟು ಫ್ಲಾಶ್ ಬ್ಯಾಕಿಗೆ ಹೋಗೋಣ. ಕಳೆದ ಬಾರಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿದ್ದು ಉಮಾನಾಥ ಕೋಟ್ಯಾನ್ ಅವರಿಗೆನೆ. ಈ ಬಾರಿ ಕೆಲವು ಕ್ಷೇತ್ರಗಳಿಗೆ ಮಾಡಿದಂತೆ ಕಳೆದ ಬಾರಿಯೂ ಹೀಗೆ ತಡವಾಗಿ ಅಭ್ಯರ್ಥಿಗಳ ಘೋಷಣೆ ಕೆಲವು ಕ್ಷೇತ್ರಗಳಲ್ಲಿ ಆಗಿತ್ತು. ಆದ್ದರಿಂದ ಉಮಾನಾಥ ಕೋಟ್ಯಾನ್ ಅವರಿಗೆ ಸಿಕ್ಕಿದ್ದು ಎರಡು ವಾರ ಮಾತ್ರ. ಎರಡು ವಾರಗಳಲ್ಲಿ ಅವರು ಮತ್ತು ಪಕ್ಷದ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿ ಗೆಲ್ಲಲು ಯತ್ನಿಸಿದರು. ಆದರೆ ಆಗ ಅಲ್ಲಿನ ಶಾಸಕ ಅಭಯಚಂದ್ರ ಜೈನ್ ಹೆಸರು ಈಗ ಹೇಗಿದೆಯೋ ಅಷ್ಟು “ಒಳ್ಳೆಯ”ದು ಇರಲಿಲ್ಲ. ಅಷ್ಟೇ ಅಲ್ಲದೆ ಆಗ ಬಿಜೆಪಿಯ ರಾಜ್ಯ ನಾಯಕರ ಅತಿರೇಕದ ವರ್ತನೆಯಿಂದ ಪಕ್ಷದ ವಿರುದ್ಧ ಜನ ಇಷ್ಟು “ಪ್ರೀತಿ”ಯನ್ನು ತೋರಿಸುತ್ತಿರಲಿಲ್ಲ. ಆದ್ದರಿಂದ ಐದು ಸಾವಿರದ ಒಳಗಿನ ಅಂತರದಲ್ಲಿ ಉಮಾನಾಥ್ ಕೋಟ್ಯಾನ್ ಸೋತರು. ಸರಿಯಾಗಿ ನೋಡಿದರೆ ಅದು ಉಮಾನಾಥ ಕೋಟ್ಯಾನ್ ಅವರ ಸೋಲು ಮಾತ್ರವಲ್ಲ, ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದಷ್ಟು ವರ್ಚಸ್ಸು ಕಳೆದುಕೊಂಡಿದ್ದ ರಾಜ್ಯ ನಾಯಕರ ಸೋಲು ಕೂಡ ಹೌದು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಬಗ್ಗೆ ಜನರಿಗೆ ಪ್ರೀತಿ ಇದೆ. ಯಡಿಯೂರಪ್ಪನವರು ಮೆದುವಾಗಿದ್ದಾರೆ. ಈಶ್ವರಪ್ಪ, ಶೆಟ್ಟರ್, ಅಶೋಕ್ ಸಹಿತ ಎಲ್ಲಾ ನಾಯಕರು ಅಮಿತ್ ಶಾ ಮುಂದೆ ನರ್ಸರಿಗೆ ಹೋಂವರ್ಕ್ ಮಾಡಿ ಹೋಗದ ಮಗುವಿನಂತೆ ನಿಂತು ಬಿಡುತ್ತಾರೆ. ಅನಂತ ಕುಮಾರ್, ಡಿವಿಎಸ್ ಅವರಿಗೆ ಕೇಂದ್ರದಲ್ಲಿ ಸಂಸತ್ ಹೊರಗೆ ನಿಂತ ಸೆಕ್ಯೂರಿಟಿಯವರಾದರೂ ಮರ್ಯಾದೆ ಕೊಡಬೇಕಾದರೆ ಕರ್ನಾಟಕವನ್ನು ಗೆಲ್ಲಲೇ ಬೇಕಾಗಿದೆ. ಇಲ್ಲದಿದ್ದರೆ ಮೋದಿ ಮನೆಯ ತೋಟಕ್ಕೆ ನೀರು ಬಿಡಲು ತಮ್ಮನ್ನು ನಿಲ್ಲಿಸಬಹುದು ಎನ್ನುವ ಆತಂಕ ಇದೆ. ಆದ್ದರಿಂದ ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಪಕ್ಷವನ್ನು ತಂದರೆ ಕನಿಷ್ಟ ಮೋದಿ ಒಂದು ಮುಗುಳ್ನಗೆಯಾದರೂ ಚೆಲ್ಲಬಹುದು ಎನ್ನುವ ನಿರೀಕ್ಷೆ ಪ್ರತಾಪಸಿಂಹ, ಶ್ರೀರಾಮುಲು, ಶೋಭಾನಂತವರ ಪರಿಸ್ಥಿತಿ. ಹೀಗಿರುವಾಗ ಎಲ್ಲರೂ ಸೇರಿ ತಮ್ಮ ತಮ್ಮ ವ್ಯಾಪ್ತಿಯ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೋರಾಡುತ್ತಿರುವಾಗ ಶಿಸ್ತಿಗೆ ಹೆಸರಾಗಿದ್ದ ದಕ್ಷಿಣ ಕನ್ನಡದಲ್ಲಿ ಜಗದೀಶ್ ಅಧಿಕಾರಿಯವರು ವರ್ತಿಸಿದ ರೀತಿ ನೋಡಿ ಪಕ್ಷದ ನಾಯಕರೇ ದಂಗಾಗಿದ್ದಾರೆ.
ಅಭಯರಿಗೆ ಮತದಾರರ ಅಭಯ ಈ ಬಾರಿ ಕಡಿಮೆ…
ಸರಿಯಾಗಿ ನೋಡಿದರೆ ಹಿಂದೆಂದಿಗಿಂತ ಈ ಬಾರಿ ಮೂಲ್ಕಿ-ಮೂಡಬಿದ್ರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಚಾನ್ಸ್ ಜಾಸ್ತಿ ಇದೆ. ಯಾಕೆಂದರೆ ಶಾಸಕ ಅಭಯಚಂದ್ರ ಜೈನ್ ಮೀನುಗಾರಿಕೆಯ ಖಾತೆ ಬೇಡಾ ಎಂದು ಹೇಳುವುದರಿಂದ ಹಿಡಿದು ಮೊನ್ನೆ ಮೊನ್ನೆ ಮಂಗಳೂರು ನಗರ ಉತ್ತರ ಶಾಸಕ ಮತ್ತು ತಮ್ಮದೇ ಪಕ್ಷದವರಾಗಿರುವ ಮೊಯ್ದೀನ್ ಬಾವ ಅವರ ಮೇಲೆ ಕೈ ಮಾಡುವ ತನಕ ಮೈ ಮೇಲೆ ಹಾಕಿಕೊಂಡ ವಿವಾದ ಒಂದೆರಡಲ್ಲ. ಹಿಂದೆ ಅಭಯಚಂದ್ರ ಜೈನ್ ಹೀಗಿರಲಿಲ್ಲ. ಮಾಧ್ಯಮದವರು ಎಂತಹುದೇ ಪ್ರಶ್ನೆ ಕೇಳಿದರೂ ನಗುನಗುತ್ತಾ ಉತ್ತರ ಕೊಡುತ್ತಿದ್ದರು. ಆದರೆ ಕಳೆದ ಐದು ವರ್ಷಗಳಲ್ಲಿ ತಮ್ಮ ತಪ್ಪನ್ನು ಸಣ್ಣದಾಗಿ ಪತ್ರಿಕೆಯವರು ಬರೆದು ಸೃಷ್ಟೀಕರಣ ಕೇಳಿದರೂ ಜೀವ ಬೆದರಿಕೆ ಹಾಕಲು ಹೊರಡುವಷ್ಟು ಉದ್ದಟತನ ತೋರಿಸುತ್ತಿದ್ದಾರೆ. ರಿಕ್ಷಾ ಚಾಲಕರು ಯಾವುದೋ ಸಣ್ಣ ಬೇಡಿಕೆ ಇಟ್ಟು ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದರೆ ತಮ್ಮ ಕಾರು ನಿಲ್ಲಿಸಿ ರಿಕ್ಷಾ ಚಾಲಕರನ್ನು ಹೊಡೆಯಲು ಹೋಗುತ್ತಾರೆ. ತಮ್ಮದೇ ಕ್ಷೇತ್ರದಲ್ಲಿ ಪ್ರಶಾಂತ್ ಪೂಜಾರಿ ಎನ್ನುವ ಯುವಕ ದನಗಳ್ಳರ ದ್ವೇಷಕ್ಕೆ ಬಲಿಯಾದಾಗ ಅವನ ಮನೆಗೆ ಹೋಗಿ ಸಾಂತ್ವಾನ ಹೇಳುವುದು ಬಿಟ್ಟು ದೊಡ್ಡಸ್ತನ ಮೆರೆಯುತ್ತಾರೆ. ತಮ್ಮ ಕಾರಿಗೆ ಅಡ್ಡಬಂದ ವೃದ್ಧೆಯನ್ನು ನೂಕಿ ದರ್ಪ ಪ್ರದರ್ಶಿಸುತ್ತಾರೆ. ಇದೆಲ್ಲ ಟಿವಿ, ಪೇಪರ್ ಗಳಲ್ಲಿ ಜನಸಾಮಾನ್ಯರು ವಿಡಿಯೋ, ಫೋಟೋ ಸಹಿತ ನೋಡಿದ ವಿಷಯಗಳು. ಇನ್ನು ಪಟ್ಟಿ ಮಾಡಲು ಕುಳಿತರೆ ಅಲ್ಲಿನ ಬಿಜೆಪಿ ಕಾರ್ಯಕರ್ತರ ಬಳಿ ಅದೆಷ್ಟು ವಿಷಯಗಳಿವೆಯೋ. ಆದ್ದರಿಂದ ಇದನ್ನೆಲ್ಲಾ ಗಮನಿಸುತ್ತಿರುವ ಜನ ಬಿಜೆಪಿಯನ್ನು ಗೆಲ್ಲಿಸಬಹುದು ಎನ್ನುವುದು ಕೇವಲ ಅಲ್ಲಿನ ಬಿಜೆಪಿಯವರದ್ದು ಮಾತ್ರವಲ್ಲ, ಹೊರಗಿನ ಮತ್ತು ಮೂಡಬಿದ್ರೆಯನ್ನು ಕುತೂಹಲದಿಂದ ಗಮನಿಸುತ್ತಿರುವ ಅಸಂಖ್ಯಾತ ನಾಗರಿಕರ ಊಹೆ.
ಹೀಗೆ ಬಿಜೆಪಿ ಗೆಲ್ಲುವ ವಾತಾವರಣ ಇರುವಾಗ ಜಗದೀಶ್ ಅಧಿಕಾರಿ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಅವರಿಗೆ ಕಾಂಗ್ರೆಸ್ ಗೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಹೋದರೂ ಈ ಬಾರಿಯಂತೂ ಟಿಕೆಟ್ ಸಿಗಲ್ಲ. ಮುಂದಿನ ಬಾರಿ ಸಿಗಬಹುದು ಎಂದು ಆಸೆಯಿಟ್ಟು ಹೋದರೆ ಮಿಥುನ್ ರೈಗೆ ಆದ ಪರಿಸ್ಥಿತಿ ಇವರಿಗೆ ಆಗುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು!
Leave A Reply