ತನಿಖೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಡೆಸಿದರೆ ಶಿಕ್ಷೆ ಗ್ಯಾರಂಟಿ!
ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಪಕ್ಷ ಏಕಕಾಲಕ್ಕೆ ಸುಪ್ರೀಂ ಕೋರ್ಟಿಗೆ ಮತ್ತು ಕನ್ನಡಿಗರ ಅಷ್ಟೂ ಭಾವನೆಗಳಿಗೆ ಮೋಸ ಮಾಡಿದೆ ಎನ್ನುವುದು ಸ್ಪಷ್ಟ. ಹೇಗೆ ವಿವರಿಸುತ್ತೇನೆ. ಮೊದಲನೇಯದಾಗಿ ಶಶಿಕಲಾ ಎನ್ನುವ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜಯಲಲಿತಾ ಆಪ್ತೆಗೆ ಭಾರತದ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಉಢಾಪೆಯ ಶೈಲಿಯಲ್ಲಿ ನೋಡಿದ್ದು. ನಿಮಗೆಲ್ಲ ಗೊತ್ತಿರುವಂತೆ ಶಶಿಕಲಾ ಜೈಲು ಸೇರಿದ್ದು ಅಕ್ರಮ ಹಣ, ಆಸ್ತಿ, ಪಾಸ್ತಿ ಮಾಡಿದ ಕೇಸಿನಲ್ಲಿ. ಆಕೆ ಮತ್ತು ಆ ಪ್ರಕರಣದಲ್ಲಿ ಸಿಲುಕಿ ಶಿಕ್ಷೆಗೊಳಗಾದ ಅಪರಾಧಿಗಳು ಜನಸಾಮಾನ್ಯರ ತೆರಿಗೆ ಹಣವನ್ನು ಹೊಡೆದು ಅದರಿಂದ ನ್ಯಾಯಾಲಯದಲ್ಲಿ ಧೀರ್ಘಾವಧಿ ವಿಚಾರಣೆ ನಡೆದು ನಂತರ ಇದು ಸುಪ್ರಿಂ ಕೋರ್ಟಿನ ತನಕ ಹೋಗಿ ಅದರ ನಂತರ ದೇಶದ ಮಾನ್ಯ ಸವೋರ್ಚ ನ್ಯಾಯಾಲಯ ಶಿಕ್ಷೆಯನ್ನು ಎತ್ತಿ ಹಿಡಿದ ಬಳಿಕ ಈ ಕುತಂತ್ರಿಗಳು ಜೈಲು ಸೇರಿದ್ದು. ಅಲ್ಲಿಯ ತನಕ ನಡೆದ ಹೋರಾಟ ಎಷ್ಟು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಇವತ್ತು ಈ ದೇಶದ ಕಾನೂನಿನ ಮೇಲೆ ಜನಸಾಮಾನ್ಯರಿಗೆ ಗೌರವ ಇದೆ ಎಂದಾದರೆ ಅದಕ್ಕೆ ಆ ತೀರ್ಪು ಕೂಡ ಕಾರಣ. ಆ ತೀರ್ಪಿನ ನಂತರ ಪರಮ ಅಗರ್ಭ ಶ್ರೀಮಂತರಿಗೂ ಈ ದೇಶದಲ್ಲಿ ಶಿಕ್ಷೆಯಾಗುತ್ತೆ, ವಿನಾಯಿತಿ ಸಿಗಲ್ಲ ಎಂದು ಸಾಬೀತಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಅತ್ತ ತೀರ್ಪು ಕೊಡುತ್ತಿದ್ದಂತೆ ಇತ್ತ ಆಕೆಯನ್ನು ಸ್ವಾಗತಿಸಲು ನಿಂತಿದ್ದು ನಮ್ಮ ರಾಜ್ಯ ಸರಕಾರ. ಬಹುಶ: ಹೀಗೆ ಹೇಳಿದ ಕೂಡಲೇ ನಮಗೆ ರಾಜ್ಯ ಸರಕಾರದ “ಸಾಧನೆ” ನೋಡಿ ಹೊಟ್ಟೆಕಿಚ್ಚು ಅಗುತ್ತಿದೆ ಅಂದುಕೊಳ್ಳುವ ರಾಹುಲ್ ಗಾಂಧಿ ಬ್ರಿಗೇಡಿನವರಿದ್ದಾರೆ. ಆದರೆ ಈಗ ಡಿಐಜಿಯಾಗಿ ನಿಮ್ಮ ಸರಕಾರದಿಂದ ಎತ್ತಂಗಡಿ ಭಾಗ್ಯ ಪಡೆದುಕೊಂಡಿರುವ ರೂಪಾ ಅವರೇ ಈ ವಿಷಯದ ಮೇಲೆ ವರದಿ ಮಾಡಿ ಮೇಲಾಧಿಕಾರಿಗೆ ಕಳುಹಿಸಿಕೊಟ್ಟಿರುವಾಗ ಸಾಕ್ಷ್ಯ ಬೇರೆ ಬೇಕಿಲ್ಲ. ನಿನ್ನೆ ಕೂಡ ಒಂದು ವಿಡಿಯೋ ಫೂಟೇಜ್ ಮಾಧ್ಯಮಗಳ ಮೂಲಕ ಬಿಡುಗಡೆಯಾಗಿದೆ. ಇದು ನೇರಾನೇರ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನ ಉಲ್ಲಂಘನೆ. ಈ ಬಗ್ಗೆ ಸುಪ್ರೀಂ ಕೋರ್ಟಿನ ಸಿಟ್ಟಿಂಗ್ ನ್ಯಾಯಾಧೀಶರು ತನಿಖೆ ಮಾಡಿದರೆ ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ ಆಗಲಿದೆ. ಬಹುಶ: ಸರಿಯಾಗಿ ತನಿಖೆ ನಡೆದರೆ ರಾಜ್ಯ ಸರಕಾರಕ್ಕೆ ಛೀಮಾರಿ ಕೂಡ ಬೀಳಬಹುದು.
ಮನೆಯಿಂದ ಊಟ ತರಿಸಬಹುದಾ ಎಂದು ಶಶಿಕಲಾ ನ್ಯಾಯಾಲಯಕ್ಕೆ ಮನವಿ ಮಾಡಿದಾಗ ನ್ಯಾಯಾಧೀಶರು ಕಠಿಣವಾಗಿ ನಿರಾಕರಿಸಿದರೋ ಅದರ ನಂತರ ಆಕೆಗೆ ಊಟ ಹೊರಗಿನಿಂದ ಸರಬರಾಜು ಆಗುತ್ತದೆ ಎಂದಾದರೆ ಇದು ನ್ಯಾಯಾಲಯದ ಉಲ್ಲಂಘನೆ ಆಗಲ್ವಾ? ಒಂದು ವೇಳೆ ಮಾನವ ಹಕ್ಕಿನ ಪರ ಇರುವ ವಕೀಲರು ಊಟ ಸರಬರಾಜಾಗುವುದಕ್ಕೆ ಸಾಕ್ಷಗಳು ಇಲ್ಲ ಎಂದು ಹೇಳುವುದಾದರೆ ಅಲ್ಲಿರುವ ಕೆಲವು ಪಾತ್ರೆಗಳು ಏನು ಹೇಳುತ್ತವೆ. ನಾವು ಅಲ್ಲಿ ಹೋಗಿ ನೋಡದೆ ಕೆಲವು ಫೋಟೋಗಳ ಆಧಾರದಲ್ಲಿ ಮಾತನಾಡಲು ಆಗುವುದಿಲ್ಲ ಎಂದು ಶಶಿಕಲಾ ಹೆಸರಿನಲ್ಲಿ ಯಾರನ್ನಾದರೂ ಯಾರಾದರೂ ಡಿಫೇಂಡ್ ಮಾಡುತ್ತಿದ್ದಾರೆಂದರೆ ಅದು ಅವರ ಆತ್ಮಸಾಕ್ಷಿಗೆ ಮಾಡುವ ದ್ರೋಹ. ಶಶಿಕಲಾ ಅವರಿಗೆ ಪ್ರತ್ಯೇಕ ಟಿವಿ, ಯಾರಾದರೂ ಬಂದರೆ ಕುಳಿತುಕೊಂಡು ಮಾತನಾಡಲು ಕೋಣೆ, ಅದಕ್ಕೆ ಪ್ರತ್ಯೇಕ ಕರ್ಟನ್, ಪ್ರತ್ಯೇಕ ಮಂಚ ಇದೆಲ್ಲಾ ನೋಡಿಯೇ ರೂಪಾ ಅವರು ವರದಿ ಮಾಡಿದ್ದಾರೆ. ಇಷ್ಟು ವರದಿ ಕೊಟ್ಟಿರುವ ಓರ್ವ ಉನ್ನತ ಅಧಿಕಾರಿಯ ಮಾತನ್ನು ದ್ವೇಷಪೂರ್ವಕ ಇರಬಹುದು ಎಂದು ಹೇಳುವವರಿಗೆ ಬೇರೆನೂ ಹೇಳಲು ಸಾಧ್ಯ?
ಇನ್ನು ಶಶಿಕಲಾ ಅವರಿಗೆ ಒಳ್ಳೆಯ ಸೌಕರ್ಯ ಕೊಡುವ ಮೂಲಕ ಕೋಟ್ಯಾಂತರ ಕನ್ನಡಿಗರಿಗೂ ನಮ್ಮ ರಾಜ್ಯ ಸರಕಾರ ವಿಶ್ವಾಸದ್ರೋಹ ಮಾಡಿದೆ. ಅದೇಗೆ ಎಂದರೆ ಶಶಿಕಲಾ ಅವರು ಜಯಲಲಿತಾ ಅವರ ಕಟ್ಟಾ ಅನುಯಾಯಿ. ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ಕನ್ನಡಿಗರನ್ನು ಕಾವೇರಿ ವಿಚಾರದಲ್ಲಿ ಅಳಿಸಿಯೇ ತನ್ನ ರಾಜ್ಯದಲ್ಲಿ ರಾಣಿಯಂತೆ ಮೆರೆದವಳು. ಆಕೆಗೆ ತಾನು ಕನ್ನಡಿತಿ ಎನ್ನುವ ಬಾಂಧವ್ಯವೇ ಇರಲಿಲ್ಲ. ಕಾವೇರಿ ವಿಚಾರದಲ್ಲಿ ಇಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದವರು. ಅವರನ್ನು ಪಾಕಿಗಳಂತೆ ನೋಡುವುದು ಬೇಡವಾದರೂ ಓರ್ವ ಸಾಮಾನ್ಯ ಕೈದಿಯಂತಾದರೂ ನೋಡಬೇಕಲ್ಲ. ಅವರಿಗೂ ನೀವು ರಾಣಿಯಂತೆ ನೋಡಿದರೆ ಅದರಿಂದ ಆಗುವ ಭಾವನಾತ್ಮಕ ನೋವು ಕನ್ನಡಿಗರಿಗೆ ಚಿಕ್ಕದಾ? ಕನ್ನಡಿಗರಿಗೆ ಪ್ರತ್ಯೇಕ ಧ್ವಜ ಬೇಕು ಎನ್ನುವ ಸಿಎಂ ಸಿದ್ಧರಾಮಯ್ಯನವರೇ, ಮೊದಲು ಕನ್ನಡಿಗರ ಜೀವಜಲವಾಗಿರುವ ಕಾವೇರಿಯನ್ನು ಕಿತ್ತುಕೊಳ್ಳಲು ನಿಮ್ಮನ್ನು ರಾಷ್ಟ್ರಪತಿ, ಸವೋರ್ಚ ನ್ಯಾಯಾಲಯದಲ್ಲಿ ಮಂಡಿಯೂರುವಂತೆ ಮಾಡಿದ ಆ ಹೆಣ್ಣುಮಗಳ ಆಪ್ತೆಗೆ ಕನಿಷ್ಟ ತಾನು ಕೈದಿ ಎನ್ನುವ ನೆನಪಾದರೂ ಕೊಡಿ.
ಎಲ್ಲಾ ಸೌಲಭ್ಯವನ್ನು ಕೊಡುವುದೇ ಆದರೆ ಸೆಂಟ್ರಲ್ ಜೈಲ್ ಎನ್ನುವ ಬೋರ್ಡ್ ತೆಗೆದು ಸೆಂಟ್ರಲ್ ಛತ್ರ ಎಂದು ಹೆಸರಾಕಿ ಮತ್ತು ಅವರವರ ಹಣದ ಸಾಮರ್ಥಕ್ಕೆ ಅನುಗುಣವಾಗಿ ಸೌಕರ್ಯ ಸಿಗುವುದು ಎಂದು ಬರೆದು ಹಾಕಿ.
Leave A Reply