ಚುನಾವಣೆ ಬಂದಾಗ ಜನಾರ್ಧನ ಪೂಜಾರಿ ಇವರಿಗೆ ಬೇಕು, ಇಲ್ಲದಿದ್ದರೆ…..
ಕಾಂಗ್ರೆಸ್ಸಿನ ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನು ಒಂದು ಕಾರಣಕ್ಕೆ ಮೆಚ್ಚಲೇಬೇಕು. ಅದು ಪಕ್ಷದ ಮೇಲೆ ಅವರಿಗಿರುವ ಪ್ರೀತಿ. ಒಂದು ಕಾಲದಲ್ಲಿ ಪೂಜಾರಿಯವರ ನೆರಳು ತಮ್ಮ ಮೇಲೆ ಬಿದ್ದರೆ ತಮ್ಮ ಜನ್ಮ ಪಾವನ ಎಂದು ಅಂದುಕೊಳ್ಳುತ್ತಿದ್ದ ಕಾಂಗ್ರೆಸ್ಸಿಗರು ಇದ್ದರು. ಪೂಜಾರಿಯವರ ಪಕ್ಕದ ಚೇರಿನಲ್ಲಿ ಕುಳಿತುಕೊಳ್ಳಲು ಸಿಕ್ಕರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹುದ್ದೆ ಸಿಕ್ಕಿತ್ತು ಎನ್ನುವ ಮಟ್ಟಿಗೆ ಫೋಸ್ ಕೊಡುವವರಿದ್ದರು. ಪೂಜಾರಿಯವರ ಫೋಟೋ ಪತ್ರಿಕೆಯಲ್ಲಿ ಬಂದಾಗ ಅವರ ಹಿಂದೆ ಗುಂಪಿನಲ್ಲಿ ತಮ್ಮ ಮುಖ ಕಂಡರೆ ಅದನ್ನು ಕಟ್ ಮಾಡಿ ಜೋಪಾನವಾಗಿ ಇಡುವಂತಹ ರಾಜಕಾರಣಿಗಳೇ ಇದ್ದರು. ಪೂಜಾರಿಯವರ ಹೆಸರು ಹೇಳಿ ಎಷ್ಟೋ ದೊಡ್ಡ ಲಾಭವನ್ನು ಪಡೆದುಕೊಂಡವರ ಸಂಖ್ಯೆ ಕಡಿಮೆ ಇಲ್ಲ. ಆದರೆ ಅದೇ ಪೂಜಾರಿಯವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಲಿಡಬೇಡಿ ಎಂದು ಇದೇ ಕಾಂಗ್ರೆಸ್ಸಿಗರು ನಿರ್ಬಂದ ಹಾಕಿದ್ದರಲ್ಲ, ಇಂತವರನ್ನು ಪೂಜಾರಿ ಅದೇಗೆ ತಮ್ಮ ಮನೆಯ ಒಳಗೆ ಕಾಲಿಡಲು ಬಿಟ್ಟರು ಎನ್ನುವುದೇ ಪ್ರಶ್ನೆ.
ಪೂಜಾರಿಯವರ ಸುದ್ದಿಗೋಷ್ಟಿ ಎಂದರೆ…
ಪೂಜಾರಿಯವರು ಆರು ತಿಂಗಳ ಹಿಂದೆ ದೂರದಿಂದ ಬರುತ್ತಿದ್ದರೆ ಪಕ್ಕದ ಬೀದಿಯಿಂದ ತಪ್ಪಿಸಿಕೊಳ್ಳುತ್ತಿದ್ದ ಕಾಂಗ್ರೆಸ್ಸಿಗರು ಕಳೆದ ಹದಿನೈದು ದಿನಗಳಲ್ಲಿ ಪೂಜಾರಿಯವರ ಮನೆ ಎಲ್ಲಿ ಎಂದು ಯಾರಿಂದಲೋ ಕೇಳಿ, ಹುಡುಕಿ ಹೋಗಿ ಕಾಲಿಗೆ ಬಿದ್ದು ತಮ್ಮ ಹಿಂಬಾಲಕರಿಂದ ಫೋಟೋ ತೆಗೆಸಿ ಎಲ್ಲಾ ಮೀಡಿಯಾಗಳಿಗೆ ಕಳುಹಿಸಿಕೊಟ್ಟರಲ್ಲ, ಆಗಲೂ ಮುಗ್ಧ ಪೂಜಾರಿಯವರಿಗೆ ಇವರುಗಳೆಲ್ಲ ಸರದಿಯಲ್ಲಿ ಬಂದು ತಮ್ಮ ಕಾಲು ಹಿಡಿಯುತ್ತಿರುವುದು ಯಾಕೆ ಎಂದು ಗೊತ್ತಾಗಿಲ್ಲವಲ್ಲ. ಕೊನೆಗೆ ಬಿಲ್ಲವರನ್ನು ದಾರಿ ತಪ್ಪಿಸಲು ಪೂಜಾರಿಯವರು ಬಿಜೆಪಿಯನ್ನು ಸೋಲಿಸುವುದೇ ತಮ್ಮ ಕೊನೆಯ ಆಸೆ ಎಂದು ಹೇಳಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಉದಯವಾಣಿಯಲ್ಲಿ ಬಂದಿದೆ ಎನ್ನುವಂತೆ ಬಿಂಬಿಸಿ ಸಾಮಾಜಿಕ ತಾಣಗಳಲ್ಲಿ ಹರಡಿದ್ದಾರಲ್ಲ, ಆಗಲೂ ಪೂಜಾರಿಯವರಿಗೆ ತಮ್ಮನ್ನು ಯಾವೆಲ್ಲ ರೀತಿಯಲ್ಲಿ ಹೊರಗೆ ಬಳಸಲಾಗುತ್ತಿದೆ ಎಂದು ಗೊತ್ತಾಗಿಲ್ಲವಲ್ಲ. ಕೊನೆಗೆ ಮಂಗಳೂರು ನಗರ ದಕ್ಷಿಣದಲ್ಲಿ ಕಾಂಗ್ರೆಸ್ಸನ್ನು ದಡ ಸೇರಿಸಲು ಪೂಜಾರಿಯವರ ಕೈ ಕಾಲು ಹಿಡಿದು ಕರೆಸಿಕೊಂಡು ಅವರು ಸುದ್ದಿಗೋಷ್ಟಿ ಮಾಡುತ್ತಿರುವಾಗಲೇ ಒಬ್ಬೊಬ್ಬರೇ ಕಾಂಗ್ರೆಸ್ಸಿಗರು ಎದ್ದು ಹೋದರಲ್ಲ, ಅದನ್ನು ಆ ಹಿರಿಯ ಜೀವ ಹೇಗೆ ಸಹಿಸಿಕೊಂಡಿತು. ಜಿಲ್ಲೆಯ, ರಾಜ್ಯದ ವರಿಷ್ಟ ನಾಯಕರೊಬ್ಬರು ಸುದ್ದಿಗೋಷ್ಟಿ ಮಾಡುತ್ತಿರಬೇಕಾದರೆ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರು ಕುಳಿತು ಸುದ್ದಿಗೋಷ್ಟಿ ಆದ ಬಳಿಕ ಹಿರಿಯ ನಾಯಕ ಅಲ್ಲಿಂದ ತೆರಳಿದ ಮೇಲೆ ಹೋಗಬೇಕಾಗಿರುವುದು ಸಂಪ್ರದಾಯ. ಆದರೆ ಇಲ್ಲಿ ಜಿಲ್ಲಾ ಕಾಂಗ್ರೆಸಿಗೆ ಟಾನಿಕ್ ನೀಡಲು ಅನಾರೋಗ್ಯದಿಂದ ಚೇತರಿಸಿಕೊಂಡ ತಕ್ಷಣ ತನ್ನ ಪಕ್ಷ ಉಳಿಯಬೇಕು ಎಂದು ಆ ಭೀಷ್ಮ ಎದ್ದು ಬಂದರಲ್ಲ, ಅವರನ್ನು ನಡೆಸಿಕೊಳ್ಳುವ ರೀತಿ ಇದೇನಾ ಕಾಂಗ್ರೆಸ್ಸಿಗರೇ.
ಕಳೆದ ಬಾರಿ ಚುನಾವಣೆಯಲ್ಲಿ ಏನಾಗಿತ್ತು ಎಂದರೆ…
ಅದರ ನಂತರ ಶಶಿಧರ್ ಹೆಗ್ಡೆಯವರ ಸರದಿ. ಚಿದಂಬರಂ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಲಿದೆ ಎಂದು ಹೇಳಿ ಹೊರಡಲು ಅನುವಾದಾಗ ಜನಾರ್ಧನ ಪೂಜಾರಿಯವರ ಸಹನೆಯ ಕಟ್ಟೆ ಒಡೆಯಿತು. ಅದರಲ್ಲಿಯೂ ಚಿದಂಬರಂ ಅವರ ಭ್ರಷ್ಟಾಚಾರದ ಪ್ರಕರಣಗಳನ್ನು ನೆನಪಿಸಿಕೊಂಡ ಕಳಂಕರಹಿತ ರಾಜಕಾರಣಿ ಪೂಜಾರಿಯವರಿಗೆ ಕೋಪ ಅದೆಲ್ಲಿಂದ ಬಂತೋ. ಕೈಯಲ್ಲಿ ಮೈಕ್ ಹಿಡಿದೇ ವಾಗ್ದಾಳಿ ಆರಂಭಿಸಿದರು. ಬೇರೆ ಭ್ರಷ್ಟಾಚಾರದ ರುಚಿ ಕಂಡ ರಾಜಕಾರಣಿಯಾಗಿದ್ದರೆ ಆಫ್ ದಿ ರೆಕಾರ್ಡ್ ಹೇಳಿ ನಗುತ್ತಿದ್ದರೆ ವಿನ: ಹೀಗೆ ಸಮಪೂರ್ಣ ಮಾಧ್ಯಮಗಳ ಮುಂದೆ ಮೈಕ್ ಹಿಡಿದು ಗದರಿಸುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ಅದು ಪೂಜಾರಿಯವರ ನೈತಿಕತೆಯ ತಾಕತ್ತು. ತಮ್ಮ ಪಕ್ಷದ ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾದಾಗ ಆ ಹಿರಿಯ ನಾಯಕ ಅನುಭವಿಸಿದ ಹಿಂಸೆಗಳೆಷ್ಟೋ. ಪೂಜಾರಿಯವರನ್ನು ಚುನಾವಣೆಗೆ ಮೂರ್ನಾಕು ದಿನಗಳಿರುವಾಗ ಮತಬ್ಯಾಂಕ್ ರಾಜಕಾರಣಕ್ಕಾಗಿ ಕರೆದುಕೊಂಡು ಬರುವವರಿಗೆ ಕನಿಷ್ಟ ಅವರು ಸುದ್ದಿಗೋಷ್ಟಿ ಮಾಡಿ ಮುಗಿಸುವ ತನಕ ಕುಳಿತುಕೊಳ್ಳುವಷ್ಟು ವ್ಯವಧಾನ ಇಲ್ಲವಲ್ಲ. ಹಾಗಾದರೆ ಪೂಜಾರಿಯವರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುವವರಿಗೆ ಅವರಿಗೊಂದು ಗೌರವ ಕೊಡಬೇಕಾದರೆ ತಾವು ಎದ್ದು ಹೋಗಬಾರದು ಎನ್ನುವಷ್ಟು ಯೋಚನೆ ಇಲ್ಲವಲ್ಲ. ಇನ್ನು ಕಳೆದ ಬಾರಿ ಪಾಲಿಕೆಯ ಚುನಾವಣೆಯಲ್ಲಿ ಇದೇ ಪೂಜಾರಿಯವರನ್ನು ಎದುರಿಗೆ ಕುಳ್ಳಿರಿಸಿ ನಾವು ಅಧಿಕಾರಕ್ಕೆ ಬಂದ ಬಳಿಕ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡುವುದಿಲ್ಲ ಎಂದು ಭರವಸೆ ಕೊಡಿಸಿದ ಕಾಂಗ್ರೆಸ್ ನಂತರ ಮಾಡಿದ್ದೇನು? ಒಟ್ಟಿನಲ್ಲಿ ತಮಗೆ ಬೇಕಾದಾಗ ಪೂಜಾರಿಯವರನ್ನು ಕರೆಸುವುದು, ಬೇಕಾದಷ್ಟು ಬಳಸುವುದು ನಂತರ ಅವರ ಬಗ್ಗೆ ಹಿಂದೆಯಿಂದ ಟೀಕೆ ಮಾಡುವುದು, ಇಷ್ಟೇ ಜಿಲ್ಲಾ ಕಾಂಗ್ರೆಸ್ ಇಲ್ಲಿಯ ತನಕ ಮಾಡುತ್ತಾ ಬಂದಿರುವುದು. ಆರು ತಿಂಗಳ ಹಿಂದೆ ಪೂಜಾರಿಯವರ ಸುದ್ದಿಗೋಷ್ಟಿಯಲ್ಲಿ ಹತ್ತಿರ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದ, ಪೂಜಾರಿಯವರು ಸುದ್ದಿಗೋಷ್ಟಿಗೆ ಬರಲು ಕರೆಯುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಎವಾಯ್ಡ್ ಮಾಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ಅದ್ಯಾವ ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದು ಜನ ನೋಡುತ್ತಿದ್ದಾರೆ!
Leave A Reply