ಸಾಲಮೇಳ ಸಂಗ್ರಾಮದ ದಂಡನಾಯಕ ಬ್ರಹ್ಮಾಸ್ತ್ರ ಬಿಡಲು ರೆಡಿ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ, ಕರಾವಳಿಯಲ್ಲಿ ಕಾಂಗ್ರೆಸ್ಸಿಗೆ ಅಸ್ತಿತ್ವ ತಂದುಕೊಟ್ಟ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ರಾಜ್ಯವೀಡಿ ಸುತ್ತಾಡಿದ, ಪ್ರಧಾನಿಯಾಗಿದ್ದ ಪಿವಿ ನರಸಿಂಹ ರಾವ್ ಅವರ ಎಡಭಾಗದಲ್ಲಿ ಮನಮೋಹನ್ ಸಿಂಗ್ ಕುಳಿತಿದ್ದರೆ ಬಲಭಾದಲ್ಲಿ ಕುಳಿತುಕೊಂಡು ಆರ್ಥಿಕ ನೀತಿಗಳ ಬಗ್ಗೆ ಚರ್ಚಿಸುತ್ತಿದ್ದ, ರಾಜೀವ್, ಸೋನಿಯಾ ಅವರನ್ನು ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಕರೆ ತಂದ, ಎಲ್ಲಕ್ಕಿಂತ ಹೆಚ್ಚಾಗಿ ಲೋಕಸಭೆಯಿಂದ ಹೊರನಡೆದು ಎರಡು ದಶಕಗಳಾದರೂ ಇವತ್ತಿಗೂ ಬಡ, ಮಧ್ಯಮ ವರ್ಗದವರ ಮನಸ್ಸಿನಲ್ಲಿ ಸಾಲಮೇಳದ ಪೂಜಾರಿ ಎಂದೇ ಕರೆಸಿಕೊಂಡಿರುವ ಬಿ ಜನಾರ್ಧನ ಪೂಜಾರಿಯವರ ಆತ್ಮಚರಿತ್ರೆ ಪ್ರಜಾಪ್ರಭುತ್ವದ ದಿನ ಬಿಡುಗಡೆಯಾಗಲಿದೆ. ಈ ಹಿಂದೆನೂ ಕಾಂಗ್ರೆಸ್ ನ ಅನೇಕ ಹಿರಿತಲೆಗಳು ಆತ್ಮಚರಿತ್ರೆ ಬರೆದಿದ್ದಾರೆ. ದೇಶದ ಕಾನೂನು ಸಚಿವರೂ, ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರ ಆತ್ಮಚರಿತ್ರೆ ಬಿಟ್ಟರೆ ಬೇರೆಯವರದ್ದೂ ಸದ್ದು ಮಾಡಿದ್ದು ಕಡಿಮೆ. ಆದರೆ ಜನಾರ್ಧನ ಪೂಜಾರಿಯವರ ಆತ್ಮಚರಿತ್ರೆ ಹಾಗಲ್ಲ.
ಪೂಜಾರಿಯವರ ಆವತ್ತಿನ ದಿನಗಳಿಗೂ ಇವತ್ತಿನ….
ಜನಾರ್ಧನ ಪೂಜಾರಿಯವರು ಆತ್ಮಚರಿತ್ರೆ ಬಿಡುಗಡೆ ಮಾಡುತ್ತಾರಂತೆ ಎನ್ನುವ ಸುದ್ದಿ ಎಂಟು ತಿಂಗಳ ಹಿಂದೆ ಕ್ಷೀಣವಾಗಿ ಕೇಳಿಸುತ್ತಿದ್ದಾಗ ಕರಾವಳಿಯ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಒಂದು ಸಣ್ಣ ಆತಂಕ ಉದ್ಭವವಾದದ್ದು ಸುಳ್ಳಲ್ಲ. ಯಾಕೆಂದರೆ ಇವತ್ತು ರಾಜ್ಯ, ರಾಷ್ಟ್ರಮಟ್ಟದಲ್ಲಿ ಚಾಲ್ತಿಯಲ್ಲಿರುವ ಅನೇಕ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ಸಿನ ಸಭೆಗಳಲ್ಲಿ ಕುರ್ಚಿ ಜೋಡಿಸುತ್ತಿರುವ ಶೈಲಿಯನ್ನು ನೋಡಿಯೇ ಈ ಹುಡುಗನಲ್ಲಿ ನಾಯಕತ್ವದ ಗುಣಗಳಿವೆ ಎಂದು ಅಂತವರನ್ನು ಅಲ್ಲಿಂದ ಎತ್ತಿ ಕಾಂಗ್ರೆಸ್ಸಿನ ಉನ್ನತ ಹುದ್ದೆ ಕೊಡಿಸಿದವರು ಪೂಜಾರಿ. ಹಾಗೆ ಅವರು ಕಾಂಗ್ರೆಸ್ಸಿನ ನಾಯಕರಿಗೆ ನಾಯಕರು. ಪೂಜಾರಿಯವರನ್ನು ಇತ್ತಿಚಿನ ದಿನಗಳಲ್ಲಿ ಪಕ್ಷ ಮತ್ತು ಅದರ ನಾಯಕರು ಹೇಗೆ ನೋಡುತ್ತಿದ್ದಾರೆ ಎನ್ನುವುದನ್ನು ವಾರಕ್ಕೆರಡು ಸಲ ಯಾವುದೇ ಪೇಪರ್ ತಿರುವಿದರೂ ಗೊತ್ತಾಗುತ್ತೆ. ಆದರೆ ಆವತ್ತು ಪೂಜಾರಿಯವರ ಕೈಯಲ್ಲಿ ಅಧಿಕಾರ ಇದ್ದಾಗ, ಅವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಓಡಾಡಿ ಪಕ್ಷಕ್ಕೆ ಹೆಚ್ಚು ಸೀಟು ಕೊಡಿಸಿದಾಗ ಇವರ ಎದುರು ಕೈಕಟ್ಟಿ ನಿಲ್ಲುತ್ತಿದ್ದ ನಾಯಕರೇ ಕುರ್ಚಿ ಗಟ್ಟಿಯಾಗುತ್ತಿದ್ದಂತೆ ಲಘುವಾಗಿ ಮಾತನಾಡಿ ಪೂಜಾರಿ ಮನಸ್ಸಿನಲ್ಲಿ ನೋವು ಹೆಪ್ಪುಗಟ್ಟುವಂತೆ ಮಾಡಿದ್ದಾರೆ. ಪೂಜಾರಿ ಅವರ ಬಗ್ಗೆ ಏನಾದರೂ ಬರೆದಿರಬಹುದಾ?
ಪೂಜಾರಿಯವರು ರಾಜಕೀಯವಾಗಿ ಮಾತ್ರ ಗುರುತಿಸ್ಪಟ್ಟರಲ್ಲ. ಅವರು ಧಾರ್ಮಿಕವಾಗಿ ಕೂಡ ತಮ್ಮ ಸಮಾಜದವರನ್ನು ಮುಖ್ಯವಾಹಿನಿಗೆ ತರಲು ಶ್ರಮಪಟ್ಟವರು. ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನ ಜಿಲ್ಲೆ, ರಾಜ್ಯ, ರಾಷ್ಟ್ರದ ಜನರನ್ನು ಸೆಳೆಯುವಂತೆ ಮಾಡಿದ ಪೂಜಾರಿಯವರನ್ನು ಕ್ಷೇತ್ರದ ಭಕ್ತರು ಮರೆಯಲು ಸಾಧ್ಯವೇ? ಮಂಗಳೂರಿಗೆ ಹೆಸರು ತಂದುಕೊಟ್ಟ ಮಂಗಳೂರು ದಸರಾದ ಸೊಬಗನ್ನು ನೆನೆಯುವಾಗ ಪೂಜಾರಿ ನೆನಪಿಗೆ ಬರದೇ ಇರುತ್ತಾರಾ? ಇನ್ನು ಇವರ ಎಲ್ಲಾ ಸಾಧನೆಗೆ ಕಳಶಪ್ರಾಯವಾಗಿ ಇರುವುದು ಸಾಲಮೇಳ. ಇವತ್ತಿಗೂ ಆ ಯೋಜನೆ ಜನರ ನೆನಪಿನಲ್ಲಿದೆ. ಒಂದು ಯೋಜನೆ ಒಂದು ತಲೆಮಾರನ್ನು ದಾಟಿದ ಮೇಲೆಯೂ ಸಕರಾತ್ಮಕವಾಗಿ ನೆನಪಿನಲ್ಲಿ ಉಳಿಯುತ್ತೆ ಎಂದರೆ ಪೂಜಾರಿ ಕ್ಯಾಪೆಸಿಟಿ ಎಂತದ್ದು ಎಂದು ತಿಳಿಯಲ್ವಾ? ಬೊಫೋರ್ಸ್ ಅಥವಾ ಕಾಮನ್ ವೆಲ್ತ್ ಹಗರಣ ಇನ್ನೆರಡು ದಶಕವಾದರೂ ನೆನಪಿಗೆ ಬರಬಹುದು. ಕಾರಣ ಅದರಲ್ಲಿ ನಡೆದ ಭ್ರಷ್ಟಾಚಾರ. ಆದರೆ ಒಂದು ಯೋಜನೆ ಸಕರಾತ್ಮಕವಾಗಿ ಮನಸ್ಸಿನಲ್ಲಿ ಉಳಿಯುತ್ತೇ ಎಂದರೆ ಅದು ಕಡಿಮೆ ಸಾಧನೆ ಅಲ್ಲ.
ಯಾರ ಜನ್ಮ ಜಾಲಾಡಲಿದ್ದಾರೆ…
ಪೂಜಾರಿಯರನ್ನು ಪ್ರೀತಿಸುವವರು ಇರಬಹುದು, ದ್ವೇಷಿಸುವವರು ಇರಬಹುದು. ಆದರೆ ಅವರನ್ನು ಯಾವತ್ತೂ ನಿರ್ಲಕ್ಷಿಸುವವರು ರಾಜ್ಯ ಕಾಂಗ್ರೆಸ್ಸಿನಲ್ಲಿ ಇರಲಾರರು. ಅದಕ್ಕೆ ಅವರ ಆತ್ಮಚರಿತ್ರೆ ಅಷ್ಟು ಸದ್ದು ಮಾಡುತ್ತಿದೆ. ಇನ್ನು ಪೂಜಾರಿಯವರ ಕಳೆದ ಮೂರ್ನಾಕು ವರ್ಷದ ನೇರನುಡಿ, ತಪ್ಪು ಮಾಡಿದವರಿಗೆ ನಿನ್ನದು ತಪ್ಪು ಎಂದು ಖಡಕ್ಕಾಗಿ ಹೇಳುವ ಗುಣ ಮತ್ತು ನಿಷ್ಠುರ ಮಾತು ನೋಡುವಾಗ ಅವು ಆತ್ಮಚರಿತ್ರೆಯಲ್ಲಿ ಬಂದರೆ ಇನ್ನು ಮೂರು ತಿಂಗಳು ಕಾಂಗ್ರೆಸ್ಸ್ ನಾಯಕರು ಅದಕ್ಕೆ ಸ್ಪಷ್ಠೀಕರಣ ಕೊಟ್ಟು ಕೊಟ್ಟು ಬಳಲಿ ಬೆಂಡಾಗಬಹುದು. ಒಬ್ಬ ಭಷ್ಠಾಚಾರ ರಹಿತ ನಾಯಕ ಆತ್ಮಚರಿತ್ರೆ ಬರೆಯುತ್ತಾರೆ ಎಂದರೆ ಅದರ ಖದರೇ ಬೇರೆ ಇರುತ್ತದೆ. ಯಾಕೆಂದರೆ ಯಾರನ್ನು ಬೇಕಾದರೂ ಅವರು ರಾಜಕೀಯವಾಗಿ ಬೆತ್ತಲು ಮಾಡುವಂತಹ ನೈತಿಕತೆ ಅವರಲ್ಲಿ ಇರುತ್ತದೆ. ಪೂಜಾರಿ ಕೆಲವು ನಾಯಕರ ಜನ್ಮಜಾಲಾಡಲಿದ್ದಾರಾ? ಅದೆಲ್ಲದಕ್ಕೆ ಶುಕ್ರವಾರದ ಇಳಿಸಂಜೆ ಉತ್ತರ ನೀಡಲಿದೆ. ಪೂಜಾರಿ ತಮ್ಮ ಆತ್ಮಚರಿತ್ರೆಯಲ್ಲಿ ಯಾರ ಬಗ್ಗೆ ಬೇಕಾದರೂ ಕಠಿಣವಾಗಿ ಬರೆದಿರಬಹುದು ಆದರೆ ಆದರೆ ಸುಳ್ಳು ಬರೆಯಲಿಕ್ಕಿಲ್ಲ ಎನ್ನುವ ಧೃಡ ವಿಶ್ವಾಸ ಎಲ್ಲರಲ್ಲಿದೆ. ಹಾಗೆ ಈ ಆತ್ಮಚರಿತ್ರೆ ಕಾಂಗ್ರೆಸ್ಸಿನ ಎರಡನೇಯ ತಲೆಮಾರಿನ ನಾಯಕರಿಗೆ ದಾರಿದೀಪ ಕೂಡ ಆಗಬಹುದು. ಇದು ರಾಜಕೀಯ ಮಹಾನ್ ದಂಡನಾಯಕನೊಬ್ಬರ ಕೊನೆಯ ಬ್ರಹ್ಮಾಸ್ತ್ರ ಎನ್ನುವುದೇ ನಿಜವಾದರೆ ಆ ಬ್ರಹ್ಮಾಸ್ತ್ರ ಹಲವರ ಮುಖದ ರಂಗನ್ನು ಬದಲಾಯಿಸುವುದು ನಿಶ್ಚಿತ. ಅದರಲ್ಲಿ ಏನು ಇದೆಯೋ ಹಾಗೆ ಒಪ್ಪಬೇಕಾದದ್ದು ಈಗಿನ ಕಾಂಗ್ರೆಸ್ ಕರಾವಳಿಯ ಉನ್ನತ ನಾಯಕರ ಅನಿವಾರ್ಯತೆ. ಯಾಕೆಂದರೆ ಅದು ಜನಾರ್ಧನ ಪೂಜಾರಿಯವರ ಆತ್ಮಚರಿತ್ರೆ ಮತ್ತು ಅದನ್ನು ಹಾಗೆ ಸುಮ್ಮನೆ ಪಕ್ಕಕ್ಕೆ ಸರಿಸಲಾಗುವುದಿಲ್ಲ!!
Leave A Reply