ಇವಿಎಂ ಸರಿಯಿಲ್ಲ ಎಂದು ಪ್ರಜಾಪ್ರಭುತ್ವವನ್ನೇ ಅಣಕ ಮಾಡುವವರು ತಮ್ಮನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ!!
ಇದು ಕರಾವಳಿಯಲ್ಲಿ ಅಕ್ಷರಶ: ಸುನಾಮಿ. ಉಭಯ ಜಿಲ್ಲೆಗಳ ಹದಿಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹನ್ನೆರಡು ಗೆಲ್ಲುವುದಿದೆಯಲ್ಲ, ಜನ ಎಚ್ಚೆತ್ತುಕೊಂಡಿದ್ದರು ಎನ್ನುವ ಸೂಚನೆ ಇದು. ಕಳೆದ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎರಡು ಜಿಲ್ಲೆಗಳಲ್ಲಿ ಕನಿಷ್ಟ ಒಬ್ಬೊಬ್ಬರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದರು. ಕಾರ್ಕಳದಿಂದ ಸುನೀಲ್ ಕುಮಾರ್ ಗೆದ್ದಿದ್ದರು. ಸುಳ್ಯದಿಂದ ಅಂಗಾರ ಗೆದ್ದಿದ್ದರು. ಆದರೆ ಈ ಬಾರಿ ಉಡುಪಿ ಜಿಲ್ಲೆಯಿಂದ ಒಬ್ಬರೇ ಒಬ್ಬರು ಕಾಂಗ್ರೆಸ್ ಶಾಸಕರು ಗೆದ್ದಿಲ್ಲ. ಇದ್ದದ್ದರಲ್ಲೆ ಯುಟಿ ಖಾದರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮಾನ ಉಳಿಸಿಬಿಟ್ಟರು.
ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಭ್ರಷ್ಟಾಚಾರ, ಹಿಂದೂ ಯುವಕರ ಹತ್ಯೆ ಮತ್ತು ಆ ಬಗ್ಗೆ ಕಾಂಗ್ರೆಸ್ ನಾಯಕರ ಉಡಾಫೆಯ ಉತ್ತರ, ಹಿಂದೂ ವಿರೋಧಿ ನೀತಿಗಳಿಂದ ಬೇಸತ್ತ ನಾಗರಿಕರು ಕರಾವಳಿಯಲ್ಲಿ ಸಾರಾಸಗಟಾಗಿ ಬಿಜೆಪಿಗೆ ಜೈ ಅಂದಿದ್ದಾರೆ. ಅದಕ್ಕೆ ಸರಿಯಾಗಿ ಅಮಿತ್ ಶಾ ನೇತೃತ್ವದ ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದರಲ್ಲಿ ಹೆಚ್ಚಿನವರು ಯುವಕರೇ. ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾ ಹೀಗೆ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಅಮಿತ್ ಶಾ ವಿಶ್ವಾಸಕ್ಕೆ ತೆಗೆದುಕೊಂಡ ಯುವ ಪಡೆ ತಮಗೆ ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ಈಡೇರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗೆದ್ದಿರುವ 6 ಜನ ಬಿಜೆಪಿ ಅಭ್ಯರ್ಥಿಗಳು ಪ್ರಥಮ ಬಾರಿಗೆ ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಜಿಲ್ಲೆಯಿಂದ ಒಂದು ಫ್ರೆಶ್ ಟೀಮ್ ವಿಧಾನಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಟೊಂಕ ಕಟ್ಟಲಿದೆ. ಕ್ಷೇತ್ರಕ್ಕಾಗಿ ಕೆಲಸ ಮಾಡುವ ಹುಮ್ಮಸ್ಸು ಅವರಲ್ಲಿ ನಿರೀಕ್ಷೆಗಿಂತ ಹೆಚ್ಚೇ ಇದೆ. ನರೇಂದ್ರ ಮೋದಿಯವರ ಅಭಿವೃದ್ಧಿಯ ವಿಝನ್ ಜಾರಿಗೆ ತರಬಲ್ಲ ಸಮರ್ಥರು ಎನ್ನುವ ನಿಟ್ಟಿನಲ್ಲಿ ಮತದಾರರು ಇವರನ್ನು ಆಯ್ಕೆ ಮಾಡಿ ಕೈಯಲ್ಲಿ ಅಧಿಕಾರ ನೀಡಿದ್ದಾರೆ. ಯಾವ ಮತದಾರರು ಕೂಡ ಈ ಬಾರಿ ತಮ್ಮ ವೋಟ್ ವೇಸ್ಟ್ ಮಾಡಿಲ್ಲ ಎನ್ನುವುದು ಗಮನಾರ್ಹ ಅಂಶ.
ಈ ಡೈಲಾಗ್ ಮೊದಲೇ ಗೊತ್ತಿತ್ತು…
ಅತ್ತ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುತ್ತಿದ್ದಂತೆ ಮೊದಲೇ ನಿರೀಕ್ಷಿಸಿದ್ದ ಡೈಲಾಗ್ ಒಂದು ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಬಾಯಿಂದ ಹೊರಗೆ ಬರುತ್ತಿದೆ. ಅದೇನೆಂದರೆ ಇವಿಎಂ ಸರಿಯಿಲ್ಲ. ರಮಾನಾಥ ರೈ, ಮೊಯ್ದೀನ್ ಬಾವ ಹಾಗೂ ಮಂಗಳೂರು ನಗರ ದಕ್ಷಿಣದ ಶಾಸಕರಾಗಿದ್ದವರು ಸೋತ ತಕ್ಷಣ ಮಾಧ್ಯಮಗಳು ಅಭಿಪ್ರಾಯ ಕೇಳಿದ್ದಕ್ಕೆ ಇವಿಎಂ ಸರಿಯಿರಲಿಲ್ಲ ಎನ್ನುವ ರೆಡಿಮೇಡ್ ಡೈಲಾಗ್ ಗಳನ್ನು ಉದುರಿಸುತ್ತಿದ್ದಾರೆ. ಅದೇ ಇವರು ಗೆದ್ದಿದ್ದರೆ ಇವಿಎಂ ವಿಷಯವೇ ಎಲ್ಲಿ ಕೂಡ ಬರುತ್ತಿರಲಿಲ್ಲ. ಅದೇ ಸೋತ ಕೂಡಲೇ ಇವಿಎಂ ಸರಿಯಿಲ್ಲ ಎನ್ನುವ ಇವರ ಪಕ್ಷದವರ ಹಳೆ ಡೈಲಾಗ್ ಕಾಟಾಚಾರಕ್ಕೆ ಬಿಸಾಡಿ ಅನುಕಂಪ ಗಿಟ್ಟಿಸುವ ನಾಟಕವಾಡುತ್ತಿದ್ದಾರೆ. ಒಂದು ವೇಳೆ ಇವಿಎಂ ಸರಿಯಿಲ್ಲದೇ ಇದ್ದರೆ ಯುಟಿ ಖಾದರ್ ಹೇಗೆ ಗೆದ್ದರು? ಹೋಗಲಿ, ಇನ್ನೊಂದು ಪ್ರಶ್ನೆ. ಇವಿಎಂಗಳನ್ನು ಬಿಜೆಪಿಯವರು ತಮಗೆ ಬೇಕಾದ ಹಾಗೆ ಆಡಿಸುತ್ತಿದ್ದರೆ ಇವತ್ತು ಮಧ್ಯಾಹ್ನದಿಂದ ಆಗುತ್ತಿರುವ ಹೈಡ್ರಾಮ ಆಗುತ್ತಿರಲಿಲ್ಲ. ಅಮಿತ್ ಶಾ ಅವರು ಇಷ್ಟು ಟೆನ್ಷನ್ ತೆಗೆದುಕೊಂಡು ಕೇಂದ್ರದ ನಾಯಕರನ್ನು ರಾಜ್ಯಕ್ಕೆ ಕಳುಹಿಸಿ ಪರಿಸ್ಥಿತಿ ನೋಡಿ ಎಂದು ಹೇಳಲೇಬೇಕಿರಲಿಲ್ಲ. 103 ಸೀಟ್ ಇವಿಎಂ ಹೆಚ್ಚು ಕಡಿಮೆ ಗೆದ್ದಿದ್ದರೆ ಇನ್ನೊಂದು ಹತ್ತು ಸೀಟ್ ಕೂಡ ಹಾಗೆ ಗೆಲ್ಲಬಹುದು ಎನ್ನುವುದು ಅಮಿತ್ ಶಾ ಅವರಿಗೆ ಗೊತ್ತಿಲ್ಲವಾ? ಸುಮ್ಮನೆ ಹೇಳಿಕೆ ಕೊಡುವವರು ತಮ್ಮ ತೂತು ಬಿದ್ದಿರುವ ಹೇಳಿಕೆಯಿಂದ ಏನು ಸಾಧಿಸಬಹುದು ಎಂದು ಅಂದುಕೊಂಡಿದ್ದಾರೋ, ಅವರಿಗೆ ಗೊತ್ತು.
ಅನೇಕ ಕಡೆ ಬಿಜೆಪಿ ಮನಸ್ಸು ಮಾಡಿದ್ದರೆ…
ಬೇಕಾದರೆ ಸರಿಯಾಗಿ ನೋಡಿ. ಬೆಂಗಳೂರಿನಲ್ಲಿರುವ 26 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವುದು 11. ಇವಿಎಂ ಬಿಜೆಪಿ ಕೈಯಲ್ಲಿ ಇದ್ದರೆ ಅಲ್ಲೆರಡು ಸೀಟ್ ಜಾಸ್ತಿ ಗೆಲ್ಲಲು ತಂತ್ರ ಹೂಡಬಹುದಿತ್ತು. ಗದಗದಲ್ಲಿ ಒಂದೇ ಒಂದು ಸೀಟ್ ಬಿಜೆಪಿಗೆ ಬಂದಿದೆ. ಅಲ್ಲೊಂದು ಹೆಚ್ಚು ಗೆಲ್ಲಲು ಪ್ಲಾನ್ ಮಾಡಬಹುದಿತ್ತು. ಮಂಡ್ಯ ನಾಲ್ಕಕ್ಕೆ ನಾಲ್ಕು ಜೆಡಿಎಸ್ ಪಾಲಿಗೆ ಹೋಗಿದೆ. ಅಲ್ಲೊಂದು ಸೀಟ್ ಪಡೆಯಬಹುದಿತ್ತು. ಹೀಗೆ ಒಂದೆರಡು ಲೆಕ್ಕ ಹಾಕುತ್ತಾ ಹೋದರೆ ಬಿಜೆಪಿ ಆರಾಮವಾಗಿ 112 ಕ್ರಾಸ್ ಮಾಡಬಹುದಿತ್ತು. ಅದನ್ನು ಯೋಚಿಸದೇ ರೈ, ಬಾವ, ಮಂಗಳೂರು ನಗರ ದಕ್ಷಿಣದ ಶಾಸಕರಾಗಿದ್ದವರು ಇವಿಎಂ ಸರಿಯಿಲ್ಲ ಎನ್ನುತ್ತಿದ್ದಾರೆ. ಅಲ್ಲಾ ಕೃಪೆಯಿಂದ ಗೆದ್ದು ಬಂದೆ ಎನ್ನುವ ತುಷ್ಟೀಕರಣದ ಹೇಳಿಕೆ, ಜನಾರ್ಧನ ಪೂಜಾರಿಯವರು ಬುದ್ಧಿ ಹೇಳಿದ್ದಕ್ಕೆ ಹಿಂದಿನಿಂದ ಬೈದು ಎದುರಿನಿಂದ ಕಾಲು ಹಿಡಿಯುವುದು, ಶಾಲೆಯ ಮಕ್ಕಳಿಗೆ ಊಟ ದೇವಸ್ಥಾನದಿಂದ ಬರುವುದು ತಪ್ಪಿಸಿ ನಾನೇ ನಿಲ್ಲಿಸಿದ್ದು ಎಂದು ಹೇಳುವುದು, ಹೀಗೆ ಸಾಲು ಸಾಲು ಎಡವಟ್ಟು ಮಾಡಿದ ರೈಗಳನ್ನು ಸೋಲಿಸಲು ಜನ ಯಾವತ್ತೇ ನಿರ್ಧಾರ ಮಾಡಿ ಆಗಿತ್ತು. ಅದಕ್ಕೆ ಇವಿಎಂ ಬಿಜೆಪಿಯವರ ಕೈಯಲ್ಲಿದೆ ಎನ್ನುವುದೇ ಹಾಸ್ಯಾಸ್ಪದ ಹೇಳಿಕೆ. ಇನ್ನು ಮೊಯ್ದೀನ್ ಬಾವ ಅವರು ದೇಶದ್ರೋಹಿಗಳೊಡನೆ ನಿಂತು ಫೋಟೋ ತೆಗೆಯುವುದು, ಹಿಂದೂ ಯುವಕ ಹತ್ಯೆಯಾದಾಗ ಅದನ್ನು ಬಿಜೆಪಿಯವರೇ ಮಾಡಿಸಿದ್ದು ಎಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು, ಕಳಪೆ ಕಾಮಗಾರಿ, ಭ್ರಷ್ಟಾಚಾರದಿಂದ ಸೋತಿದ್ದಾರೆ ವಿನ: ಅದಕ್ಕೆ ಇವಿಎಂ ಬೇಕಾಗಿಲ್ಲ. ಇನ್ನು ಮಂಗಳೂರು ನಗರ ದಕ್ಷಿಣದ ಶಾಸಕರು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಸಾಧನೆಯ ಪುಸ್ತಕವನ್ನು ಓದಿದ ಪ್ರಜ್ಞಾವಂತರು ಅದೊಂದು ಕಾಲ್ಪನಿಕ ಸುಳ್ಳಿನ ಕಂತೆ ಎಂದು ಪಕ್ಕಕ್ಕೆ ಇಟ್ಟರೇ ಹೊರತು, ಕುಡಿಯುವ ನೀರು, ಡ್ರೈನೇಜ್ ಅವ್ಯವಸ್ಥೆ ಸಹಿತ ತಮ್ಮ ವಾರ್ಡಿನಲ್ಲಿ ತಮ್ಮ ಕಣ್ಣೇದುರಿಗೆ ಇದ್ದ ಸಮಸ್ಯೆಗಳಿಗೆ ಮತದಾನದ ಮೂಲಕ ಉತ್ತರ ಕೊಟ್ಟಿದ್ದಾರೆ. ಅಭಯಚಂದ್ರ ಜೈನ್ ಅವರ ಸೋಲಿಗೆ ಕಾರಣ ಆ ಕ್ಷೇತ್ರದ ಜನರಿಗೆ ಗೊತ್ತಿದೆ. ಇನ್ನು ಬೆಳ್ತಂಗಡಿ, ಪುತ್ತೂರು ಶಾಸಕರ ಕೈಯಲ್ಲಿ ಎಷ್ಟು ವರ್ಷ ಅಧಿಕಾರ ಕೊಟ್ಟರೂ ಅಷ್ಟೇ ಎಂದು ಮತದಾರರು ನಿರ್ಧರಿಸಿಬಿಟ್ಟಿದ್ದರು.
ಈ ನಡುವೆ ಒಂದು ಹೊಸ ಟೀಮ್ ತಯಾರಾಗಿದೆ. ಏಳರಲ್ಲಿ 6 ಜನ ಕೂಡ ಫ್ರೆಶ್ ಶಾಸಕರು. ಜನರ ಆಶೋತ್ತರಗಳು ಕೂಡ ಹೆಚ್ಚಿವೆ, ನಿರೀಕ್ಷೆಗಳು ಕೂಡ ಬೆಟ್ಟದಷ್ಟಿವೆ. ಇವರು ಮಾಡಬೇಕಾದ ಕೆಲಸಗಳ ಕುರಿತು ನಾಳೆಯಿಂದ ಮಾತನಾಡೋಣ!
Leave A Reply