ಸೇನೆಗೆ ಕೇಂದ್ರ ಸರ್ಕಾರದ ಬಿಗ್ ಗಿಫ್ಟ್: ಭಾರತೀಯ ಸೇನೆಗೆ ಮಾನವ ರಹಿತ ಯಂತ್ರಗಳ ಬಲ

ದೆಹಲಿ: ಭಾರತೀಯ ಸೇನೆಗೆ ಶುಭ ಕಾಲ ಆರಂಭವಾಗಿದ್ದು, ಭಾರಿ ಗುಂಡುನಿರೋಧಕ ಜಾಕೆಟ್ ಗಳು ನೀಡುತ್ತಿರುವುದು, ಆಧುನಿಕ ತಂತ್ರಜ್ಞಾನಗಳುಳ್ಳ ಗನ್ ಮಷಿನ್ ಗಳನ್ನು ನೀಡುತ್ತಿರುವುದು ಸೇರಿ ಹಲವು ಮಹತ್ತರ ಯೋಜನೆಗಳನ್ನು ಕೇಂದ್ರ ಸರ್ಕಾರ ಸೇನೆಗೆ ಸೇರ್ಪಡೆ ಮಾಡುತ್ತಿದೆ. ಇದೀಗ ಸೇನೆಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡಲು ನಿರ್ಧರಿಸಿದೆ. ರೋಬೋಟಿಕ್ ತಂತ್ರಜ್ಞಾನ (ಕೃತಕ ಬುದ್ಧಿಮತ್ತೆ)ಯುಳ್ಳ ಯುದ್ಧದಲ್ಲಿ ಹೋರಾಡುವ ಯಂತ್ರಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ದೇಶದಲ್ಲಿ ಭವಿಷ್ಯದಲ್ಲಿ ಉಂಟಾಗುವ ಯುದ್ಧಗಳಿಗೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವ ನೀತಿಯ ಭಾಗವಾಗಿ ಕೇಂದ್ರ ಸರ್ಕಾರ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಈ ಮಾನವರಹಿತ ಯಂತ್ರಗಳನ್ನು ಬಳಸಲು ಮುಂದಾಗಿದೆ. ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಕೃತಕ ಬುದ್ಧಿಮತ್ತೆಯ ಯಂತ್ರಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಭವಿಷ್ಯದ ಯುದ್ಧದ ಪ್ರತಿ ತಂತ್ರಗಳು ಇಂತಹ ತಂತ್ರಜ್ಞಾನಗಳನ್ನು ಹೊಂದಿರುವ ಯಂತ್ರಗಳನ್ನೇ ಅವಲಂಬಿಸಿರುತ್ತದೆ ಎಂದು ಉತ್ಪಾದನೆ ಕಾರ್ಯದರ್ಶಿ ಅಜಯ್ ಕುಮಾರ್ ತಿಳಿಸಿದ್ದಾರೆ.
ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ನೇತೃತ್ವದಲ್ಲಿ ರಚನೆ ಆಗಿರುವ ಉನ್ನತ್ತಾಧಿಕಾರದ ಕಾರ್ಯಪಡೆ ಈ ಮಹತ್ವದ ಯೋಜನೆಯ ಕುರಿತ ಕಾರ್ಯಸೂಚಿ ಸಿದ್ಧಪಡಿಸಲಿದೆ. ಖಾಸಗಿ ಕಂಪನಿಗಳು ಮತ್ತು ಸಶಸ್ತ್ರ ಪಡೇಗಳ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ. ರೋಬಾಟಿಕ್ ತಂತ್ರಜ್ಞಾನದ ಅಳವಡಿಕೆ ಹೆಚ್ಚು ಹೆಚ್ಚು ಅಳವಡಿಕೆ ಅನಿವಾರ್ಯ ಆಗಿರುವುದುರಿಂದ ವಿಶ್ವದ ಹಲವು ರಾಷ್ಟ್ರಗಳು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿವೆ ಎಂದು ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಚೀನಾ ಎಐ ಸಂಶೋಧನೆ ಮತ್ತು ಮೆಷಿನ್ ಲರ್ನಿಂಗ್ (ಯಂತ್ರ ಕಲಿಕೆ) ಗಾಗಿ ನೂರಾರು ಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. 2030ರ ವೇಳೆಗೆ ಜಾಗತಿಕ ಎಐ ಆವಿಷ್ಕಾರ ಕೇಂದ್ರವಾಗಿ ಬೆಳೆಯುವುದು ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟಗಳು ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಸಂಶೋಧನೆ ಮಾಡುತ್ತಿವೆ.
ಈ ಕುರಿತು ಕೇಂದ್ರ ಸರ್ಕಾರ ಜೂನ್ನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ಭದ್ರತೆ ಒದಗಿಸಲು ಈ ಯೋಜನೆ ಪೂರಕವಾಗಲಿದೆ. ರೋಬೋಟಿಕ್ ತಂತ್ರಜ್ಞಾನದ ಯಂತ್ರಗಳನ್ನು ಬಳಸುವ ಮೂಲಕ ಗಡಿಯಲ್ಲಿ ಹೈಟೆಕ್ ಭದ್ರತೆ ನೀಡಬೇಕು ಎಂದು ಸೇನೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.
Leave A Reply