ಕರಾವಳಿಯನ್ನು ಬಿಜೆಪಿ ಹಾಳು ಮಾಡಿದೆ ಎಂದ ಅಪವಿತ್ರ ಮೈತ್ರಿಯ ಅನೈತಿಕ ದೊರೆ!
ಕುಮಾರಸ್ವಾಮಿಯವರು 222 ರಲ್ಲಿ 37 ಸ್ಥಾನಗಳನ್ನು ಹೊಂದಿ 120 ಗಿಂತಲೂ ಹೆಚ್ಚು ಕಡೆ ಡಿಪಾಸಿಟ್ ಕೂಡ ಕಳೆದುಕೊಂಡರೂ ಕಾಂಗ್ರೆಸ್ಸಿನ ಅಧಿಕಾರ ಲಾಲಸೆಯ ಪರಿಣಾಮ ಕೊನೆಗೂ ಮುಖ್ಯಮಂತ್ರಿಯಾಗಿ ಬಿಟ್ಟಿದ್ದಾರೆ. ಅವರಿಗೆ ತಮ್ಮ ಸೋಲು ಇವತ್ತಿಗೂ ಅರಗಿಸಿಕೊಳ್ಳಲಾಗಿಲ್ಲ ಎನ್ನುವುದಕ್ಕೆ ಅವರ ಇವತ್ತಿನ ಸದನದ ಒಳಗಿನ ಭಾಷಣವೇ ಸಾಕ್ಷಿ. ಯಡಿಯೂರಪ್ಪನವರು ತಮ್ಮ ಭಾಷಣದಲ್ಲಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ಸಿಗರ ನೈಜ ಬಣ್ಣವನ್ನು ಹೊರಗೆ ಹಾಕುತ್ತಿದ್ದಂತೆ ಮೂವತ್ತೇಳು ಸೀಟುಗಳ ಒಡೆಯ ಕುಮಾರಸ್ವಾಮಿಯವರಿಗೆ ನೆನಪಾದದ್ದು ತಮಗೆ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಡಿಪಾಸಿಟ್ ಉಳಿದಿಲ್ಲ ಎನ್ನುವ ಕರಾಳ ಸತ್ಯ.
ಆದ್ದರಿಂದ ಒಬ್ಬ ಮುಖ್ಯಮಂತ್ರಿಯಾಗಿ ಏನು ಮಾತನಾಡಬೇಕು ಎನ್ನುವುದನ್ನು ಮರೆತ ಕುಮಾರಸ್ವಾಮಿ ಏನೇನೋ ಹೇಳಲು ಶುರು ಮಾಡಿದರು. ಕರಾವಳಿಯನ್ನು ಬಿಜೆಪಿಯವರು ಹಾಳು ಮಾಡಿದ್ದು ಸಾಕು ಎಂದು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆ ಸದನದ ದಾಖಲೆಯಲ್ಲಿ ಸೇರಿ ಹೋಗಿದೆ. ಹೀಗೆ ಹೇಳುವ ಮೂಲಕ ಕುಮಾರಸ್ವಾಮಿ ಅದೇನೂ ಪ್ರೂವ್ ಮಾಡಲು ಹೊರಟಿದ್ದಾರೆ ಎನ್ನುವುದು ನೋಡಬೇಕು. ಅವರ ಹೇಳಿಕೆ ಒಂದು ರೀತಿಯಲ್ಲಿ ಕುಮಾರಸ್ವಾಮಿಯವರು ಶಾಂತವಾಗಿರುವ ಕರಾವಳಿಯಲ್ಲಿ ಬೆಂಕಿ ಹಚ್ಚಲು ಪ್ರೇರಣೆ ಕೊಟ್ಟಂತೆ ಆಗಿದೆ. ಮೊತ್ತ ಮೊದಲಿಗೆ ಕರಾವಳಿಯಲ್ಲಿ ಬಿಜೆಪಿಯವರು ಏನು ಹಾಳು ಮಾಡಿದ್ದಾರೆ ಎನ್ನುವುದನ್ನು ಕುಮಾರಸ್ವಾಮಿ ಹೇಳಬೇಕು. ಈ ತಿಂಗಳ ಮಧ್ಯದ ತನಕ ಕರಾವಳಿಯ ಎರಡು ಜಿಲ್ಲೆಗಳ ಹದಿಮೂರು ವಿಧಾನಕ್ಷೇತ್ರಗಳಲ್ಲಿ ಹತ್ತರಲ್ಲಿ ಇದ್ದದ್ದೇ ಕಾಂಗ್ರೆಸ್ ಶಾಸಕರು. ಅದರಲ್ಲಿ ನಾಲ್ವರನ್ನು ಕಾಂಗ್ರೆಸ್ ಮಂತ್ರಿ ಮಾಡಿತ್ತು. ಹತ್ತರಲ್ಲಿ ನಾಲ್ಕು ಅಂದರೆ ನಲ್ವತ್ತು ಶೇಕಡಾ ಸರಕಾರ ಇಲ್ಲಿಯೇ ಇತ್ತು. ಇದ್ದದ್ದು ಇಬ್ಬರೇ ಬಿಜೆಪಿ ಶಾಸಕರು. ಹೀಗಿರುವಾಗ ಬಿಜೆಪಿಯವರು ಹೇಗೆ ಹಾಳು ಮಾಡಲು ಸಾಧ್ಯ.
ಕಾಂಗ್ರೆಸ್ ಮಾಡಿದ ವಿವಾದದ ಪಟ್ಟಿ ಬೇಕಾ..
ಪ್ರಶಾಂತ ಪೂಜಾರಿ, ದೀಪಕ್ ರಾವ್, ಶರತ್ ಮಡಿವಾಲ ಸಹಿತ ಹಿಂದೂ ಕಾರ್ಯಕರ್ತರ ಹತ್ಯೆ, ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದು ಬಿಜೆಪಿಯವರಾ ಸಿಎಂ?. ಇನ್ನು ಮಕ್ಕಳ ಊಟ ದೇವಸ್ಥಾನದಿಂದ ಬರುವುದನ್ನು ನಿಲ್ಲಿಸಿದ್ದು ಬಿಜೆಪಿಯವರಾ ಸಿಎಂ? ಬಿಜೆಪಿ ಕಾರ್ಯಕರ್ತರ ಮನೆ ಒಳಗೆ ಕಿಟಕಿಯಿಂದ ಪೆಟ್ರೋಲ್ ಸುರಿಸಿ ಬೆಂಕಿ ಕೊಟ್ಟಿದ್ದು ಬಿಜೆಪಿಯವರಾ ಮುಖ್ಯಮಂತ್ರಿಗಳೇ? ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿ ಒಳಗೆ ಹಾಕಿ, ಹೊರಗೆ ಬರದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದು ಬಿಜೆಪಿಯವರಾ ಕುಮಾರಸ್ವಾಮಿ? ತಾವು ಯಾವ ಧರ್ಮದವರ ಆರ್ಶೀವಾದದಿಂದ ಗೆದ್ದದ್ದು ಎಂದು ಬಹಿರಂಗವಾಗಿ ಹೆಮ್ಮೆಯಿಂದ ಹೇಳಿದ್ದು ಬಿಜೆಪಿಯವರಾ? ರಸ್ತೆಗೆ ಗಣ್ಯರ ಹೆಸರಿಟ್ಟರೆ ಕೋಮು ಸಂಘರ್ಷ ಆಗುತ್ತೆ ಎಂದು ಬರೆದು ಕೊಟ್ಟದ್ದು ಬಿಜೆಪಿಯವರಾ ಸಿಎಂ? ಇನ್ನೆಷ್ಟೋ ವಿವಾದಗಳನ್ನು ಕರಾವಳಿಯಲ್ಲಿ ತಂದು ಹಾಕಿದ್ದು ಬಿಜೆಪಿಯವರು ಎಂದು ನೀವು ಹೇಳುತ್ತಿದ್ದಿರಿ ಎಂದರೆ ನೀವು ನಿಮ್ಮ ಅಪವಿತ್ರ ಮೈತ್ರಿಗಳ ದೋಸ್ತಿಗಳನ್ನು ಉಳಿಸಲು ಯಾವ ಲೆವೆಲ್ಲಿಗೆ ಇಳಿಯಬಲ್ಲಿರಿ ಎಂದು ಸ್ಪಷ್ಟವಾಗುತ್ತಿದೆ. ಇಷ್ಟೆಲ್ಲ ಆದರೂ ಕರಾವಳಿಯನ್ನು ಬಿಜೆಪಿ ಹಾಳು ಮಾಡಿದೆ ಎಂದೇ ನೀವು ವಾದಿಸುವುದಾದರೆ ಕಳೆದ ಐದು ವರ್ಷಗಳಲ್ಲಿ ಇದ್ದದ್ದು ನಿಮ್ಮದೇ ಮೈತ್ರಿ ಪಕ್ಷದಲ್ಲಿ ಈಗ ದೋಸ್ತಿಯಾಗಿರುವ ಕಾಂಗ್ರೆಸ್ ಪಕ್ಷದ ಸರಕಾರವಲ್ಲವಾ? ಅವರು ಹಾಳು ಆಗುತ್ತಿರುವುದನ್ನು ಸರಿ ಮಾಡಬಹುದಿತ್ತಲ್ಲ? ನಿಮ್ಮ ಮೈತ್ರಿಗಳು ಸೋತು ಮನೆಗೆ ಹೋದರೆ ಮತ್ತು ನಿಮ್ಮ ಪಕ್ಷದವರಿಗೆ ಕಟ್ಟಿದ ಡಿಪಾಸಿಟ್ ಕೂಡ ಬರದಿದ್ದರೆ ಆ ನೋವು ನಿಮಗೆ ಕಾಡುತ್ತಿದ್ದರೆ ಅದನ್ನು ಬಿಜೆಪಿಯವರ ಮೇಲೆ ಹಾಕುವುದು ಎಷ್ಟರ ಮಟ್ಟಿಗೆ ಸರಿ ಕುಮಾರಸ್ವಾಮಿ?
ಸಿಎಂಗೆ ಕರಾವಳಿಯಲ್ಲಿ ಆದ ಮುಖಭಂಗ ಅರಗಿಸುವುದು ಕಷ್ಟ….
ಮಂಗಳೂರಿನ ಜನ ಬುದ್ಧಿವಂತರು ಎನ್ನುವುದನ್ನು ಇಡೀ ರಾಜ್ಯವೇ ಒಪ್ಪಿಕೊಳ್ಳುತ್ತದೆ ಕುಮಾರಸ್ವಾಮಿಯವರೇ. ಇಲ್ಲಿನ ಜನ ಅಳೆದು ತೂಗಿ ಪಕ್ಷಗಳನ್ನು ಗೆಲ್ಲಿಸುತ್ತಾರೆ. ಕಳೆದ ಬಾರಿ ಇಲ್ಲಿಯೇ ಕಾಂಗ್ರೆಸ್ ವಿಜೃಂಭಿಸಿತ್ತು. ಆ ಮೂಲಕ ರಾಜ್ಯದಲ್ಲಿ ಬಹುಮತ ಪಡೆದಿತ್ತು. ಆದರೆ ಕಾಂಗ್ರೆಸ್ಸಿನ ದುರಾಡಳಿತದಿಂದ ಜನ ಬೇಸತ್ತು ಬಿಜೆಪಿಗೆ ಮತ ಹಾಕಿದ್ರು. ಆದರೆ ನಿಮ್ಮ ಹಣೆಯಲ್ಲಿ ಕೆಲವು ದಿನ ಮುಖ್ಯಮಂತ್ರಿ ಎಂದು ಬರೆದಿರುವುದರಿಂದ ನೀವು ಅಲ್ಲಿ ಕೂತಿದ್ದಿರಿ. ಗೆಲ್ಲುವ ಮೊದಲು ಅತಂತ್ರ ಪರಿಸ್ಥಿತಿ ಬಂದರೆ ಯಾವ ಪಕ್ಷಕ್ಕೂ ಸೇರಲ್ಲ, ಯಾರು ಬಂದರೂ ಒಪ್ಪುವುದಿಲ್ಲ ಎಂದಿದ್ದಿರಿ. ಈಗ ನೋಡಿದರೇ, ಡಿಕೆಶಿ, ಸಿದ್ದು ಒಡಹುಟ್ಟಿದವರಂತೆ ನಾಟಕ ಮಾಡುತ್ತಿದ್ದಿರಿ. ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದಿದ್ದಿರಲ್ಲ, ಈಗ ಮಾಡಿ ಬಿಡಿ. ಸುಮ್ಮನೆ ರೈತರನ್ನು ಮೋಸ ಮಾಡಿ ದಿನ ದೂಡಬೇಡಿ. ಒಂದು ವೇಳೆ ನಿಮಗೆ ಆಗದಿದ್ದರೆ ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿ. ಯಡಿಯೂರಪ್ಪ ತಕ್ಷಣ ಹೇಳಿದ್ದನ್ನು ಮಾಡಿ ತೋರಿಸುತ್ತಾರೆ. ಅವರು ಮೊನ್ನೆಯೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ರೈತರ ಸಾಲಮನ್ನಾ ಮಾಡಲು ಕ್ರಮ ತೆಗೆದುಕೊಂಡಿದ್ದರು. ಆದರೆ ಕಾಂಗ್ರೆಸ್ ಸುಪ್ರೀಂ ಕೋರ್ಟಿಗೆ ಹೋಗಿ ಆಡಳಿತಾತ್ಮಕ ನಿರ್ಣಯ ತೆಗೆದುಕೊಳ್ಳಬಾರದು ಎಂದು ತಡೆಯಾಜ್ಞೆ ತಂದಿತ್ತು. ನೀವು ಮಾಡಲ್ಲ, ಮಾಡುವವರೊಂದಿಗೆ ಸೇರಲ್ಲ. ಇನ್ನು ಮುಂದೆ ಕರಾವಳಿಯ ವಿಷಯದಲ್ಲಿ ಹೀಗೆ ಬಿಜೆಪಿಯವರು ಹಾಳು ಮಾಡಿದ್ರು, ಅದು ಇದು ಎಂದು ಹೇಳುವ ಮೊದಲು ನಿಮ್ಮ ಪಕ್ಷ ಇಲ್ಲಿ ಬೆಳೆಯದೇ ಇರಲು ಏನು ಕಾರಣ ಅದು ನೋಡ್ಕೋಳ್ಳಿ. ಬೆಳಿಗ್ಗೆ ಚಾ ಕುಡಿಯುವಾಗ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೋ ಸೋತ ಶಾಸಕರೋ, ಸಚಿವರೋ ಹೇಳಿದನ್ನು ಕೇಳಿ ಸಹೋದರ ಪ್ರೇಮದಿಂದ ಸದನದಲ್ಲಿ ಮಾತನಾಡಲು ಹೋಗಬೇಡಿ. ಮುಖ್ಯಮಂತ್ರಿ ಸ್ಥಾನ ಇನ್ನೆಷ್ಟು ದಿನವೋ ಏನೋ? ಕರಾವಳಿಯ ಜನ ಗಮನಿಸುತ್ತಿದ್ದಾರೆ!!
Leave A Reply