ಯುಟಿ ಖಾದರ್ ಅಥವಾ ಬಿಎಂ ಫಾರೂಕ್ ಯಾರಾಗಲಿದ್ದಾರೆ ದಕ್ಷಿಣ ಕನ್ನಡದ ಉಸ್ತುವಾರಿ!!
ಟಿಕೆಟ್ ಯಾವ ಪಕ್ಷದಲ್ಲಿ ಯಾರಿಗೆ ಸಿಗುತ್ತೆ, ಯಾವ ಪಕ್ಷದಲ್ಲಿ ಯಾರು ಗೆಲ್ಲುತ್ತಾರೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾರು ನಮ್ಮ ಉಸ್ತುವಾರಿ ಸಚಿವರಾಗುತ್ತಾರೆ ಮತ್ತು ಕೊನೆಯದಾಗಿ ಯಾವಾಗ ಸರಕಾರ ಬೀಳುತ್ತೆ? ರಾಜಕೀಯದ ಬಗ್ಗೆ ಆಸಕ್ತಿ ಮತ್ತು ಕುತೂಹಲ ಇರುವವರಿಗೆ ಈ ಮೇಲಿನ ಪ್ರಶ್ನೆಗಳು ಯಾವಾಗಲೂ ತಲೆಯ ಒಳಗೆ ಸುಳಿಯುತ್ತಲೇ ಇರುತ್ತವೆ. ಈಗ ಮೊದಲ ಮೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಕೊನೆಯ ಪ್ರಶ್ನೆಗೆ ಉತ್ತರ ಸಿಗಲು ಒಂದಿಷ್ಟು ಕಾಲಾವಕಾಶ ಇದೆ. ಈಗ ಏನಿದ್ದರೂ ಕರಾವಳಿಯ ಎರಡು ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎನ್ನುವುದೇ ಸದ್ಯ ಚರ್ಚೆಯಲ್ಲಿರುವ ಸಂಗತಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯು ಟಿ ಖಾದರ್ ಅವರಿಗೆ ತಮ್ಮ ಜಿಲ್ಲೆಯಲ್ಲಿಯೇ ಉಸ್ತುವಾರಿ ಆಗುವ ಅವಕಾಶ ಸಿಕ್ಕಿದೆ. ಯಾಕೆಂದರೆ ಸ್ವತ: ರಮಾನಾಥ ರೈಗಳೇ ಸೋತಿರುವುದು ಖಾದರ್ ಅವರಿಗೆ ಸ್ಪರ್ಧೆಯೇ ಇಲ್ಲವಾಗಿದೆ. ಒಂದು ವೇಳೆ ರೈಗಳು ಗೆದ್ದಿದ್ದರೆ ಖಾದರ್ ಈ ಬಾರಿಯಂತೂ ಸಚಿವರಾಗುವುದು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ಸಿಗೆ ಸಿಗುವುದೇ ಹದಿನಾರೋ, ಹದಿನೇಳೋ ಸಚಿವ ಸ್ಥಾನ. ಅದರಲ್ಲಿಯೇ ಅವರು ಇದ್ದಬದ್ದವರಿಗೆಲ್ಲ ಕೊಡಬೇಕು. ರೈಗಳಿಗೆ ಹಿರಿತನದ ಆಧಾರದ ಮೇಲೆ ಕೊಟ್ಟರೆ ಖಾದರ್ ಕೇವಲ ಶಾಸಕರಾಗಿಯೇ ಉಳಿಯಬೇಕಿತ್ತು. ಆದರೆ ಯುಟಿಕೆ ನಸೀಬು ಚೆನ್ನಾಗಿದೆ. ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್ಸನ್ನು ಕರಾವಳಿಯಲ್ಲಿ ಜನ ಗುಡಿಸಿ ರಂಗೋಲಿ ಹಾಕಿದ್ದಾರೆ.
ಖಾದರ್ ಸಚಿವರಾಗಲು ಅಶ್ರಫ್ ಅಡ್ಡಿಯಾಗ್ತಾರಾ…
ಈಗ ಸಮ್ಮಿಶ್ರ ಸರಕಾರ ಇರುವುದರಿಂದ ಕರಾವಳಿಯ ಮಟ್ಟಿಗೆ ಕನಿಷ್ಟ ಖಾದರ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕಾಗುತ್ತದೆ. ಏಕೆಂದರೆ ಕರಾವಳಿಯ ಎರಡು ಜಿಲ್ಲೆಗಳನ್ನು ಸೇರಿಸಿದರೆ ಅವರೊಬ್ಬರೇ ಕಾಂಗ್ರೆಸ್ ಶಾಸಕರು. ಆದರೆ ಖಾದರ್ ಅವರಿಗೆ ಅವರ ಸ್ವಕ್ಷೇತ್ರದಲ್ಲಿ ಈ ಬಾರಿ ಜಾತ್ಯಾತೀತ ಜನತಾ ದಳ ಕಠಿಣ ಸ್ಪರ್ಧೆ ಕೊಟ್ಟಿತ್ತು. ಮಾಜಿ ಮೇಯರ್ ಕೆ ಅಶ್ರಫ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದರು. ಖಾದರ್ ಮುಸಲ್ಮಾನ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಜೆಡಿಎಸ್ ನ ಅಶ್ರಫ್ ಹೋದ ಬಂದ ಕಡೆಯಲ್ಲೆಲ್ಲ ಹೇಳುತ್ತಾ ಬರುತ್ತಿದ್ದರು. ಅಷ್ಟಾಗಿಯೂ ಖಾದರ್ ಗೆದ್ದಿರಬಹುದು. ಆದರೆ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಯುಟಿಕೆ ಕಡಿಮೆ ಮತಗಳನ್ನು ಪಡೆದಿದ್ದಾರೆ. ಬಹುಶ: ಅಶ್ರಫ್ ಅವರ ಕ್ಯಾಂಪೇನ್ ಕೆಲಸ ಮಾಡಿರಬಹುದು.
ಫಾರೂಕ್ ತಮ್ಮದೇ ಸ್ವಜಿಲ್ಲೆಯಲ್ಲಿ ಉಸ್ತುವಾರಿ ಆಗುತ್ತಾರಾ…
ಈಗ ಉದ್ಭವಿಸಿರುವ ಪ್ರಶ್ನೆ ಏನೆಂದರೆ ಕರಾವಳಿಯ 13 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಯಾರಾದರೂ ಪ್ರಬಲ ಅಭ್ಯರ್ಥಿ ಇದ್ದರು ಎಂದರೆ ಅದು ಅಶ್ರಫ್ ಮಾತ್ರ. ಖಾದರ್ ಮುಸ್ಲಿಮರಿಗೆ ಅನ್ಯಾಯ ಮಾಡಿರುವುದನ್ನು ಅಶ್ರಫ್ ತಮ್ಮ ಪಕ್ಷದ ನಾಯಕರಿಗೆ ಮನವರಿಕೆ ಮಾಡಿದ್ದಲ್ಲಿ ಯಾವ ಕಾರಣಕ್ಕೂ ಖಾದರ್ ಅವರಿಗೆ ಮಂತ್ರಿಗಿರಿ ಕೊಡಲು ದೇವೇಗೌಡರು ಒಪ್ಪಲಿಕ್ಕಿಲ್ಲ. ಪರಸ್ಪರರ ಪಕ್ಷದಲ್ಲಿ ಯಾರು ಮಂತ್ರಿಯಾಗಬೇಕು ಎನ್ನುವ ಕುರಿತು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಎರಡೂ ಪಕ್ಷಗಳ ನಾಯಕರು ಹೇಳುತ್ತಾ ಬರುತ್ತಿದ್ದರೂ ಅದು ಸುಳ್ಳಿನ ಕಂತೆ ಎಂದು ಎಲ್ಲರಿಗೂ ಗೊತ್ತಿದೆ. ಈ ಹಂತದಲ್ಲಿ ಖಾದರ್ ಅವರಿಗೆ ಸಚಿವ ಸ್ಥಾನ ಕೊಡುವ ಬದಲು ಮತ್ತು ಅದೇ ಸಮಯಕ್ಕೆ ಮುಸ್ಲಿಮರ ಆಕ್ರೋಶ ತಪ್ಪಿಸುವುದಕ್ಕಾಗಿ ಎರಡು ಪಕ್ಷಗಳು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸುವ ತಂತ್ರ ಹೂಡಬಹುದು. ಆ ತಂತ್ರವನ್ನು ದೇವೆಗೌಡರು ಹೆಣೆಯುತ್ತಿದ್ದಾರೆ.
ಮೊದಲನೇಯದಾಗಿ ತಮ್ಮ ಆಪ್ತ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವ ಫಾರೂಕ್ ಅವರಿಗೆ ಸಚಿವ ಸ್ಥಾನ ಕೊಡಲು ದೇವೆಗೌಡರು ನಿರ್ಧರಿಸಿಬಿಟ್ಟಿದ್ದಾರೆ. ಆದ್ದರಿಂದ ಫಾರೂಕ್ ಅವರನ್ನು ವಿಧಾನ ಪರಿಷತ್ ಗೆ ನೇರವಾಗಿ ಆಯ್ಕೆ ಮಾಡಲು ಗೌಡರ ಕುಟುಂಬ ತೀರ್ಮಾನಿಸಿದೆ. ದೇವೆಗೌಡರಿಗೆ ಫಾರೂಕ್ ಅವರನ್ನು ಸಚಿವ ಮಾಡುವುದು ಈ ಕ್ಷಣದ ಅನಿವಾರ್ಯತೆ. ಯಾಕೆಂದರೆ ಮುಂದಿನ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚೆಚ್ಚು ಜೆಡಿಎಸ್ ಸಂಸದರು ಆಯ್ಕೆಯಾದರೆ ಮಾತ್ರ ದೇವೇಗೌಡರಿಗೆ ತೃತೀಯ ರಂಗದಲ್ಲಿ ಗೌರವ ಹೆಚ್ಚಿರುತ್ತದೆ. ಇಲ್ಲದಿದ್ದರೆ ಇವರನ್ನು ಯಾರೂ ಕ್ಯಾರ್ ಮಾಡಲಿಕ್ಕಿಲ್ಲ. ಹೆಚ್ಚು ಸೀಟ್ ಗೆಲ್ಲಬೇಕಾದರೆ ದೊಡ್ಡದಾಗಿರುವ ಹಣದ ಥೈಲಿ ಬೇಕಾಗುತ್ತದೆ. ಸದ್ಯ ಫಾರೂಕ್ ಒಬ್ಬರೇ ಹಣವನ್ನು ನೀರಿನಂತೆ ಖರ್ಚು ಮಾಡಲು ತಯಾರಿರುವ ವ್ಯಕ್ತಿ. ಅವರಿಗೆ ಸಚಿವ ಸ್ಥಾನ ಕೊಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮಾಡಿದರೆ ಲೋಕಸಭಾ ಚುನಾವಣೆ ದೇವೇಗೌಡರಿಗೆ ನಿರಾಂತಕವಾಗಿ ಸಾಗಲಿದೆ.
ಇನ್ನು ಒಂದು ವೇಳೆ ಖಾದರ್ ಸಿಕ್ಕಾಪಟ್ಟೆ ಲಾಬಿ ಮಾಡಿ ಸಚಿವ ಸ್ಥಾನ ಪಡೆದುಕೊಂಡರೆ ಫಾರೂಕ್ ಅವರನ್ನು ಉಡುಪಿಗೆ ಉಸ್ತುವಾರಿ ಮಾಡಬಹುದು. ಆದರೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮುಸ್ಲಿಮರೇ ಉಸ್ತುವಾರಿಗಳಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಕರಾವಳಿಯ ಮತದಾರರಿಗೆ ಕೊಡುವ ಸಂದೇಶ ಏನು? ಕುಮಾರಸ್ವಾಮಿ ಮತ್ತು ಪರಮೇಶ್ವರ್ ಲಾಭ-ನಷ್ಟದ ಲೆಕ್ಕಾಚಾರ ಹಾಕಿ ಅಂತಿಮ ಪಟ್ಟಿ ತಯಾರಿಸಿ ರಾಹುಲ್ ಗಾಂಧಿ ಮುದ್ರೆ ಪಡೆಯಲು ವಿಮಾನ ಹತ್ತಲಿದ್ದಾರೆ!
Leave A Reply